ಕೋಶ ಓದು: ಪರ್ವತಾರೋಹಣದ ದುರಂತ ಕಥನ - ಎವರೆಸ್ಟ್

-ಅಕ್ಷಯರಾಮ ಕಾವಿನಮೂಲೆ

ಮೂಲ: ಜಾನ್ ಕ್ರಾಕೌರ್
ಕನ್ನಡಕ್ಕೆ ಅನುವಾದ: ವಸುಧೇಂದ್ರ
ಬೆಲೆ: ರೂ. 250

ಪದವಿ ಮುಗಿಸಿ ಕೆಲಸಹುಡುಕುವ ಬಹುತೇಕ ಹುಡುಗರು ತಮ್ಮ ಬಯೋಡೇಟಾದಲ್ಲಿ 'ಹವ್ಯಾಸಗಳು' ಎಂಬಲ್ಲಿ ಬರೆಯುವುದು "ಓದು, ಚಾರಣ, ಪ್ರಕೃತಿ ವೀಕ್ಷಣೆ, ಪರ್ವತಾರೋಹಣ" ಇತ್ಯಾದಿಗಳನ್ನು. ಚಿಕ್ಕ ಪ್ರಾಯದಲ್ಲಿ ಹಳ್ಳಿಯ ಸುತ್ತಮುತ್ತಲಿನ ಚಿಕ್ಕಪುಟ್ಟ ಗುಡ್ಡಗಳನ್ನು ಕಷ್ಟಪಟ್ಟು ಏರಿ, ತುದಿಯಲ್ಲಿ ಏದುಸಿರು ಬಿಡುತ್ತಾ ಕುಳಿತು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ರಮಣೀಯ ದೃಶ್ಯಗಳನ್ನು ಎದೆದುಂಬಿಸಿಕೊಂಡು ದೊಡ್ಡ ಪರ್ವತಾರೋಹಿಗಳಂತೆ ಬೀಗಿದವರು ನಾವು. ಬೆಳೆಯುತ್ತಾ ಹೋದಂತೆ ಅನೇಕರಿಗೆ ಚಾರಣದ ಆಸಕ್ತಿ ಕಳೆದುಹೋಗಿ ಪ್ರಕೃತಿಯಿಂದ ವಿಮುಖರಾಗಿ ಪ್ರಾಪಂಚಿಕ ಕಷ್ಟ ಸುಖಗಳಲ್ಲಿ ಮುಳುಗಿಹೋಗುವುದು ಸಹಜ.
ನೂರರಲ್ಲಿ ಹತ್ತು ಹದಿನೈದು ಮಂದಿ ಬೆಟ್ಟಗುಡ್ಡಗಳ ನಂಟು ಉಳಿಸಿಕೊಂಡರೆ, ಎಲ್ಲೋ ಒಂದಿಬ್ಬರು ಮಾತ್ರ ಚಾರಣವನ್ನು ಉಸಿರಾಗಿಸಿಕೊಳ್ಳುತ್ತಾರೆ. ಲಕ್ಷಕ್ಕೊಬ್ಬರಿಗೆ ಮಾತ್ರ ಎವೆರೆಸ್ಟ್ ಏರುವ ಕನಸಿರುತ್ತದೆ. ಆದರೆ ಹಿಮಾಲಯದ ರಾಜನಾದ ಆ ದೈತ್ಯನ ಶಿರವೇರುವ ದೈಹಿಕ, ಆರ್ಥಿಕ ಸಾಮರ್ಥ್ಯ ಮತ್ತು ಅದೃಷ್ಟ ದೊರೆಯುವುದು ಬೆರಳೆಣಿಕೆಯ ಮಂದಿಗಷ್ಟೇ.
ಇಡೀ ಪುಸ್ತಕದ ಹೂರಣವಿರುವುದು 1996ರ ಸಾಲಿನ ಎವರೆಸ್ಟ್ ಚಾರಣದಲ್ಲಿ ನಡೆದ ದುರಂತದ ಸುತ್ತಮುತ್ತ. ಲೇಖಕ ಜಾನ್ ಕ್ರಾಕೌರ್ ಪತ್ರಿಕೆಯೊಂದರ ಪರವಾಗಿ ಎವರೆಸ್ಟ್ ಚಾರಣದ ತಂಡದಲ್ಲಿ ಸೇರಿದ ಹಿನ್ನೆಲೆಯನ್ನು ವಿವರಿಸುತ್ತಾ ಚಾರಣದ ಸ್ವರೂಪ, ಭೂಮಿಕೆಯನ್ನು ಬಿಡಿಸಿ ಹೇಳುತ್ತಾ ಸಾಗುತ್ತಾರೆ. ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸಿ ಓದಿಸುವ ತಾಕತ್ತು ಪುಸ್ತಕದ್ದು. ಎವರೆಸ್ಟ್ ತಲೆಯೇರಿ ಮೆರೆಯಲು ಬರುವ ಹಲವಾರು ಮಂದಿಯ ವಿವಿಧ ವ್ಯಕ್ತಿತ್ವಗಳನ್ನು ತೆರೆದಿಡುತ್ತಾರೆ ಜಾನ್. ಪರ್ವತಾರೋಹಣದ ಮಾರ್ಗದರ್ಶಿಗಳ ಜವಾಬ್ದಾರಿಯುತ ನಡವಳಿಕೆ, ಪುಡಿಗಾಸಿನ ಸಂಪಾದನೆಯನ್ನೇ ನೆಚ್ಚಿಕೊಂಡು, ಸಹಾಯಕರಾಗಿ ಪ್ರಾಣವನ್ನೇ ಒತ್ತೆಯಿಟ್ಟು ದುಡಿಯುವ ಶೆರ್ಪಾಗಳ ದುರಂತ ಕಥನದ ವರ್ಣನೆ ಎದೆಯಾಳದಲ್ಲಿ ಉಳಿಯುತ್ತದೆ.
ಎವರೆಸ್ಟ್ ಏರಿಯೇ ತೀರುವೆವೆಂಬ ಹಟಕ್ಕಿಳಿದು ಜಗತ್ತಿನೆಲ್ಲೆಡೆಯಿಂದ ಹಿಮಾಲಯದ ಮಣ್ಣಿಗೆ ಕಾಲಿಡುವ ಉತ್ಸಾಹಿಗಳ ದಂಡು ಪರಿಸರಕ್ಕೆ ಎಸಗುವ ಘಾತವನ್ನೂ ಜಾನ್ ಚಿತ್ರಿಸಿದ್ದಾರೆ. ಹಿಮವಂತನ ಒಡಲು ಕಸ, ಕೊಚ್ಚೆ ತುಂಬಿದ ತಿಪ್ಪೆಯಾಗುವುದು ಕಂಡು ಕೊರಗುತ್ತಾರೆ ಲೇಖಕರು. ಪರ್ವತಾರೋಹಣವೆಂಬ ಪವಿತ್ರ ಕಾರ್ಯ ವ್ಯಾಪಾರೀಕರಣಗೊಳ್ಳುವುದನ್ನು ಕಂಡು ಉರಿದೇಳುವ ಹಲವಾರು ಸಾಂಪ್ರದಾಯಿಕ ಪರ್ವತಾರೋಹಿಗಳ ಬೇಗುದಿಯನ್ನೂ ಅಕ್ಷರಕ್ಕಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಕ್ರಾಕೌರ್.
ಎವರೆಸ್ಟ್ ಜಯಿಸುವ ಆಸಕ್ತರಿಗೆ ಆರೋಹಣದಲ್ಲಿ ಸಹಾಯಮಾಡಲು ತಮ್ಮದೇ ಆದ ವಿವಿಧ ವಾಣಿಜ್ಯೋದ್ದೇಶಿತ ತಂಡಗಳನ್ನು ಕಟ್ಟಿಕೊಂಡವರಿದ್ದಾರೆ. ರಾಬ್ ಹಾಲ್ ಮತ್ತು ಫಿಷರ್ ತಂಡಗಳ ಮಧ್ಯೆ ಏರ್ಪಡುವ ಸ್ಪರ್ಧೆ, ವಿವಿಧ ದೇಶಗಳಿಂದ ಬಂದ ಇತರೇ ತಂಡಗಳು ಮತ್ತು ಏಕಾಂಗಿಯಾಗಿ ಎವರೆಸ್ಟ್ ಜಯಿಸುವ ಹಟಕ್ಕೆ ಬಿದ್ದು ಜೀವವನ್ನೇ ಪಣಕ್ಕಿಡುವ ಹಲವಾರು ಪರ್ವತಾರೋಹಿಗಳ ಬಗ್ಗೆ ಓದುವಾಗ ಮೈ ಜುಮ್ಮೆನ್ನುತ್ತದೆ.
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ವಸುಧೇಂದ್ರ ಅವರದ್ದು ದಕ್ಷ ಮತ್ತು ಸುಂದರ ಕೈಂಕರ್ಯ. ಮೂಲ ಬರಹಗಾರರ ಮಾತನ್ನು, ಭಾವವನ್ನು ಒಂದಿನಿತೂ ಕಳೆದುಹೋಗದಂತೆ ಕನ್ನಡೀಕರಿಸಿದ್ದಾರೆ. ಸ್ವತಃ ಪರ್ವತಾರೋಹಣದಲ್ಲಿ ಆಸಕ್ತರಾದ ವಸುಧೇಂದ್ರರಿಗೆ ಈ ಅನುವಾದದ  ಕಾರ್ಯ ದೇವರ ಪೂಜೆಯಷ್ಟೇ ಧನ್ಯತೆ ನೀಡಿರಬಹುದು !

ಸಾಮಾನ್ಯರ ಕಲ್ಪನೆಗೂ ಮೀರಿದ್ದು ಎವರೆಸ್ಟ್ ಆರೋಹಣ ! ಸಮುದ್ರಮಟ್ಟದಿಂದ ಮುನ್ನೂರೈವತ್ತು ಅಡಿಗಳಷ್ಟು ಎತ್ತರದಲ್ಲಿ ಕುಳಿತ ನನ್ನನ್ನು ಅಜಮಾಸು ಇಪ್ಪತ್ತೊಂಭತ್ತು ಸಾವಿರದ ಇಪ್ಪತ್ತೆಂಟು ಅಡಿಗಳಿಗೆ ಏರಿಳಿಸಿದ ಪುಸ್ತಕ ಎವೆರೆಸ್ಟ್, ಪುಸ್ತಕ ಮಡಚಿಟ್ಟು ಸುಮ್ಮನೇ ಕುಳಿತಾಗಲೂ ಎವರೆಸ್ಟ್ ನದೇ ಧ್ಯಾನ !

No comments:

Post a Comment