ಹುಚ್ಚೇಗೌಡರ ಕತೆ - ಭಾಗ ೪

  - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ನಾಲ್ಕನೆಯ ಭಾಗ. ಮೊದಲ ಮೂರು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ಐದನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 


ಬದುಕಿತು ಬಡಜೀವ


ನಾನು ಕೃಷ್ಣೇಗೌಡರ ಪ್ರಶ್ನೆಗಳ ಬಗ್ಗೆಯೇ ಯೋಚಿಸುತ್ತಾ ಅನ್ಯಮನಸ್ಕನಾಗಿದ್ದೆ. ಕೃಷ್ಣೇಗೌಡರೇ ಮುಂದುವರೆದು, "ಜೀವಶಾಸ್ತ್ರದ ನೋಟ್ಸ್ ಬಗ್ಗೆ ತಲೆಕೆಡಿಸ್ಕೊಳೋದು ಬಿಟ್ಟು ಇಂತದಕ್ಕೆಲ್ಲಾ ತಲೆಕೆಡಿಸ್ಕೊಂಡು ನಿಮ್ಮ ಲೈಫ್ನೇ ಹಾಳು ಮಾಡ್ಕೊತಾ ಇದಿರಲ್ಲೋ" ಎಂದರು. ನನಗೆ ಆ ಕ್ಷಣಕ್ಕೆ ಹೌದಲ್ಲ ಅನ್ನಿಸಿತು. ಸರಿ ಹೋಗು ನೀನು, ನಾನು ಇದರ ಬಗ್ಗೆ ಆಮೇಲೆ ಮಾತನಾಡುತ್ತೀನಿ ಎಂದರು. ನಾನು ಬದುಕಿದಿಯಾ ಬಡಜೀವವೇ ಎಂದು ಅಲ್ಲಿಂದ ಹೊರಬಿದ್ದೆ. ನಾನು ಕೃಷ್ಣೇಗೌಡರ ನಾಲ್ಕಡಿ ಬೆತ್ತದ ಪ್ರಹಾರದಿಂದ ತಪ್ಪಿಸಿಕೊಂಡು, ಪ್ರಾಣಾಪಾಯವಿಲ್ಲದೆ ಆಚೆ ಬಂದಿದ್ದು ನನ್ನ ಕೆಲವು ಸ್ನೇಹಿತರಿಗೆ ಆಶ್ಚರ್ಯ ಮೂಡಿಸಿತು. ಕೃಷ್ಣೇಗೌಡರ ಮನೆಯಿಂದ, ವೈರಿಗಳ ಹೊಡೆತಕ್ಕೆ ಚಿತ್ತಾಗಿ, ಮೈಮೇಲೆಲ್ಲಾ ಬಾಸುಂಡೆಗಳೊಂದಿಗೆ ಕುಂಟುತ್ತಾ ಆಚೆ ಬರುವ ದುರಂತ ನಾಯಕನನ್ನು ನಿರೀಕ್ಷಿಸಿದ್ದ ನನ್ನ ಸ್ನೇಹಿತರಿಗೆ, ನಾನು ಹೇಗೆ ಹೋಗಿದ್ದೆನೋ ಹಾಗೆಯೇ ಹಿಂತಿರುಗಿದ್ದು ನಿರಾಶೆ ತರಿಸಿರಬೇಕು. ನನಗೆ, ಕೃಷ್ಣೇಗೌಡರನ್ನು ಯಾಮಾರಿಸಿದೆನೆಂಬ ಸಣ್ಣ ಹೆಮ್ಮೆ ಒಂದು ಕಡೆ, ಇನ್ನೊಂದು ಕಡೆ ಜೀವಶಾಸ್ತ್ರ ನೋಟ್ಸ್ ನ ನಿಗೂಢ ರಹಸ್ಯ, ಎರಡೂ ಭಾವಗಳನ್ನು ಹೊತ್ತುಕೊಂಡು ವಿದ್ಯಾರ್ಥಿನಿಲಯಕ್ಕೆ ಮರಳಿದೆ.


ಕೃಷ್ಣೇಗೌಡರ ಚದುರಂಗ


 ದಿನಗಳುರುಳತೊಡಗಿದವು. ಕೃಷ್ಣೇಗೌಡರು ಜೀವಶಾಸ್ತ್ರದ ನೋಟ್ಸ್ ನ ವಿಚಾರದಲ್ಲಿ ಒಬ್ಬೊಬ್ಬ ವಿದ್ಯಾರ್ಥಿಗಳ ಜೊತೆ ವೈಯಕ್ತಿಕವಾಗಿ ಮಾತನಾಡುತ್ತಾ, ಜೀವಶಾಸ್ತ್ರದ ಪಾಠಗಳೇ ಸರಿಯಾಗಿ ನಡೆಯುತ್ತಿಲ್ಲವೆನ್ನುವ ಆಯಾಮವನ್ನು ನೀಡಿದ್ದರು. ದುರಂತವೆಂದರೆ ಈ ಆಯಾಮವನ್ನು ನಾವು ನಂಬತೊಡಗಿದೆವು. ಕೃಷ್ಣೇಗೌಡರು ನಮಗೆಲ್ಲಾ ಯಾವ ರೀತಿ ತಲೆ ಕೆಡಿಸಿದ್ದರೆಂದರೆ, ಲಿಂಗರಾಜೇ ಅರಸ್ ರವರು ಉಪನ್ಯಾಸಕರೆಂಬ ಹಮ್ಮಿಲ್ಲದೆ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು, ಅವರ ತಮಾಷೆ ಇತ್ಯಾದಿಯೆಲ್ಲ ಅವರಿಗೆ ಪಾಠ ಮಾಡುವ ವಿಷಯದಲ್ಲಿ ಗಂಭೀರತೆಯಿಲ್ಲವೆನ್ನುವಂತೆ ಭಾಸವಾಗತೊಡಗಿತು. ಕೃಷ್ಣೇಗೌಡರು ಕಾಲೇಜಿನ ಆಡಳಿತ ಮಂಡಳಿಗೂ ಈ ವಿಷಯ ತಲುಪುವಂತೆ ನೋಡಿಕೊಂಡರು. ವಿಷಯ ಎಷ್ಟು ಗಂಭೀರ ರೂಪಕ್ಕೆ ತಿರುಗಿತೆಂದರೆ ಕಾಲೇಜಿನ ಆಡಳಿತ ಮಂಡಳಿ ನಮ್ಮ ಕಾಲೇಜಿನ ಮಾತೃಸಂಸ್ಥೆಯ ಕೇಂದ್ರ ಕಛೇರಿಯಿಂದ ಲಿಂಗರಾಜೇ ಅರಸ್ ರವರ ಮೇಲಿದ್ದ ಆರೋಪಗಳನ್ನು ವಿಚಾರಿಸಲು ಶಿಸ್ತುಸಮಿತಿಯನ್ನು ಕರೆಸಲು ತೀರ್ಮಾನಿಸಿತು. ಈ ವಿಷಯವನ್ನು ಖುದ್ದು ಕೃಷ್ಣೇಗೌಡರೇ ವಿದ್ಯಾರ್ಥಿಗಳಿಗೆಲ್ಲ ತಿಳಿಸಿ, ವಿದ್ಯಾರ್ಥಿಗಳೆಲ್ಲಾ ಒಗ್ಗಟ್ಟಿನಿಂದ ಲಿಂಗರಾಜೇ ಅರಸ್ ರವರ ವಿರುದ್ಧ ಶಿಸ್ತುಸಮಿತಿ ವಿರುದ್ಧ ದೂರು ನೀಡಬೇಕೆಂದು ಹೇಳಿ ಆಮೇಲೆ ಶಿಸ್ತು ಸಮಿತಿ ಮುಂದೆ ಏನೂ ಸಮಸ್ಯೆ ಇಲ್ಲ, ಎಲ್ಲಾ ಚೆನ್ನಾಗಿ ನಡೀತಾ ಇದೆ ಅಂತ ಹೇಳಬೇಡಿ ಎಂದರು.


ಮಾತುಗಾರ ಅರಸು ಮೋಸ ಮಾಡಿದರು ನಮಗೆ


ಶಿಸ್ತು ಸಮಿತಿ ಕಾಲೇಜಿಗೆ ಬರುವ ದಿವಸ ನಿರ್ಧಾರವಾಯಿತು. ಆ ದಿವಸ ಬಂದೂ ಬಿಟ್ಟಿತು. ಆ ದಿವಸ ನಮ್ಮ ಜೀವಶಾಸ್ತ್ರ ಉಪನ್ಯಾಸಕರು ರಜೆಯ ಮೇಲೆ ಊರಿಗೆ ತೆರಳಿದ್ದರು. ಅದೇನು ಬಲವಂತದ ರಜೆಯ ಮೇಲೆ ಊರಿಗೆ ಕಳಿಸಲಾಗಿತ್ತಾ ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆಲ್ಲಾ ಲಿಂಗರಾಜೇ ಅರಸ್ ರವರ ಮೇಲಿನ ತಮ್ಮ ದೂರುಗಳನ್ನು ಲಿಖಿತ ರೂಪದಲ್ಲಿ ಬರೆದು ಶಿಸ್ತು ಸಮಿತಿಗೆ ಸಲ್ಲಿಸಲು ಸೂಚಿಸಲಾಯಿತು. ನಾವೆಲ್ಲಾ ಉತ್ಸಾಹದಲ್ಲೇ ಬರೆದು ದೂರು ಪತ್ರವನ್ನು ಸಿದ್ಧ ಮಾಡಿಕೊಂಡೆವು. ನಾನು ಕನ್ನಡದಲ್ಲಿ ಉತ್ತಮವಾಗಿ ಬರೆಯಬಲ್ಲೆ ಎಂದು ನನಗೆ ಅರಿವಿಗೆ ಬಂದಿದ್ದು ಆವಾಗಲೇ.   ನಾನು ಲಿಂಗರಾಜೇ ಅರಸ್ ರವರ ವಿರುದ್ಧ ಬರೆದ ಬರಹಕ್ಕೆ “ಮಾತುಗಾರ ಅರಸು ಮೋಸ ಮಾಡಿದರು ನಮಗೆ” ಎಂಬ ಶೀರ್ಷಿಕೆ ಕೊಟ್ಟು ಒಂದು ಮುಕ್ಕಾಲು ಪುಟದಷ್ಟು ಬರೆದಿದ್ದೆ. ಈ ಬರಹವನ್ನು ಓದಿದ ನನ್ನ ಸಹಪಾಠಿಗಳು ಚೆನ್ನಾಗಿ ಬರೆದಿದಿಯಾ ಎಂದರು. ಓರ್ವ ಸಹಪಾಠಿಯಂತೂ ಮೋಹನ ಚೆನ್ನಾಗಿ ಬರೆದಿದ್ದಾನೆ, ನೀನು ಓದಿದಿಯಾ ಎಂದು ಇನ್ನೊಂದಷ್ಟು ವಿದ್ಯಾರ್ಥಿಗಳಿಗೆ ಓದುವಂತೆ ಪ್ರೇರೇಪಿಸಿದ. ಇವೆಲ್ಲಾ ಅಂತಹ ಮಹತ್ವದ ವಿಚಾರಗಳಲ್ಲ. ನಾವೆಲ್ಲಾ ಶಿಸ್ತು ಸಮಿತಿಯ ಮುಂದೆ ಹಾಜಾರಾಗಿ ನಮ್ಮ ದೂರು ಪತ್ರಗಳನ್ನು ಸಲ್ಲಿಸಿದೆವು. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಶಿಸ್ತು ಸಮಿತಿ ತನ್ನ ತೀರ್ಮಾನವನ್ನು ಪ್ರಕಟಿಸಿತು.


(ಮುಂದುವರೆಯುವುದು)

No comments:

Post a Comment