ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೨

- ಅಕ್ಷಯರಾಮ ಕಾವಿನಮೂಲೆ


ನಮ್ಮ ಬಸ್ ಡ್ರೈವರ್ ರಾಣಾ ಹಾಡು ಗುನುಗುತ್ತಾ ಆಕ್ಸಿಲೇಟರ್ ಅದುಮುತ್ತಿದ್ದ. ತುಂಬಾ ದೂರ ಮಂಜು ಕವಿದ ರಸ್ತೆ. ಮುಂದೆ ತುಸುವೇ ಬೆಳಕು ಹರಿದು ಹೊರಗಿನ ರುದ್ರ ರಮಣೀಯ ಸೌಂದರ್ಯ ಕಾಣತೊಡಗಿತು. ಎಡಬದಿಗೆ ಆಳದಲ್ಲಿ ಹರಿಯುವ ಬಿಯಾಸ್ ನದಿ. ಬಲಗಡೆಗೆ ಕಡಿದಾಗಿ ಮುಗಿಲೆತ್ತರಕ್ಕೆ ನಿಂತ ಪರ್ವತಮಾಲೆ. ತಿರುವುಗಳಲ್ಲಿ ವೇಗ ಜಾಸ್ತಿಯಾಗಿ ವೋಲ್ವೋ ತುಯ್ದಾಡುತ್ತಿತ್ತು. ಒಂದಷ್ಟು ದೂರ ಸಾಗಿದಾಗ ಮಗಳು ಚಿತ್ಕಲಾಳ ಮುಖಭಾವ ಬದಲಾಯಿತು. ಗಾಬರಿಯಿಂದ ಎದುರಿಗಿದ್ದ ಪ್ಲಾಸ್ಟಿಕ್ ಚೀಲ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ವಾಂತಿಯಾಯಿತು. "ಸ್ವಲ್ಪ ನಿಲ್ಲಿಸಪ್ಪಾ ಪುಣ್ಯಾತ್ಮಾ" ಕೇಳಿಕೊಂಡೆ ಡ್ರೈವರ್ ಬಳಿ.
ಯಾವುದೋ ಅನ್ಯಗ್ರಹದ ಜೀವಿಯನ್ನು ನೋಡುವಂತೆ ಕೆಕ್ಕರಿಸಿ ಬಸ್ ನಿಲ್ಲಿಸಿದ. ಹಿಮಾಚಲದ ಜನರಿಗೆ ಅಂತಹಾ ತಿರುವುಗಳ ಕಡಿದಾದ ರಸ್ತೆ ಅತಿ ಸಾಮಾನ್ಯ. ನಮ್ಮ ಪಶ್ಚಿಮ ಘಟ್ಟಗಳ ರಸ್ತೆಯೂ ತಿರುವುಗಳಿಂದ ಕೂಡಿದ್ದೇ, ಆದರೆ ಹಿಮಾಲಯದ ಭೀಮಗಾತ್ರದ ತಿರುವುಗಳು ನಮಗೆ ಹೊಸದು. ವೋಲ್ವೋ ಬಸ್ಸಂತೂ ಆಕ್ಸಿಲೇಟರ್ ತುಳಿದಷ್ಟೂ ಕುದುರೆಯಂತೆ ತೊನೆಯುತ್ತದೆ. ಇಂಧನ ಉಳಿಸಲು, ಇನ್ನಷ್ಟು ಪುಲ್ಲಿಂಗ್ ಸಿಗಲು ಏ.ಸಿ. ಬೇರೆ ಬಂದ್ ಮಾಡಿದ್ದಾನೆ. (ಹಿಮಾಲಯದ ಕಡೆ ಅದು ಸಾಮಾನ್ಯ ಎಂದು ಆಮೇಲೆ ತಿಳಿಯಿತು) ಕೆಳಗಿಳಿದು ಬಾಯಿತೊಳೆದು ಒಂದಷ್ಟು ತಂಪಾದ ಗಾಳಿ ಸೇವಿಸಿಕೊಂಡೆವು. ಹಿತವೆನಿಸಿತು. ಮತ್ತೆ ಹೊರಟೆವು. ಒಂದೈದು ಕಿಲೋಮೀಟರ್ ಕ್ರಮಿಸುವಷ್ಟರಲ್ಲಿ ಸಹ ಪ್ರಯಾಣಿಕರು ಮೂರ್ನಾಲ್ಕು ಮಂದಿ ಕಾರತೊಡಗಿದರು. ಮತ್ತೆ ಒಂದಿಬ್ಬರು ಬಸ್ ನಿಲ್ಲಿಸುವಂತೆ ರಾಣಾಗೆ ಕೈಮುಗಿದರು. ಈಗ ಆತನ ತಾಳ್ಮೆ ತಪ್ಪಿಹೋಯಿತು. ಬಸ್ ನಿಲ್ಲಿಸಿ ಗೊಣಗತೊಡಗಿದ. "ಏ.ಸಿ. ಹಾಕದಿದ್ದರೂ ತೊಂದರೆ ಇಲ್ಲ, ಒಳಗೆ ಗಾಳಿಯಾಡಲು ಬ್ಲೋವರ್ ಆದರೂ ಚಾಲೂ ಮಾಡಪ್ಪಾ ಪರಮಾತ್ಮಾ" ಎಂದು ಕೈಮುಗಿದ ಮೇಲೆ ಒಪ್ಪಿದ !
ಹಿಮಾಚಲ ರಾಜ್ಯದಲ್ಲಿ ಪ್ಲಾಸ್ಟಿಕ್ ಕವರುಗಳ ಬಳಕೆ ನಿಷೇಧಿಸಲಾಗಿದೆ. ಹೀಗೆ ಬಸ್ಸಿನಲ್ಲಿ ಕಾರುವವರಿಗಾಗಿಯೇ ಹಿಮಾಚಲ ರಾಜ್ಯ ಸಾರಿಗೆ ಬಸ್ಸುಗಳ ಪ್ರತಿ ಸೀಟಿನ ಹಿಂದೆ ಪೇಪರ್ ಕವರುಗಳನ್ನು ತಯಾರಿಸಿ ಇರಿಸಿದ್ದಾರೆ  (ಮಂಗಳೂರು - ಬೆಂಗಳೂರು ವೋಲ್ವೋ ಬಸ್ಸಿನಲ್ಲಿ ಪ್ಲಾಸ್ಟಿಕ್ ಕವರುಗಳನ್ನೇ ಕೊಡುವ 'ಸತ್ಸಂಪ್ರದಾಯ' ಇನ್ನೂ ಮುಂದುವರಿದಿದೆ). ನಾಲ್ಕೈದು ಪೇಪರ್ ಕವರುಗಳನ್ನು ಕೈಯಲ್ಲಿ ಹಿಡಿದು ಕುಳಿತೆವು. ಮತ್ತೆ ಮುಂದೆ ಸಾಗಿತು ರಾಣಾನ ವೋಲ್ವೋ. ಒಂದಷ್ಟು ದೂರ ಕ್ರಮಿಸಿದ ಮೇಲೆ ರಸ್ತೆಯ ತಿರುವುಗಳು ತುಸು ಮೃದುವಾದವು. ನಮ್ಮ ಸಹ ಪಯಣಿಗರು ಕೆಲವರು ಇನ್ನೂ ಪೇಪರ್ ಕವರುಗಳನ್ನು ತುಂಬುವ ಕಾರ್ಯ ಮುಂದುವರಿಸುತ್ತಾ ಕುಳಿತಿದ್ದರು. ನಾನು ಕ್ಯಾಮರಾ ಹೊರತೆಗೆದು ಬಸ್ಸಿನೊಳಗಿಂದಲೇ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯಲು ಪ್ರಯತ್ನಿಸಿದೆ (ಪದೇ ಪದೇ ನಿಲ್ಲಿಸುವಂತೆ ರಾಣಾನಲ್ಲಿ ಕೇಳುವ ಧೈರ್ಯ ಮಾಡಲಿಲ್ಲ). ಕುಲ್ಲು ಪೇಟೆ ದಾಟಿದ ಮೇಲೆ ರಾಣಾನ ಪಕ್ಕ ಕುಳಿತು ಫೋಟೋ ತೆಗೆಯುವಷ್ಟು ಸಲುಗೆಯಾಯಿತು. ದಾರಿಯುದ್ದಕ್ಕೂ ಹಿಮಾಚಲದ ಹಳ್ಳಿಗಳ ಬೆಳಗನ್ನು ಕಣ್ಣು ತುಂಬಿಸಿಕೊಳ್ಳಲು ಸಾಧ್ಯವಾಯಿತು. ಪುಟ್ಟ ಪುಟ್ಟ ಮಕ್ಕಳು ಬೆಚ್ಚಗಿನ ಉಡುಪು ಧರಿಸಿ ಶಾಲೆಗೆ ಹೋಗುವ ದೃಶ್ಯ ಮನೋಹರವಾಗಿತ್ತು. ಬೆಳ್ಳಿಯ ಕಿರೀಟ ಧರಿಸಿದ ಪರ್ವತಸಾಲುಗಳ ಕಂಡು ಎದೆತುಂಬಿತು. ಕ್ಯಾಮರಾದ ಮೆಮೋರಿ ಕಾರ್ಡ್ ಕೂಡಾ ಒಂದಷ್ಟು ತುಂಬಿತು.
ಮನಾಲಿ:
ಅಂತೂ ಇಂತೂ ಬೆಳಗ್ಗೆ ಹತ್ತೂಮುಕ್ಕಾಲಕ್ಕೆ ಮನಾಲಿ ಬಸ್ ನಿಲ್ದಾಣಕ್ಕೆ ತಲುಪಿದೆವು. ರಾಣಾನ ಕೈಕುಲುಕಿ ಹೊರಟು, ನಾವು ಮೊದಲೇ ಕಾಯ್ದಿರಿಸಿದ್ದ ಹೋಟೇಲಿನ ವಾಹನಕ್ಕಾಗಿ ಕಾಯುತ್ತಾ ಮನಾಲಿಯ ಬೆಳಗನ್ನು ಆಸ್ವಾದಿಸಿದೆವು.
ಬಸ್ ನಿಲ್ದಾಣದ ಬಳಿ ಕಲ್ಲು ಬೆಂಚೊಂದರಲ್ಲಿ ಕುಳಿತು ಹೊಂಬಿಸಿಲನ್ನು ಕಣ್ತುಂಬಿಸುತ್ತಿರಬೇಕಾದರೆ ಒಬ್ಬ ಅಪರಿಚಿತ ಅಟಕಾಯಿಸಿದ. "ನಾನೊಬ್ಬ ಹೋಟಲಿನ ಪ್ರಚಾರ (ಪ್ರಮೋಟ್)ಮಾಡುವವನು, ನಾನು ಕೊಡುವ ಕಾರ್ಡ್ ಸ್ಕ್ರಾಚ್ ಮಾಡಿ ಬಹುಮಾನಗಳನ್ನು ಗೆಲ್ಲಿ. ಯಾವುದೇ ಹಣ ನೀಡಬೇಕಿಲ್ಲ" ಎಂದೆಲ್ಲಾ ಅಸ್ಖಲಿತವಾಗಿ ಮಾತನಾಡುತ್ತಾ ನಮ್ಮ ಕೈಯಲ್ಲಿ ಒಂದು ಕಾರ್ಡ್ ತೆರೆಸಿದ. ಅದರಲ್ಲಿ 'ಬೆಟರ್ ಲಕ್ ಇನ್ನೊಮ್ಮೆ ಪ್ರಯತ್ನಿಸಿ' ಎಂದಿತ್ತು. ಪುಣ್ಯಾತ್ಮ ಅಷ್ಟಕ್ಕೇ ಬಿಡಲಿಲ್ಲ. ಕೃತ್ತಿಕಾ ಹತ್ತಿರ ಇನ್ನೊಂದು ಕಾರ್ಡ್ ತೆರೆಸಿದ. ಅದರಲ್ಲೇನೋ ಮೂರ್ನಾಲ್ಕು ಬಹುಮಾನಗಳ ಹೆಸರಿತ್ತು. "ಅವುಗಳಲ್ಲಿ ಯಾವುದಾದರೂ ಒಂದು ಪಡೆಯಬೇಕಾದರೆ ನಮ್ಮ ಹೋಟಲಿನತ್ತ ಬನ್ನಿ. ಹಿಡಿಂಬಾ ದೇವಿಯ ದೇವಸ್ಥಾನದ ರಸ್ತೆಯಲ್ಲೇ ನಮ್ಮ ಹೋಟೆಲಿದೆ. ನಾನೇ ಕಾರು ಕಳುಹಿಸುತ್ತೇನೆ. ಯಾವುದೇ ವಂಚನೆಯೂ ಇಲ್ಲ" ಎಂದು ನಂಬಿಸಿಯೇ ಬಿಟ್ಟ. ಆದರೆ ನಾವು ಈಗಾಗಲೇ ಕಾಯ್ದಿರಿಸಿದ ಹೋಟೆಲಿಗೆ ಹೋಗಿ ಸ್ನಾನಾದಿಗಳನ್ನು ಮುಗಿಸಿಬರುವೆವು ಎಂದು ಹೊರಟೆವು. ಅಷ್ಟರಲ್ಲಿ ನಮ್ಮ ಹೋಟಲಿನ ಸಿಬ್ಬಂದಿ ಗೋಪಾಲ್ ಕಾರು ತಂದು ನಮ್ಮನ್ನು ಕರೆದೊಯ್ದ. ಹೋಟೆಲಿಗೆ ಬಂದು, ರೂಮು ಸೇರಿ ನಡುಕ ಹುಟ್ಟಿಸುತ್ತಿದ್ದ ಚಳಿ ತಡೆಯಲಾರದೆ  ಬಿಸಿನೀರಿನಲ್ಲಿಯೇ ಹಲ್ಲುಜ್ಜಿ, ಚಹಾ ಕುಡಿದೆವು. ಕೃತ್ತಿಕಾ ಮೊದಲ ಬಾರಿಗೆ ಅಂತಹಾ ಚಳಿ ನೋಡುತ್ತಿದ್ದಳು. ಕೂಡಲೇ ರೂಮ್ ಹೀಟರ್ ತರಿಸಿಕೊಂಡೆವು. ಹೀಟರಿನ ಕಾಯಿಲ್ ನಿಧಾನವಾಗಿ ಕೆಂಪಾದಂತೆ ಸುತ್ತಲೂ ತುಸು ಬೆಚ್ಚಗಾಯಿತು.
ಬಿಸಿ ಬಿಸಿ ಹೀಟರ್ ಕಂಡ ಮೇಲೆ ಆಚೀಚೆ ಕದಲುವ ಪ್ರಶ್ನೆಯೇ ಉದ್ಭವಿಸದು. "ನೀ ಮೊದಲು ಹೊರಡು" ಎಂದು ಧರ್ಮಪತ್ನಿಯನ್ನು ಸ್ನಾನಗೃಹಕ್ಕೆ ಕಳುಹಿಸಲು ನಾನು ಅಲೋಚಿಸಿದರೆ ಅವಳಂತೂ "ನೀವು ಮೊದಲು ಹೋಗಿ ಸ್ನಾನ ಮಾಡಿ, ಮಗಳಿಗೆ ಸ್ನಾನ ಮಾಡಿಸಿ. ಅಷ್ಟು ಹೊತ್ತು ಹೀಟರ್ ಮುಂದೆ ಕುಳಿತುಕೊಳ್ಳುತ್ತೇನೆ" ಎಂದು ಕ್ರಿಯಾಯೋಜನೆ ತಯಾರಿಸಿಯೇ ಬಿಟ್ಟಳು. ಅಂತೂ ಇಂತೂ ಸ್ನಾನ ಮಾಡಿ ಹೊರಟಾಗ ಮಧ್ಯಾಹ್ನ ಒಂದು ಗಂಟೆ. ಕಾರ್ಡು ತೋರಿಸಿ ನಾಮ ಹಾಕಲು ಹೊರಟ ವ್ಯಕ್ತಿ ಅಷ್ಟರೊಳಗೆ ಎರಡು ಬಾರಿ ಫೋನ್ ಮಾಡಿ ನಾವು ಬಸ್ ನಿಲ್ದಾಣಕ್ಕೆ ಬರುವಂತೆ ಒತ್ತಾಯಿಸಿದ್ದ. ನಾವು ರೂಮಿನಿಂದ ಹೊರಬಂದು ರಿಸೆಪ್ಶನ್ ಬಳಿ ಕ್ಯಾಬಿಗಾಗಿ ವಿಚಾರಿಸಿದಾಗ ಅವರು ಅಲ್ಲೇ ಕುಳಿತಿದ್ದ ರಿಷಿ ಎಂಬ ಒಬ್ಬ ಯುವಕನನ್ನು  ಕಳುಹಿಸಿದರು. ಬಸ್ಟ್ಯಾಂಡಿಗೆ ಹೋಗಿ ಅಲ್ಲಿಂದ ಆ ಮನುಷ್ಯನ ಜೊತೆ ಅದೃಷ್ಟ ಪರೀಕ್ಷಿಸಲು ಹೋಗುವ ಎಂಬುದು ನನ್ನ ಯೋಚನೆಯಾಗಿತ್ತು. ಆದರೆ ದಾರಿ ಮಧ್ಯೆ ಯಾಕೋ ಏನೋ, ಈ ಡ್ರೈವರಿನ ಬಳಿ ವಿಚಾರಿಸೋಣ ಎಂದುಕೊಂಡು ರಿಷಿ ಬಳಿ ಈ ವಿಷಯ ಪ್ರಸ್ತಾಪಿಸಿದೆ. "ಸಾಬ್, ಇಸ್ ತರಹ್ ಬಹುತ್ ಲೋಗ್ ಟೂರಿಸ್ಟ್ ಕೋ ಲೂಟ್ ತೇ ಹೈ. ಪೆಹಲೇ ಅಚ್ಛೇ ಬಾತೋಂಸೇ ವಹಾಂ ಲೇಜಾತೇ ಹೈ ಬಾದ್ ಮೇ ಕುಛ್ ನಾ ಕುಛ್ ಖರೀದ್ನಾ ಪಡ್ತಾ ಹೈ" ಎಂದು ರಿಷಿ ಅವರ ತಂತ್ರವನ್ನು ಬಿಚ್ಚಿಟ್ಟ. "ನನ್ನ ಜೊತೆ ಆ ಹೋಟೆಲಿಗೆ ಬರುತ್ತೀಯಾ" ಎಂದು ಕೇಳಿದಾಗ ತಲೆಯಾಡಿಸಿ, "ಹೋಗುವುದಾದರೆ ನಿಮ್ಮ ರಿಸ್ಕಿನಲ್ಲಿ ನೀವೇ ಹೋಗಿಬನ್ನಿ ಸಾಬ್" ಎಂದು ನಯವಾಗಿಯೇ ತಿರಸ್ಕರಿಸಿದ. ಪರಸ್ಥಳದಲ್ಲಿ ಗೊತ್ತು ಪರಿಚಯವಿಲ್ಲದವರ ಜೊತೆ ಹೊರಡಲು (ಅದೂ ಹೆಂಡತಿ, ಪುಟ್ಟ ಮಗಳ ಜೊತೆ !) ಯೋಚಿಸಿದ ನನ್ನ ಹೆಡ್ಡತನ ಕಂಡು ನನಗೇ ಕೋಪ, ನಗು ಎರಡೂ ಬಂತು. ಬಸ್ ನಿಲ್ದಾಣದ ಬಳಿ ಇಳಿಯುವಾಗ ರಿಷಿಯ ಬಳಿ ಸ್ನೋ ಪಾಯಿಂಟ್ ಗೆ ಕರೆದುಕೊಂಡು ಹೋಗಲು ಕೇಳಿಕೊಂಡೆ. ಆತ ತನ್ನ ಸ್ನೇಹಿತನನ್ನು ಕಳುಹಿಸುವುದಾಗಿ ಹೇಳಿ ಫೋನ್ ನಂಬರ್ ವಿನಿಮಯ ಮಾಡಿಕೊಂಡ. ಹೊಟ್ಟೆಗಟ್ಟಿ ಮಾಡೋಣ ಎಂದು ಯಾವುದಾದರೂ ಸಸ್ಯಾಹಾರಿ ರೆಸ್ಟೋರೆಂಟ್ ಹುಡುಕುವಾಗ ಕಾರ್ಡ್ ಕೊಟ್ಟ ಆಸಾಮಿ ದೀಪಕ್ ಎದುರಾದ. "ಸಾರ್, ನಿಮ್ಮನ್ನೇ ಕಾಯುತ್ತಿದ್ದೆ, ಬನ್ನಿ ಹೋಗೋಣ ನಿಮ್ಮ ಬಹುಮಾನ ಪಡೆಯಲು" ಎಂದು ಕರೆದೊಯ್ಯಲು ಪ್ರಯತ್ನಿಸಿದ. "ನಮ್ಮದಿನ್ನೂ ಊಟ ಆಗಿಲ್ಲ, ಊಟ ಮಾಡಿ ಬರುತ್ತೇವೆ" ಎಂದು ಹತ್ತಿರದ ಭೋಜನಾಲಯ ಹೊಕ್ಕೆವು. ಊಟಕ್ಕೆ ಕುಳಿತಾಗ ಮೊಬೈಲಿನಲ್ಲಿ ಗೂಗಲ್ ಸಹಾಯದಿಂದ ಅವನು ಕೊಟ್ಟ ಕಾರ್ಡಿನಲ್ಲಿದ್ದ ಹೋಟೆಲಿನ ಹೆಸರನ್ನು ಹುಡುಕಿದೆ. ಎದೆ ಧಸಕ್ಕೆಂದಿತು. ಹತ್ತಾರು ವೆಬ್ ಸೈಟುಗಳಲ್ಲಿ ಆ ಕಂಪೆನಿಯ ಬಗ್ಗೆ, ಅವರ ಮೋಸದ ಬಗ್ಗೆ ಸಾಲುಸಾಲಾಗಿ ಬರೆದಿದ್ದರು ! ಕೂಡಲೇ ರಿಷಿಗೆ ಫೋನ್ ಮಾಡಿ ಕಾರು ಕಳಿಸಲು ಹೇಳಿದೆ. ಊಟವಾದ ತಕ್ಷಣ ಹೊರಟು ಮಂಜುಕವಿದ ಶಿಖರಗಳತ್ತ ಹೊರಟೆವು.
ನಮ್ಮ ಕಾರಿನ ಚಾಲಕ/ಮಾಲಿಕ ಪವನ್ ಇಪ್ಪತ್ತರ ಹರೆಯದ ಯುವಕ. ವಿನಯದಿಂದಲೇ ಮಾತನಾಡಿ ಕಾರು ಚಾಲೂ ಮಾಡಿದ. ಬೆಳಗಿನ ವಾಂತಿ ಪ್ರಕರಣ ನೆನಪಾಯಿತು. ಪ್ಲಾಸ್ಟಿಕ್ ಕವರುಗಳಿಗಾಗಿ ತಡಕಾಡಿದೆ. ತುಸು ಮುಂದೆ ಸಾಗಿದ ಮೇಲೆ ಪವನ್ ರಸ್ತೆ ಬದಿಯ ಅಂಗಡಿ ಸಾಲುಗಳ ಬಳಿ ನಿಲ್ಲಿಸಿದ. "ಮಂಜಿನಲ್ಲಿ ಆಟವಾಡಬೇಕಾದರೆ ವಿಶೇಷವಾದ ಬೆಚ್ಚನೆಯ ಉಡುಪುಗಳು ಬೇಕು. ಅವುಗಳು ಇಲ್ಲಿ ಬಾಡಿಗೆಗೆ ಸಿಗುತ್ತವೆ" ಎಂದು ಹೇಳಿ ತನ್ನ ಪರಿಚಯದ ಅಂಗಡಿಯಿಂದ ಚಳಿನಿರೋಧಕ ಸಾಮಗ್ರಿಗಳನ್ನು ಬಾಡಿಗೆಗೆ ಕೊಡಿಸಿದ. ಎಂಟುನೂರೈವತ್ತು ರೂಪಾಯಿ ಕಕ್ಕಿ, ಮೈಮುಚ್ಚುವಂತಹ 'ಡಾಂಗ್ರಿ' (ಜಾಕೆಟ್ ಮತ್ತು ಪ್ಯಾಂಟ್ ಸೇರಿಸಿ ಮಾಡಿದ ಉಡುಪು), ಗಂಬೂಟ್, ಸಾಕ್ಸ್ ಇತ್ಯಾದಿಗಳನ್ನು ಧರಿಸಿ ಚಂದ್ರಲೋಕಕ್ಕೆ ಹೊರಟವರಂತೆ ಕಂಗೊಳಿಸಿದೆವು !

(ಮುಂದುವರಿಯುವುದು)

No comments:

Post a Comment