Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ

  - ರಾಘವೇಂದ್ರ ಎಸ್

ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಮ್ಯಾನೇಜರ್ ಗಳ ನಡುವೆ ಇರೋ ಸಂಬಂಧಗಳ ಪ್ರಾಮುಖ್ಯತೆ ಇನ್ನೂ  ತಿಳಿದಿರಲಿಲ್ಲ. ಸಾಮಾನ್ಯವಾಗಿ ಇಬ್ಬರ ನಡುವೆ ಇರೋ ಪರಸ್ಪರ ತಿಳುವಳಿಕೆಗಳೇ ಆ ಸಂಬಂಧಗಳು ಬಹುಕಾಲ ಉಳಿಯುವಂತೆ ಮಾಡುತ್ತವೆ. ಒಂದೆರಡು ವರ್ಷಗಳ ಅನುಭವದ ನಂತರ, ಅತಿರಥ ಮಹಾರಥ  ಮ್ಯಾನೇಜರ್ ಗಳನ್ನು ನೋಡಿದ ಮೇಲೆ ಒಬ್ಬ ಒಳ್ಳೆಯ ಮ್ಯಾನೇಜರ್ ನ ಪ್ರಾಮುಖ್ಯತೆ ನನಗೆ ಅರ್ಥವಾಗತೊಡಗಿತ್ತು.

ಆಫೀಸ್ ನಲ್ಲಿ ನಾನು ಮತ್ತು ನನ್ನ ಮ್ಯಾನೇಜರ್ ನಡುವೆ ಇರೋ ಸಂಬಂಧ ಬರೀ ಕೆಲಸದ ನಿಮಿತ್ತವಾಗಿರೋದಿಲ್ಲ. ಸ್ನೇಹಿತರ ನಡುವೆ ಇರೋ ಸಂಬಂಧಗಳ ಥರಾ. ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ಲೋಕಾಭಿರಾಮವಾಗಿ ಚರ್ಚಿಸುತ್ತೇವೆ,  ನಮ್ಮಗಳ ಬಗ್ಗೆ ಕೊಚ್ಚಿಕೊಳ್ಳುತ್ತೇವೆ, ಹಾಗೇ ವೈಯಕ್ತಿಕ ವಿಷಯಗಳ ಬಗ್ಗೆ ಕೂಡ ಚರ್ಚಿಸುತ್ತೇವೆ. ಅಂಥಾ ಸಂಬಂಧಗಳೇ ಬಹುಕಾಲ ಕೆಲಸ ಬದಲಾಯಿಸದಂತೆ ನಮ್ಮನ್ನು ತಡೆಯುತ್ತವೆ.

ಹೀಗೇ ಮಾತನಾಡುವಾಗ, ನಮ್ಮ ಮ್ಯಾನೇಜರ್ ಅಮೆರಿಕಾದಲ್ಲಿ ತಮಗಾದ ವಿಶಿಷ್ಟ ಅನುಭವವನ್ನು ಹಂಚಿಕೊಂಡರು. ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿದ್ದಾಗ ಒಬ್ಬ ವ್ಯಕ್ತಿ ಅವರ ಬಳಿ ಬಂದು ತಾನು ತುಂಬಾ ಕಷ್ಟದಲ್ಲಿರುವೆನೆಂದು, ಏನಾದರೂ ಸಹಾಯ ಮಾಡಿರೆಂದು ಕೇಳಿಕೊಂಡನಂತೆ. ಆಗ ಇವರು ಪರ್ಸ್ ತೆಗೆದು ನೋಡಿ ತಮ್ಮ ಬಳಿಯಿದ್ದ ಎಲ್ಲಾ ಹಣವನ್ನು (ಸುಮಾರು ಇನ್ನೂರು ಡಾಲರ್ ಗಳನ್ನು) ಕೊಟ್ಟು ಬಿಟ್ಟರಂತೆ. ಅಷ್ಟೊಂದು ಕರುಣಾಮಯಿ ಅವರು.

“ಅಯ್ಯೋ, ಅದೊಂದು ವಂಚನೆ. ಪ್ರವಾಸಿಗರನ್ನೇ ಗುರಿಯಾಗಿಸಿ ಮೋಸ ಮಾಡ್ತಾರೆ. ಬಹುಶಃ ನೀವು ಮೋಸ ಹೋಗಿಬಿಟ್ಟಿರಿ”.

“ಒಂದು ದಿನ ನಾನು ರಸ್ತೆಯಲ್ಲಿ ಬರೋವಾಗ ಒಂದು ಪುಟ್ಟ ಮಗುವನ್ನು ಎತ್ತಿಕೊಂಡ ಗಂಡ ಮತ್ತು ಹೆಂಡತಿ ನನ್ನನ್ನ ಹೀಗೇ ಕೇಳಿದರು, ನಾನೂ ಕೂಡ ಕೈಲಿದ್ದ ಹತ್ತಾರು ಡಾಲರ್ ಗಳನ್ನು ಕೊಟ್ಟು ಮೋಸ ಹೋಗಿದ್ದೆ”

“ಈ ಘಟನೆಯ ನಂತರ, ನಾನು ಸಾಮಾನ್ಯವಾಗಿ ಯಾರಾದರೂ ಹೀಗೆ ಸಹಾಯ ಕೇಳಲು ಬಂದರೆ ಖಡಾಖಂಡಿತವಾಗಿ ನಿರಾಕರಿಸಿಬಿಡುತ್ತೇನೆ” ಎಂದು ಮುಲಾಜಿಲ್ಲದೆ ಹೇಳಿಬಿಟ್ಟೆ.

ಅವರ ಪ್ರತಿಕ್ರಿಯೆ ಕಣ್ತೆರೆಸುವಂತಿತ್ತು.

“ಬಹುಶಃ.., ಹೌದು ಬಹುಶಃ ಮೋಸ ಹೋದರೆ ನನಗೆ ನೂರಿನ್ನೂರು ಡಾಲರ್ ನಷ್ಟವಾಗುತ್ತೆ.”
“ಬಹುಶಃ ಅದು ಅವರಿಗೆ ನಿಜವಾಗಿಯೂ ಅಗತ್ಯವಿದ್ದರೆ, ಅದು ಅವರ ಜೀವನದಲ್ಲಿ ಒಂದು ಬದಲಾವಣೆ ತಂದರೆ?..ಆ ವ್ಯಕ್ತಿಯ ಆಪತ್ಕಾಲಕ್ಕೆ ಸಹಾಯಕ್ಕೆ ಬಂದರೆ?” ಎಂದು ಹೇಳಿ, ಮುಂದುವರೆದು ಆತ್ಮವಿಶ್ವಾಸದಿಂದ “I am fine with the benefit of doubt” ಎಂದರು.
 
“ಆ ಕ್ಷಣಕ್ಕೆ, ಅವನಿಗೆ ನಿಜವಾಗಿಯೂ ಅಗತ್ಯವಾಗಿದ್ದರೆ, ಆ ಕ್ಷಣಕ್ಕೆ ಸಹಾಯ ದೊರೆಯದೆ ಇದ್ದರೆ, ಆನಂತರ ಪಡೋ ಪಶ್ಚಾತ್ತಾಪಕ್ಕಿಂತ ಹೆಚ್ಚು ಯೋಚನೆ ಮಾಡದೇ ಸಹಾಯ ಮಾಡುವುದೇ ವಾಸಿ ಅನಿಸಿತು.”

ನನಗೆ ನಾನೇ ಹೇಳಿಕೊಂಡೆ “ಅಯ್ಯೋ ಹೌದಲ್ವೇ? ನಾವು ಒಳ್ಳೇ ಉದ್ದೇಶದಿಂದ ಮಾಡುವ ಸಹಾಯ “ಬಹುಶಃ” ನೂರರಲ್ಲೊಬ್ಬರಿಗೆ ಸಹಾಯವಾದರೆ ಸಾಕಲ್ಲವೇ?

ಅವರ ಈ ಮಾತು ಕೇಳಿದ ಮೇಲೆ ನನ್ನ ಯೋಚನಾಲಹರಿಯೇ ಬದಲಾಯ್ತು. ನಾವು ಒಳ್ಳೆಯ ಕೆಲಸ ಮಾಡುವಾಗ ದುರುಪಯೋಗಪಡಿಸಿಕೊಳ್ಳುವವರು ಎಲ್ಲಾ ಕಡೆ ಇದ್ದೇ ಇರ್ತಾರೆ. ಹಾಗಾಗಿ ಕೆಲವರಿಗಾದರೂ ಸಹಾಯವಾದ್ರೆ ಅಷ್ಟೇ ಸಾಕು. ಉದ್ದೇಶ ಒಳ್ಳೆಯದಾಗಿರಬೇಕು. ಅಂದಿನಿಂದ ನಾನು ಯಾರಿಗಾದ್ರು ಸಹಾಯ ಮಾಡುವಾಗ “benefit of doubt”ನ ಗಮನದಲ್ಲಿಟ್ಟುಕೊಂಡೇ ಮಾಡುತ್ತೇನೆ. 

ನೀವು ಯಾವತ್ತಾದ್ರೂ, ಯಾರಿಗಾದ್ರೂ ಸಣ್ಣ ಪುಟ್ಟ ಸಹಾಯ ಮಾಡಿ, ಅಯ್ಯೋ ವಂಚನೆಗೊಳಗಾದೆನಲ್ಲಾ ಅಂತ ಪಶ್ಚಾತ್ತಾಪ ಪಟ್ಟಿದ್ದೀರ? 

ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೆ, ಪಶ್ಚಾತ್ತಾಪ ಪಡುವ ಅವಶ್ಯಕತೆಯಿಲ್ಲ. ನಮಗೆ ಆ ಹೊತ್ತಿಗೆ ಸಹಾಯದ ಮೌಲ್ಯ ಕಡಿಮೆಯೆನಿಸಿದರೂ, ಅದರ ಅಗತ್ಯ ಇರುವವರಿಗೆ ಬಹಳ ದೊಡ್ಡದು.

No comments:

Post a Comment