Showing posts with label ಅಕ್ಷಯರಾಮ ಕಾವಿನಮೂಲೆ. Show all posts
Showing posts with label ಅಕ್ಷಯರಾಮ ಕಾವಿನಮೂಲೆ. Show all posts

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೭


- ಅಕ್ಷಯರಾಮ ಕಾವಿನಮೂಲೆ


ನಮ್ಮ ಟ್ಯಾಕ್ಸಿ ಡ್ರೈವರ್ ಪ್ರಾಯಸ್ಥ. ಬಹಳ ಸಮಾಧಾನದಿಂದ ಕಾರು ಓಡಿಸುತ್ತಾ ಮೊದಲಿಗೆ ನಮ್ಮನ್ನು 'ನಹಾರ್ ಗಢ' ಕೋಟೆಗೆ ಕರೆದೊಯ್ದ. ಜೈಪುರ ಪಟ್ಟಣದಿಂದ ಹೊರಬಂದ ಹಾಗೆಯೇ ಕುರುಚಲು ಕಾಡುಗಳಿಂದ ಆವೃತ್ತವಾದ ಗುಡ್ಡಗಳ ಸಾಲು. ತಿರುವುಮುರುವುಗಳಿಂದ ಕೂಡಿದ ಚಿಕ್ಕ ರಸ್ತೆಯಲ್ಲಿ ಮೇಲೇರುತ್ತಾ ಸಾಗಿದೆವು. ಗುಡ್ಡವೊಂದರ ತುದಿಯಲ್ಲಿತ್ತು ನಹಾರ್ ಗಢ. ಟಿಕೆಟ್ ಕೊಂಡು ಕೋಟೆಯ ದ್ವಾರದೊಳಗೆ ಪ್ರವೇಶಿಸಿದೆವು. ಮಾಧವೇಂದ್ರ ಅರಮನೆಯೇ ಕೋಟೆಯೊಳಗಿನ ಪ್ರಧಾನ ಆಕರ್ಷಣೆ. ಟಿಕೆಟ್ ಪರಿಶೀಲಿಸುವ ಸಿಬ್ಬಂದಿಯೋರ್ವ ಇನ್ನೊಂದಿಷ್ಟು ಕಾಸು ಸಂಪಾದಿಸಲು ಗೈಡ್ ಪಾತ್ರವನ್ನೂ ಮಾಡಿದ.

ಕಡಲತೀರದ ಭಾರ್ಗವನಿಗೆ ಹುಟ್ಟೂರ ನಮನ

- ಅಕ್ಷಯರಾಮ ಕಾವಿನಮೂಲೆ

ಮಣ್ಣುಕೊರೆಯುವ ಯಂತ್ರವೊಂದರ ಪ್ರಾತ್ಯಕ್ಷಿಕೆ ನೋಡಲೆಂದು ಅಪ್ಪನ ಜೊತೆ ಕೋಟೇಶ್ವರಕ್ಕೆ ಹೊರಟಿದ್ದೆ. ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟವನ್ನು ದಾಟಿ ಮುಂದುವರಿಯುವಾಗ ಕಾರಂತ ಥೀಂ ಪಾರ್ಕ್ ಎನ್ನುವ ಸಣ್ಣದೊಂದು ಬೋರ್ಡು ಕಾಣಿಸಿತು. 

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೬

- ಅಕ್ಷಯರಾಮ ಕಾವಿನಮೂಲೆ


ತಾಜ್ ಮಹಲಿನ ಮುಂದಿರುವ ಉದ್ಯಾನದಲ್ಲಿ ಮತ್ತೊಂದಷ್ಟು ಫೋಟೋ ತೆಗೆದು ಹೊರಬಂದೆವು.
ಗೈಡ್ ಆಸೀಮುದ್ದೀನ್ ನಮ್ಮನ್ನು ಹತ್ತಿರದಲ್ಲೇ ಇದ್ದ ಕರಕುಶಲ ವಸ್ತುಗಳ ಮಾರಾಟ ಮಳಿಗೆಗೆ ಕರೆದೊಯ್ದ. ಅಲ್ಲೊಬ್ಬ ಕುಶಲಕರ್ಮಿ ಕೈಯಲ್ಲಿ ರಾಟೆಯಂತಹದ್ದೊಂದು ಉಪಕರಣವನ್ನು ಬಳಸಿ ಅಮೃತಶಿಲೆ ಹಾಗೂ ಇತರ ಬಣ್ಣದ ಕಲ್ಲುಗಳನ್ನು ವಿವಿಧ ಆಕಾರ, ಗಾತ್ರಗಳಿಗೆ ಕತ್ತರಿಸಿ, ತಾಜ್ ಮಹಲಿನ ಗೋಡೆಗಳಲ್ಲಿನ ಚಿತ್ತಾರದ ಪ್ರತಿರೂಪಗಳಂತಿರುವ ಕಲಾಕೃತಿಗಳನ್ನು ತಯಾರಿಸುತ್ತಿದ್ದ.

ತೊದಲು ನುಡಿ

- ಅಕ್ಷಯರಾಮ ಕಾವಿನಮೂಲೆ
ಕಣ್ಣು ಹಾಯಿಸಿದಷ್ಟು
ದೂರಕ್ಕೆ ಕಾಣುತಿದೆ
ಸಾಹಿತ್ಯ ಸಾಧಕರ
ದೊಡ್ಡ ಸಾಲು |

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೫

- ಅಕ್ಷಯರಾಮ ಕಾವಿನಮೂಲೆ


ಕುಫ್ರಿಯ ತುದಿಯಲ್ಲಿ
ಕುಫ್ರಿಯ ತುದಿ ತಲುಪಿದಾಗ ಅದಾಗಲೇ ಸೂರ್ಯಾಸ್ತವಾಗಿತ್ತು. ಹಿಮಾಚಲದ ಗಿರಿಶೃಂಗಗಳು ಓಕುಳಿಯಾಡಿ ಕೆಂಪೇರಿದ್ದವು. ಅಲ್ಲೊಂದು ಪುಟ್ಟ ದೇವಸ್ಥಾನ. ಸುತ್ತಮುತ್ತಲಿನ ಅಂಗಡಿಗಳು ಅದಾಗಲೇ ಮುಚ್ಚತೊಡಗಿದ್ದವು. ವಿರಳವಾಗಿದ್ದ ಜನಸಂದಣಿಯಿಂದಾಗಿ ತುಸು ಹೊತ್ತು ಪ್ರಶಾಂತವಾಗಿ ಸೂರ್ಯಾಸ್ತದ ಚೆಲುವನ್ನು ಅಸ್ವಾದಿಸಲು ಸಾಧ್ಯವಾಯಿತು. ಮಂಜಿನ ಸಿಂಚನದ ಜೊತೆ ಜೋರಾಗಿ ಬೀಸುತ್ತಿದ್ದ ಕುಳಿರ್ಗಾಳಿ ನಮ್ಮನ್ನು ಹೆಚ್ಚು ಹೊತ್ತು ಅಲ್ಲಿರಲು ಬಿಡಲಿಲ್ಲ. ನಡುಗುತ್ತಾ ಕುದುರೆಯೇರಿ ಮುಖ್ಯ ರಸ್ತೆಯತ್ತ ಹೊರಟೆವು.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೪

ಅಕ್ಷಯರಾಮ ಕಾವಿನಮೂಲೆ
ಮರುದಿನ ಬೆಳಗ್ಗೆ ತಿಂಡಿ ಮುಗಿಸಿ ರಿಷಿಯ ಇನ್ನೋವಾ ಏರಿದೆವು. ಮತ್ತದೇ ಹಿಮಾಚಲದ ಜನಪದ ಶೈಲಿಯ ಹಾಡುಗಳನ್ನು ಕೇಳುತ್ತಾ ಹೊರಟಿತು ನಮ್ಮ ಪಯಣ. ಮನಾಲಿಯಿಂದ ಶಿಮ್ಲಾಕ್ಕೆ ಬರೋಬ್ಬರಿ ಏಳೆಂಟು ಗಂಟೆಗಳ ದಾರಿ. ಅಷ್ಟರಲ್ಲಾಗಲೇ ಆ ತಿರುವುಗಳಿಗೆ ನಮ್ಮ ದೇಹ ಹೊಂದಿಕೊಂಡಾಗಿತ್ತು. ಸುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯ ಸವಿಯುತ್ತಾ ಕುಳಿತೆವು.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೩

- ಅಕ್ಷಯರಾಮ ಕಾವಿನಮೂಲೆ

ಹಿಮಾಲಯದ ಸೌಂದರ್ಯ ಸವಿಯುತ್ತಾ ಮಂಜನ್ನು ಅರಸಿ ಹೊರಟೆವು. ರೋಹ್ತಾಂಗ್ ಪಾಸ್ ಅದಾಗಲೇ ಮುಚ್ಚಲ್ಪಟ್ಟ ಕಾರಣ ಅಲ್ಲಿಗೆ ಹೋಗಲಾಗಲಿಲ್ಲ. 'ಗುಲಾಬಾ' ಮತ್ತು 'ಸೊಲಾಂಗ್' ಕಣಿವೆಗಳಿಗೆ ಭೇಟಿಮಾಡಿಸುವುದಾಗಿ ಪವನ್ ಆಶ್ವಾಸನೆಯಿತ್ತ. ಮತ್ತದೇ ಭೀಮತಿರುವುಗಳಲ್ಲಿ ಸುತ್ತಿ ಸುತ್ತಿ ಮೇಲೇರುತ್ತಾ ನಾವಿದ್ದ ಆಲ್ಟೋ ಸಾಗಿತು. (ಹಿಮಾಚಲದಲ್ಲಿ ಪುಟ್ಟ ಕಾರಾದ ಮಾರುತಿ ಆಲ್ಟೋವನ್ನು ಟ್ಯಾಕ್ಸಿಯಾಗಿ ಬಳಸುತ್ತಾರೆ. ಕಡಿದಾದ ಸಣ್ಣ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ಈ ಪುಟ್ಟ ವಾಹನಗಳು ತುಂಬಾ ಸಹಕಾರಿ.) ಮಗಳು ಚಿತ್ಕಲಾ ಮತ್ತೆ ಮುಖಭಾವ ಬದಲಿಸಿದಂತೆ ಕಂಡಿತು.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೨

- ಅಕ್ಷಯರಾಮ ಕಾವಿನಮೂಲೆ


ನಮ್ಮ ಬಸ್ ಡ್ರೈವರ್ ರಾಣಾ ಹಾಡು ಗುನುಗುತ್ತಾ ಆಕ್ಸಿಲೇಟರ್ ಅದುಮುತ್ತಿದ್ದ. ತುಂಬಾ ದೂರ ಮಂಜು ಕವಿದ ರಸ್ತೆ. ಮುಂದೆ ತುಸುವೇ ಬೆಳಕು ಹರಿದು ಹೊರಗಿನ ರುದ್ರ ರಮಣೀಯ ಸೌಂದರ್ಯ ಕಾಣತೊಡಗಿತು. ಎಡಬದಿಗೆ ಆಳದಲ್ಲಿ ಹರಿಯುವ ಬಿಯಾಸ್ ನದಿ. ಬಲಗಡೆಗೆ ಕಡಿದಾಗಿ ಮುಗಿಲೆತ್ತರಕ್ಕೆ ನಿಂತ ಪರ್ವತಮಾಲೆ. ತಿರುವುಗಳಲ್ಲಿ ವೇಗ ಜಾಸ್ತಿಯಾಗಿ ವೋಲ್ವೋ ತುಯ್ದಾಡುತ್ತಿತ್ತು. ಒಂದಷ್ಟು ದೂರ ಸಾಗಿದಾಗ ಮಗಳು ಚಿತ್ಕಲಾಳ ಮುಖಭಾವ ಬದಲಾಯಿತು. ಗಾಬರಿಯಿಂದ ಎದುರಿಗಿದ್ದ ಪ್ಲಾಸ್ಟಿಕ್ ಚೀಲ ಕೈಗೆ ತೆಗೆದುಕೊಳ್ಳುವಷ್ಟರಲ್ಲಿ ವಾಂತಿಯಾಯಿತು. "ಸ್ವಲ್ಪ ನಿಲ್ಲಿಸಪ್ಪಾ ಪುಣ್ಯಾತ್ಮಾ" ಕೇಳಿಕೊಂಡೆ ಡ್ರೈವರ್ ಬಳಿ.

ಕೋಶ ಓದು: ಪರ್ವತಾರೋಹಣದ ದುರಂತ ಕಥನ - ಎವರೆಸ್ಟ್

-ಅಕ್ಷಯರಾಮ ಕಾವಿನಮೂಲೆ

ಮೂಲ: ಜಾನ್ ಕ್ರಾಕೌರ್
ಕನ್ನಡಕ್ಕೆ ಅನುವಾದ: ವಸುಧೇಂದ್ರ
ಬೆಲೆ: ರೂ. 250

ಪದವಿ ಮುಗಿಸಿ ಕೆಲಸಹುಡುಕುವ ಬಹುತೇಕ ಹುಡುಗರು ತಮ್ಮ ಬಯೋಡೇಟಾದಲ್ಲಿ 'ಹವ್ಯಾಸಗಳು' ಎಂಬಲ್ಲಿ ಬರೆಯುವುದು "ಓದು, ಚಾರಣ, ಪ್ರಕೃತಿ ವೀಕ್ಷಣೆ, ಪರ್ವತಾರೋಹಣ" ಇತ್ಯಾದಿಗಳನ್ನು. ಚಿಕ್ಕ ಪ್ರಾಯದಲ್ಲಿ ಹಳ್ಳಿಯ ಸುತ್ತಮುತ್ತಲಿನ ಚಿಕ್ಕಪುಟ್ಟ ಗುಡ್ಡಗಳನ್ನು ಕಷ್ಟಪಟ್ಟು ಏರಿ, ತುದಿಯಲ್ಲಿ ಏದುಸಿರು ಬಿಡುತ್ತಾ ಕುಳಿತು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ರಮಣೀಯ ದೃಶ್ಯಗಳನ್ನು ಎದೆದುಂಬಿಸಿಕೊಂಡು ದೊಡ್ಡ ಪರ್ವತಾರೋಹಿಗಳಂತೆ ಬೀಗಿದವರು ನಾವು. ಬೆಳೆಯುತ್ತಾ ಹೋದಂತೆ ಅನೇಕರಿಗೆ ಚಾರಣದ ಆಸಕ್ತಿ ಕಳೆದುಹೋಗಿ ಪ್ರಕೃತಿಯಿಂದ ವಿಮುಖರಾಗಿ ಪ್ರಾಪಂಚಿಕ ಕಷ್ಟ ಸುಖಗಳಲ್ಲಿ ಮುಳುಗಿಹೋಗುವುದು ಸಹಜ.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೧

- ಅಕ್ಷಯರಾಮ ಕಾವಿನಮೂಲೆ

ಬಹುದಿನಗಳ ಕನಸೊಂದನ್ನು ನನಸು ಮಾಡುವ ದಿನ ಬಂತು. ಅದೊಂದು ಸಂಜೆ ಅಪ್ಪ, ಅಮ್ಮನ ಬಳಿ ಮನದಲ್ಲಿದ್ದದ್ದನ್ನು ಹೇಳಿಯೇಬಿಟ್ಟೆ. "ಒಂದಷ್ಟು ದಿನಗಳ ಕಾಲ ಪ್ರವಾಸ ಹೋಗಲೇ ?" ಅನುಮತಿಯೂ ಸಿಕ್ಕಿತು. ಕೇರಳ ಪ್ರವಾಸದ ಯೋಜನೆ ಫಲಪ್ರದವಾಗದೇ ಹಾಗೇ ಉಳಿದಿತ್ತು. ಆದರೆ ಉತ್ತರ ಭಾರತದತ್ತ ಮನ ಎಳೆದಿತ್ತು. ಐದು ವರ್ಷಗಳ ಮೊದಲು ದೆಹಲಿಯ ಆಸುಪಾಸು ಸ್ವಲ್ಪ ಸಮಯ ಕೆಲಸ ಮಾಡಿದ್ದರೂ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುವ ಅವಕಾಶ ಸಿಕ್ಕಿರಲಿಲ್ಲ. ಮತ್ತೆ ಮದುವೆ, ಮಗು ಆದ ಬಳಿಕ ಆಲ್ಲಿಗೆ ಹೋಗಲಾಗಲಿಲ್ಲ. ಕೆಲಸದಲ್ಲಿ ಇರುವಾಗಲಂತೂ ಮೂರು ನಾಲ್ಕು ದಿನಗಳಿಗಿಂತ ಹೆಚ್ಚು ತಿರುಗಲು ಹೋಗುವುದು ಕನಸಿನ ಮಾತಾಗಿತ್ತು. ಈಗ ಆ ತಲೆನೋವಿಲ್ಲ. ಹದಿನೈದು ದಿನಗಳ ಕಾಲ ಉತ್ತರ ಭಾರತಕ್ಕೆ ಪಯಣ ಎಂದು ನಿರ್ಧರಿಸಿದೆ.

ಮಲೆನಾಡಿನ ಚಿತ್ರಗಳು

- ಅಕ್ಷಯರಾಮ ಕಾವಿನಮೂಲೆ
ಪುಸ್ತಕ: ಮಲೆನಾಡಿನ ಚಿತ್ರಗಳು
ಲೇಖಕರು: ಕುವೆಂಪು
ಬೆಲೆ: ರೂ. 90

ಪಟ್ಟಣದ ಜಂಜಾಟದಿಂದ ಬೇಸರವಾದಾಗ ಒಮ್ಮೊಮ್ಮೆ "ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡುವ" ಎಂದೆನಿಸುತ್ತದೆ. ಬದುಕಿನ ಏಕತಾನತೆಯನ್ನು ಕಳೆಯುವ ಸಾಮರ್ಥ್ಯ ನಮ್ಮ ಹಳ್ಳಿಗಳಿಗಿದೆ. ಸ್ವಚ್ಛ ವಾತಾವರಣ, ಗಡಿಬಿಡಿಯಿಲ್ಲದ ನೆಮ್ಮದಿಯ ಜೀವನ ಇಲ್ಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಷ್ಟು ಆಪ್ಯಾಯಮಾನವೆನಿಸುವ ಹಳ್ಳಿಯ ಬದುಕು ಇಪ್ಪತ್ತನೆಯ ಶತಮಾನದಲ್ಲಿ ಹೇಗಿದ್ದಿರಬಹುದು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 1933ರಲ್ಲಿ ಮೊದಲ ಮುದ್ರಣ ಕಂಡ, ರಾಷ್ಟ್ರಕವಿ ಕುವೆಂಪುರವರ 'ಮಲೆನಾಡಿನ ಚಿತ್ರಗಳು' ಎಂಬ ಪುಟ್ಟ ಪುಸ್ತಕ ಕೈಗೆತ್ತಿಕೊಳ್ಳಬೇಕು.

ಮಂಗನ ಬೇಟೆ

- ಅಕ್ಷಯರಾಮ ಕಾವಿನಮೂಲೆ

ನನ್ನ ಊರಿನಲ್ಲಿ ಕೃಷಿಕರು ನಾಲ್ಕು ಜನ ಜೊತೆ ಸೇರಿದರೆ ಸಾಕು, ಹಳ್ಳಿಬದುಕಿನ ಕಷ್ಟ ಸುಖಗಳ ಮಾತುಕತೆ ಶುರು. "ಮಂಗಂಗೊ ಇದ್ದವಾ ಭಾವಾ?" ಮೊದಲ ಪ್ರಶ್ನೆಯೇ ಮಂಗಗಳ ಬಗ್ಗೆ. "ಎಂಗಳಲ್ಲಿ ವಿಪರೀತ ಮಂಗಂಗೊ. ಬೊಂಡ, ಕೊಕ್ಕೋ, ಬಾಳೆ, ಅಡಕೆ ಒಂದೂ ಒಳುಶುತ್ತವಿಲ್ಲೆ" ಗೋಳಿನ ಕತೆ ಎಲ್ಲರ ಬಾಯಲ್ಲಿ. ಸಭೆ ಸಮಾರಂಭಗಳಲ್ಲಿ ಬಿಸಿಬಿಸಿ ಚರ್ಚಾ ವಿಷಯ ಇದು!

ಮೋಹನ ಸ್ವಾಮಿ


-ಅಕ್ಷಯರಾಮ ಕಾವಿನಮೂಲೆ
ಲೇ: ವಸುಧೇಂದ್ರ
ಬೆಲೆ: ರೂ.180

ವಸುಧೇಂದ್ರ ಅವರ ಕೃತಿಗಳು ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಇದ್ದಂತೆ ! ಒಮ್ಮೆ ತೆರೆದು ಕೈಯಲ್ಲಿ ಹಿಡಿದು ಒಂದು ಮೂಲೆಯಲ್ಲಿ ಕುಳಿತರೆ, ಮುಗಿಯುವ ವರೆಗೆ ಇನ್ಯಾವುದೇ ಐಹಿಕ ವಿಷಯಗಳ ಕಡೆ ಮನಸ್ಸು ಹರಿಯುವುದೇ ಇಲ್ಲ. ಅವರ ಅಕ್ಷರಗಳಿಗೆ ಇರುವ ಅಯಸ್ಕಾಂತೀಯ ಗುಣದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

ಮನಸ್ಸಿದ್ದರೆ ಮಾರ್ಗ

-ಅಕ್ಷಯರಾಮ ಕಾವಿನಮೂಲೆ

"ಛೇ, ಯಾವಾಗಲೂ ಇದೇ ಗೋಳು, ಎಲ್ಲರಲ್ಲೂ 'ದಂಡಪಿಂಡ' ಎಂದು ಬೈಸಿಕೊಂಡಾಯ್ತು. ನನ್ನ ಹಣೆಬರಹವೇ ಇಷ್ಟು!" ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ. ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅತನದೇ ಹತ್ತು ಹಲವು ಕಲ್ಪನೆ, ಭಾವನೆಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಈಜು, ಅಲೆದಾಟಗಳೇ ಅಚ್ಚುಮೆಚ್ಚು ! ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಅನವರತ ಆಹಾರವಾಗಿದ್ದ. ಆತನ ಬಗ್ಗೆ ನಾಲ್ಕು ಚುಚ್ಚುಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು.

ಬೈಹುಲ್ಲು ಖಾದ್ರಿ

-ಅಕ್ಷಯರಾಮ ಕಾವಿನಮೂಲೆ

ಇತ್ತೀಚೆಗೆ ಕೊಂಡ ಶ್ರೀ ನರೇಂದ್ರ ರೈ ದೇರ್ಲ ಅವರ 'ಹಸಿರು ಕೃಷಿಯ ನಿಟ್ಟುಸಿರುಗಳು' ಪುಸ್ತಕದ ಪುಟಗಳನ್ನು ತಿರುವುತ್ತಿದ್ದಾಗ ಮಾಡಾವು ಉಸ್ಮಾನ್ ಬ್ಯಾರಿಯ ಲಾರಿ ಬಗ್ಗೆ ಒಂದು ಲೇಖನ ಕಂಡಿತು. "ಅರೇ, ನಾವು ಸಣ್ಣದಿದ್ದಾಗ ಮನೆಗೆ ಬೈಹುಲ್ಲು ತರುತ್ತಿದ್ದ ಜನ ಅಲ್ವಾ ?" ಎಂದು ಅಪ್ಪನ ಹತ್ತಿರ ಹೇಳಿದಾಗ "ಹೌದು, ಆದರೆ ಉಸ್ಮಾನಿನ ಅಪ್ಪ ಖಾದ್ರಿಯ ಬಗ್ಗೆಯೂ ಬರೆಯಬೇಕಿತ್ತು, ಒಳ್ಳೆಯ ಮನುಷ್ಯ" ಎನ್ನುವ ಉದ್ಗಾರ ಬಂತು.

ದ್ವೀಪ ಸಮೂಹದ ಕಥೆ

-ಅಕ್ಷಯರಾಮ ಕಾವಿನಮೂಲೆ

ಲೇ: ಜಿ.ಎನ್. ಅಶೋಕವರ್ಧನ 
ಬೆಲೆ: 75 ರೂಪಾಯಿಗಳು

ಅಂಡಮಾನ್ ದ್ವೀಪಗಳು ನಿಜಕ್ಕೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯದ ಖನಿಗಳು. ವರ್ಷಕ್ಕೆ ಅದೆಷ್ಟೋ ಲಕ್ಷ ಮಂದಿ ಪ್ರವಾಸಿಗರು ಅಂಡಮಾನಿನ ಪರಿಸರದ ಸವಿಯುಂಡು ಬರುತ್ತಾರೆ ಆದರೆ ಆ ರಮ್ಯಾದ್ಭುತ ಅನುಭವವನ್ನು ಅಕ್ಷರಕ್ಕಿಳಿಸುವ ಸತ್ಕಾರ್ಯ ಮಾಡಿದವರು ಬಹಳ ವಿರಳ ! ತೇಜಸ್ವಿಯವರ 'ಅಲೆಮಾರಿಯ ಅಂಡಮಾನ್' ಓದಿ, ಈ ದ್ವೀಪರಾಶಿಯ ಬಗ್ಗೆ ಆಸಕ್ತರಾಗದವರಿಲ್ಲ.