ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 1 – ಬೆನ್ನಿಗೆ ಬಿದ್ದ ಚೂರಿ

- ಜ್ಞಾನೇಶ್ ಸಿ.ಎಂ. 


[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಲಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಈ ಲೇಖನದಲ್ಲಿ ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ಈ ಲೇಖನ ಮಾಲೆ ಹಲವು ಭಾಗಗಳಲ್ಲಿ ಪ್ರಕಟಗೊಳ್ಳುತ್ತದೆ. 
- ಮೋಹನ್ ಮೂರ್ತಿ ಮಾ.ಕೆಂ.] 

“Et tu, Brute?
  - William Shakespeare (Julius Caesar)”

ಸಿಲ್ವರ್ ಜೂಬಿಲೀ ಸಮಾರಂಭದ ಬಗ್ಗೆ ಬರಿ, ಅಗತ್ಯ ಇದ್ದರೆ ಸರಿಪಡಿಸಿ ಅದನ್ನ ಒಂದು ರೂಪಕ್ಕೆ ತರುತ್ತೇನೆ ಎಂದು ಮೋಹನ ಹೇಳಿದಾಗ, ನಾನು ಎಲ್ಲಿಂದ ಶುರು ಮಾಡಲಿ ಅಂತ ಯೋಚನೆ ಮಾಡೋಕೆ ಮೂರು ದಿವಸ ತೆಗೆದುಕೊಂಡೆ. ಕಾಲೇಜಿನವರು ಮಾಡಿದ ಸಿಲ್ವರ್ ಜೂಬಿಲೀ ಸಮಾರಂಭಕ್ಕೆ ರೋಹಿಣಿ ಮೇಡಂ 2023 ರಲ್ಲೇ  ನಿಮ್ಮನ್ನೆಲ್ಲಾ ಆಹ್ವಾನಿಸುತ್ತೇವೆ ನೀವುಗಳೆಲ್ಲಾ ಬಸ್ ಮಾಡಿಕೊಂಡು ಬನ್ನಿ ಎಂದು ಹೇಳಿದ್ದರು. ನಾನು ಆವಾಗಲೇ ಒಂದು ಬಸ್ ಸಾಕಾಗುತ್ತಾ? ಎರಡು ಬೇಕಾ? ಕೆಂಗೇರಿಯಿಂದ ಎಲ್ಲರನ್ನೂ ಕರೆದುಕೊಂಡು ಹೋಗೋಣ, ಮೈಸೂರಲ್ಲಿ ಇರುವವರನ್ನು ಅಲ್ಲೇ ಹತ್ತಿಸಿಕೊಂಡು ಹೋದರೆ ಆಯಿತು ಅಂತೆಲ್ಲಾ ಯೋಚಿಸಿ ಅಮೋಘ ಯೋಜನೆಯೊಂದನ್ನು ರೂಪಿಸಿದ್ದೆ. 


ಆಮೇಲೆ ಅದೇನಾಯಿತೋ ಏನೋ ಗೊತ್ತಿಲ್ಲ, ಕಾಲೇಜಿನವರು ಸಿಲ್ವರ್ ಜೂಬಿಲೀ ಸಮಾರಂಭಕ್ಕೆ ನಮ್ಮನ್ನೆಲ್ಲಾ ಕರೆಯಲೇ ಇಲ್ಲ. ಆವಾಗ ನನಗೆ ಬೇಜಾರಾಗಿದ್ದು ನಿಜ. ಸಿಐಟಿ ವಾಟ್ಸಾಪ್ ಗುಂಪಿನಿಂದ ಆಚೆ ಬಂದೆ. ಇಂತಹ ವಿಚಾರಗಳಲ್ಲಿ ತಕ್ಷಣಕ್ಕೆ ಪ್ರತಿಕ್ರಿಯಿಸಿ ಭಾವನೆಗಳ ಒತ್ತಡದಿಂದ ಹಗುರಾಗೋದು ನನ್ನ ಅಭ್ಯಾಸ. ನನಗೆ ಕಾಲೇಜಿನವರು ಕಡೇ ಪಕ್ಷ ಮೊದಲನೇ ಬ್ಯಾಚಿನ ಉಪನ್ಯಾಸಕರು/ಉಪನ್ಯಾಸಕಿಯರನ್ನಾದರೂ ಕರೆಯಬೇಕಿತ್ತು ಅನ್ನಿಸಿತು. ಏಕೆಂದರೆ ಕಾಲೇಜಿನ ಆರಂಭವಾಸ್ಥೆಯಲ್ಲಿ ನೂರಾರು ಸಮಸ್ಯೆಗಳ ನಡುವೆ ಇದ್ದಾಗ. ಅವುಗಳನ್ನೆಲ್ಲ ಎದುರಿಸಿ  ಇವರು ಕಾಲೇಜಿನ ಬೆಳವಣಿಗೆಗೆ ನೀಡಿರುವ ಕೊಡುಗೆ ದೊಡ್ಡದೆನ್ನುವ ಭಾವನೆ ನನ್ನದು.  ಕಾಲೇಜಿನವರು ಕರೆಯದೇ ಇದ್ದರೆ ಏನಾಯಿತು ನಾವೇ ಒಂದು ಒಳ್ಳೆ ಸಮಾರಂಭ ಮಾಡೋಣ ಎಂದು ಸಮಾಧಾನ ಮಾಡಿಕೊಂಡೆ. 


ನಾನು ಸಿಐಟಿ ಕಾಲೇಜು ಸೇರಲಿಲ್ಲ ಅಂದರೆ ನಾನಂತೂ ಇಂಜಿನಿಯರ್ ಆಗುತ್ತಲೇ ಇರಲಿಲ್ಲ. ಅದೂ ನಾಲ್ಕು ವರ್ಷದ ಇಂಜಿನಿಯರಿಂಗ್ ವ್ಯಾಸಂಗವನ್ನು ನಾಲ್ಕೇ ವರ್ಷದಲ್ಲಿ ಮುಗಿಸುವುದು ನನ್ನ ಪಾಲಿಗಂತೂ ಕನಸಿನ ಮಾತಾಗಿತ್ತು. ನನಗೆ ಸಿಕ್ಕ ಎಲ್ಲಾ ಉತ್ತಮ ಉಪನ್ಯಾಸಕರು/ ಉಪನ್ಯಾಸಕಿಯರು, ಶಿಸ್ತಿನ ಪ್ರಾಂಶುಪಾಲರು, ಪಟ್ಟಣದ ಅನಗತ್ಯ ವಿಚಾರಗಳಿಂದ ಮುಕ್ತವಾಗಿದ್ದ ಸ್ಥಳ. ಎಲ್ಲಕ್ಕಿಂತ ಹೆಚ್ಚಾಗಿ ಜೀವದ ಗೆಳೆಯರು. ನನಗೆ ಇವತ್ತೂ ಚೆನ್ನಾಗಿ ನೆನಪಿದೆ, ನನ್ನ ತಂದೆ, ನಂದೀಶ್ ಟಿ ಆರ್ ನನ್ನು ಮೊದಲ ಬಾರಿ ಮಾತನಾಡಿಸಿದಾಗ, ನನ್ನ ಮಗನ್ನ ನೋಡಿಕೊಪ್ಪ ಎಂದು ಅವನ ಸುಪರ್ದಿಗೆ ಬಿಟ್ಟಿದ್ದರು. ಅವನು ಅದನ್ನು ವೇದವಾಕ್ಯದಂತೆ ಪಾಲಿಸಿ ಇಂಜಿನಿಯರಿಂಗ್ ವ್ಯಾಸಂಗದ ಕೊನೆವರೆಗೂ ಕೈಹಿಡಿದು ಮುನ್ನಡೆಸಿದ. ನಂದೀಶ್ ಜೊತೆ ಇಲ್ಲದೇ ಹೋಗಿದ್ದರೆ, ನನ್ನ ಇಂಜಿನಿಯರಿಂಗ್ ವ್ಯಾಸಂಗ ಏನಾಗುತ್ತಿತ್ತೋ ದೇವರೇ ಬಲ್ಲ. ಈ ಎಲ್ಲಾ ಕಾರಣಗಳಿಂದ ನನಗೆ ನಿಜವಾಗಲೂ ಸಿಐಟಿ ಕಾಲೇಜೆಂದರೆ ಅಭಿಮಾನ.


(ಮುಂದಿನ ಚಾಪ್ಟರ್ - ಆಪರೇಷನ್ ಚೀಫ್ ಗೆಸ್ಟ್)

No comments:

Post a Comment