ಹುಚ್ಚೇಗೌಡರ ಕತೆ - ಭಾಗ ೨

- ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಎರಡನೆಯ ಭಾಗ. ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ ಹುಚ್ಚೇಗೌಡರ ಕತೆ - ಭಾಗ ೧. ಮೂರನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 


ಹದಿಹರೆಯದ ಹುಚ್ಚಾಟಗಳು

ಕತ್ತಲು ಆವರಿಸಿದ್ದೇ ತಡ ಹುಚ್ಚೇಗೌಡರನ್ನು ಸುತ್ತುವರೆದಿದ್ದ ವಿದ್ಯಾರ್ಥಿಗಳು ಅವರ ಮೇಲೆ ದೈಹಿಕ ಹಲ್ಲೆ ನಡೆಸತೊಡಗಿದರು. ನಾನು ಮೆಸ್ ನಿಂದ ಆಚೆ ಹೋದೆ. ಹುಚ್ಚೇಗೌಡರಿಗೆ ಏನಾಗುತ್ತಿದೆ ಎಂದು ಅವರ ಅರಿವಿಗೆ ಬರುವಷ್ಟರಲ್ಲಿ ಸಾಕಷ್ಟು ಒದೆಗಳು ಬಿದ್ದು ಅವರು ನೋವಿನಿಂದ ಕೂಗುತ್ತಾ ಮೆಸ್ ನಿಂದ ಆಚೆ ಬಂದು ಅಲ್ಲಿ ಪ್ರಾಂಶುಪಾಲರು ಮತ್ತು ಇತರ ಆಡಳಿತ ಸಿಬ್ಬಂದಿಗಳು ವಾಸವಾಗಿದ್ದ ಮನೆಗಳ ಕಡೆ ಓಡತೊಡಗಿದರು, ವಿದ್ಯಾರ್ಥಿಗಳು ಅವರನ್ನು ಹಿಂಬಾಲಿಸಿದರು. ಕಡೆಗೆ ಅಲ್ಲಿಯ ಮನೆಯೊಂದಕ್ಕೆ ನುಗ್ಗಿದರು. ನಮ್ಮ ಜೊತೆಯೇ ಊಟ ಮಾಡುತ್ತಿದ್ದ ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ವಿದ್ಯಾರ್ಥಿ ನಿಲಯಕ್ಕೆ ಕಳುಹಿಸಿದರು. 
ನಾನು ಇಂದು ಕುಳಿತು ಅವತ್ತಿನ ನಮ್ಮ ಅನಾಗರಿಕ ವರ್ತನೆ ಬಗ್ಗೆ ಯೋಚನೆ ಮಾಡಿದಾಗ ನಾಚಿಕೆಯಾಗುತ್ತದೆ. ಅಂದು ಸಮೂಹ ಸನ್ನಿಗೆ ಒಳಗಾದಂತೆ ಹುಚ್ಚೇಗೌಡರಿಗೆ ಹಲ್ಲೆ ಮಾಡುವ ಸಂದರ್ಭದಲ್ಲಿ ಅವರ ಜೀವಕ್ಕೇನಾದರೂ ಹಾನಿಯಾಗಿದ್ದರೆ ಕತೆ ಏನು? ಎಂಬ ಪ್ರಶ್ನೆ ಮೂಡಿ ಆತಂಕವೂ ಆಗುತ್ತದೆ. ಇರಲಿ ಇವೆಲ್ಲಾ ಮುಗಿದ ಕತೆ, ಈಗ ಯೋಚನೆ ಮಾಡುವುದರಲ್ಲಿ ಅರ್ಥವಿಲ್ಲ.

ಯುದ್ಧದ ನಂತರ

ಒಟ್ಟಾರೆ ಅಂದು ನಮ್ಮ ಘನ ಕಾರ್ಯ ಮುಗಿಸಿ ವಿದ್ಯಾರ್ಥಿ ನಿಲಯಕ್ಕೆ ಬಂದಾಗ ಎಲ್ಲರಲ್ಲೂ ಯುದ್ಧ ಗೆದ್ದ ಸಂತೋಷವಿತ್ತು. ಮರುದಿನ ಕಾಲೇಜಿನ ಆಡಳಿತ ಮಂಡಳಿ ನಮಗೆಲ್ಲಾ ಕೆಲವು ದಿನ ರಜೆ ಘೋಷಿಸಿ ಮನೆಗೆ ತೆರಳುವಂತೆ ತಿಳಿಸಿದರು. ನಾವೆಲ್ಲಾ ನಮ್ಮ ನಮ್ಮ ಮನೆಗಳಿಗೆ ತೆರಳಿ ರಜೆಯ ಮಜವನ್ನು ಸವಿಯತೊಡಗಿದೆವು. ಅದೇ ಸಮಯದಲ್ಲಿ ಕಾಲೇಜಿನಲ್ಲಿ ಹಲವು ಬೆಳವಣಿಗೆಗಳು ನಡೆದವು. 
ಹುಚ್ಚೇಗೌಡರು ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೂರು ನೀಡಿದರೆ ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿಯವರು ತಡೆದರು. ನನ್ನನ್ನೂ ಒಳಗೊಂಡಂತೆ ಈ ಗಲಾಟೆಯಲ್ಲಿ ಮುಂಚೂಣಿಯಲ್ಲಿದ್ದ ಹಲವು ವಿದ್ಯಾರ್ಥಿಗಳ ಪೋಷಕರಿಗೆ ಕಾಲೇಜಿನ ಆಡಳಿತ ಮಂಡಳಿಯಿಂದ ಕರೆ ಮಾಡಿ ರಜೆ ಮುಗಿಯುವ ಮೊದಲೇ ಬರಲು ಹೇಳಿದ್ದರು. ನಮ್ಮ ಮನೆಯಲ್ಲಿ ದೂರವಾಣಿ ಸಂಪರ್ಕ ಇಲ್ಲದ ಕಾರಣ ನನ್ನ ತಂದೆಯ ಕಛೇರಿಗೆ ಕರೆ ಮಾಡಿದ್ದರು. ಅಂದು ಕಛೇರಿಗೆ ರಜೆ ಇತ್ತು, ಈ ಕಾರಣದಿಂದ ನಮಗೆ ವಿಷಯವೇ ತಲುಪಲಿಲ್ಲ. ವಿದ್ಯಾರ್ಥಿ ನಿಲಯಕ್ಕೆ ಹೊಸ ವಾರ್ಡನ್ ನೇಮಕ ಮಾಡಿದ್ದರು. ಹುಚ್ಚೇಗೌಡರನ್ನು ನಮ್ಮ ಕಾಲೇಜಿನ ಸಂಸ್ಥೆಯ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದ್ದರು. ಇವೆಲ್ಲಾ ನಾನು ರಜೆ ಮುಗಿಸಿಕೊಂಡು ವಿದ್ಯಾರ್ಥಿನಿಲಯಕ್ಕೆ ಹಿಂದಿರುಗಿದ ನಂತರ ತಿಳಿಯಿತು.

ಹೊಸ ವಾರ್ಡನ್

ನಾನು ರಜೆ ಮುಗಿಸಿ ವಿದ್ಯಾರ್ಥಿ ನಿಲಯಕ್ಕೆ ವಾಪಾಸಾದ ನಂತರ ವಾರ್ಡನ್ ಬದಲಾಗಿದ್ದಾರೆ, ಈಗ ಹೊಸ ವಾರ್ಡನ್ ಕೃಷ್ಣೇಗೌಡರು ಎಂದು ತಿಳಿಯಿತು. ಕೃಷ್ಣೇಗೌಡರು ಬಹಳ ಶಿಸ್ತಿನ ಮನುಷ್ಯ ಎಂದು ಹೆಸರುವಾಸಿಯಾಗಿದ್ದರು. ವಿದ್ಯಾರ್ಥಿಗಳು ಸಣ್ಣ ತಪ್ಪು ಮಾಡಿದರೂ ಅವರಲ್ಲಿದ್ದ ಬೆತ್ತದಿಂದ ಭರ್ಜರಿಯಾಗಿ ಹೊಡೆತಗಳು ಬೀಳುತ್ತಿತ್ತು. ಅವರಿಗೆ ಹಾಗೆ ಹೊಡೆದಿದ್ದರು, ಇವರಿಗೆ ಹೀಗೆ ಹೊಡೆದಿದ್ದರು ಎಂಬ ವರ್ಣರಂಜಿತ ಕತೆಗಳನ್ನು ಕೇಳಿ ಕೇಳಿ ವಿದ್ಯಾರ್ಥಿಗಳಲ್ಲಿ ಅವರ ಬಗ್ಗೆ ಭಯವಿತ್ತು. ನಾನು ವಿದ್ಯಾರ್ಥಿ ನಿಲಯಕ್ಕೆ ಹೋದಾಗ ಈ ಗಲಾಟೆಯಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿಗಳದ್ದೆಲ್ಲಾ ವಿಚಾರಣೆ ಮುಗಿದಿತ್ತು. ಅವರು ತಮ್ಮ ಪೋಷಕರನ್ನು ಕರೆದುಕೊಂಡು ಬಂದಿದ್ದರಿಂದ ಶಾಂತಿ ಸಂಧಾನಗಳಾಗಿ ವಿದ್ಯಾರ್ಥಿಗಳೆಲ್ಲಾ ಆರಾಮವಾಗಿದ್ದರು. ನಾನು ಬಂದ ತಕ್ಷಣ ಕೃಷ್ಣೇಗೌಡರ ಮನೆಗೆ ಬರಲು ಹೇಳುವಂತೆ ಖುದ್ದು ಕೃಷ್ಣೇಗೌಡರೇ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ನನ್ನ ಸ್ನೇಹಿತರೆಲ್ಲಾ ಇದನ್ನು ನನಗೆ ಹೇಳಿ, ಕೃಷ್ಣೇಗೌಡರ ಮನೆಗೆ ತೆರಳಲು ತಿಳಿಸಿ, ಹೋಗು ನಿನಗೆ ಇದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ಕೃಷ್ಣೇಗೌಡರ ಹಿನ್ನೆಲೆ ತಿಳಿದಿದ್ದ ನನಗೆ ಭಯ ಶುರುವಾಗಿತ್ತು. ಕೃಷ್ಣೇಗೌಡರು ವಿಚಾರಣೆ ನಡೆಸುವಾಗ ಯಾವ ರೀತಿಯ ಪ್ರಶ್ನೆಗಳು ಎದುರಾಗಬಹುದು, ಅವುಗಳಿಗೆ ಏನು ಉತ್ತರ ಹೇಳಬೇಕು ಎಂದು ಯೋಚಿಸುತ್ತಾ, ಕೃಷ್ಣೇಗೌಡರ ಮನೆಗೆ ಬಂದು ಬಾಗಿಲು ತಟ್ಟಿದೆ. ಖುದ್ದು ಕೃಷ್ಣೇಗೌಡರೇ ಬಾಗಿಲು ತೆಗೆದರು. ನಾನು ನನ್ನ ಪರಿಚಯ ಹೇಳಿಕೊಂಡು, ಬರಲು ಹೇಳಿದ್ದಿರಂತೆ ಎಂದೆ. ಅವರು ಓ ನೀನಾ ಬಾ ಒಳಗೆ ಎಂದರು. ನಾನು ಮುಂದೇನು ಕಾದಿದೆಯೋ ಎನ್ನುವ ಆತಂಕದಲ್ಲೇ ಅವರ ಮನೆಯೊಳಗೆ ಕಾಲಿಟ್ಟೆ. 

(ಮುಂದುವರೆಯುವುದು)


No comments:

Post a Comment