ಪೂರ್ವಾಪರ
ಹುಚ್ಚೇಗೌಡರಿಗೆ ಅದಾಗಲೇ ಐವತ್ತರ ಆಸುಪಾಸು ವಯಸ್ಸಾಗಿತ್ತೆನಿಸುತ್ತದೆ. ಅದೇನೋ ಗೊತ್ತಿಲ್ಲ, ಮೊದಲಿನಿಂದಲೂ ಹುಚ್ಚೇಗೌಡರಿಗೂ ವಿದ್ಯಾರ್ಥಿಗಳಿಗೂ ಆಗಿ ಬರುತ್ತಿರಲಿಲ್ಲ. ಆ ವಯಸ್ಸಿನ ವಿದ್ಯಾರ್ಥಿಗಳ ಹುಡುಗಾಟಿಕೆಗಳು ಬಹುಶ: ಹುಚ್ಚೇಗೌಡರಿಗೆ ಇಷ್ಟವಾಗುತ್ತಿರಲಿಲ್ಲವೆನಿಸುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಹುಚ್ಚೇಗೌಡರ ನಡುವೆ ಸಣ್ಣಪುಟ್ಟ ತಿಕ್ಕಾಟಗಳು ನಡೆದೇ ಇದ್ದವು. ಇವೆಲ್ಲಕ್ಕೂ ಕಳಸವಿಟ್ಟಂತೆ ಒಂದು ಭಾನುವಾರ ಮದ್ಯಾಹ್ನ ಹುಚ್ಚೇಗೌಡರು ಯಾವುದೋ ತಿನಿಸಿನ (ಬಹುಶ: ಮೊಸರನ್ನವಿರಬೇಕು) ಬಗ್ಗೆ ಮಾತನಾಡುತ್ತಾ. ಈ ತಿನಿಸನ್ನು ವಿದ್ಯಾರ್ಥಿಗಳಿಗೆ ಹಾಕೋ ಬದಲು ನಾಯಿಗಳಿಗೆ ಹಾಕಿದರೆ ಒಳ್ಳೆಯದೆಂದು ಹೇಳಿದರಂತೆ ಎನ್ನುವ ಪುಕಾರು ಎದ್ದಿತು. ಇದೆಷ್ಟು ಸತ್ಯ ಅಥವಾ ಸುಳ್ಳು ಗೊತ್ತಿಲ್ಲ. ಅದೇನು ವಯಸ್ಸಿನ ಮಹಿಮೆಯೋ ಏನೋ ಇದನ್ನು ಕೂಲಂಕುಷವಾಗಿ ಪರಿಶೀಲಿಸುವ ವ್ಯವಧಾನ ನಮ್ಮಲ್ಲಿ ಯಾರಿಗೂ ಇರಲಿಲ್ಲ. ವಿದ್ಯಾರ್ಥಿಗಳೆಲ್ಲಾ ಇದ್ದಕ್ಕಿದ್ದಂತೆ ಇಂದ್ರಜಿತ್ ಸಿನಿಮಾದ ಅಂಬರೀಶ್ ಮೈಮೇಲೆ ಬಂದಂತಾಗಿ ಹುಚ್ಚೇಗೌಡರಿಗೆ ಬುದ್ಧಿ ಕಲಿಸಲು ಮುಂದಾದೆವು.
ಆಪರೇಷನ್ ಪೇಪರ್ ಪಿನ್
ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಕೊಠಡಿಯಲ್ಲಿ ಸೇರಿ ಗಹನವಾಗಿ ಚರ್ಚಿಸಿ ಹುಚ್ಚೇಗೌಡರಿಗೆ ಅಂದು ರಾತ್ರಿ ಬುದ್ಧಿ ಕಲಿಸುವ ಅಮೋಘ ಯೋಜನೆಯೊಂದನ್ನು ರೂಪಿಸಿದೆವು. ಈ ಯೋಜನೆಯನ್ನು ಎಷ್ಟು ಸೂಕ್ಷ್ಮವಾಗಿ ಹೆಣೆದಿದ್ದವೆಂದರೆ, ಅಂದು ರಾತ್ರಿ ಊಟಕ್ಕೆ ಕುಳಿತಾಗ ಯಾರ್ಯಾರು ಎಲ್ಲೆಲ್ಲಿ ಕೂರಬೇಕು ಎನ್ನುವುದೂ ಕೂಡ ಪೂರ್ವ ನಿರ್ಧಾರಿತವಾಗಿತ್ತು.
ನಮ್ಮ ಯೋಜನೆಯ ಪ್ರಕಾರ ಒಂದು ಪೇಪರ್ ಪಿನ್ನನ್ನು ಮೇಣದ ಬತ್ತಿಯಲ್ಲಿ ಕಪ್ಪಾಗುವಂತೆ ಸೀದು (ಅದೇಕೆ ಅದನ್ನು ಸೀದವೆಂದು ಇಂದಿಗೂ ನನಗೆ ಅರ್ಥವಾಗಿಲ್ಲ.). ಆ ಪಿನ್ನನ್ನು ಊಟದ ಸಾಲಿನ ಮದ್ಯದಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಯ ಕೈಗೆ ಕೊಡುವುದು. ಊಟ ಮಾಡುವಾಗ ಆ ಪಿನ್ನು ಸಿಕ್ಕಿತೆಂದು ದೂರು ಸಲ್ಲಿಸಲು ಹುಚ್ಚೇಗೌಡರನ್ನು ಕರೆಸುವುದು. ದೂರು ಕೇಳಲು ಮಧ್ಯಕ್ಕೆ ಬಂದ ಹುಚ್ಚೇಗೌಡರಿಗೆ ಎರಡೂ ಸಾಲುಗಳ ಹುಡುಗರು ಸುತ್ತುವರೆದು ಬುದ್ಧಿ ಕಲಿಸುವುದು. ಇದರಲ್ಲಿ ನನ್ನ ಪಾತ್ರವೇನೆಂದರೆ ಎಲ್ಲರಿಗಿಂತ ಬೇಗ ಊಟ ಮುಗಿಸಿ, ಹಾಲು ತೆಗೆದುಕೊಳ್ಳಲು ಊಟದ ಸಾಲು ಶುರುವಾಗುವ ದಿಕ್ಕಿನಲ್ಲಿದ್ದ ಅಡಿಗೆ ಕೋಣೆಯ ಬಾಗಿಲನ ಬಳಿ ನಿಂತುಕೊಳ್ಳುವುದು. ಆ ಬಾಗಿಲಿನ ಬಳಿಯೇ ಊಟದ ಕೋಣೆಯ ವಿದ್ಯುಚ್ಚಕ್ತಿಯನ್ನು ನಿಯಂತ್ರಿಸುವ ಸ್ವಿಚ್ ಒಂದಿತ್ತು. ಹುಚ್ಚೇಗೌಡರನ್ನು ಹುಡುಗರು ಸುತ್ತುವರೆದಾಗ, ಆ ಸ್ವಿಚ್ಚನ್ನೆಳೆದು ಊಟದ ಕೋಣೆಯ ಎಲ್ಲಾ ವಿದ್ಯುತ್ ಬಲ್ಬ್ ಗಳನ್ನು ನಂದಿಸಿ ಹುಚ್ಚೇಗೌಡರಿಗೆ ಬುದ್ಧಿ ಕಲಿಸುವ ಕತ್ತಲಿನ ವಾತಾವರಣ ನಿರ್ಮಿಸುವುದು ನನ್ನ ಕೆಲಸ.
ಬೆಳಕಿನಲ್ಲಿ ಬುದ್ಧಿ ಕಲಿಸಿದರೆ ಯಾರ್ಯಾರು ಬುದ್ಧಿ ಕಲಿಸುತ್ತಿದ್ದಾರೆನ್ನುವುದು ಹುಚ್ಚೇಗೌಡರಿಗೆ ಗೊತ್ತಾಗಿ ಆಮೇಲೆ ಆ ವಿದ್ಯಾರ್ಥಿಗಳ ಮೇಲೆ ದೂರು ನೀಡಿ ಹುಚ್ಚೇಗೌಡರೇ ಆ ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸುತ್ತಾರೆನ್ನುವ ಮುನ್ನೆಚ್ಚರಿಕೆಯಿಂದ ಈ ಕತ್ತಲಿನ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶವಾಗಿತ್ತು.
ನಮ್ಮ ಯೋಜನೆಯಂತೆಯೇ ಅಂದು ರಾತ್ರಿ ನಾನು ಎಲ್ಲರಿಗಿಂತ ಮೊದಲು ಊಟ ಮುಗಿಸಿ ಹಾಲು ತೆಗೆದುಕೊಳ್ಳಲು ವಿದ್ಯುಚ್ಛಕ್ತಿ ಸ್ವಿಚ್ ಬಳಿ ನಿಂತಿದ್ದೆ. ಹುಚ್ಚೇಗೌಡರನ್ನು ಪೇಪರ್ ಪಿನ್ ಬಗ್ಗೆ ದೂರು ನೀಡುವ ನೆಪದಲ್ಲಿ ವಿದ್ಯಾರ್ಥಿಗಳು ಊಟದ ಸಾಲುಗಳ ಮದ್ಯ ಬಾಗಕ್ಕೆ ಕರೆಸಿಕೊಂಡು ಅವರನ್ನು ಸುತ್ತುವರೆದರು. ಒಂದಿಬ್ಬರು ವಿದ್ಯಾರ್ಥಿಗಳು ನನ್ನ ಕಡೆ ತಿರುಗಿ ಸ್ವಿಚ್ ಆಫ್ ಮಾಡಲು ಕೂಗಿದರು. ನಾನು ಮಿಲಿಟರಿ ಕಾರ್ಯಾಚಾರಣೆಯೊಂದರ ಶಿಸ್ತಿನ ಸಿಪಾಯಿಯಂತೆ ವಿದ್ಯುಚ್ಚಕ್ತಿ ಸ್ವಿಚ್ ಆಫ್ ಮಾಡಿದೆ. ಊಟದ ಕೋಣೆಯ ಎಲ್ಲಾ ದೀಪಗಳು ನಂದಿಹೋದವು. ಒಮ್ಮೆಲೆ ಕತ್ತಲಾವರಿಸಿತು.
(ಮುಂದುವರೆಯುವುದು)
No comments:
Post a Comment