- ಮಂಜುನಾಥ್ ಪಿ
ಎಲ್ಲಿ ನೋಡಿದರಲ್ಲಿ ಹಚ್ಚ-ಹಸಿರು, ಆಟವಾಡಲು ದೊಡ್ಡ ಮೈದಾನ, ವಿಷಯಗಳನ್ನು ಕಲಿಸಲು ಒಳ್ಳೆಯ ಗುರುಗಳು ಇದು ನಮ್ಮ ಶಾಲೆಯ ಸ್ಥೂಲ ರೂಪ. ನಾನು ಏಳನೇ ತರತಿಯಲ್ಲಿ ಓದುತ್ತಾ ಇದ್ದಾಗ, ಅದೊಂದು ದಿನ ಬೆಳಿಗ್ಗೆ ತುಂಬಾ ಮಳೆ ಬರುತ್ತಿತ್ತು. ನಾನು ಬೆಳ್ಳಂಬೆಳಗ್ಗೆಯೇ ಎದ್ದು ಓದುತ್ತಿದ್ದೆ. ಏಕೆ ಬೇಗ ಎದ್ದು ಓದುತ್ತಿದೆನೆಂದರೆ ಅಮ್ಮನ ಭಯ. ನನ್ನ ಅಮ್ಮ ಶಿಸ್ತಿನ ಸಿಪಾಯಿ. ದಿನವೂ ಬೆಳಗ್ಗೆ ಬೇಗನೆ ಎದ್ದು ಓದಲೇ ಬೇಕಿತ್ತು.
ಅದೊಂದು ದಿವಸ ನನ್ನ ಒಬ್ಬ ಸ್ನೇಹಿತ, ನನ್ನ ಮನೆಗೆ ಸಾಯಂಕಾಲ ಬಂದು, ಟ್ಯೂಷನ್ ಗೆ ಬೇಗ ಹೋಗೋಣ ಅಂತ ಹೇಳಿದ. ಅಲ್ಲಿ ನಮ್ಮ ಗುರುಗಳೇ ಪಾಠಗಳು ಮುಗಿದಿಲ್ಲ ಅಂತ ಸಾಯಂಕಾಲ ಕ್ಲಾಸ್ ತಗೆದುಕೊಳ್ಳುತ್ತಿದ್ದರು. ನನ್ನ ಸ್ನೇಹಿತನ ಬಗ್ಗೆ ಹೇಳುವುದಾದರೆ ಅವನು ಒಬ್ಬ ದೊಡ್ಡ ತರಲೆ, ತುಂಟಾಟಗಳಲ್ಲಿ ಎತ್ತಿದ ಕೈ. ನಾನು ನನ್ನ ಸ್ನೇಹಿತನ ಜೊತೆ ಸುಮಾರು ಆರು ಗಂಟೆಗೆ ಮನೆಪಾಠಕ್ಕೆ ಹೋದೆವು.
ನಾನು ಬಹುಮುಖ್ಯವಾದ ಒಂದು ವಿಚಾರ ಹೇಳೋದು ಮರೆತೆ. ನಿಮ್ಮನ್ನು ಸ್ವಲ್ಪ ಹಿಂದೆ ಕರ್ಕೊಂಡು ಹೋಗ್ತೀನಿ ಬನ್ನಿ. ನಮ್ಮ ಶಾಲೆಯಲ್ಲಿ ಓರ್ವ ಸುಂದರ ಹುಡುಗಿ ಇದ್ದಳು. ತುಂಬಾ ಚೆನ್ನಾಗಿ ಓದುತ್ತಾ ಇದ್ದಳು. ಅವಳು ಟ್ಯೂಷನ್ ಗೆ ಬರುತ್ತಾಳೆಂದು ನಾವು ಬೇಗ ಹೋಗುತ್ತಿದ್ದೆವು. ನಾವು ಏನು ಕಡಿಮೆನಾ ಎಂದುಕೊಂಡು, ಪ್ರಯತ್ನ ಮಾಡೋಣ, ಯಾರಿಗೆ ಸಿಗುತ್ತಾಳೆ ಸಿಗಲಿ ಬಿಡು ಎಂದು ನಿರ್ಧರಿಸಿದ್ದೆವು.
ಟ್ಯೂಷನ್ ಗೆ ಅಂದು ಆ ಹುಡುಗಿಯೂ ಬೇಗ ಬಂದಿದ್ದಳು. ನಮ್ಮ ಮೇಷ್ಟ್ರು ಇನ್ನೂ ಬಂದಿಲ್ಲದ ಕಾರಣ, ಎಲ್ಲರೂ ಶಟಲ್ ಆಟ ಆಡೋಣವೆಂದು ನಿರ್ಧರಿಸಿದೆವು. ನನ್ನ ಸ್ನೇಹಿತ ಎರಡು ಶಟಲ್ ಬ್ಯಾಟ್ ತಂದ. ನನ್ನ ಸ್ನೇಹಿತ ಮತ್ತು ನಾನು ಶಿಫ್ಟ್ ನಲ್ಲಿ ಆ ಹುಡುಗಿಯ ಜೊತೆ ಆಟವಾಡುತ್ತಾ ಇದ್ದೆವು. ಆಟ ಆಡುತ್ತ ಅದರಲ್ಲೇ ಮಗ್ನರಾಗಿ ಎಲ್ಲವನ್ನೂ ಮರೆತೇ ಬಿಟ್ಟಿದ್ದೆವು. ಟ್ಯೂಷನ್ ಶುರುವಾಗಿರುವುದನ್ನು ಗಮನಿಸಲೇ ಇಲ್ಲ. ತಟ್ಟನೆ ನನಗೆ ನೆನಪಾಯಿತು. ಟ್ಯೂಷನ್ ಅಂತ ತಕ್ಷಣ ಎಲ್ಲರೂ ಒಳಗೆ ಹೋಗೋಣವೆಂದು ನಿರ್ಧರಿಸಿದೆವು. ನಮ್ಮ ಮಾಸ್ಟರ್ ಬಗ್ಗೆ ಎಲ್ಲರಿಗೂ ಭಯ ಇತ್ತು. ಅವರು ಬಾಯಲ್ಲಿ ಹೇಳೋದಕ್ಕಿಂತ, ಅವರ ಬೆತ್ತದ ಕೋಲೇ ಹೆಚ್ಚು ಮಾತನಾಡುತ್ತಿತ್ತು. ಆಲ್ಲಿ ಆಗಲೇ ಪಾಠ ಶುರುವಾಗಿತ್ತು. ನಾನು ಒಳಗೆ ಹೋಗುವ ಧೈರ್ಯ ಮಾಡಿ, ಒಳಗೆ ಬರಲಾ ಸರ್ ಅಂದೆ. ತಕ್ಷಣ ಬೆತ್ತದ ಕೋಲಿನ ಸೇವೆ ಪ್ರಾರಂಭವಾಯಿತು. ಅಮ್ಮಾ ಎಂದು ಚೀರುತ್ತಾ, ಇನ್ನು ಮುಂದೆ ಈ ರೀತಿ ಮಾಡೊಲ್ಲವೆಂದು ಮಾಸ್ಟರ್ ಗೆ ಹೇಳಿದೆವು. ನಮಗೆ ಆಮೇಲೆ ಗೊತ್ತಾಯಿತು. ನಾವು ನಮ್ಮ ಸಹಪಾಠಿ ಹುಡುಗಿ ಜೊತೆ ಆಟವಾಡುತ್ತಿರುವುದನ್ನು ಮಾಸ್ತರು ಆಗಲೇ ಗಮನಿಸಿದ್ದಾರೆ ಅಂತ.. ಎಲ್ಲಿ ಅಡಗಿತ್ತೋ ಅವರ ಆ ಉಗ್ರ ಕೋಪ, ಆ ಕ್ಷಣದಲ್ಲಿ ಅವರನ್ನು ರಾಕ್ಷಸನಾಗಿ ಮಾಡಿತ್ತು. ಬೆತ್ತದ ಏಟಿನ ನೋವಿಗಿಂತ, ನಮ್ಮ ಸಹಪಾಠಿ ಹುಡುಗಿಯ ಮುಂದೆ ಹೊಡೆದರಲ್ಲ ಎನ್ನುವ ನೋವು ಬಹಳ ಕಾಡಿತ್ತು.
No comments:
Post a Comment