ಕೋಶ ಓದು : ತೇಜಸ್ವಿ ಬದುಕಿದ್ದಾರೆ - ಗೆಳೆಯರು ಕಂಡ ಚಂದ್ರಲೋಕ


- ರವಿಶಂಕರ್ ಶಾಸ್ತ್ರಿ 
ಲೇಖಕರು: ಕೀರ್ತಿ ಕೋಲ್ಗಾರ್ 

ಪೂರ್ಣಚಂದ್ರ ತೇಜಸ್ವಿ ಅವರ ಹಲವಾರು ಪುಸ್ತಕಗಳನ್ನು ನಾವು ಓದಿರುತ್ತೇವೆ. ಅವರ ಬರಹಗಳ ಧಾಟಿ ಏನೋ ಒಂಥರಾ ಬೇರೆ ರೀತಿ. ಅವರ ಬರಹಗಳನ್ನು ಓದಿ ಮೆಚ್ಚಿಕೊಂಡ ನಮಗೆ, ಅವರ ಗೆಳೆಯರ ಜೊತೆಗಿನ ಒಡನಾಟ ತಿಳಿಯುವ ಅವಕಾಶ ಇದರಲ್ಲಿದೆ. ತೇಜಸ್ವಿ ತಮ್ಮ ಗೆಳೆಯರೊಂದಿಗೆ ಕಳೆದ, ಅವರ ಕಾಲೆಳೆದ, ಕಾಡಿಸಿದ ಕಥೆಗಳು ಇಲ್ಲಿವೆ. ತೇಜಸ್ವಿ ಅವರ ಕತೆಗಳನ್ನಷ್ಟೇ ಓದಿದ್ದವರಿಗೆ ಇದೊಂದು ಹೊಸ ಬಗೆಯಲ್ಲಿ ಅವರನ್ನು ಅರಿಯುವ ಅವಕಾಶ.
೧೪೮ ಪುಟಗಳ ಪುಟ್ಟ ಪುಸ್ತಕದಲ್ಲಿ, ೧೬ ಲೇಖನಗಳಿವೆ. ಬೇರೆ ಬೇರೆ ಹಿರಿಯ ಲೇಖಕರೊಂದಿಗೆ ತೇಜಸ್ವಿಯವರ ಒಡನಾಟದ ಅನುಭವಗಳು ದಾಖಲಾಗಿವೆ. ಆ ಮೂಲಕ ಅವರ ಹಲವು ಮುಖಗಳ ಅನಾವರಣವೂ ಆಗಿದೆ. ಕಾಡಿನ ಮಧ್ಯದಲ್ಲಿ ಇದ್ದರೂ ಕೆಲವೊಂದು ತಾಂತ್ರಿಕ ವಿಷಯಗಳಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಪರಿಣತಿ, ಪ್ರಕೃತಿಯ ಬಗೆಗಿದ್ದ ಕಾಳಜಿ, ಮೀನು ಹಿಡಿಯುವುದರಲ್ಲೂ ತೋರುತ್ತಿದ್ದ ನೈಪುಣ್ಯತೆ, ಸಾಮಾನ್ಯ ಮನುಷ್ಯರ ಬಗ್ಗೆ ಇದ್ದ ಕರುಣೆ ಮತ್ತು ಕಾಳಜಿ, ರಾಜಕೀಯಕ್ಕೆ ಬರಲು ಅವಕಾಶ ತಾನಾಗಿಯೇ ಬಂದರೂ ಸ್ವಲ್ಪವೂ ಆಸಕ್ತಿ ತೋರದಿದ್ದುದು, ಹೀಗೆ ಹಲವಾರು ವಿಷಯಗಳು ಇವೆ. ಮಾಮೂಲಾಗಿ ಅವರ ಲೇಖನಗಳಲ್ಲಿ ನಾವು ಕಾಣಲು ಸಿಗದ ವಿಷಯಗಳು ಕೂಡ ಇಲ್ಲಿವೆ. 
ತೇಜಸ್ವಿಯವರ ಜೊತೆಗೆ ಒಡನಾಡಿದವರಲ್ಲಿ ಹಲವು ಬಗೆಯ ಜನರಿದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಅನುಭವ. ಬೇರೆ ಬೇರೆ ಕ್ಷೇತ್ರದ ಜನರು ತೇಜಸ್ವಿಯವರೊಡನೆ ಹಂಚಿಕೊಂಡ ವಿವಿಧ ರೀತಿಯ ಅನುಭವಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ತೇಜಸ್ವಿಯವರ ಹೆಸರಿನಲ್ಲೇ ಏನೋ ಮೋಡಿಯಿದೆ, ಅವರ ಹೆಸರು ನೋಡಿಯೇ ನಾನೂ ಈ ಪುಸ್ತಕ ಕೊಂಡುಕೊಂಡೆ! ತೇಜಸ್ವಿಯವರ ಬಗ್ಗೆ ಏನೆಲ್ಲ ತಿಳಿಯಲು ಸಾಧ್ಯವೋ ಅದೆಲ್ಲವನ್ನೂ ಓದುವ ಆಸೆ ನಿಮಗಿದ್ದರೆ, ಈ ಪುಸ್ತಕವು ಓದಲೇ ಬೇಕಾದ್ದು!

No comments:

Post a Comment