ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದ ಸವಾಲುಗಳೂ...

- ಮೋಹನ್ ಮೂರ್ತಿ ಮಾ ಕೆಂ

ಕೆಲವು ದಿನಗಳ ಕೆಳಗೆ ದಿನಪತ್ರಿಕೆಗಳಲ್ಲಿ ಬಾಳೆಹಣ್ಣಿನ ದರ ಕುಸಿದು, ಹಣ್ಣನ್ನು ಬೆಳೆದ ರೈತರು ಬೇಸತ್ತು ಉಚಿತವಾಗಿ ವಿತರಿಸಿದ ಸುದ್ದಿ ಬಂದಿತ್ತು. ಮೈಸೂರಿನ ಬಳಿಯ ರೈತರೊಬ್ಬರು ಹಲವು ಎಕರೆಯಷ್ಟು ಫಲ ಬಿಟ್ಟಿದ್ದ ಬಾಳೆಗಿಡಗಳನ್ನು ಟ್ರ್ಯಾಕ್ಟರ್ ಉಪಯೋಗಿಸಿ ನಾಶ ಪಡಿಸಿದ್ದರು. ವಿಪರ್ಯಾಸವೆಂದರೆ ಅದೇ ಸಮಯದಲ್ಲಿ ಗ್ರಾಹಕರು ಒಂದು ಕೆಜಿ ಬಾಳೆಹಣ್ಣಿಗೆ ೧೫ ರೂಪಾಯಿಯಿಂದ ೨೦ ರೂಪಾಯಿಗಳಷ್ಟು ಬೆಲೆ ತೆತ್ತು ಕೊಳ್ಳುತ್ತಿದ್ದರು. ನಮ್ಮ ಸರ್ಕಾರದ ಜನಪ್ರತಿನಿಧಿಗಳದ್ದು ಇದರ ಬಗ್ಗೆ ದಿವ್ಯ ಮೌನ. ಗುಪ್ತ ಚರರನ್ನು ಬಿಟ್ಟು ರೈತರು ನಿಜವಾಗಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಯತ್ನಿಸುವ ನಮ್ಮ ’practical’ ಸರ್ಕಾರ, ಗ್ರಾಹಕರು ಅಷ್ಟೊಂದು ಬೆಲೆ ಕೊಟ್ಟರು ಅದೇಕೆ ರೈತರಿಗೆ ಕೆಜಿ ಬಾಳೆಹಣ್ಣನ್ನು ಕೇವಲ ಒಂದು ಎರಡು ರೂಪಾಯಿಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿಚಾರಣೆ ನಡೆಸುವುದಿಲ್ಲ. 

ನಾನು ಗಮನಿಸಿದಂತೆ ಯಾವುದೇ ಸರ್ಕಾರವಿರಲಿ ಒಂದೆರಡು ಹೆಣ ಬೀಳದೇ ಹೋದರೆ ಇದ್ಯಾವುದೋ ಇನ್ನೊಂದು ಗ್ರಹದ ಘಟನೆಯೇನೋ ಎಂಬಂತೆ ಸರ್ಕಾರಗಳು ತಲೆ ಕೆಡಿಸಿಕೊಳ್ಳಲು ಹೋಗುವುದೇ ಇಲ್ಲ. ಈ ಘಟನೆಗಳೇನು ಅಪರೂಪಕ್ಕೆ ನಡೆಯುವ ಘಟನೆಗಳಲ್ಲ ಜೊತೆಗೆ ತೀರ ಇತ್ತೀಚೆಗೆ ಪ್ರಾರಂಭವಾಗಿರುವಂತವೂ ಅಲ್ಲ. ಹಲವಾರು ದಶಕಗಳಿಂದ ಪ್ರತೀ ವರ್ಷವೂ ಚಾಚೂ ತಪ್ಪದೇ ಇಂತಹ ದುರಂತ ಘಟನೆಗಳು ನಡೆಯುತ್ತಿವೆ ಮುಂದೆಯೂ ನಡೆಯುತ್ತಿರುತ್ತವೆ. ಒಮ್ಮೆ ಬಾಳೆ ಬೆಳೆಗಾರರು, ಇನ್ನೊಮ್ಮೆ ಕಬ್ಬು ಬೆಳೆಗಾರರು ಮತ್ತೊಮ್ಮೆ ಟೊಮೋಟೋ ಬೆಳೆಗಾರರು ಬಲಿಯಾಗುತ್ತಾರೆ. ಈ ಸಮಸ್ಯೆಗಳಿಗೆ ಮೂಲ ಕಾರಣಗಳೇನು? ಮತ್ತು ಇವುಗಳಿಗೆ ಪರಿಹಾರ ಇಲ್ಲವೇ?
ಯಾವ ಉದ್ದಿಮೆಯನ್ನೇ ಗಮನಿಸಿ, ಉದ್ದಿಮೆಯ ಯಶಸ್ಸು ಅದರಲ್ಲಿ ಬಂಡವಾಳ ಹೂಡಿರುವವರಿಗೆ ಎಷ್ಟು ಲಾಭ ತಂದುಕೊಡುತ್ತದೆಯೆನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿದಾಗ ಕೃಷಿ ಅಂತಹ ಲಾಭದಾಯಕ ಉದ್ದಿಮೆಯೇನಲ್ಲ. ಅದರಲ್ಲಿನ ಅನಿಶ್ಚಿತತೆಗಳನ್ನು ಗಮನಿಸಿದರೆ ಅದು ಎಂತಹ ದೊಡ್ಡ ಜೂಜು ಎಂದು ಅರಿವಾಗುತ್ತದೆ. ನೀವು ಗಮನಿಸಿ ನೋಡಿ, ಬೀಜ ಬಿತ್ತುವ ಕ್ರಿಯೆಯಿಂದ ಪ್ರಾರಂಭವಾಗುವ ಅನಿಶ್ಚಿತತೆ ಕಡೆಗೆ ಬಂದ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರುವವರೆಗೆ ಮುಂದುವರಿಯುತ್ತದೆ. ಕಳಪೆ ಬೀಜ, ಕಳಪೆ ರಸಗೊಬ್ಬರ, ರಸಗೊಬ್ಬರದ ಅಭಾವ, ಅತಿವೃಷ್ಟಿ, ಅನಾವೃಷ್ಟಿ, ಕೆಲಸಕ್ಕೆ ಜನ ಸಿಗದೇ ಹೋಗುವುದು, ವಿದ್ಯುಚ್ಛಕ್ತಿ ಅಭಾವ, ಮಧ್ಯವರ್ತಿಗಳ ಕಾಟ ಇತ್ಯಾದಿಗಳ ಹೊಡೆತದಿಂದ ಪಾರಾಗಿ ಒಳ್ಳೆ ಬೆಲೆ ಬಂದರೆ ಅದು ಪವಾಡವೇ ಸರಿ. ಬಹುಶ: ಇದೇ ಕಾರಣಕ್ಕೋ ಏನೋ ಯಾರಾದರೂ ಯಾವುದಾದರೂ ಬೆಳೆಯಲ್ಲಿ ಅಧಿಕ ಲಾಭ ಮಾಡಿದರೆ ಪತ್ರಿಕೆಗಳು ತಮ್ಮ ಕೃಷಿ ಪುರವಣಿಗಳಲ್ಲಿ ಪವಾಡವೊಂದನ್ನು ವರ್ಣಿಸುವ ರೀತಿಯಲ್ಲಿ ಬರಹಗಳನ್ನು ಪ್ರಕಟಿಸುವುದು. ತಮಾಷೆಯೆಂದರೆ ಕೃಷಿಯನ್ನೇ ಅವಲಂಬಿಸಿರುವ ಇತರೆ ಉದ್ದಿಮೆಗಳು ಯಾವಗಲೂ ಲಾಭದಲ್ಲೇ ಇರುತ್ತವೆ. ಬಿತ್ತನೆ ಬೀಜ ತಯಾರಿಸುವ ಕಂಪೆನಿಯಿಂದ ಹಿಡಿದು, ರಸಗೊಬ್ಬರ ತಯಾರಿಸುವ, ಕೃಷಿ ಉಪಕರಣಗಳನ್ನು ತಯಾರಿಸುವ ಎಲ್ಲಾ ಉದ್ದಿಮೆಗಳೂ ಲಾಭದಾಯಕ ಉದ್ದಿಮೆಗಳೇ. ಅವುಗಳಿಗೆ ಯಾವ ಅನಿಶ್ಚಿತತೆಯೂ ಕಾಡುವುದಿಲ್ಲ. ಕೃಷಿ ಮಾತ್ರ ಹಲವು ಅನಿಶ್ಚತತೆಗಳ ಬಲಿಪಶು.
ಜಾಗತೀಕರಣದ ಈ ದಿನಮಾನದಲ್ಲಿ ಸರ್ಕಾರಗಳ ನೀತಿ ನಿಯಮಗಳೆಲ್ಲಾ ಬಹುತೇಕ ಹೊರದೇಶಗಳ ಖಾಸಗಿ  ಕಂಪೆನಿಗಳನ್ನು ಇಲ್ಲಿ ಬಂಡವಾಳ ಹೂಡಿ ಉದ್ಯೋಗ ಸೃಷ್ಟಿಸುವುದಕ್ಕೆ ಪೂರಕವಾಗಿ ರೂಪಿತವಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಯಂತಹ ಅನಿಶ್ಚಿತತೆಯ ಉದ್ದಿಮೆ ಅಗತ್ಯ ಬಹುಶ: ಯಾರಿಗೂ ಇಲ್ಲ. ಪ್ರತೀ ವರ್ಷ ಹೂಡಿಕೆದಾರರ ಸಮಾವೇಶ ನಡೆಸುವುದು, ಜನಪ್ರತಿನಿಧಿಗಳೇ ವಿವಿಧ ದೇಶಗಳಿಗೆ ಪ್ರವಾಸ ಹೋಗಿ ಹೂಡಿಕೆದಾರರನ್ನು ಆಕರ್ಷಿಸುವುದು, ಅವರಿಗೆ ಉದ್ದಿಮೆ ಸ್ಥಾಪಿಸಲು ಕಡಿಮೆ ಬೆಲೆಗೆ ಭೂಮಿ ನೀಡುವುದು, ಹಲವಾರು ವರ್ಷಗಳವರೆಗೆ ತೆರಿಗೆ ರಜೆ, ವಿವಿಧ ಇಲಾಖೆಗಳ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ (single window system) , ಹಲವು ಇಲಾಖೆಗಳಿಂದ ನಿರಪೇಕ್ಷಣ ಪತ್ರ ಪಡೆಯುವುದರಿಂದ ವಿನಾಯಿತಿ ಹೀಗೇ ಒಂದಾ ಎರಡಾ, ಎಲ್ಲವೂ ಹೂಡಿಕೆದಾರರಿಗೆ ಪೂರಕವಾದ ನಿಯಮ/ಯೋಜನೆಗಳೇ. ಇಲ್ಲಿ ಬಂಡವಾಳ ಹೂಡುವವರು ಲಾಭವಿಲ್ಲದೆ ಬಂಡವಾಳ ಹೂಡುತ್ತಾರೆಯೇ? ಹೀಗೆಯೇ ಹೊರದೇಶಗಳ ಕಂಪೆನಿಗಳು ಇಲ್ಲಿ ಬಂಡವಾಳ ಹೂಡುತ್ತಾ ಹೋದರೆ ಅವರು ಇಲ್ಲಿನ ಮಾರುಕಟ್ಟೆಯ ಸಂಪೂರ್ಣ ಹಿಡಿತ ಸಾಧಿಸುವುದಿಲ್ಲವೇ? ಒಂದು ಬಾರಿ ಮಾರುಕಟ್ಟೆಯ ನಿಯಂತ್ರಣ ಖಾಸಗಿ ಕಂಪೆನಿಗಳ ಕೈವಶವಾದರೆ ಅದರಿಂದ ದುಷ್ಪರಿಣಾಮಗಳೇ ಹೆಚ್ಚು. ಹಾಗೆಂದು ಇಲ್ಲಿ ಉದ್ದಿಮೆಗಳ ಅಗತ್ಯವೇ ಇಲ್ಲ ಎಂದರ್ಥವಲ್ಲ. ನೂರು ಕೋಟಿ ಜನರಿಗೂ ಮಿಗಿಲಾದ ಮಾರುಕಟ್ಟೆಯಿರುವ ನಮ್ಮ ದೇಶದಲ್ಲಿ ವ್ಯವಸ್ಥೆಯ ಸಮಗ್ರ ನೀತಿ ನಿಯಮಗಳನ್ನೂ (ವಿದೇಶಾಂಗ ನೀತಿ, ರಫ್ತು ಆಮದು ನೀತಿಗಳಿಂದ ಮಾರುಕಟ್ಟೆಯ ನಿಯಮಗಳವರೆಗೆ) ಕೃಷಿ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಪರಿಗಣಿಸಿ ಅದಕ್ಕೆ ಪೂರಕವಾಗಿ ರೂಪಿಸಲು ಇಚ್ಛಾಶಕ್ತಿಯಿದ್ದರೆ ಸರ್ಕಾರಗಳು ಖಂಡಿತ ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ರೂಪಿಸಬಹುದು.
ನೇಗಿಲ ಯೋಗಿ, ಅನ್ನದಾತನೆಂಬ ರೊಮ್ಯಾಂಟಿಕ್ ಕಲ್ಪನೆಗಳಿಗೆ ರೈತರನ್ನು ನೇತು ಹಾಕುವ ಬದಲು, ಕೃಷಿಯನ್ನು ಉದ್ದಿಮೆಯೆಂದು ಪರಿಗಣಿಸಿ ಈ ಉದ್ದಿಮೆಯು ಲಾಭದಾಯಕವಾಗಲು ಪೂರಕವಾದ ನಿಯಮಗಳನ್ನು ಮತ್ತು ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕಾದ ತುರ್ತು ಅಗತ್ಯವಿದೆ. ಲಾಭದಾಯಕವಾದರೇ ರೈತರು ಕೃಷಿಯಿಂದ ವಿಮುಖರಾಗುವುದನ್ನು ತಡೆಯಬಹುದು ಹಾಗೆಯೇ ಬಹಳಷ್ಟು ಜನರು ಕೃಷಿಗೆ ಮರಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ನಿರುದ್ಯೋಗದಂತಹ ಸಮಸ್ಯೆಗಳು ಉಲ್ಬಣವಾಗುವುದೂ ತಪ್ಪುತ್ತದೆ.

ಈ ಯೋಜನೆಗಳು ಕೇವಲ ಬೆಳೆ ವಿಮೆ ಅಥವಾ ರೈತರಿಗೆ ಸಾಲ ನೀಡಿ ಅದನ್ನು ಮನ್ನಾ ಮಾಡುವಂತಹ ಕೇವಲ ಓಟಿಗಾಗಿ ತಾತ್ಕಾಲಿಕ ಪರಿಹಾರವನ್ನು ನೀಡುವುದಕ್ಕೆ ಸೀಮಿತವಾಗದೆ. ಉಳುಮೆಯಿಂದ ಪ್ರಾರಂಭವಾಗಿ ಬೆಳೆಯು ಮಾರುಕಟ್ಟೆಯಲ್ಲಿ ಮಾರಾಟವಾಗುವವರೆಗೆ ರೈತರು ಎದುರಿಸುವಂತಹ ವಿವಿಧ ಕಷ್ಟ ಕೋಟಲೆಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾದ ಮತ್ತು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಯೋಜನೆಗಳನ್ನು ಆದ್ಯತೆಯ ಮೇರೆಗೆ ಜಾರಿಗೆ ತಂದು ಕೃಷಿಯನ್ನು ಲಾಭದಾಯಿಕ ಉದ್ದಿಮೆಯನ್ನಾಗಿಸಲು ರೈತರಿಗೆ ಅಗತ್ಯ ತಿಳುವಳಿಕೆಯನ್ನು ಮೂಡಿಸಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡದೇ ಹೋದರೆ ಈ ದೇಶದಲ್ಲಿ ಕೃಷಿಗೂ ಮತ್ತು ಕೃಷಿಕರಿಗೂ ಖಂಡಿತ ಉಳಿಗಾಲವಿಲ್ಲ. 

No comments:

Post a Comment