"ಇರಬೇಕು ಇರುವಂತೆ, ತೊರೆದು ಎಲ್ಲ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
– ಹೆಚ್. ಎಸ್. ವೆಂಕಟೇಶ್ ಮೂರ್ತಿ"
ಕಾಲೇಜಿನವರ ಸಿಲ್ವರ್ ಜುಬಿಲಿ ಸಮಾರಂಭ ಮುಗಿದು ಸ್ವಲ್ಪ ದಿವಸ ಕಳೆಯಿತು. ನಮ್ಮ ನಿಯಮಿತ ವಾರ್ಷಿಕ ಸ್ನೇಹ ಸಮ್ಮೇಳನ ಮಾಡೋಣ ಅಂತ ಸುಧಾಕರ್ ಶೆಟ್ಟಿ ಫೋನ್ ಮಾಡಿದ. ಇದಕ್ಕೆ ಸಂಬಂಧಿಸಿದಂತೆ ಸಿದ್ದತೆಗಳನ್ನು ಶುರು ಮಾಡು ಎಲ್ಲರೂ ಸೇರೋಣ ಎಂದು ಹೇಳಿದ. ನನಗೆ ಮೊದಲಿಂದಲೂ ಹಳೆಯ ಗೆಳೆಯ/ಗೆಳತಿಯರನ್ನೆಲ್ಲಾ ಒಂದೆಡೆ ಸೇರಿಸಿ ಹಳೆಯ ನೆನಪುಗಳನ್ನೆಲ್ಲಾ ಮೆಲಕು ಹಾಕುವುದಕ್ಕೆ ವೇದಿಕೆ ಸೃಷ್ಟಿಸುವುದೆಂದರೆ ಖುಷಿ. ಇವತ್ತಿನ ಆಧುನಿಕ ಜೀವನಶೈಲಿಯ ಒತ್ತಡಗಳ ನಡುವೆ ಇಂತಹ ಸಭೆಗಳು ಒತ್ತಡ ನಿವಾರಕವಾಗಿ ಕಾರ್ಯ ನಿರ್ವಹಿಸುತ್ತವೆಯೆನ್ನುವುದು ಒಂದೆಡೆಯಾದರೆ, ಗೆಳೆಯರ ಜೊತೆ ನಾವು ನಾವಾಗಿರಬಹುದೆನ್ನುವ ನಂಬಿಕೆ ನನ್ನದು.
ನಾನು ನಮ್ಮ ಸುನಿಲ್ ಕುಮಾರ್ ಕೆ. ಗೆ ಫೋನ್ ಮಾಡಿದೆ. ಇಬ್ಬರೂ ಒಂದಷ್ಟು ಚರ್ಚೆ ಮಾಡಿದೆವು. ಅವನು ಖಂಡಿತ ಮಾಡೋಣ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ. ಅದೇ ಸಂದರ್ಭದಲ್ಲಿ ಇಪ್ಪತ್ತೈದು ವರ್ಷದ ಸಮಾರಂಭವನ್ನು ಸ್ವಲ್ಪ ದೊಡ್ಡದಾಗಿ ಮಾಡಬೇಕು ಎನ್ನುವ ಚರ್ಚೆ ನಮ್ಮ CIT 99 ವಾಟ್ಸಾಪ್ ಗುಂಪಿನಲ್ಲಿ ಪ್ರಾರಂಭವಾಯಿತು. ಎಲ್ಲರನ್ನೂ ಆಹ್ವಾನಿಸೋಣ, ಮುಖ್ಯವಾಗಿ ನಮ್ಮ ಚೆಲುವೇಗೌಡರು ಯಾವ ದಿನದಂದು ಲಭ್ಯರಿರುತ್ತಾರೆ ಅಂದೇ ಸಮಾರಂಭ ಮಾಡೋಣವೆಂದು ತೀರ್ಮಾನಿಸಿದೆವು. ಸಮಾರಂಭದ ಸ್ಥಳ ಮೈಸೂರೆನ್ನುವುದರ ಬಗ್ಗೆ ನಮಗೆ ಅನುಮಾನಗಳಿರಲಿಲ್ಲ. ಏಕೆಂದರೆ ಚೆಲುವೇಗೌಡರು ವಾಸವಿರುವುದು ಮೈಸೂರಿನಲ್ಲಿ, ನಾವು ಮೈಸೂರು ಬಿಟ್ಟು ಬೇರೆಡೆ ಸಮಾರಂಭವನ್ನು ಆಯೋಜಿಸಿದರೆ, ಈ ಹಿರಿಯ ವಯಸ್ಸಿನಲ್ಲಿ ಅವರು ಸಮಾರಂಭಕ್ಕೆ ಬರಲು ಕಷ್ಟ ಸಾಧ್ಯ. ನಮ್ಮ ಸಿಐಟಿ 99 ವಾಟ್ಸಾಪ್ ಗುಂಪಿನಲ್ಲಿ ಈ ಕುರಿತು ಒಂದು ಮೆಸೇಜ್ ಹಾಕಿದೆ. ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂತು.
ನಾವೇನೋ ಚೆಲುವೇಗೌಡರನ್ನು ಕರೆಯಬೇಕೆಂದು ತೀರ್ಮಾನಿಸಿದೆವು, ಆದರೆ ಚೆಲುವೇಗೌಡರು ಬರಬೇಕಲ್ಲ. ಮೊದಲು ಚೆಲುವೇಗೌಡರ ಒಪ್ಪಿಗೆ ಪಡೆಯಬೇಕು, ಆಮೇಲೆ ಮಿಕ್ಕಿದ್ದು ಎಂದು ಅವರಿಗೆ ಕರೆ ಮಾಡಿದೆ. ನಾವು ಮೊದಲ ಬ್ಯಾಚಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರೆಲ್ಲಾ ಒಟ್ಟಿಗೆ, ಸಿಐಟಿ ಕಾಲೇಜಿಗೆ ಸೇರಿ ಇಪ್ಪತ್ತೈದು ವರ್ಷವಾದ ಪ್ರಯುಕ್ತ ಒಂದು ಸಮಾರಂಭ ಆಯೋಜಿಸಿ, ಕಾಲೇಜಿನ ಆರಂಭದ ಮೊದಲ ವರ್ಷಗಳಲ್ಲಿ ಇದ್ದ ಉಪನ್ಯಾಸಕ/ಉಪನ್ಯಾಸಕಿಯರನ್ನೆಲ್ಲಾ ಆಹ್ವಾನಿಸಬೇಕೆಂದಿದ್ದೇವೆ, ನೀವು ಮುಖ್ಯ ಅತಿಥಿಯಾಗಿ ಬರಬೇಕು ಎಂದೆ. ಅದಕ್ಕೆ ಅವರು ಅವರದೇ ಶೈಲಿಯಲ್ಲಿ “ಇಲ್ಲ ಅದರಲ್ಲಿ ನಾನು ಎಲ್ಲೂ ಹೋಗಲ್ಲ, ಅದರಲ್ಲಿ ಎಲ್ಲ ಕರಿತಾರೆ ನನಗೆ ಹೋಗೋಕೆ ಆಗೋಲ್ಲ” ಅಂದರು. ನಾನು ಇಲ್ಲ ಸಾರ್ ನೀವು ಬರಲೇಬೇಕು, ನಿಮ್ಮ ಮನೆ ಎಲ್ಲಿ ಹೇಳಿ ಅದಕ್ಕೆ ಹತ್ತಿರ ಇರುವ ರೆಸಾರ್ಟಿನಲ್ಲೇ ಸಮಾರಂಭ ಅಯೋಜಿಸುತ್ತೇವೆ, ಅದೂ ಸಾಧ್ಯವಾಗಲಿಲ್ಲ ಅಂದರೆ ನಿಮ್ಮ ಮನೆ ಹತ್ತಿರವೇ ಒಂದು ಶಾಮಿಯಾನ ಹಾಕಿ ಸಮಾರಂಭ ಮಾಡುತ್ತೇವೆ, ನೀವು ಮಾತ್ರ ಬರಲೇಬೇಕು ಎಂದು ಹೇಳಿದೆ. ಚೆಲುವೇಗೌಡರಿಗೆ ಇವನ್ಯಾರೋ ಅಷ್ಟು ಸುಲಭಕ್ಕೆ ಬಗ್ಗುವ ಆಸಾಮಿಯಲ್ಲ ಅನ್ನಿಸಿರಬೇಕು. ಆಯ್ತು ನೋಡೋಣ ಯಾರ್ಯಾರು ಬರುತ್ತಾರೆ ಎಂದು ಕೇಳಿದರು. ನಾನು ಎಲ್ಲರ ಹೆಸರುಗಳನ್ನು ಹೇಳಿದೆ. ನೀವು ಒಪ್ಪಿಗೆ ಕೊಟ್ಟ ನಂತರ ಎಲ್ಲರನ್ನೂ ಆಹ್ವಾನಿಸುತ್ತೇವೆ, ಎಲ್ಲರೂ ಬಂದೇ ಬರುತ್ತಾರೆ ಎಂದು ಹೇಳಿದೆ. ಚೆಲುವೇಗೌಡರು ಒಪ್ಪಿದರು.
(ಮುಂದಿನ ಚಾಪ್ಟರ್ - ಗುರು ಸಾಕ್ಷಾತ್ ಪರಬ್ರಹ್ಮ)

No comments:
Post a Comment