ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 


ಕೃಷ್ಣೇಗೌಡರ ವಿಚಾರಣೆ 


ಕೃಷ್ಣೇಗೌಡರ ಮನೆಯೊಳಗೆ ಪ್ರವೇಶಿಸಿದ ನಂತರ ಕೃಷ್ಣೇಗೌಡರು ಹಾಲಿನಲ್ಲಿದ್ದ ಸೋಫಾದಲ್ಲಿ ಕುಳಿತುಕೊಂಡರು. ನಾನು ನಿಂತೇ ಇದ್ದೆ. ಆನಂತರ ಗಂಭೀರವಾದ ಮುಖಭಾವದಲ್ಲಿ ಅವತ್ತು ಹುಚ್ಚೇಗೌಡರಿಗೆ "ನೀವೆಲ್ಲಾ ಸೇರಿ ಹೊಡೆದಾಗ ಡೈನಿಂಗ್ ಹಾಲ್ ಲೈಟುಗಳ ಸ್ವಿಚ್ ಆಫ್ ಮಾಡಿದ್ದು ಯಾರು" ಎಂದು ಕೇಳಿದರು. ನಾನು ಕ್ಷಣ ಕೂಡ ಯೋಚಿಸದೆ "ನಾನೇ ಸರ್" ಎಂದೆ. ಬಹುಶ: ಕೃಷ್ಣೇಗೌಡರು ನನ್ನ ಉತ್ತರವನ್ನು ನಿರೀಕ್ಷಿಸಿರಲಿಲ್ಲವೆಂದು ಭಾವಿಸುತ್ತದೆ. ಅವರ ಗಂಭೀರವಾದ ಮುಖಭಾವ ಆಶ್ಚರ್ಯಚಕಿತವಾಗಿ ಬದಲಾಯಿತು. "ಯಾಕೆ ಆಫ್ ಮಾಡಿದೆ?" ಎಂದು ಕೇಳಿದರು. ನಾವು “ಸಾರ್ ಅವತ್ತು ನಂದು ಊಟ ಬೇಗ ಆಗಿತ್ತು, ಹಾಲು ತೆಗೆದುಕೊಳ್ಳಲು ಅಡಿಗೆ ಮನೆಯ ಬಾಗಿಲಿನ ಬಳಿ ಕಾಯುತ್ತಿದ್ದೆ. ಅಷ್ಟರಲ್ಲಿ ವಿದ್ಯಾರ್ಥಿಗಳೆಲ್ಲಾ ಸ್ವಿಚ್ ಆಫ್ ಮಾಡು ಎಂದು ಕೂಗಿಕೊಂಡರು. ನಾನು ಯಾರಿಗೋ ವಿದ್ಯುತ್ ಸ್ಪರ್ಶ ಆಗಿರಬೇಕು ಎಂದು ತಕ್ಷಣ ಸ್ವಿಚ್ ಆಫ್ ಮಾಡಿದೆ. ಕತ್ತಲಾವರಿಸಿದ ನಂತರ ವಿದ್ಯಾರ್ಥಿಗಳು ಕೂಗಾಡಲು ಪ್ರಾರಂಭಿಸಿದರು. ನನಗೆ ಭಯವಾಗಿ ಅಲ್ಲಿಂದ ಆಚೆಗೆ ಓಡಿದೆ” ಎಂದೆ. ನನ್ನ ಉತ್ತರ ಕೇಳಿದ ಕೃಷ್ಣೇಗೌಡರು ಒಂದು ನಿಮಿಷ ಸಾವರಿಸಿಕೊಂಡರು ನಂತರ "ಏನೋ ನೀನು ಇಷ್ಟೊಂದು ಅಮಾಯಕ. ನಿನ್ನ ಅಮಾಯಕತೆಯನ್ನು ಎಲ್ಲರೂ ದುರುಪಯೋಗಪಡಿಸಿಕೊಂಡಿದ್ದಾರಲ್ಲೋ" ಎಂದರು. ನಂತರ ಮುಂದುವರೆದು "ನೀನು ಸ್ವಿಚ್ ಆಫ್ ಮಾಡಿದ್ದು ಒಪ್ಪಿಕೊಳ್ಳುವುದಿಲ್ಲವೆಂದು ಭಾವಿಸಿ ನಾನು ನಿನಗೆ ಹೊಡೆದು ಬುದ್ಧಿ ಕಲಿಸಬೇಕೆಂದು ಆ ಬೆತ್ತನ ಸಿದ್ಧ ಮಾಡಿಕೊಂಡು ಬಂದಿದ್ದನಲ್ಲೋ" ಎಂದು ಮೂಲೆಯಲ್ಲಿದ್ದ ಬೆತ್ತದ ಕಡೆ ಕೈ ತೋರಿಸಿದರು. ನಾನು ಬೆತ್ತದ ಕಡೆ ಕಣ್ಣಾಡಿಸಿದೆ. ನಾಲ್ಕಡಿ ಉದ್ದದ ಭರ್ಜರಿ ಬೆತ್ತವೊಂದು ಮೂಲೆಯಲ್ಲಿ ವಿದ್ಯುದ್ದೀಪದ ಬೆಳಕಿನಲ್ಲಿ ಫಳಫಳಿಸುತ್ತಿತ್ತು. ಸ್ವಲ್ಪ ಹೊತ್ತು ನಮ್ಮಿಬ್ಬರ ಮಧ್ಯೆ ಮೌನವಾವರಿಸಿತು. 


ವಿಚಿತ್ರ ತಿರುವು


ಕೃಷ್ಣೇಗೌಡರು ಪುನ: ಗಂಭೀರವದನರಾಗಿ "ನಿಮ್ಮ ಮೇಲೆ ಹುಚ್ಚೇಗೌಡರು ಪೊಲೀಸ್ ಕಂಪ್ಲೇಟ್ ಕೊಡಲು ಹೋಗಿದ್ದರು. ನಾವು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅವರನ್ನು ತಡೆದೆವು. ಇಲ್ಲದೇ ಹೋದಲ್ಲಿ ನೀವೆಲ್ಲಾ ಜೈಲು ಸೇರಬೇಕಿತ್ತು ಎಂದರು." ನಾನು ಏನೂ ಮಾತನಾಡದೇ ಪಿಳಿ ಪಿಳಿ ಕಣ್ಣು ಮಿಟುಕಿಸುತ್ತಾ ಅವರು ಮಾತನಾಡುತ್ತಿದ್ದದ್ದನ್ನು ಕೇಳಿಸಿಕೊಳ್ಳುತ್ತಿದ್ದೆ. ಕೃಷ್ಣೇಗೌಡರು ಮುಂದುವರೆದು "ನನಗೆ ಗೊತ್ತು ಕಣ್ರೋ ನೀವೆಲ್ಲಾ ಯಾವುದಕ್ಕೆ ತಲೆ ಕೆಡಿಸ್ಕೋಬೇಕೋ ಅದಕ್ಕೆ ತಲೆ ಕೆಡಿಸ್ಕೊಳೊಲ್ಲ. ಕೆಲಸಕ್ಕೆ ಬಾರದ ವಿಷಯಗಳಿಗೆ ತಲೆ ಕೆಡಿಸ್ಕೋತೀರಾ ಎಂದರು." ನಾನು ಇದು ಯಾವುದಪ್ಪ ಹೊಸ ವಿಷಯ ಹೇಳುತ್ತಿದ್ದಾರಲ್ಲ ಎಂದು ಅವರ ಮುಖವನ್ನೇ ನೋಡುತ್ತಿದ್ದೆ. ಕೃಷ್ಣೇಗೌಡರು "ನಿಮಗೆ ಜೀವಶಾಸ್ತ್ರದ ವಿಷಯಕ್ಕೆ ಉಪನ್ಯಾಸಕರು ನೋಟ್ಸ್ ಕೊಡ್ತಾ ಇದ್ದಾರಾ” ಎಂದು ದಿಢೀರನೆ ಕೇಳಿದರು. ನಾನು ಇಲ್ಲ ಎಂದೆ. “ನೋಟ್ಸ್ ಬೇಡವಾ ನಿಮಗೆ?” ಎಂದು ಮರು ಪ್ರಶ್ನೆ ಎಸೆದರು. ನಾನು "ಬೇಕು ಸಾರ್" ಎಂದು ಹೇಳಿದೆ. 



ಜೀವಶಾಸ್ತ್ರದ ಉಪನ್ಯಾಸಕರು


ನಮಗೆ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದವರು ಲಿಂಗರಾಜೇ ಅರಸ್ ರವರು. ಅವರಿಗಿನ್ನೂ ಮದುವೆಯಾಗಿರಲಿಲ್ಲ. ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ತಮಾಷೆ ಮಾಡಿಕೊಂಡು ಖುಷಿಯಿಂದ ಕಾಲ ಕಳೆಯುತ್ತಿದ್ದ ವ್ಯಕ್ತಿ. ಪಾಠಗಳನ್ನೂ ಕೂಡ ಲವಲವಿಕೆಯಿಂದ ಮಾಡುತ್ತಿದ್ದರು. ಅವರು ನಮ್ಮ ಕ್ಯಾಂಪಸ್ ನಲ್ಲೇ ಅವರಿಗೆ ನೀಡಲಾಗಿದ್ದ ವಸತಿಗೃಹದಲ್ಲಿದ್ದರು. ನಮ್ಮ ಜೊತೆಯೇ ಮೆಸ್ ಗೆ ಊಟಕ್ಕೆ ಬರುತ್ತಿದ್ದರು. ವಿರಾಮದ ಸಮಯದಲ್ಲಿ ಲುಂಗಿ ಮೇಲಕ್ಕೆ ಕಟ್ಟಿ, ಹಳೆಯ ರೇಡಿಯೋವೊಂದನ್ನು ಹೆಗಲ ಮೇಲೆ ಕಿವಿಗೆ ತಾಕುವಂತಿಟ್ಟುಕೊಂಡು, ಹಳೆಯ ಚಿತ್ರಗೀತೆಗಳನ್ನು ಕೇಳುತ್ತಾ ಕಾಲೇಜಿನ ಕ್ಯಾಂಪಸ್ ನಲ್ಲಿ ಅಡ್ಡಾಡುವುದು ಅವರ ಅಭ್ಯಾಸ. ಅವರ ಜೊತೆಗೆ ನಮಗಿದ್ದ ಒಂದೇ ತಕರಾರೆಂದರೆ, ಅವರು ನೋಟ್ಸ್ ಕೊಡುತ್ತಿರಲಿಲ್ಲ. ಪದವಿಪೂರ್ವ ಶಿಕ್ಷಣ ಪಡೆಯುವ ವಿದ್ಯಾರ್ಥಿಗೆ ನೋಟ್ಸ್ ಅವಶ್ಯಕತೆಯಿಲ್ಲ. ಪಾಠ ಕೇಳಿ ಪಠ್ಯ ಪುಸ್ತಕಗಳನ್ನು ಓದಿಕೊಂಡು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕೆನ್ನುವುದು ಅವರ ವಾದ. ನಾವು ಇನ್ನೂ ಪ್ರೌಢಶಿಕ್ಷಣದ ಗುಂಗಿನಲ್ಲೇ ಇದ್ದುದರಿಂದ ನೋಟ್ಸ್ ಇದ್ದರೆ ಓದುವುದು ಹಾಗೂ ಪರೀಕ್ಷೆಗೆ ಸಿದ್ಧತೆ ನಡೆಸುವುದು ಸುಲಭವಾಗುತ್ತದೆನ್ನುವ ಕಾರಣಕ್ಕೆ ನೋಟ್ಸ್ ಬೇಕೆಂದು ಕೇಳುತ್ತಿದ್ದೆವು. ಅವರು ನೋಟ್ಸ್ ಕೊಡಲು ಸಿದ್ಧರಿರಲಿಲ್ಲ. ಅವತ್ತು ಕೃಷ್ಣೇಗೌಡರ ಮನೆಯಲ್ಲಿ, ನಾಲ್ಕಡಿ ಉದ್ದದ ಬೆತ್ತದ ಎದುರು ನಿಂತಿದ್ದ ನನಗೆ, ಹುಚ್ಚೇಗೌಡರ ಮೇಲಿನ ಹಲ್ಲೆಗೂ, ಲಿಂಗರಾಜೇ ಅರಸ್ ರವರ ಜೀವಶಾಸ್ತ್ರದ ನೋಟ್ಸ್ ಗೂ ಇದ್ದ ನಿಗೂಢ ಸಂಬಂಧವೇನೆಂದು ಎಷ್ಟೇ ಯೋಚಿಸಿದರೂ ಹೊಳೆಯಲೇ ಇಲ್ಲ!


(ಮುಂದುವರೆಯುವುದು)

No comments:

Post a Comment