- ಜ್ಞಾನೇಶ್ ಸಿ.ಎಂ.
[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ ಮೂರನೇ ಬರಹ ಇದು. ಹಿಂದಿನ ಭಾಗಗಳಿಗಾಗಿ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
- ಮೋಹನ್ ಮೂರ್ತಿ ಮಾ.ಕೆಂ.]
"What the teacher is, is more important than
what he teaches – Karl Meninger"
ಚೆಲುವೇಗೌಡರ ಒಪ್ಪಿಗೆ ಪಡೆದ ಮೇಲೆ ನನ್ನ ಮನಸಲ್ಲಿ ಇದ್ದದ್ದು ಜಯಣ್ಣ ಸರ್ ಮತ್ತೆ ಶೈಲಜಾ ಮೇಡಂ. ನನಗೆ ಅವರ ಮೇಲೆ ಅಣ್ಣ ಅತ್ತಿಗೆ ಎಂಬ ಭಾವನೆ. ನಾನು ಇಂಜಿನಿಯರಿಂಗ್ ಮಾಡುವ ಸಂದರ್ಭದಲ್ಲಿ ಜಯಣ್ಣ ಸರ್ ನನಗೆ ತುಂಬ ಪ್ರೋತ್ಸಾಹ ನೀಡಿದ್ದರು. ಶೈಲಜಾ ಮೇಡಂ ಕೂಡ ನನ್ನನ್ನು ಅವರ ತಮ್ಮನ ಭಾವದಲ್ಲಿ ಕಾಣುತ್ತಿದ್ದರು. ನಾನು ಜಯಣ್ಣ ಸರ್ ಗೆ ಕರೆ ಮಾಡಿ ಮಾತನಾಡಿದೆ. ಅವರು ನೋಡೋಣ ಎಂದರೆ ಹೊರತು ಖಚಿತವಾಗಿ ಏನನ್ನೂ ಹೇಳಲಿಲ್ಲ. ನಾನಂತೂ ಅವರಿಗೆ ದಿನವೂ ಕರೆ ಮಾಡುವ ಮೂಲಕ ಬೆಂಬತ್ತಿದ್ದೆ.
ನನಗೆ ಬಹಳ ಖುಷಿ ಕೊಟ್ಟ ವಿಚಾರವೇನೆಂದರೆ, ನಮ್ಮ ಕೆ. ಟಿ. ಮಂಜುನಾಥ್ ಸರ್ ಕೇಳಿದಾಕ್ಷಣ ಒಪ್ಪಿಕೊಂಡಿದ್ದು. ಅವರ ವಾಸ ಚೆನ್ನೈನಲ್ಲಿದ್ದರೂ, ನಾನು ಹೇಳಿದ ತಕ್ಷಣ ಒಪ್ಪಿಕೊಂಡು ಚೆನ್ನೈನಿಂದ ರೈಲಿನಲ್ಲಿ ಬರುತ್ತೇನೆ ಎಂದು ಹೇಳಿದರು. ಈ ವಿಚಾರದಲ್ಲಿ ಅವರು ತೋರಿಸಿದ ಉತ್ಸಾಹ ನೋಡಿ ನನಗೆ ಬಹಳ ಖುಷಿ ಆಗಿತ್ತು. ಆದರೆ ನಮ್ಮ ಹಲವು ಸಹಪಾಠಿಗಳೇ ಇಲ್ಲೇ ಹತ್ತಿರದಲ್ಲಿದ್ದು, ಹಲವು ನೆಪಗಳನ್ನೇಳಿದ್ದರು. ನಮ್ಮ ಇನ್ನೊಬ್ಬ ಹಿರಿಯ ಉಪನ್ಯಾಸಕಿಯೆಂದರೆ ರಮಾಮಣಿ ಮೇಡಂ. ಅವರದೊಂದು ಫೋನ್ ನಂಬರ್ ನನ್ನ ಬಳಿ ಇತ್ತು. ಆದರೆ ಅದು ಅವರ ಪತಿಯ ನಂಬರ್. ನಾನು ಕರೆ ಮಾಡಿ, ರಮಾಮಣಿ ಮೇಡಂ ಜೊತೆ ಮಾತನಾಡಿ, ನಮ್ಮ ಬೆಳ್ಳಿ ಹಬ್ಬದ ವಿವರ ಹೇಳಿದೆ. ದಿನಾಂಕ ಅಂತಿಮವಾಗಿದೆ, ಆದರೆ ಸ್ಥಳ ಅಂತಿಮವಾಗಿಲ್ಲ ಎಂದು ಹೇಳಿದೆ. ಅವರು ನನ್ನ ಪತಿಗೆ ಅಪಘಾತವಾಗಿ ಕಾಲು ನೋವಾಗಿದೆ, ಬರೋದಕ್ಕೆ ಕಷ್ಟ ಆಗಬಹುದು, ನಾನು ಆಮೇಲೆ ಖಚಿತಪಡಿಸುತ್ತೇನೆ ಎಂದರು. ನನಗೆ ಅವರಿರೋದು ಶ್ರವಣಬೆಳಗೊಳದಲ್ಲಿ, ಅಲ್ಲಿಂದ ಬರುವುದು ಅನುಮಾನ ಎನಿಸಿತು.
ಆಮೇಲೆ ರೋಹಿಣಿ ಮೇಡಂಗೆ ಕರೆ ಮಾಡಿದೆ. ಅವರು ಬಹಳ ಖುಷಿಯಿಂದ, ಈ ಕಾರ್ಯಕ್ರಮವನ್ನು ನಾವು ಮಾಡಬೇಕಿತ್ತು, ನೀವು ಮಾಡ್ತಾ ಇದ್ದೀರಿ ನಾನು ಖಂಡಿತ ಬರುತ್ತೇನೆ ಎಂದರು. ಹಾಗೆ ನನ್ನ ತಂಗಿ ಅನುರಾಧರನ್ನು ಕೂಡ ಕರೆಯಿರಿ ಎಂದರು. ನನಗೆ ಅನುರಾಧ ಮೇಡಂ ಅಷ್ಟು ಪರಿಚಯ ಇರಲಿಲ್ಲ. ಅರ್ಚನಾಗೆ ಅವರನ್ನು ಆಹ್ವಾನಿಸಲು ಹೇಳಿದೆ. ಹಾಗೆಯೇ ಅರ್ಚನಾ ಎಲ್ಲಾ ಉಪನ್ಯಾಸಕಿಯರನ್ನು ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರನ್ನು ಆಹ್ವಾನಿಸುವ ಜವಾಬ್ದಾರಿ ವಹಿಸಿಕೊಂಡರು. ನನ್ನ ಮಿತ್ರ ನಹೀಂ ಕೂಡ ಕಂಪ್ಯೂಟರ್ ಸೈನ್ಸ್ ವಿಭಾಗದ ಹಲವು ಉಪನ್ಯಾಸಕರ ಮೊಬೈಲ್ ನಂಬರ್ ನನ್ನ ಬಳಿ ಇದೆ, ನಾನು ಅವರನ್ನು ಆಹ್ವಾನಿಸುತ್ತೇನೆ ಎಂದು ಹೇಳಿ ನನ್ನ ಮೇಲಿನ ಹೊರೆಯನ್ನು ಕಡಿಮೆ ಮಾಡಿದ.
ನಮ್ಮ ಸಿಐಟಿ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯ್ ಶೆಟ್ಟಿ ಸರ್ ಅವರು ನಮ್ಮ ಕಾರ್ಯಕ್ರಮಕ್ಕೆ ಬರಲೇಬೇಕೆಂಬುದು ಎಲ್ಲರ ಅಭಿಪ್ರಾಯ. ನಾನು ಹತ್ತು ಬಾರಿ ಕರೆ ಮಾಡಿದೆ, ಆದರೆ ಅವರು ಒಂದು ಬಾರಿಯೂ ತೆಗೆಯಲಿಲ್ಲ. ಕಡೆಗೆ ನನ್ನ ಪತ್ತೇದಾರಿ ತಲೆಗೆ ಕೆಲಸ ಕೊಟ್ಟು, ರೋಹಿಣಿ ಮೇಡಂ ಮೂಲಕ ವಿಜಯ್ ಶೆಟ್ಟಿ ಸರ್ ಪತ್ನಿಯ ಮೊಬೈಲ್ ನಂಬರ್ ಪಡೆದುಕೊಂಡು, ಅವರಿಗೆ ಕರೆ ಮಾಡಿದೆ. ಆವಾಗ ವಿಜಯ್ ಶೆಟ್ಟಿ ಸರ್ ಮಾತಿಗೆ ಸಿಕ್ಕರು. ಅವರ ತಾಯಿಯವರ ಅನಾರೋಗ್ಯದ ಸಂಬಂಧಿಸಿದ ಕೆಲಸದೊತ್ತಡದಿಂದ, ಅವರು ನನ್ನ ಕರೆ ಸ್ವೀಕರಿಸಿರಲಿಲ್ಲ. ಮತ್ತು ಅದೇ ಕಾರಣಕ್ಕೆ ಅವರು ಕಾರ್ಯಕ್ರಮಕ್ಕೂ ಬರಲಾಗಲಿಲ್ಲ.
ನಂತರ ಮಂಜುನಾಥ್ ಸರ್ ಹಾಗೂ ಓಹಿಲೇಶ್ವರಿ ಮೇಡಂಗೆ ಕರೆ ಮಾಡಿದೆ. ಅವರು ಬಹಳ ಉತ್ಸಾಹದಿಂದ ಅವರು ಸಿಐಟಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಜತೆಯಲ್ಲಿ ನಮಗೆ ಉಪನ್ಯಾಸಕರಾಗಿದ್ದ ದುಶ್ಯಂತ್, ನಟೇಶ್, ಸಂತೋಷ್ ಪಾಟೀಲ್ ಹಾಗೂ ಪ್ರಯೋಗಾಲಯ ಸಹಾಯಕರಾಗಿದ್ದ ಮಂಜುನಾಥ್ ಇವರೆಲ್ಲರ ಮೊಬೈಲ್ ನಂಬರ್ ಕೊಟ್ಟು, ಎಲ್ಲರನ್ನೂ ಕರೆಯಲು ಹೇಳಿದರು. ನಾನು ಎಲ್ಲರ ನಂಬರ್ ಪಡೆದು, ಅವರೆಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.
ಮಂಡ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಆನಂದ್ ರವರಿಗೆ ಕರೆ ಮಾಡಿದಾಗ, ಅವರು ಹಳೆಯ ನೆನಪುಗಳನ್ನು ಹಂಚಿಕೊಂಡು ಖಂಡಿತ ಬರುವುದಾಗಿ ತಿಳಿಸಿದರು. ನಮ್ಮ ಕವಿತ ಮೇಡಂಗೆ ಕರೆ ಮಾಡಿದಾಗ, ಅವರು ಸಂತೋಷದಿಂದ ಬರುವುದಾಗಿ ಹೇಳಿದರು. ಅವರ ಬಳಿ ಅವರ ಸಹೋದರಿ ಕೋಮಲ ಮೇಡಂರವರ ಮೊಬೈಲ್ ನಂಬರ್ ಪಡೆದುಕೊಂಡೆ. ಅವರು ಕೂಡ ಬರುವುದಾಗಿ ಹೇಳಿದರು, ಆದರೆ ನಮ್ಮ ಬೆಳ್ಳಿ ಹಬ್ಬದ ಕಾರ್ಯಕ್ರಮದ ದಿನ ಅವರು ಅನಾರೋಗ್ಯಕ್ಕೊಳಗಾಗಿ ಬರಲಾಗಲಿಲ್ಲ.
ಮುಂದೆ ಲಿಜು ಸರ್ ಕರೆದೆ, ಅವರು ಲಂಡನ್ ನಲ್ಲಿದ್ದರು. ಸುನಿಲ್ ರೈ ಸರ್ ರವರನ್ನು ಕರೆದೆ, ಅವರ ಪತ್ನಿ ಪೂರ್ಣಿಮರವರೂ ಕೂಡ ನಮ್ಮ ಉಪನ್ಯಾಸಕಿಯಾದ್ದರಿಂದ, ಅವರನ್ನೂ ಕೂಡ ಕರೆದುಕೊಂಡು ಬರಲು ವಿನಂತಿಸಿಕೊಂಡೆ. ಅವರು ನೋಡೋಣ ಎಂದರು.
ನಾನು ಪ್ರತಿಯೊಬ್ಬರಿಗೂ ಫೋನ್ ಮಾಡಿ, ಅದೇ ವಿವರಗಳನ್ನು ಹೇಳುತ್ತಾ, ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೆ. ನಮ್ಮ ಮನೆಯಲ್ಲಿ ಈ ನನ್ನ ಪ್ರಹಸನವನ್ನು ಕೇಳಿ ಕೇಳಿ ಬೇಜಾರಾದ ನನ್ನ ಪತ್ನಿ ಹಾಗೂ ಮಗಳು ಪ್ರತಿಯೊಬ್ಬರಿಗೂ ಅದೇ ಕ್ಯಾಸೆಟ್ ಹಾಕ್ತೀರಲ್ಲ, ಸ್ವಲ್ಪ ಬೇರೆ ಏನಾದ್ರೂ ಮಾತಾಡಿ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಮ್ಮ ಉದ್ದೇಶ ಮೊದಲನೇ ಬ್ಯಾಚ್ ನ ವಿದ್ಯಾರ್ಥಿಗಳಾದ ನಾವು, ಕಾಲೇಜಿಗೆ ಈಗ ಇಪ್ಪತ್ತೈದು ವರ್ಷ ತುಂಬಿದ್ದರಿಂದ, ನಮ್ಮ ಜೊತೆ ಇದ್ದವರನ್ನು ಕರೆದು ಎಲ್ಲರಿಗೂ ಒಂದು ಧನ್ಯವಾದ ಹೇಳುವುದು. ಹಾಗಾಗಿ ನಮ್ಮ ಜತೆಯೇ ಇದ್ದ ಕುಮಾರಣ್ಣ ಹಾಗೂ ಅಯ್ಯಪ್ಪಣ್ಣ ಅವರನ್ನೂ ಕೂಡ ಕರೆದೆ. ತಮಾಷೆಯೆಂದರೆ ಅಯ್ಯಪ್ಪಣ್ಣರವರ ಜೊತೆ ನಾನು ನಮ್ಮ ಕಾರ್ಯಕ್ರಮದ ದಿನದವರೆಗೆ ಮಾತನಾಡೇ ಇರಲಿಲ್ಲ, ಅವರ ಪತ್ನಿಗೆ ಹೇಳಿದ್ದಷ್ಟೆ. ರವಿಯವರನ್ನು ಕರೆಯಬೇಕಾದರೆ ಅಯ್ಯಪ್ಪಣ್ಣರವರನ್ನೂ ಕರೆದುಕೊಂಡು ಬಂದು ಬಿಡಿ ಎಂದು ಹೇಳಿದ್ದೆ. ಸಿಐಟಿ ಕಛೇರಿ ಸಿಬ್ಬಂದಿಗಳಾದ ಮಂಜುಳ ಹಾಗೂ ಮೀರರವರನ್ನು ಆಹ್ವಾನಿಸಿದ್ದೆ. ನನ್ನ ಸ್ನೇಹಿತ ಪ್ರವೀಣ್ ಗೊನ್ಸಾಲ್ವಿಸ್ ಗೋಣಿಕೊಪ್ಪ / ಪೊನ್ನಂಪೇಟೆಯಿಂದ ಬರುವವರನ್ನು ಕರೆದುಕೊಂಡು ಬರುವ ಜವಾಬ್ದಾರಿ ತೆಗೆದುಕೊಂಡು ನನ್ನ ಕೆಲಸವನ್ನು ಸುಗಮಗೊಳಿಸಿದ.
(ಮುಂದಿನ ಚಾಪ್ಟರ್ - ರಂಗಸ್ಠಳ)
No comments:
Post a Comment