ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ

- ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣಕ್ಕೆ ಹೋಗುವುದೆಂದು ಈಗಾಗಲೇ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮಾಡಬೇಕೆಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿದ್ದೆವು. ಇವುಗಳಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ನಂತರ ಸರಿಸುಮಾರು ಮೂರು ತಿಂಗಳವರೆಗೆ ಜೀವನದ ಅನಿವಾರ್ಯ ಕಾರ್ಯದೊತ್ತಡಗಳ ನಡುವೆ ಸಿಲುಕಿ ಚಾರಣದಿಂದ ಬಿಡುವು ತೆಗೆದುಕೊಂಡೆವು. 


ಇಬಿಸಿ" ಚಾರಣಕ್ಕೆಂದು ಹೊಸ ಶೂ ಮತ್ತು ಹೈಕಿಂಗ್ ಬ್ಯಾಗ್ ತೆಗೆದುಕೊಂಡ ಹುಮ್ಮಸಿನಲ್ಲಿದ್ದ ನಾವು ಫೆಬ್ರವರಿ ೨೮ಕ್ಕೆ "ತಡಿಯಂಡಮೋಳ್" ಬೆಟ್ಟಕ್ಕೆ ಚಾರಣಕ್ಕೆ ಹೋಗುವುದೆಂದು ನಿಶ್ಚಯಿಸಿದೆವು. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಲು ಅರಣ್ಯ ಇಲಾಖೆಯ ಜಾಲತಾಣದಲ್ಲಿ ಮುಂಗಡ ಬುಕಿಂಗ್ ಮಾಡಬೇಕು. ಓರ್ವ ವ್ಯಕ್ತಿ ಒಂದು ಲಾಗಿನ್ ಮೂಲಕ ಗರಿಷ್ಟ ಮೂರು ಜನರ ಬುಕಿಂಗ್ ಮಾಡಬಹುದು. ನಮ್ಮಲ್ಲಿ ಸಮನ್ವಯತೆಯ  ಕೊರತೆಯಿಂದ ಡಬಲ್ ಬುಕಿಂಗ್ ಮಾಡಿ ಕೆಲವೊಂದು ಬುಕಿಂಗ್ ಅನ್ನು ರದ್ದು ಮಾಡಬೇಕಾಯಿತು. ಯಾಕೋ ದೇಹದ ವಯಸ್ಸಿಗೂ, ಮನಸಿನ ಹುಮ್ಮಸಿಗೂ ತಾಳ ತಪ್ಪಲು ಶುರುವಾಗಿದೆ ಎಂದೆನ್ನಿಸುತ್ತದೆ.

ತಡಿಯಂಡಮೋಳ್ ಬೆಟ್ಟವನ್ನು ನಾನು ಮತ್ತು ನನ್ನ ಗೆಳೆಯರು ಸರಿಸುಮಾರು ೨೦೦೮/೨೦೦೯ರಲ್ಲಿ ಹತ್ತಿದ ನೆನಪು. ಅವಾಗ ಈಗಿನ ತರಹ ಹೆಚ್ಚೇನೂ ಯೋಜಿಸದೆ ಮನೆ ಮುಂದೆ ಇರುವ ಪಾರ್ಕ್ ನಲ್ಲಿ ವಾಯುವಿಹಾರಕ್ಕೆ ಹೋದಂತೆ ನೆನಪು. ನಾನು ಅದೇ ಗುಂಗಿನಲ್ಲಿ ನನ್ನ ಮಡದಿ ಸುಷ್ಮಾಳನ್ನು ಚಾರಣಕ್ಕೆ ಬರುವೆಯಾ ಎಂದು ಕೇಳಿದೆ. ಅವಳು ಸಮ್ಮತಿಸಿದಳು. ಮಕ್ಕಳನ್ನು ಯಾವುದೇ ಚಾರಣಕ್ಕೂ ಕರೆದುಕೊಂಡು ಹೋಗಬಾರದೆಂದು ಕಳೆದ ಬಾರಿ ಮಾಡಿದ್ದ ಭೀಷ್ಮ ಪ್ರತಿಜ್ಞೆಗೆ ತಾತ್ಕಾಲಿಕ ವಿರಾಮ ಕೊಟ್ಟೆ (ಅದರ ಹಿಂದಿನ ತರ್ಕವೆಲ್ಲ ಈಗ ಹಾಳುಬಿದ್ದು ಹೋಗಲಿ).

ಬೆಳಿಗ್ಗೆ :೦೦ ಗಂಟೆಗೆ ಮೈಸೂರಿನಿಂದ ಹೊರಟು :೩೦ಕ್ಕೆ ಚಾರಣದ ಪ್ರಾರಂಭದ ಸ್ಥಾನ  ತಲುಪಬೇಕೆಂದು ಯೋಜಿಸೆದೆವು. ಆದರೆ ನಾವು ಮೈಸೂರಿನಿಂದ ಪ್ರಯಾಣ ಶುರುಮಾಡಿದ್ದೇ  :೩೦ ಕ್ಕೆ. ಆದ್ದರಿಂದ ಗಮ್ಯ ಸ್ಥಾನ  ತಲುಪಿದಾಗ ಬೆಳಗ್ಗೆ :೩೦ ಆಗಿತ್ತು. ಅಲ್ಲಿ ಇದ್ದ ಹೋಮ್ ಸ್ಟೇನಲ್ಲಿ ಸ್ವಲ್ಪ ವಿರಾಮ ಮಾಡಿ, ಹೊಸ ಶೂ ಹಾಕಿಕೊಂಡು ಮತ್ತೆ ಬ್ಯಾಗನ್ನು ಸಿದ್ಧ ಮಾಡಿಕೊಂಡು ಚಾರಣ ಶುರು ಮಾಡಿದೆವು. ಎಂದಿನಂತೆ ನನ್ನ ಮಗ ಅವ್ಯಾನ್ ನನ್ನ ಸ್ನೇಹಿತರಾದ ಗೀತ/ಅಜಿತ್/ಕೌಶಿಕ್ ಜತೆಯಲ್ಲಿ  ಬಿರುಸಾಗಿ ಹತ್ತಲು ಶುರು ಮಾಡಿದ. ನಾನು, ನನ್ನ ಮಡದಿ ಮತ್ತು ಇನ್ನೊಬ್ಬ ಮಗ ಆಧ್ಯಾನ್ ಮೂವರು ಅವರ ಹಿಂದೆ ಹೊರಟೆವು. ಸ್ವಲ್ಪ ದೂರ ಹೋಗುತ್ತಲೇ ತಗಾದೆ ತೆಗೆದ ಆಧ್ಯಾನ್ ಹತ್ತಲು ಸುಸ್ತಾಗುತ್ತಿದೆ ಎಂದ. ಅವನನ್ನು ಹೆಗಲ ಮೇಲೆ ಕೂರಿಸಿಕೊಂಡು ನನ್ನ ಬ್ಯಾಗನ್ನು ನನ್ನ ಮಡದಿಗೆ ನೀಡಿದೆ.

ಸುಮಾರು ೧೦:೩೦ರಷ್ಟರಲ್ಲಿ ಅರಣ್ಯ ಇಲಾಖೆಯ ಚೆಕ್-ಪೋಸ್ಟ್ ಬಳಿ ಬಂದೆವು. ಈಗ ಎಲ್ಲರ ಬುಕಿಂಗನ್ನು ಪರೀಕ್ಷಿಸಲು ೩೦ ನಿಮಿಷಗಳ ಮೇಲೆ ಆಯಿತು. ನನ್ನ ಮಕ್ಕಳ ಬುಕಿಂಗ್ ವಿವರಗಳು ಸರಿಯಾಗಿ ಟಿಕೆಟ್-ನಲ್ಲಿ ನಮೂದಾಗದಿದ್ದರಿಂದ ದಾಖಲೆ ಪರಿಶೀಲಿಸಲು ಸ್ವಲ್ಪ ತಡವಾಯಿತು. ಏನೋ ಟೆಕ್ನಿಕಲ್ ಸಮಸ್ಯೆಯೆಂದು ಯಾರೋ ಸಮಜಾಯಿಷಿ ನೀಡಿದ ಮೇಲೆ ನಮಗೆ ಚಾರಣದ ಹಾದಿಯಲ್ಲಿ ಮುಂದುವರಿಯಲು ಅನುಮತಿ ಸಿಕ್ಕಿತು.

೧೭ ವರ್ಷಗಳ ಹಿಂದೆ ರೀತಿಯಾದ ಯಾವುದೇ ನಿಬಂದನೆಗಳು ಇದ್ದದ್ದು ನನಗೆ ನೆನಪಿಲ್ಲ. ನಾವು ಇಗ್ಗುತ್ತಪ್ಪ ದೇವಸ್ಥಾನದ ಹತ್ತಿರ ಬಂದು ಅಲ್ಲಿಂದ ಚಾರಣ ಶುರು ಮಾಡಿದ ನೆನಪು. ಇಂದು ನಾವು ಸಾಗುತ್ತಿದ್ದ ದಾರಿ ಬೇರೆಯದೆ ಆಗಿದ್ದು ೨೦೧೬/೧೭ ರಲ್ಲಿ ಅಸ್ತಿತ್ವಕ್ಕೆ ಬಂತು ಎಂದು ಅರಣ್ಯ ಇಲಾಖೆ ಜಾಲತಾಣದಲ್ಲಿ ಓದಿ ತಿಳಿದುಕೊಂಡೆ.

 ಚೆಕ್-ಪೋಸ್ಟ್ ನಿಂದ ಹತ್ತಲು ಶುರು ಮಾಡಿದಾಗ ಸುಮಾರು ೧೦:೪೫ ಆಗಿತ್ತು. ಪ್ರಖರ ಸೂರ್ಯನ ಬಿಸಿಲಿನಿಂದ ನೆತ್ತಿ ಸುಡುತ್ತಿತ್ತು. ನಾನು ಚಾರಣದ ಅನುಭವಗಳನ್ನು ಬ್ಲಾಗಲ್ಲಿ ಬರೆಯುತ್ತಿರುವುದು ತಿಳಿದಿದ್ದ ಗೆಳೆಯರು, "ಎಲ್ಲಾ ಮಾತಡ್ರಪಾ ಬ್ಲಾಗಲ್ಲಿ ಬರುತ್ತೆ" ಅಂತ ಹೇಳಿದರು. ಮಾತನಾಡುವುದನ್ನು ಬರೆಯುವುದೋ, ಬರೆಯುವುದನ್ನು ಮಾತನಾಡುವುದೋ ಎಂಬ ಜಿಜ್ಞಾಸೆಯಲ್ಲೇ ನಡೆಯುವುದನ್ನು ಮುಂದುವರಿಸಿದೆ.

ನನ್ನ ಮಡದಿ ಸ್ವಲ್ಪ ದೂರ ನಡೆದ ಮೇಲೆ ಕಾಲು ಹುಳುಕಿದಂತಾಗಿ ನಿಧಾನವಾಗಿ ನಡೆಯಲು ಶುರು ಮಾಡಿದಳು. ಮುಂದೆ ಹೋದ ಸದಸ್ಯರು ಫಲಾಹಾರಕ್ಕೆಂದು ವಿರಾಮ ಕೊಟ್ಟಿದ್ದರು. ಅವರನ್ನು ಸಾಕಷ್ಟು ಕಷ್ಟ ಪಟ್ಟು ಸೇರಿದೆವು. ಬಿಸಿಲ ಬೇಗೆಗೆ ಬೆವರು ಕಿತ್ತುಕೊಂಡು ಬರುತಿತ್ತು. ನಮ್ಮ ಅವಸ್ಥೆ ನೋಡಿ ಗೆಳತಿ ಗೀತ "ಗಾಳಿಯೋ ಗಾಳಿಯೋ ಆಹಾ ಪ್ರೇಮ ಗಾಳಿಯೋ..." ಹಾಡನ್ನು ಹೇಳಿ ಮತ್ತಷ್ಟು ಕಿಚಾಯಿಸಿದಳು. ಎಲ್ಲರೂ ವಿಶ್ರಾಂತಿ ಮಾಡಿ ಫಲಾಹಾರ ತಿಂದೆವು.

೧೭ ವರ್ಷಗಳ ಹಿಂದೆ ತಿನ್ನಲು / ಕುಡಿಯಲು ಏನನ್ನೂ ತರದೇ, ವಾಪಾಸ್ ಬರುತ್ತಿದ್ದ ಗುಂಪೊಂದರಿಂದ  ಪುಳಿಯೊಗರೆ, ಮೊಸರನ್ನ, ನೀರು ಎಲ್ಲವನ್ನೂ ಕೇಳಿ ಹೊಟ್ಟೆ ತುಂಬಿಸಿಕೊಂಡದ್ದು ನೆನಪಾಯಿತು. ವಿರಾಮದ ಬಳಿಕ ಎಲ್ಲರೂ ಹೆಜ್ಜೆ ಹಾಕಲು ಶುರು ಮಾಡಿದೆವು. ಈಗ ಅವ್ಯಾನ್ ಜೊತೆಗೆ ಆದ್ಯಾನನ್ನು ಮುಂದೆ ಹೋಗುತಿದ್ದ ಗೆಳೆಯರೊಂದಿಗೆ ಕಳಿಸಿಕೊಟ್ಟೆ. ನನ್ನ ಮಡದಿ ನಡೆಯುವ ಗತಿ ತುಂಬ ನಿಧಾನವಾಗಿದ್ದರೂ ಮಕ್ಕಳ ಬಗ್ಗೆ ಕಾಳಜಿಯಿಂದ, ನೀವು ಮುಂದೆ ಹೋಗಿ ಮಕ್ಕಳ ಜೊತೆ ಸೇರಿಕೊಳ್ಳಿ ಎಂದು ಪಟ್ಟು ಹಿಡಿದಳು.  ಅವಳಿಗೆ ಕೊನೆಗೆ ಒಂದು ಮರದ ನೆರಳನ್ನು ತೋರಿಸಿ ನಾವು ವಾಪಾಸ್ ಬರುವವರೆಗೆ ಅಲ್ಲೇ ಕುಳಿತಿರಲು ಸೂಚಿಸಿದೆನಾನು ಮುಂದೆ ಹತ್ತಲು ಶುರು ಮಾಡಿದೆ. ಮಕ್ಕಳು ಮಾತಾಡುವ ಸದ್ದು ಕೇಳಿಸಿದರೂ ಅವರನ್ನು ಸೇರಿಕೊಳ್ಳಲು ಆಗುತ್ತಿಲ್ಲ. ಕಳೆದ ಬಾರಿಗಿಂತ ಸ್ವಲ್ಪ ವೇಗವಾಗಿ ಹತ್ತಿದರು.  ಅವರ ಎನರ್ಜಿ ಲೇವಲ್ ಮ್ಯಾಚ್ ಮಾಡಲು ಆಗುತ್ತಿಲ್ಲ. ಹಾಗೂ ಈಗೂ ಕೊನೆಗೂ ಅವರನ್ನು ಸೇರಿಕೊಂಡೆ.

ಟ್ರೀಲೈನ್ ಮುಗಿದು ಸ್ವಲ್ಪ ಏರು ಪ್ರದೇಶ ಶುರು ಆಯಿತು. ಬೋರೆ, ಮಕ್ಕಳಿಗೆ ತುಂಬ ಕಡಿದಾಯಿತು ಎನಿಸಿತು. ೧೭ ವರ್ಷದ ಹಿಂದೆ ಹಾದಿ ಇಷ್ಟು ಕಠಿಣವಾಗಿದ್ದು ನೆನಪೇ ಇಲ್ಲ. ನೆನಪಿದ್ದಿದ್ದರೆ ಹೆಂಡತಿ, ಮಕ್ಕಳನ್ನು ಜೊತೆಗೆ ಕರೆತರುತ್ತಿರಲಿಲ್ಲ . ಈಗ ಇದರ ಬಗ್ಗೆ ತಲೆಕೆಡಿಸಿಕೊಂಡು ಏನು ಪ್ರಯೋಜನವಿಲ್ಲವೆಂದು ಹತ್ತಲು ಶುರು ಮಾಡಿದೆವು. ಬೋರೆ ನೋಡಿದಷ್ಟು ಕಠಿಣವಾಗಿರಲಿಲ್ಲ. ಹೇಗೋ ಬೋರೆಯನ್ನು ಹತ್ತಿ, ಮಕ್ಕಳನ್ನು ಹತ್ತಿಸಿ ಬೆಟ್ಟದ ತುದಿಯನ್ನು ತಲುಪಿದೆವು. ನನ್ನ ಸ್ನೇಹಿತರ ಸಹಕಾರಕ್ಕೆ ನಾನು ಸದಾ ಅಭಾರಿ. ನಾನು ಒಬ್ಬನೇ ಸಾಹಸಕ್ಕೆ ಕೈ ಹಾಕುವುದನ್ನು ಊಹಿಸಲಾರೆ. ಸಾಕಷ್ಟು ಜನ ದಾರಿ ಮದ್ಯದಲ್ಲಿ "ಇಷ್ಟು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದೀರಿ, ನಿಜಕ್ಕೂ ಗ್ರೇಟ್ ನೀವು, ಇಲ್ಲಿ ದೊಡ್ಡವರೇ ಎದುಸಿರು ಬಿಡುತ್ತಾ ನಿಂತಿದ್ದಾರೆ!!!!" ಎಂದು ಹೇಳಿದರು.

ಬೆಟ್ಟದ ತುದಿ ತಲುಪಿದ ಮೇಲೆ ಸುತ್ತಲಿನ ವಿಹಂಗಮ ನೋಟವನ್ನು ಕಣ್ಣುತುಂಬಿಕೊಂಡು ಸ್ವಲ್ಪ ವಿಶ್ರಾಂತಿ ಪಡೆದೆವು. ಬೆಳಿಗ್ಗೆಯಿಂದ  "ಕೇಳೇ ಚೆಲುವೇ.....", "ಮಸ್ತ್ ಮಲೈಕಾ , ಜಬರ್ದಸ್ತ್ ಮಲೈಕಾ - ನಿನ್ನ ನೋಡಿ ಎವರಿಬಡಿ ಸುಸ್ತು ಮಲೈಕಾ.........." ಹಾಡು ಹೇಳಿಕೊಂಡು ಖುಷಿಯಾಗಿದ್ದ ಮಕ್ಕಳು, ಈಗ ಒಬ್ಬನ ಕೋಲು ಇನ್ನೊಬ್ಬನ ಕೋಲಿಗಿಂತ ಉದ್ದ ಇದೆಯೆಂದು ಅಳಲು ಶುರು ಮಾಡಿದ್ದರು. ನನಗೆ ಈಗ ಇಬ್ಬರಿಗೂ ಸಮನಾದ ಕೋಲನ್ನು ಬೆಟ್ಟದ ತುದಿಯಲ್ಲಿ ಹುಡುಕಬೇಕಿತ್ತು. ಬೆಳಿಗ್ಗೆ ಮನೆಯಿಂದ ಹೊರಡಬೇಕಾದರೆ ಸಾಕ್ಸ್ ವಿಚಾರವಾಗಿ ಶುರು ಆದ ಜಗಳವನ್ನು ಇಬ್ಬರಿಗೂ ಒಂದು ಬಿಳಿ /ಒಂದು ನೀಲಿ ಸಾಕ್ಸ್ ಕೊಟ್ಟು ಸಮಾಧಾನಪಡಿಸಿದ್ದೆ. ಅವಳಿ ಮಕ್ಕಳ ಪೋಷಕರ ಅರ್ಧ ಆಯಸ್ಸು ಈ ರೀತಿ ಪಂಚಾಯಿತಿ ಮಾಡುವುದರಲ್ಲೇ ಕಳೆದು ಹೋಗುತ್ತೇನೋ ಎಂದೆನಿಸುತ್ತದೆ. ಕೊನೆಗೂ ಒಂದು ಕೋಲು ಹುಡುಕಿ ಇಬ್ಬರಿಗೂ ಸಮಾಧಾನಪಡಿಸಿ, ಕೆಲವು ಫೋಟೋ ಕ್ಲಿಕ್ಕಿಸಿ ಕೆಳಗೆ ಇಳಿಯಲು ಎಲ್ಲರೂ ಸಜ್ಜಾದೆವು. ಪವಾಡ ಎಂಬಂತೆ ನನ್ನ ಮಡದಿ ಮೇಲೆ ಹತ್ತಿ ಬರುತ್ತಿದ್ದಳು. ಅವಳು ಬಂದ ಖುಷಿಗೆ ಕೆಳಗೆ ಇಳಿಯುವ ಕಾರ್ಯಕ್ರಮವನ್ನು ೧೦ ನಿಮಿಷ ಮುಂದೆ ಹಾಕಿದೆವು.

ಕೆಳಗೆ ಇಳಿಯುವಾಗ ಅಷ್ಟೇನು ಸಮಸ್ಯೆ ಆಗಲಿಲ್ಲ. ಕೊನೆಗೆ ಹೋಮಸ್ಟೇ ಹತ್ತಿರ ಬಂದು ಸ್ವಲ್ಪ ವಿರಾಮ ಮಾಡಿ, ಫಲಾಹಾರ ತೆಗೆದುಕೊಂಡು ಮೈಸೂರಿನ ಕಡೆಗೆ ಹೊರಡಲು ಕಾರಿನಲ್ಲಿ ಕುಳಿತೆವುಈಗ ಬೆಟ್ಟ ಹತ್ತಿ ಇಳಿದಿದ್ದರಿಂದ ನಮಗೇನು ಸಿಕ್ಕಿತೆಂದು ನನ್ನ ಮಗ ಪ್ರಶ್ನೆ ಹಾಕಿದ. ನನ್ನ ಉತ್ತರದಿಂದ ಸಮಾಧಾನವಾಗದ ಅವನು. ತುಂಬ ಬೋರಿಂಗ್ ಆಗಿತ್ತು ಮತ್ತೆ ಕೋಲುಗಳಲ್ಲದೇ ಬೇರೇನೂ ಉಪಯೋಗವಾಗುವಂತದು ಅಲ್ಲಿ ಇಲ್ಲ ಎಂದ. ಅವರ ಕೋಲುಗಳನ್ನು ಕಾರಿನ ಢಿಕ್ಕಿಗೆ ಹಾಕಿ, ಮತ್ತಿನ್ಯಾವ ಚಾರಣಕ್ಕೂ ಕೆಲವು ವರ್ಷ ಇವರನ್ನು ಕರೆದುಕೊಂಡು ಬರಬಾರದೆಂದು ಇನ್ನೊಮ್ಮೆ ನಿಶ್ಚಯಿಸಿ ಮೈಸೂರಿನ ಕಡೆ ದಾರಿ ಹಿಡಿದೆವು.

ಸ್ಥಳ - ತಡಿಯಂಡಮೋಳ್ ಬೆಟ್ಟ , ಕೊಡಗು ಜಿಲ್ಲೆ
ದಿನಾಂಕ : ೨೮-೦೨-೨೦೨೬
ಎತ್ತರ : ಸಮುದ್ರ ಮಟ್ಟದಿಂದ ೫೭೩೫ ಅಡಿ
ಹತ್ತಲು ತೆಗೆದುಕೊಂಡ ಸಮಯ :  ಬೆಳಿಗ್ಗೆ :೩೦ ರಿಂ ೧೨:೪೫ ಗಂಟೆ (ಸುಮಾರು :೧೫ ಗಂಟೆ)
ಇಳಿಯಲು ತೆಗೆದುಕೊಂಡ ಸಮಯ : ಮದ್ಯಾಹ್ನ ೨ ರಿಂ :೦೦ ಗಂಟೆ (ಸುಮಾರು  ಗಂಟೆ)


 

No comments:

Post a Comment