ಸರ್ಕಾರದ ಕೆಲಸ, ದೇವರ ಕೆಲಸ


- ಚಿದಂಬರ

ಮನಸ್ಸು ಮತ್ತೊಮ್ಮೆ ಕಸಿವಿಸಿಗೊಳ್ಳುತ್ತಿದೆ! ದಿಟ್ಟವಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕಾಲವೇ ಇಲ್ಲವೇನೋ ಎಂದೆನಿಸುತ್ತಿದೆ!! ದುಷ್ಟ ರಾಜಕೀಯ ವ್ಯವಸ್ಥೆ ಹದಗೆಡುತ್ತಲೇ ಹೋಗುತ್ತಿದೆಯೇನೋ....!
ಪ್ರಜಾಪ್ರಭುತ್ವದಲ್ಲಿ ಜನರಿಂದಲೇ ಚುನಾಯಿತರಾದ, ಚುನಾವಣೆ ಸಮಯದಲ್ಲಿ ಎಲ್ಲರ ಕೈ ಕಾಲು ಹಿಡಿದು ಗದ್ದುಗೆ ಏರುವ ರಾಜಕಾರಣಿಗಳು, ವಿಧಾನ ಸೌಧದ ಮೆಟ್ಟಿಲೇರಿ, ಕೆಂಪುಗೂಟದ ಕಾರಿನಲ್ಲಿ ಕುಳಿತ ಕೂಡಲೇ ಅಧಿಕಾರದ ಅಮಲು ಏರಿ ಸರ್ವಾಧಿಕಾರೀ ಮನೋಭಾವ ತಳೆಯುವುದು ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ !

ಕೊಪ್ಪಳದ ಜಿಲ್ಲಾಧಿಕಾರಿ, ದಕ್ಷ ಆಡಳಿತಗಾರ್ತಿ ತುಳಸಿ ಮದ್ದಿನೇನಿ, ಬೆಂಗಳೂರಿನ ದಕ್ಷ ಪ್ರಾಮಾಣಿಕ ಆಯುಕ್ತ ಮೃತ ಡಿ.ಕೆ. ರವಿ, ಮೃತ ಬೆಂಗಳೂರಿನ ಪೊಲೀಸ್ ಅಧಿಕಾರಿ ಜಗದೀಶ್, ದಕ್ಷ ಅಧಿಕಾರಿಗಳಾದ ದುರ್ಗಾಶಕ್ತಿ ನಾಗಪಾಲ್, ಷಣ್ಮುಗಂ ಮಂಜುನಾಥ್, ಯಶವಂತ್ ಸೋನಾವಾನೆ, ನರೇಂದ್ರಕುಮಾರ್, ಅಶೋಕ್ ಖೇಮ್ಕ ಇವರೆಲ್ಲರಿಗಾದ ಘೋರ ಅನ್ಯಾಯ ಜನ-ಮನದಲ್ಲಿ ಇನ್ನೂ ಹಚ್ಚಹಸಿರಾಗಿರುವಾಗಲೇ ಈಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಭಾಗದ ಪೊಲೀಸ್ ಅಧಿಕಾರಿ S.P ಅನುಪಮ ಶೆಣೈರವರ ಎತ್ತಂಗಡಿ ಪ್ರಹಸನದ ಹಿಂದೆ ‘ಘನತೆವೆತ್ತ’ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರೊಬ್ಬರ ಕೈವಾಡವಿರುವುದು ಇಂದು ಜಗಜ್ಜಾಹೀರವಾಗಿದೆ.  ಕೊಲೆ ಕೇಸೊಂದನ್ನು ಮುಚ್ಚಿಹಾಕಲು ಒಪ್ಪದ ಕಾರಣಕ್ಕಾಗಿ ಈ ಪ್ರಹಸನ ಎಂಬುದೀಗ ಅತ್ಯಂತ ಅನುಮಾನ ರಹಿತ ವಿಷಯವಾಗಿದೆ.
ರಾಜಕೀಯ ನನಗೊಗ್ಗದ, ಆಸಕ್ತಿ ಇಲ್ಲದ ವಿಚಾರ, ಕಾರಣ ಇದು ‘last resort of the scoundrels'.  ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರಾಮಾಣಿಕವಾಗಿ ಅಧಿಕಾರ ನಿರ್ವಹಿಸಬೇಕೆನ್ನುವ  ಯುವಜನತೆ ಮುಂಬರುವ ದಿನಗಳಲ್ಲಿ  ನಾಗರೀಕ ಸೇವಾ ಸ್ಥಾನಗಳನ್ನು ಭರಿಸಲು ಸಾಧ್ಯವೇ? ಈಗಿರುವ ದಕ್ಷ ಅಧಿಕಾರಿಗಳಿಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂಬುದರ ಕಿಂಚಿತ್ತು ಅರಿವಾದರೂ ಸರ್ಕಾರಕ್ಕಿದೆಯೇ? ಸರ್ಕಾರಕ್ಕೆ ಇದರ ಬಗ್ಗೆ ಕಾಳಜಿಯೇ ಇಲ್ಲವಾದಲ್ಲಿ ವಿಧಾನಸೌಧದ ಮೇಲೆ ಬರೆದಿರುವ “ಸರ್ಕಾರದ ಕೆಲಸ, ದೇವರ ಕೆಲಸ” ಎಂಬ ಘೋಷ ವಾಕ್ಯಕ್ಕೆ ಮಸಿ ಬಳಿಯಬೇಕಲ್ಲವೇ??

No comments:

Post a Comment