- ರವಿಕುಮಾರ್ ಎಂ. ಎಸ್.
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಿದ್ದರೂ, ವಿಮರ್ಶಾತ್ಮಕ ಚಿಂತನೆ ಕುಂಠಿತವಾಗುತ್ತಿರುವುದು ಒಂದು ಆತಂಕದ ಹಾಗೂ ಗಂಭೀರದ ವಿದ್ಯಮಾನ. ನಾವು ನಮಗರಿವಿಲ್ಲದಂತೆಯೇ "ಸಾಮೂಹಿಕ ಮೂರ್ಖತನ"ಕ್ಕೆ ಬಲಿಯಾಗಲು ಹಲವಾರು ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ.
ವಿಮರ್ಶಾತ್ಮಕ ಚಿಂತನೆಯೆಂದರೆ ಮಾಹಿತಿಯನ್ನು ಕೇವಲ ಹಾಗೆಯೇ ಒಪ್ಪಿಕೊಳ್ಳದೆ, ಅದನ್ನು ವಸ್ತುನಿಷ್ಠವಾಗಿ (objectively), ತರ್ಕಬದ್ಧವಾಗಿ (rationally) ವಿಶ್ಲೇಷಿಸಿ, ಪ್ರಶ್ನಿಸಿ, ಮೌಲ್ಯಮಾಪನ ಮಾಡಿ, ಸ್ಪಷ್ಟವಾದ ನಿರ್ಧಾರಗಳನ್ನು ಅಥವಾ ತೀರ್ಮಾನಗಳನ್ನು ಕೈಗೊಳ್ಳುವ ಬೌದ್ಧಿಕ ಪ್ರಕ್ರಿಯೆ. ವಿಮರ್ಶಾತ್ಮಕ ಚಿಂತನೆಯು ಸಂದರ್ಭಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ.
ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಎರಡು ಘಟನೆಗಳು ನಾನು ವಿಷಯವೊಂದಕ್ಕೆ ಸಂಬಂಧಿಸಿದಂತೆ ಯೋಚಿಸುವ ರೀತಿಯನ್ನೇ ಬದಲಾಯಿಸಿದವು. ಜೊತೆಗೆ ವಿಮರ್ಶಾತ್ಮಕ ಚಿಂತನೆಗೆ ಪ್ರೇರೇಪಿಸಿದವು. ಹಾಗೂ ಸಾಮೂಹಿಕ ಮೂರ್ಖತನಕ್ಕೆ ಬಲಿಯಾಗುವುದನ್ನು ತಪ್ಪಿಸಲು ಶುರು ಮಾಡಿದವು.
ಘಟನೆ#1: ನನ್ನ ಸ್ನೇಹಿತನಿಗೆ ಅಂಬೇಡ್ಕರ್ ಹೇಳಿದ ಉಕ್ತಿ ಇರುವ ಚಿತ್ರವನ್ನು ವಾಟ್ಸಾಪ್ ಮಾಡಿದ್ದೆ. ಅದನ್ನು ನೋಡಿದ ನನ್ನ ಸ್ನೇಹಿತ, ಇದು ನಿಜವಾಗಿ ಅಂಬೇಡ್ಕರ್ ಹೇಳಿರುವುದಾ? ಎಂದು ಪ್ರಶ್ನಿಸಿದರು. ನಾನು ತಕ್ಷಣ ಗಲಿಬಿಲಿಗೊಂಡೆ, ಏಕೆಂದರೆ ನನಗೂ ಸಹ ಅದು ಅಂಬೇಡ್ಕರ್ ಹೇಳಿರುವುದೆಂದು ತಕ್ಷಣ ದೃಢೀಕರಿಸಲು ಸಾಧ್ಯವಾಗಲಿಲ್ಲ. ತದನಂತರ ನಾನು ಯಾವುದಾದರೂ ಮೂಲಗಳಿಂದ ದೃಢೀಕರಿಸಿ ಹೇಳುತ್ತೇನೆ ಎಂದು ನನ್ನ ಸ್ನೇಹಿತನಿಗೆ ತಿಳಿಸಿದೆ.
ಘಟನೆ#2: ನನ್ನ ಸ್ನೇಹಿತನೊಬ್ಬ ಇತ್ತೀಚಿಗೆ ಒಂದು ಯೂಟ್ಯೂಬ್ ವೀಡಿಯೋ ಕಳಿಸಿದ್ದರು. ಅದರಲ್ಲಿ ಒಂದು ಯೂಟ್ಯೂಬರ್ ಹೇಳಿದ ವಿವರಣೆ ಹೀಗಿತ್ತು: ಇತ್ತೀಚಿಗೆ ಆಲಿಕಲ್ಲು ಮಳೆಯಾಗಿದ್ದು ಸ್ವಾಭಾವಿಕವಲ್ಲ, ಅದು ಬಿಲ್ ಗೇಟ್ಸ್ ಫಂಡ್ ಕೊಟ್ಟು ನಮ್ಮ ದೇಶದಲ್ಲಿ ಕೃತಕವಾಗಿ ಮಳೆ ಬರಿಸಿ, ನಮ್ಮ ನೈಸರ್ಗಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ನಾನು ಇದನ್ನು ನಂಬಲಿಲ್ಲ, ಇದರ ಅಸಲಿಯತ್ತು ಏನು ಎಂದು ಫ್ಯಾಕ್ಟ್ ಚೆಕ್ ಮಾಡಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ನನ್ನ ಸ್ನೇಹಿತನಿಗೆ ತಿಳಿಸಿದೆ. ಆನಂತರ ನಾನು ಫ್ಯಾಕ್ಟ್ ಚೆಕ್ ಮಾಡಿದಾಗ, ಇದೊಂದು ಸುಳ್ಳು ಸುದ್ದಿ ಎಂದು ತಿಳಿಯಿತು. ಈ ಅಸಲಿಯತ್ತು ಹೀಗಿದೆ:
ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೌರ ಜಿಯೋ ಇಂಜಿನಿಯರಿಂಗ್ (SCoPEx) ಸಂಶೋಧನೆಗೆ ಧನಸಹಾಯ ನೀಡಿದ್ದರು. ಈ ಯೋಜನೆಯು ಸೂರ್ಯನ ಬೆಳಕನ್ನು ಪ್ರತಿಫಲಿಸಲು ಮತ್ತು ಭೂಮಿಯನ್ನು ತಂಪಾಗಿಸಲು ವಾತಾವರಣಕ್ಕೆ ಕಣಗಳನ್ನು ಸಿಂಪಡಿಸುವ ಉದ್ದೇಶ ಹೊಂದಿತ್ತು, ಆದರೆ ಇದು ಮಳೆ ತರಿಸುವ ಪ್ರಯೋಗವಾಗಿರಲಿಲ್ಲ. ಈ ಯೋಜನೆಯನ್ನು 2024 ರಲ್ಲಿ ರದ್ದುಗೊಳಿಸಲಾಯಿತು ಮತ್ತು ಇದು ಯಾವುದೇ ವಸ್ತುವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿರಲಿಲ್ಲ. ಭಾರತದಲ್ಲಿ ಕೃತಕ ಮಳೆಗೂ ಅವರಿಗೂ ಸಂಬಂಧವಿದೆ ಎಂಬ ಹೇಳಿಕೆಗಳು ಸುಳ್ಳು (https://salatainstitute.harvard.edu/research-initiatives/the-harvard-solar-geoengineering-research-program/). ಈ ವಿಚಾರವನ್ನು ನನ್ನ ಸ್ನೇಹಿತನಿಗೆ ತಿಳಿಸಿ, ಈ ರೀತಿ ಸುಳ್ಳು ಸುದ್ದಿಗಳನ್ನು ಫ್ಯಾಕ್ಟ್ ಚೆಕ್ ಮಾಡದೇ ವಾಟ್ಸಪ್ ಫಾರ್ವರ್ಡ್ ಮಾಡಬೇಡಿ ಎಂದು ತಿಳಿಸಿದೆ.
ಈ ಘಟನೆಗಳಿಂದ ನಾನು ಕಲಿತ ಪಾಠವೆಂದರೆ, ಈ ಕಾಲಘಟ್ಟದಲ್ಲಿ ವಾಟ್ಸಾಪ್ ಯೂನಿವರ್ಸಿಟಿ ಹಾಗು ಇನ್ನಿತರ ಸಾಮಾಜಿಕ ಜಾಲತಾಣಗಳಿಂದ, ಸತ್ಯಕ್ಕಿಂತ ಸುಳ್ಳಿನ ಸುದ್ದಿಗಳೇ/ವಿಚಾರಗಳೇ ಹೆಚ್ಚೆಚ್ಚು ನಮ್ಮಗಳ ಮಧ್ಯ ಹರಿದಾಡುತ್ತಿವೆ. ಪ್ರಜ್ಞಾವಂತ ನಾಗರೀಕರಾದ ನಾವು ಯಾವುದೇ ವಿಚಾರ, ಸುದ್ದಿ ಅಥವಾ ಹೇಳಿಕೆ ನಿಜವೋ ಅಥವಾ ಸುಳ್ಳೋ ಎಂದು ಖಚಿತಪಡಿಸಿಕೊಂಡು, ಅದು ಇತರರಿಗೆ ಉಪಯುಕ್ತ ಅನಿಸಿದರೆ ಮಾತ್ರ ಇತರರ ಜೊತೆ ಹಂಚಿಕೊಳ್ಳುವುದು ಸೂಕ್ತ. ಸುಳ್ಳು ಸುದ್ದಿಗಳನ್ನು ನಮ್ಮ ಮಟ್ಟದಲ್ಲೇ ಅಂತ್ಯಗೊಳಿಸಿ, ಕೇವಲ ಅಧಿಕೃತ ಉಪಯುಕ್ತ ವಿಚಾರಗಳನ್ನು ಮಾತ್ರ ಇತರರಿಗೆ ತಲುಪಿಸುವುದು ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಕರ್ತವ್ಯ ಹಾಗೂ ಈ ಕ್ಷಣದ ತುರ್ತು. ಏನನ್ನಾದರೂ ನಂಬುವ ಮುನ್ನ ಅದರ ಮೂಲವನ್ನು ಪರಿಶೀಲಿಸಿ, ಸಂದೇಹಾಸ್ಪದ ಮಾಹಿತಿಯನ್ನು forward ಮಾಡುವ ಮುನ್ನ ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಫ್ಯಾಕ್ಟ್ ಚೆಕ್ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸುವುದು ಅತ್ಯಗತ್ಯವಾಗಿದೆ.
ವಿಮರ್ಶಾತ್ಮಕ ಚಿಂತನೆ ಕಡಿಮೆಯಾಗಲು ಕಾರಣಗಳು:
೧. ಅತಿಯಾದ ಮಾಹಿತಿ ಹೊರೆ (Information Overload): ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ದಿನವೊಂದಕ್ಕೆ ನಾವು ಸ್ವೀಕರಿಸುವ ಮಾಹಿತಿಯ ಪ್ರಮಾಣ ಅಗಾಧವಾಗಿದೆ. ಮೆದುಳು ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವ ಬದಲು, ಸುಲಭವಾಗಿ ಸಿಗುವ ತೀರ್ಮಾನಗಳನ್ನು ಒಪ್ಪಿಕೊಳ್ಳಲು (Cognitive Ease) ಬಯಸುತ್ತದೆ. ಇದರಿಂದ ಆಳವಾದ ಅಧ್ಯಯನ ಮಾಯವಾಗುತ್ತಿದೆ. ನರವಿಜ್ಞಾನಿ ಡೇನಿಯಲ್ ಲೆವಿಟಿನ್ ಅವರ ಪ್ರಕಾರ, ಇಂದಿನ 21ನೇ ಶತಮಾನದ ಮನುಷ್ಯನು ಕೆಲವು ದಶಕಗಳ ಹಿಂದಿಗಿಂತ 5 ಪಟ್ಟು ಹೆಚ್ಚು ಮಾಹಿತಿಯನ್ನು ಪ್ರತಿದಿನ ಪಡೆಯುತ್ತಿದ್ದಾನೆ. ಮೆದುಳು ಇಷ್ಟೊಂದು ಮಾಹಿತಿಯನ್ನು ಸಂಸ್ಕರಿಸಲು ಸಾಧ್ಯವಾಗದೆ, ಶಾರ್ಟ್‌ಕಟ್‌ಗಳನ್ನು ಬಳಸಲು ಶುರು ಮಾಡುತ್ತದೆ. ಇದರಿಂದ ವಿಚಾರ ಮಾಡುವ ಶಕ್ತಿ ಕುಂಠಿತವಾಗುತ್ತದೆ.
೨. ಶಿಕ್ಷಣ ವ್ಯವಸ್ಥೆಯ ದೋಷ: ಶಾಲೆಗಳು ಮಕ್ಕಳಲ್ಲಿ ಸ್ವತಂತ್ರ ಆಲೋಚನೆಗಿಂತ, ಅಂಧಾನುಕರಣೆಯನ್ನು ಕಲಿಸುತ್ತವೆ. ಆಧುನಿಕ ಶಿಕ್ಷಣವು ಮಕ್ಕಳ ಸೃಜನಶೀಲತೆಯನ್ನು ಕೊಲ್ಲುತ್ತಿದೆ ಮತ್ತು ಅವರನ್ನು ಕೇವಲ ಯಂತ್ರಗಳನ್ನಾಗಿ ತಯಾರು ಮಾಡುತ್ತಿದೆ. ಜಾನ್ ಟೇಲರ್ ಗ್ಯಾಟೋ ಅವರಂತಹ ಪ್ರಸಿದ್ಧ ಶಿಕ್ಷಣತಜ್ಞ ಹೇಳುವಂತೆ, ಆಧುನಿಕ ಶಿಕ್ಷಣ ವ್ಯವಸ್ಥೆಯು ಸ್ವತಂತ್ರ ಚಿಂತಕರನ್ನು ರೂಪಿಸುವ ಬದಲು ಕೇವಲ ಆಜ್ಞೆಗಳನ್ನು ಪಾಲಿಸುವವರನ್ನು ಸಿದ್ಧಪಡಿಸುತ್ತಿದೆ. ಶಾಲೆಗಳಲ್ಲಿ "ಹೇಗೆ ಯೋಚಿಸಬೇಕು" ಎಂಬುದಕ್ಕಿಂತ "ಏನು ಯೋಚಿಸಬೇಕು" ಎಂದು ಕಲಿಸಲಾಗುತ್ತಿದೆ. ಗ್ಯಾಟೋ ಅವರು ಮಕ್ಕಳಿಗೆ ಶಾಲೆಯ ನಾಲ್ಕು ಗೋಡೆಗಳಿಗಿಂತ, ಬದುಕಿನ ಅನುಭವ ಮತ್ತು ಮುಕ್ತ ಪರಿಸರದಲ್ಲಿ ಹೆಚ್ಚು ಕಲಿಯಲು ಸಾಧ್ಯ ಎಂದು ಪ್ರತಿಪಾದಿಸಿದವರು.
೩. ಏಕಾಗ್ರತೆಯ ಅವಧಿ ಕುಸಿತ (Short Attention Span): ರೀಲ್ಸ್ ಅಥವಾ ಶಾರ್ಟ್ಸ್ ರೂಪದ ಕಿರಿದಾದ ವಿಡಿಯೋಗಳು ನಮ್ಮ ಏಕಾಗ್ರತೆಯ ಅವಧಿಯನ್ನು ಕಡಿಮೆ ಮಾಡಿದೆ. ಯಾವುದೇ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುವ ಶಕ್ತಿ ಕ್ಷೀಣಿಸುತ್ತಿದೆ.
೪. ಸಿದ್ಧ ಉತ್ತರಗಳ ಮೇಲಿನ ಅವಲಂಬನೆ: ಇಂಟರ್ನೆಟ್‌ನಲ್ಲಿ ಪ್ರತಿಯೊಂದಕ್ಕೂ ಸಿದ್ಧ ಉತ್ತರಗಳು ಸಿಗುವುದರಿಂದ, ನಾವೇ ಯೋಚಿಸಿ, ತರ್ಕಿಸಿ ಉತ್ತರ ಹುಡುಕುವ ಅಗತ್ಯವಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ.
೫. ಸಾಮಾಜಿಕ ಮಾಧ್ಯಮ, ಅಲ್ಗಾರಿದಮ್, ಮತ್ತು 'ಎಕೋ ಚೇಂಬರ್ಸ್' (Echo Chambers) - ಸಾಮಾಜಿಕ ಮಾಧ್ಯಮಗಳನ್ನು ನಮ್ಮನ್ನು ನಿರಂತರವಾಗಿ ಸ್ಕ್ರೋಲ್ ಮಾಡುವಂತೆ ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಗಾರಿದಮ್‌ಗಳು ನಾವು ಏನನ್ನು ಇಷ್ಟಪಡುತ್ತೀವೋ ಅದನ್ನೇ ಮತ್ತೆ ಮತ್ತೆ ತೋರಿಸುವ ಮೂಲಕ ನಮ್ಮಲ್ಲಿರುವ ಪೂರ್ವಾಗ್ರಹಗಳನ್ನು ಮತ್ತಷ್ಟು ಬಲಪಡಿಸುತ್ತವೆ. ಈ ಅಲ್ಗಾರಿದಮ್ ಗಳು "ಸತ್ಯ"ಕ್ಕಿಂತ "ವೈರಲ್" ಆಗುವುದಕ್ಕೆ ಹೆಚ್ಚು ಒತ್ತು ನೀಡುತ್ತವೆ. ನಮ್ಮ ಆಲೋಚನೆಗೆ ವಿರುದ್ಧವಾದ ವಿಚಾರಗಳು ನಮಗೆ ತಲುಪುವುದೇ ಇಲ್ಲ. ಇದರಿಂದ ನಮ್ಮ ಪೂರ್ವಾಗ್ರಹಗಳನ್ನೇ (Biases) ಸತ್ಯವೆಂದು ನಾವು ನಂಬತೊಡಗುತ್ತೇವೆ.
೬. ಯೋಚಿಸುವ ವೇಗ: ವೇಗ ಮತ್ತು ನಿಧಾನಗತಿ - ಮನುಷ್ಯನ ಆಲೋಚನಾ ಪ್ರಕ್ರಿಯೆಯ ಎರಡು ವ್ಯವಸ್ಥೆಗಳನ್ನು (ವೇಗದ ಮತ್ತು ನಿಧಾನಗತಿಯ ಆಲೋಚನೆ) ಒಳಗೊಂಡಿರುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಡೇನಿಯಲ್ ಕ್ಯಾನ್ಮನ್ ಪ್ರಕಾರ, ನಮ್ಮ ಮೆದುಳು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ:
ಸಿಸ್ಟಮ್ ೧ (ವೇಗ): ಇದು ಸಹಜ ಪ್ರವೃತ್ತಿ ಮತ್ತು ಭಾವನಾತ್ಮಕವಾದುದು.
ಸಿಸ್ಟಮ್ ೨ (ನಿಧಾನ): ಇದು ವಿಶ್ಲೇಷಣಾತ್ಮಕ ಮತ್ತು ಶ್ರಮದಾಯಕವಾದುದು.
ಇಂದಿನ ವೇಗದ ಜಗತ್ತಿನಲ್ಲಿ ಜನರು ನಿಧಾನವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಂಡು ಕೇವಲ ವೇಗದ ಪ್ರತಿಕ್ರಿಯೆಗಳಿಗೆ ಸೀಮಿತವಾಗುತ್ತಿದ್ದಾರೆ.
"ಸಾಮೂಹಿಕ ಮೂರ್ಖತನ" ಅಂದರೆ ಏನು?
ಸಾಮೂಹಿಕ ಮೂರ್ಖತನ ಎಂದರೆ ವೈಯಕ್ತಿಕವಾಗಿ ಬುದ್ಧಿವಂತರಾಗಿರುವ ವ್ಯಕ್ತಿಗಳು, ಒಂದು ಗುಂಪಿನಲ್ಲಿ ಸೇರಿದಾಗ ವಿವೇಚನೆಯನ್ನು ಕಳೆದುಕೊಂಡು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಇದಕ್ಕೆ ಮುಖ್ಯ ಕಾರಣಗಳು:
ಗುಂಪು ಚಿಂತನೆ (Group think): ಗುಂಪಿನಲ್ಲಿ ಎಲ್ಲರೂ ಒಂದೇ ರೀತಿ ಯೋಚಿಸಬೇಕು ಎಂಬ ಒತ್ತಡವಿರುತ್ತದೆ. ಗುಂಪಿನಿಂದ ಹೊರಗುಳಿಯುವ ಭಯಕ್ಕೆ ಜನರು ತಮ್ಮ ತರ್ಕವನ್ನು ಬಿಟ್ಟು 'ಬಹುಮತ'ವನ್ನು ಒಪ್ಪಿಕೊಳ್ಳುತ್ತಾರೆ.
ಸಾಮಾಜಿಕ ಪುರಾವೆ (Social Proof): "ನೂರಾರು ಜನರು ಇದನ್ನು ಮಾಡುತ್ತಿದ್ದಾರೆ ಎಂದರೆ ಅದು ಸರಿಯೇ ಇರಬೇಕು" ಎನ್ನುವ ಕುರುಡು ನಂಬಿಕೆ. ಇದು ವೈಜ್ಞಾನಿಕ ಅಥವಾ ತಾರ್ಕಿಕ ಸತ್ಯಕ್ಕಿಂತ ಸಂಖ್ಯಾಬಲಕ್ಕೆ ಹೆಚ್ಚು ಒತ್ತು ನೀಡುತ್ತದೆ.
ಭಾವನಾತ್ಮಕ ಪ್ರಚೋದನೆ: ತರ್ಕಕ್ಕಿಂತ ಭಾವನೆಗಳಿಗೆ (ಕೋಪ, ಭಯ, ದ್ವೇಷ ಅಥವಾ ಅತಿಯಾದ ಅಭಿಮಾನ) ಬೇಗನೆ ಮಾರುಹೋಗುವುದು ಸಾಮೂಹಿಕ ಮೂರ್ಖತನದ ಮೊದಲ ಲಕ್ಷಣ.
ಇದನ್ನು ತಡೆಯುವುದು ಹೇಗೆ?
ಪ್ರಶ್ನಿಸುವ ಹವ್ಯಾಸ: ಯಾವುದೇ ಮಾಹಿತಿಯನ್ನು ನೋಡಿದ ತಕ್ಷಣ ನಂಬುವ ಬದಲು, "ಇದು ಯಾಕೆ ಹೀಗಿದೆ?", "ಇದರ ಮೂಲ ಯಾವುದು?" ಎಂದು ಪ್ರಶ್ನಿಸಿ.
ವಿರುದ್ಧ ಆಲೋಚನೆಗಳನ್ನು ಓದುವುದು: ನಮಗೆ ಇಷ್ಟವಿಲ್ಲದ ಅಥವಾ ನಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ವಿಷಯದ ಎರಡೂ ಮಗ್ಗಲುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಡಿಜಿಟಲ್ ಡಿಟಾಕ್ಸ್ (Digital Detox): ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು, ಪುಸ್ತಕಗಳನ್ನು ಓದುವುದು ಮತ್ತು ಮೌನವಾಗಿ ಯೋಚಿಸುವುದು ಮೆದುಳಿನ ವಿಶ್ಲೇಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೂರ್ವಾಗ್ರಹಗಳ ಅರಿವು: ನಮ್ಮಲ್ಲಿರುವ 'ಕನ್ಫರ್ಮೇಷನ್ ಬಯಾಸ್' (ನಮಗೆ ಇಷ್ಟವಾದುದನ್ನು ಮಾತ್ರ ಸರಿ ಎಂದು ನಂಬುವುದು) ಬಗ್ಗೆ ಜಾಗರೂಕರಾಗಿರುವುದು.
ಫ್ಯಾಕ್ಟ್ ಚೆಕ್ ಮಾಡುವುದು : ಭಾರತದಲ್ಲಿ ಸುಳ್ಳು ಸುದ್ದಿಗಳು (Fake News) ಮತ್ತು ತಪ್ಪು ಮಾಹಿತಿಯನ್ನು ತಡೆಯಲು ಹಲವು ಸತ್ಯ-ಪರಿಶೀಲನಾ (Fact-Checking) ಆಯ್ಕೆಗಳು ನಮಗೆ ಲಭ್ಯವಿವೆ.
೧. PIB ಫ್ಯಾಕ್ಟ್ ಚೆಕ್ (Press Information Bureau: https://www.pib.gov.in/factcheck.aspx?reg=3&lang=1): ಇದು ಭಾರತ ಸರ್ಕಾರದ ಅಧಿಕೃತ ಸತ್ಯ-ಪರಿಶೀಲನಾ ಘಟಕವಾಗಿದೆ. ಕೇಂದ್ರ ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ನಿರ್ಧಾರಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ತಪ್ಪು ಮಾಹಿತಿಯನ್ನು ಇದು ಪರಿಶೀಲಿಸುತ್ತದೆ.
೨. ಖಾಸಗಿ ಫ್ಯಾಕ್ಟ್-ಚೆಕರ್ಸ್: ಭಾರತದಲ್ಲಿ ಅನೇಕ ಸ್ವತಂತ್ರ ಸಂಸ್ಥೆಗಳು ತಪ್ಪು ಮಾಹಿತಿಯನ್ನು ಪರಿಶೀಲಿಸುತ್ತವೆ (ಉದಾಹರಣೆಗೆ: Factly, Boom Live, Alt News). ಇವು International Fact-Checking Network (IFCN) ತತ್ವಗಳನ್ನು ಅನುಸರಿಸುತ್ತವೆ.
೩. ಮುಖ್ಯವಾಹಿನಿ ಪತ್ರಿಕೆಗಳು: ಕೆಲವು ಪತ್ರಿಕೆಗಳು ಕೆಲವು ಸುಳ್ಳು ಸುದ್ದಿಗಳನ್ನು ಫ್ಯಾಕ್ಟ್-ಚೆಕ್ ಮಾಡಿ, ಅದರ ವಿವರಗಳನ್ನು ನೀಡುತ್ತವೆ.
ವಿಮರ್ಶಾತ್ಮಕ ಚಿಂತನೆ ಎಂದರೆ ಕೇವಲ ತಪ್ಪು ಕಂಡುಹಿಡಿಯುವುದಲ್ಲ; ಅದು ಸತ್ಯವನ್ನು ಅನ್ವೇಷಿಸುವ, ತಿಳಿಸುವ ಒಂದು ಶಿಸ್ತುಬದ್ಧ ಹಾದಿ.
ಉಪಸಂಹಾರ: ಜಗತ್ತು ನಮ್ಮನ್ನು ಕುರುಡಾಗಿ ಅನುಸರಿಸುವಂತೆ ಪ್ರೇರೇಪಿಸುತ್ತದೆ. ಆದರೆ ನಾವು ಎಚ್ಚರಗೊಂಡು, ಪ್ರಶ್ನಿಸಿ ಮತ್ತು ನಮ್ಮ ಸ್ವಂತ ಆಲೋಚನಾ ಶಕ್ತಿಯನ್ನು ಕಾಪಾಡಿಕೊಳ್ಳಬೇಕು. ಬದಲಾವಣೆಯೆನ್ನುವುದು ಸಮೂಹಕ್ಕಿಂತ ಮೊದಲು ವೈಯಕ್ತಿಕ ಚಿಂತನೆಯಿಂದ ಆರಂಭವಾಗುತ್ತದೆ. ನಾನಂತೂ ಯಾವುದೇ ಸುದ್ದಿ/ವಿಷಯವನ್ನು ವಿಮರ್ಶಿಸಿ/ಪರಿಶೀಲಿಸಿ, ನಂತರ ನಂಬುತ್ತೇನೆ. ಉಪಯುಕ್ತ ಅನಿಸಿದರೆ ಮಾತ್ರ ಇತರರೊಂದಿಗೆ ಈ ತರಹದ ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ. ಈ ರೀತಿ ಅನುಸರಿಸಲು, ಇತರರಿಗೂ ಹೇಳಲು ಶುರು ಮಾಡಿದ್ದೇನೆ.
No comments:
Post a Comment