ಇಬಿಸಿ ಡೈರೀಸ್ ಭಾಗ ೧ - ಪುಸ್ತಕದ ಪುಟದಿಂದ ಎವರೆಸ್ಟ್ ಹಾದಿಗೆ!

 - ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣದ ನನ್ನ ಅನುಭವದ ಮೊದಲ ಭಾಗವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಮುಂದಿನ ಭಾಗವನ್ನು ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.



ಮೊಳಗಿದ ರಣಕೇಕೆ, ಮಾಯವಾದ ಗೆಳೆಯರು! 

ಇದೆಲ್ಲಾ ಶುರುವಾದದ್ದು ಸುಮಾರು ಒಂದೂವರೆ ವರ್ಷದ ಹಿಂದೆ ನನ್ನ ಸಹಪಾಠಿ/ಸ್ನೇಹಿತೆ ಗೀತಾ, ಸತೀಶ್ ಚಪ್ಪರಿಕೆ ಅವರು ಅನುವಾದ ಮಾಡಿರುವ ಪುಸ್ತಕ "ಘಾಂದ್ರುಕ್" ಅನ್ನು ಓದುವಾಗ, ಆ ಪುಸ್ತಕದಲ್ಲಿ ಒಂದು ಕಡೆ ಕೆಲವು ಸಾಲುಗಳಲ್ಲಿ ಪ್ರಕೃತಿಯ ವಿವರಣೆ ನೀಡಿದ್ದಾರೆ. ಆ ಸಾಲುಗಳ ಫೋಟೋವನ್ನು ಅವಳು ಗೆಳೆಯ ಕುಮಾರ್ ಜೊತೆ ಹಂಚಿಕೊಂಡಿದ್ದಾಳೆ. ಅವರಿಬ್ಬರು ಅದರಿಂದ ಪ್ರಭಾವಿತರಾಗಿ, ಆ ಜಾಗದ ಬಗ್ಗೆ ಒಂದಷ್ಟು ವಿವರ ಕಲೆ ಹಾಕಿದ್ದಾರೆ. ಅದು ಅನ್ನಪೂರ್ಣ ಬೇಸ್ ಕ್ಯಾಂಪ್ (ಎಬಿಸಿ) ಚಾರಣ ಮಾರ್ಗದಲ್ಲಿ ಬರುತ್ತದೆ ಎಂದು ತಿಳಿದು, ಅಲ್ಲಿಗೆ ಚಾರಣ ಹೋಗುವ ಬಗ್ಗೆ ಕೆಲವು ಗೆಳೆಯರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ಮಾತನಾಡುತ್ತಾ ಅದು ಎಬಿಸಿ ಇಂದ ಇಬಿಸಿ (ಎವರೆಸ್ಟ್ ಬೇಸ್ ಕ್ಯಾಂಪ್)ಗೆ ಹೋಗುವ ಎಂದು ಬದಲಾಯಿತು. ನವೆಂಬರ್ ೨೦೨೫ರಲ್ಲಿ ಚಾರಣದಲ್ಲಿ ಆಸಕ್ತಿಯಿರುವ ಸುಮಾರು ೨೫ ಜನ ಸ್ನೇಹಿತ/ಸ್ನೇಹಿತೆಯರ ಗುಂಪೊಂದನ್ನು ರಚನೆ ಮಾಡಿ, ಎಲ್ಲರಿಗೂ ೨೦೨೬ರ ಮೇ ೧ಕ್ಕೆ  ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ತಿಳಿಸಲಾಯಿತು. ಎಲ್ಲರೂ ಉತ್ಸಾಹದಿಂದಲೇ ರಣಕೇಕೆ ಮೊಳಗಿಸಿದರು. ಆ ರಣಕೇಕೆಯ ತೀವ್ರತೆ ಕಡಿಮೆಯಾಗಲು ಹೆಚ್ಚು ಕಾಲವೇನು ಬೇಕಾಗಲಿಲ್ಲ. ಡಿಸೆಂಬರ್ ಹೊತ್ತಿಗೆ ಚಾರಣಕ್ಕೆ ಬರಲು ನಿಶ್ಚಯಿಸಿದವರ ಸಂಖ್ಯೆ ೨೫ರಿಂದ ೧೨ಕ್ಕೆ ಬಂತು.

ಕ್ಯಾಪ್ಟನ್ ಕುಮಾರ್ ಮತ್ತು ಹನ್ನೊಂದು ಮಂದಿ ಹಳೇ ಇಂಜಿನಿಯರ್‌ಗಳು

ನನ್ನ ಸ್ನೇಹಿತ ಕುಮಾರ್ ಈ ಇಬಿಸಿ ಚಾರಣ ಕಾರ್ಯಕ್ರಮದ ಜನಕ. ಕಳೆದ ೮ ತಿಂಗಳಿಂದ ಜನರನ್ನು ಸೇರಿಸಿ, ವಾಟ್ಸಾಪ್ ಗುಂಪೊಂದನ್ನು ರಚನೆ ಮಾಡಿ, ಪ್ರತಿ ವಾರವೂ ನಿಯಮಿತವಾಗಿ ಮೀಟಿಂಗ್ ಮಾಡಿ, ಚಾರಣದ ಬಿಸಿ ಎಲ್ಲರಲ್ಲೂ ಆರದಂತೆ ನೋಡಿಕೊಂಡನು. ಇದರ ಜೊತೆಗೆ ಟೂರ್ ಆಪರೇಟರ್ ಬುಕ್ ಮಾಡುವುದರಿಂದ ಹಿಡಿದು ಎಲ್ಲರಿಗೂ ಕೆಲಸಗಳನ್ನು ಹಂಚಿ, ಆ ಕೆಲಸಗಳ ಸ್ಥಿತಿಗತಿಗಳ ಮೇಲ್ವಿಚಾರಣೆ ಹೀಗೆ ಎಲ್ಲದರಲ್ಲೂ ಅವನ ಮುಂದಾಳತ್ವವೇ. ಅವನ ಈ ಹುಮ್ಮಸ್ಸಿನಿಂದಲೇ ಈ ಚಾರಣವನ್ನು ಬೇರೆ ಎಲ್ಲರೂ ಗಂಭೀರವಾಗಿ ತೆಗೆದುಕೊಂಡರು. ಇಲ್ಲವಾದಲ್ಲಿ ನಾನಂತೂ ಇಬಿಸಿ ಚಾರಣ ಬಿಡಿ, ಮೈಸೂರಿನ ಚಾಮುಂಡಿ ಬೆಟ್ಟ ಹತ್ತಲೂ ಹೋಗುತ್ತಿರಲಿಲ್ಲ.
ಕುಮಾರ್, ಕೌಶಿಕ್, ಗೀತಾ, ಪರಶಿವ, ನಿಂಗರಾಜು ಎಲ್ಲರೂ ಇಂಜಿನಿಯರಿಂಗ್ ಸಹಪಾಠಿಗಳು. ಅಲ್ಲಿಂದ ಶುರುವಾದ ನಮ್ಮ ಸ್ನೇಹ, ಇಂಜಿನಿಯರಿಂಗ್ ಮುಗಿದ ಮೇಲೂ ಸಹ ಹಾಗೆಯೇ ಉಳಿದುಕೊಂಡಿತು.  ನಿಂಗರಾಜು ಜೊತೆಗೆ ಅವರ ಅರ್ಧಾಂಗಿ ಪ್ರಿಯ ಇಬ್ಬರೂ ನಮ್ಮ ಗ್ರೂಪಿನ ಲವ್ ಬರ್ಡ್ಸ್. ಸತೀಶ, ನವೀನ್, ಜಗ್ಗು ಮತ್ತು ಕುಮಾರ್ ನಿಕಟವರ್ತಿಗಳು ಹಾಗೂ ಹಲವಾರು ವರ್ಷಗಳಿಂದ ನಮ್ಮೆಲ್ಲರಿಗೂ ಆತ್ಮೀಯರಾಗಿದ್ದರು. ಭರತ್ ಪರಶಿವನ ಅಂಸ್ಟೆರ್ಡಾಮ್ ಸ್ನೇಹಿತ ಮತ್ತು ನಮ್ಮ ಗುಂಪಿನ ರೇಸ್ ಕುದುರೆಯೆಂದೇ ಹೇಳಬಹುದು.

ಪರಶಿವನ ಪಾಸ್‌ಪೋರ್ಟ್ ಪುರಾಣ

ನಮ್ಮ ಯೋಜನೆಯ ಪ್ರಕಾರ, ಚಾರಣಕ್ಕೆ ಹೋಗಲು ಗೀತಾ ಮತ್ತು ನಾನು ಮೈಸೂರಿನಿಂದ ಹೊರಡಬೇಕಿತ್ತು. ಬಾಕಿ ೮ ಜನ ಬೆಂಗಳೂರಿಂದ ಬರುವವರಿದ್ದರು. ಕುಮಾರ್ ಮತ್ತು ಭರತ್ ವಿದೇಶಗಳಿಂದ ಹೊರಟು ನಮ್ಮನ್ನು ಕಠ್ಮಂಡುವಿನಲ್ಲಿ ಸೇರಿಕೊಳ್ಳುವವರಿದ್ದರು. ಈ ನಡುವೆ ಸ್ನೇಹಿತ ಪರಶಿವ ಪಾಸ್ ಪೋರ್ಟ್ ಮರುನವೀಕರಿಸಲು ಒಂದು ತಿಂಗಳ ಮುಂಚೆ ಪಾಸ್ ಪೋರ್ಟ್ ಕೇಂದ್ರದಲ್ಲಿ ಔಪಚಾರಿಕತೆಗಳನ್ನೆಲ್ಲ ಪೂರ್ಣಗೊಳಿಸಿದ್ದರೂ ಅದು ಪೊಲೀಸ್ ಪರಿಶೀಲನೆಗೆ ಬಂದಿರಲಿಲ್ಲ. ನೇಪಾಳಕ್ಕೆ ಮತದಾನ ಗುರುತಿನ ಚೀಟಿ ಆಧಾರದಲ್ಲೂ ಕೂಡ ಹೋಗಬಹುದಿತ್ತು. ಆದರೆ ಅದು ಕೂಡ ಎಲ್ಲೋ ಕಳೆದುಕೊಂಡಿದ್ದನು. ಈ ದಾಖಲೆಗಳು ವಿಮಾನದ ಟಿಕೆಟ್ ಬುಕ್ ಮಾಡಲು ಮತ್ತು ಇನ್ಸೂರೆನ್ಸ್ ಖರೀದಿಸಲು ನಿರ್ಣಾಯಕವಾಗಿದ್ದವು. ಇವೆಲ್ಲಾ ವಿಚಾರಗಳು ಸೇರಿಕೊಂಡು ನಮ್ಮ ಪ್ರಯಾಣದ ಪೂರ್ವಸಿದ್ಧತೆಗೊಂದು ರೋಚಕತೆಯ ಆಯಾಮವನ್ನು ದೊರಕಿಸಿಕೊಟ್ಟಿತ್ತು. ನಾವೆಲ್ಲಾ ಪ್ರತಿದಿನವೂ ಈ ರೋಚಕತೆಯನ್ನು ಅನುಭವಿಸಿ ರೋಮಾಂಚಿತರಾಗಿ ಹೋಗಿದ್ದೆವು. ಕಡೆಗೆ ಹೊರಡಲು ೨ ದಿನ ಇರುವಂತೆ ಮತದಾರರ ಗುರುತಿನ ಚೀಟಿಯನ್ನು ಪರಶಿವ ಎಲ್ಲಿಂದಲ್ಲೋ ಹುಡುಕಿ ತೆಗೆದು ರೋಚಕತೆಯ ಬೆಂಕಿಗೆ ತಣ್ಣೀರು ಎರಚಿ ನಂದಿಸಿದ್ದನು.

ಏರ್ ಇಂಡಿಯಾದ ಅವಾಂತರ

ಏಪ್ರಿಲ್ ೩೦, ಇಬಿಸಿ ಚಾರಣಕ್ಕೆ ಹೊರಡುವ ದಿನ ಬಂದೇ ಬಿಟ್ಟಿತು. ನನ್ನ ಶಾಪಿಂಗ್ ಇನ್ನೂ ಮುಗಿದೇ ಇರಲಿಲ್ಲ. ಟೂರ್ ಆಪರೇಟರ್ ನಮಗೆ ಚಾರಣಕ್ಕೆ ಬೇಕಾದ ಎಲ್ಲಾ ವಸ್ತುಗಳ/ಬಟ್ಟೆ ಬರೆಗಳ ಸಮಗ್ರ ಪಟ್ಟಿಯೊಂದನ್ನು ರಚಿಸಿ ಕೊಟ್ಟಿದ್ದ. ಆದರೆ ಪಟ್ಟಿಯಲ್ಲಿದ್ದ ವಸ್ತುಗಳನ್ನು ಬೇರೆ ಬೇರೆ ಅಂಗಡಿಗಳಿಗೆ ಓಡಾಡಬೇಕಾಗಿ ಬಂದು ಸಾಕುಬೇಕಾಗಿ ಹೋಗಿತ್ತು. ಈ ಓಡಾಟ ಕಡೆಯ ದಿವಸದವರೆಗೂ ನಡೆಯುತ್ತಲೇ ಇತ್ತು. ಇದರ ಜೊತೆಗೆ ಸಂಜೆ ಐದಾದರೂ ಇನ್ನೂ ಆಫೀಸಿನ ಕೆಲಸಗಳು ಮುಗಿಯುತ್ತಲೇ ಇಲ್ಲ. ಆ ಕೆಲಸಗಳನ್ನು ಮುಗಿಸಲು ಅವತ್ತೇ ಡೆಡ್ಲೈನ್ ಬೇರೆ. ಈ ಎಂದೂ ಮುಗಿಯದ ಕೆಲಸಗಳಿಗೆ ಡೆಡ್ಲೈನ್ ಯಾಕೆ ಇಡ್ತಾರೋ? ಎರಡು ವಾರ ಆದಮೇಲೆ ವಾಪಸ್ ಬಂದು ನೋಡೋಣ ಎಂದು ಲಾಗಾಫ್ ಮಾಡಿದೆ. ಹೊರಡುವ ದಿವಸ ರಾತ್ರಿ ೧೦:೩೦ಕ್ಕೆ  ಮೈಸೂರು ಬಸ್ ನಿಲ್ದಾಣದಲ್ಲಿ  ಫ್ಲೈಬಸ್ ಹತ್ತಬೇಕು. ಇದು ನೇರವಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತಿತ್ತು. ಅಲ್ಲಿ ಮರುದಿನ ಬೆಳಗ್ಗೆ ೫ ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋಗಿ, ದೆಹಲಿಯಿಂದ ಖಠ್ಮಂಡುಗೆ ೧೧ ಗಂಟೆಗೆ ಇನ್ನೊಂದು ವಿಮಾನ ಹಿಡಿಯಬೇಕಿತ್ತು. ನಾವುಗಳು ಬೆಂಗಳೂರಿನಿಂದ ನೇರವಾಗಿ ಕಠ್ಮಂಡು ತಲುಪುವ ವಿಮಾನಕ್ಕೆ ಎರಡು ತಿಂಗಳ ಮೊದಲೇ ಟಿಕೆಟ್ ಖರೀದಿ ಮಾಡಿ ಆರಾಮವಾಗಿ ಕಠ್ಮಂಡು ತಲುಪುವ ಯೋಜನೆಯೊಂದನ್ನು ರೂಪಿಸಿದ್ದೆವು. ತಾನೊಂದು ಬಗೆದರೆ ಏರ್ ಇಂಡಿಯಾದವರು ಇನ್ನೊಂದು ಬಗೆದರು. ಆ ನೇರ ವಿಮಾನವನ್ನು ರದ್ದು ಮಾಡಿ ನಮ್ಮ ಆರಾಮದ ಯೋಜನೆಯನ್ನು ಸಾಹಸಮಯ ಮಾಡಿದರು. ನಾವು ಛಲಬಿಡದ ತ್ರಿವಿಕ್ರಮನಂತೆ ಸುತ್ತಿಬಳಸಿ ಕಠ್ಮಂಡುವಿಗೆ ಹೋಗುವ ಯೋಜನೆಯೊಂದನ್ನು ರೂಪಿಸಿದೆವು. ಈ ಸುತ್ತು ಬಳುಸುವಿಕೆಯ ಪ್ರಯಾಣದ ಜೊತೆಗೆ ಪ್ರತಿಯೊಬ್ಬರಿಗೂ ಇನ್ನು ಇಪ್ಪತ್ತು ಸಾವಿರ ಅಧಿಕ ಖರ್ಚು ಬಂತು.

ಸತೀಶನ ಅಪೂರ್ಣ ಸೇಡು

ನಾವೆಲ್ಲ ದೆಹಲಿ ತಲುಪಿ ಅಲ್ಲಿಂದ ಕಠ್ಮಂಡು ವಿಮಾನ ಹಿಡಿಯುವ ಕಡೆಗೆ ಹೆಜ್ಜೆ ಹಾಕಿದೆವು. ಅಲ್ಲಿದ್ದ ವಲಸೆ ಅಧಿಕಾರಿ ಒಬ್ಬ ನಮ್ಮ ಚಾರಣದ ಬಗ್ಗೆ ಬಹಳ ಉತ್ಸಾಹದಿಂದ ಕೇಳಿ ತಿಳಿದುಕೊಳ್ಳತೊಡಗಿದರು. ಮಾತಿನ ಕೊನೆಯಲ್ಲಿ ಅವನು ನಮ್ಮ ಸತೀಶನನ್ನು ನೋಡಿ ಇವರನ್ನು ನೋಡಿದರೆ ಇಬಿಸಿಯನ್ನು ಹತ್ತಬಲ್ಲರು ಎಂದು ನನಗೆ ಅನಿಸುತ್ತಿಲ್ಲ ಎಂದರು. ನಮ್ಮ ಸತೀಶ ಇದನ್ನ ಮನಸ್ಸಿಗೆ ತೆಗೆದುಕೊಂಡು ಸವಾಲಾಗಿ ಸ್ವೀಕರಿಸಿ,  ವಾಪಾಸ್ ಹಿಂತಿರುಗುವಾಗ ಆ ವಲಸೆ ಅಧಿಕಾರಿಯ ಕಣ್ಣಲ್ಲಿ ಕಣ್ಣಿಟ್ಟು "ನಾನು ಹತ್ತಿ ಬಂದೆ" ಎಂದು ಹೇಳಿ ಆನಂತರ ಬೆಂಗಳೂರಿಗೆ ಮರಳಬೇಕು ಎಂದುಕೊಂಡನು. ಆದರೆ ನಾವು ಮರಳುವಾಗ ನಮಗೆ ವಿಮಾನ ಕಠ್ಮಂಡುವಿನಿಂದ ನೇರವಾಗಿ  ಬೆಂಗಳೂರಿಗೆ ಇದ್ದುದರಿಂದ, ಒಂದು ಅಪರೂಪದ ಸೇಡಿನ ಕತೆಯ ಕ್ಲೈಮ್ಯಾಕ್ಷನ್ನು ಕಣ್ಣಾರೆ ನೋಡುವ ಭಾಗ್ಯದಿಂದ ವಂಚಿತರಾದೆವು.

(ಸಶೇಷ)

No comments:

Post a Comment