- ಅಕ್ಷಯರಾಮ ಕಾವಿನಮೂಲೆ
ಕುಫ್ರಿಯ ತುದಿಯಲ್ಲಿ
ಕುಫ್ರಿಯ ತುದಿ ತಲುಪಿದಾಗ ಅದಾಗಲೇ ಸೂರ್ಯಾಸ್ತವಾಗಿತ್ತು. ಹಿಮಾಚಲದ
ಗಿರಿಶೃಂಗಗಳು ಓಕುಳಿಯಾಡಿ ಕೆಂಪೇರಿದ್ದವು. ಅಲ್ಲೊಂದು ಪುಟ್ಟ ದೇವಸ್ಥಾನ.
ಸುತ್ತಮುತ್ತಲಿನ ಅಂಗಡಿಗಳು ಅದಾಗಲೇ ಮುಚ್ಚತೊಡಗಿದ್ದವು. ವಿರಳವಾಗಿದ್ದ
ಜನಸಂದಣಿಯಿಂದಾಗಿ ತುಸು ಹೊತ್ತು ಪ್ರಶಾಂತವಾಗಿ ಸೂರ್ಯಾಸ್ತದ ಚೆಲುವನ್ನು ಅಸ್ವಾದಿಸಲು
ಸಾಧ್ಯವಾಯಿತು. ಮಂಜಿನ ಸಿಂಚನದ ಜೊತೆ ಜೋರಾಗಿ ಬೀಸುತ್ತಿದ್ದ ಕುಳಿರ್ಗಾಳಿ ನಮ್ಮನ್ನು
ಹೆಚ್ಚು ಹೊತ್ತು ಅಲ್ಲಿರಲು ಬಿಡಲಿಲ್ಲ. ನಡುಗುತ್ತಾ ಕುದುರೆಯೇರಿ ಮುಖ್ಯ ರಸ್ತೆಯತ್ತ
ಹೊರಟೆವು.
ಮರುದಿನವೂ ನಾವು ರಾಜೇಶನ ಕಾರು ಸವಾರಿ ಮುಂದುವರಿಸಿದೆವು. ಮೊದಲು
ತಲುಪಿದ್ದು ವೈಸ್ ರಾಯ್ ಬಂಗಲೆಗೆ. ಅದೊಂದು ಪುರಾತನ ಮಹಲು. ಬ್ರಿಟೀಷರ ವೈಭವದ ಕುರುಹಾಗಿ
ನಿಂತಿದೆ. ಹದಿನೆಂಟನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ಕಟ್ಟಡ ಇಂದು ಭಾರತೀಯ ಮುಂದುವರಿದ ವಿಷಯಗಳ ಅಧ್ಯಯನ ಕೇಂದ್ರವಾಗಿ (Indian Institute of Advanced Studies -
IIAS) ಮಾರ್ಪಟ್ಟಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿವಿಧ ಕಾಂಗ್ರೆಸ್
ಮುಖಂಡರು ವೈಸ್ ರಾಯ್ ಭೇಟಿಯಾಗುತ್ತಿದ್ದ ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೆ. ಬಾಂಗ್ಲಾ
ವಿಮೋಚನಾ ಯುದ್ಧದ ಬಳಿಕ ಭಾರತ ಪಾಕಿಸ್ತಾನದ ಮಧ್ಯೆ ಏರ್ಪಟ್ಟ ಶಿಮ್ಲಾ ಒಪ್ಪಂದಕ್ಕೆ ಸಹಿ
ಹಾಕಿದ್ದು ಇಲ್ಲಿಯೇ. ಒಂದೆರಡು ಕೊಠಡಿಗಳು ಮಾತ್ರ ಸಾರ್ವಜನಿಕ ಭೇಟಿಗೆ ಮುಕ್ತ.
ಇನ್ನುಳಿದದ್ದು ಅಧ್ಯಯನ ಕೇಂದ್ರದ ಭಾಗಗಳು. ತೇಗದ ಮರದಿಂದ ಮಾಡಿದ ಗೋಡೆ, ಮಾಡು, ಕಿಟಕಿ,
ಬಾಗಿಲುಗಳು ವೈಭವಯುತವಾಗಿವೆ. ಬೆಂಕಿಯಿಂದ ರಕ್ಷಣೆ ನೀಡಲು ಅಂದು ಮಾಡಿದ ಅಗ್ನಿಶಾಮಕ
ವ್ಯವಸ್ಥೆ ಇಂದಿಗೂ ಸರಿಯಾಗಿ ಕೆಲಸ ಮಾಡುತ್ತಿದೆಯಂತೆ ! ಹೊರಗಿನ ಸುಂದರ ಉದ್ಯಾನದಲ್ಲಿ
ಒಂದಷ್ಟು ಅಡ್ಡಾಡಿದೆವು, ಅಲ್ಲಿನ ಇತಿಹಾಸ ತಿಳಿಸುವ ಕಿರುಪುಸ್ತಕವನ್ನೂ ಕೊಂಡೆವು. ಮಳೆ ಸಣ್ಣಗೆ ಹನಿಯುತ್ತಿತ್ತು.
ಪಕ್ಕದಲ್ಲೇ ಇರುವ ಹಿಮಾಲಯದ ಹಕ್ಕಿಗಳ ಸಂಗ್ರಹಾಲಯದೊಳಗೆ ಹೋದೆವು.
ಪುಟ್ಟದಾದರೂ ಸುಂದರವಾಗಿದ್ದ ಗೂಡಿನ ಒಳಗೆ ಪಕ್ಷಿಗಳನ್ನು ಅತೀ ಸಮೀಪದಿಂದ ನೋಡುವ
ವ್ಯವಸ್ಥೆ. ಮೋಡ ದಟ್ಟೈಸಿ ಮಳೆಹನಿಗಳ ಸಿಂಚನವಾದ್ದರಿಂದ ಅಲ್ಲಿದ್ದ ಗಂಡು ನವಿಲೊಂದು
ಗರಿಬಿಚ್ಚಿ ನರ್ತಿಸುತ್ತಿತ್ತು. ಕೈಗೆಟಕುವಷ್ಟು ಹತ್ತಿರದಲ್ಲಿ ಪಕ್ಷಿಗಳನ್ನು ಕಂಡು
ಮಗಳಿಗಂತೂ ಸಡಗರ. ಬಣ್ಣ ಬಣ್ಣದ ಹಕ್ಕಿಗಳನ್ನು ಕಣ್ತುಂಬಿಕೊಂಡು ಹೊರಬಂದೆವು.
ಮುಂದಿನ ಪಯಣ ಸೇನಾ ವಸ್ತು ಸಂಗ್ರಹಾಲಯಕ್ಕೆ. ಭಾರತದ ಭೂಸೇನೆಯ ವಿವಿಧ
ಕಾಲಮಾನಗಳ ವೈವಿಧ್ಯಮಯ ಸಮವಸ್ತ್ರಗಳನ್ನು ಧರಿಸಲ್ಪಟ್ಟ ಮಾನವ ಗಾತ್ರದ ಗೊಂಬೆಗಳು,
ಪದಕಗಳು, ಬ್ಯಾಡ್ಜುಗಳು, ಸೇನಾ ವಾದ್ಯಗಳು, ವಿವಿಧ ಬಗೆಯ ಬಂದೂಕುಗಳು, ಖಡ್ಗಗಳು ಮತ್ತು
ಹಲವಾರು ವರ್ಣಚಿತ್ರಗಳು ಮನದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದವು. ಪಕ್ಕದಲ್ಲಿಯೇ ಸೇನಾ
ಸಿಬ್ಬಂದಿಗಾಗಿಯೇ ಇರುವ ವಿಶಾಲ ಗಾಲ್ಫ್ ಮೈದಾನ. ತುದಿಯಲ್ಲೊಂದು ಹೆಲಿಪ್ಯಾಡ್,
ಅಲ್ಲೊಂದಿಷ್ಟು ಗಡಿಬಿಡಿಯ ವಾತಾವರಣ, ಸೈರನ್ ಮೊಳಗಿಸುತ್ತಾ ಧಾವಿಸಿದ ಕಾರುಗಳು.
"ಏನಾಯಿತೋ ಏನೋ ?" ಎಂದುಕೊಂಡೆವು. ಅಲ್ಲಿನ ರಮ್ಯ ಉದ್ಯಾನವನದಲ್ಲಿ ಒಂದಷ್ಟು ಹೊತ್ತು
ವಿರಮಿಸಿ ಹೊರಬಂದಾಗ ಡ್ರೈವರ್ ರಾಜೇಶ್ ನಿಂದ ತಿಳಿಯಿತು, ಹೆಲಿಕಾಪ್ಟರಿನಲ್ಲಿ
ಬಂದಿಳಿದದ್ದು ಹಿಮಾಚಲದ ಮುಖ್ಯಮಂತ್ರಿ ! ಶಿಮ್ಲಾದಲ್ಲಿ ಸರಿಯಾದ ಹೆಲಿಪ್ಯಾಡ್ ಇರುವುದು
ಇಲ್ಲಿ ಮಾತ್ರ. ಸೇನೆಯ ಉಪಯೋಗಕ್ಕಾಗಿ ನಿರ್ಮಾಣವಾದ ಹೆಲಿಪ್ಯಾಡ್ ರಾಜಕಾರಣಿಗಳ ಸವಾರಿಗೆ
ಬಳಸಲ್ಪಡುತ್ತಿದೆ ! ಶಿಮ್ಲಾದ ಉನ್ನತ ಶಿಖರವಾದ 'ಝಕ್ಕೂ' ಕಡೆ ಸಾಗಿತು ನಮ್ಮ ಪಯಣ.
ಇಲ್ಲಿರುವ ಹನುಮಂತನ ಅತಿ ದೊಡ್ಡ ವಿಗ್ರಹವನ್ನು ಶಿಮ್ಲಾದೆಲ್ಲೆಡೆಯಿಂದ ಕಾಣಬಹುದು.
ಗುಡ್ಡದ ತುದಿಯ ಹನುಮಾನ್ ದೇಗುಲದ ಸುತ್ತ ವಾನರ ಸೈನ್ಯವೇ ತುಂಬಿತ್ತು. ಕೈಗೆ
ಸಿಕ್ಕಿದ್ದನ್ನು ಕದಿಯುತ್ತಾ, ತಿಂಡಿ ತಿನಿಸುಗಳಿಗಾಗಿ ಪ್ರವಾಸಿಗಳನ್ನು ಕಾಡುತ್ತಾ
ಸುಳಿಯುತ್ತಿದ್ದ ನೂರಾರು ಕಪಿಗಳು. ಡ್ರೈವರ್ ನ ಸೂಚನೆಯಂತೆ ಕ್ಯಾಮರಾ ಹೊರತು
ಇನ್ನೇನನ್ನೂ ಒಯ್ಯಲೇ ಇಲ್ಲ. ತಮಾಷೆಯೆಂದರೆ ಇಲ್ಲಿ ಮಂಗಗಳನ್ನು ಬೆದರಿಸಲು ಕೋಲುಗಳೂ ಬಾಡಿಗೆಗೆ ಸಿಗುತ್ತವೆ !!
ಸಂಜೆಯಾದಂತೆ ಹೆಚ್ಚಿದ ಚಳಿ ಗಾಳಿಗೆ ನಡುಗುತ್ತಾ ಮಾಲ್ ರೋಡಿನತ್ತ
ತೆರಳಿದೆವು. ಮಾಲ್ ನೊಳಗೆ ವಾಹನ ಪ್ರವೇಶವಿರದ ಕಾರಣ ಸಾರ್ವಜನಿಕರಿಗಾಗಿಯೇ ನಿರ್ಮಿಸಿದ
ಲಿಫ್ಟ್ ಬಳಿ ನಮ್ಮನ್ನು ಇಳಿಸಿ ಡ್ರೈವರ್ ರಾಜೇಶ್ ಪಾರ್ಕಿಂಗಿಗಾಗಿ ಹೊರಟ. ಟಿಕೆಟ್
ಪಡೆದು ಲಿಫ್ಟೇರಿ ಹೊರಟೆವು. ಸಂಜೆಯ ಹೊತ್ತಿಗೆ ಮಾಲ್ ನ ರಸ್ತೆ, ದೀಪಗಳಿಂದ ಸಿಂಗರಿಸಿಕೊಂಡು
ಕುಳಿತಿತ್ತು. ಬಿರುಸಿನ ವ್ಯಾಪಾರದ ಹೊತ್ತದು. ಹಿಮಾಚಲದ ಕರಕುಶಲ ವಸ್ತುಗಳಿಂದ ಹಿಡಿದು
ಆಧುನಿಕ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ತನಕ ಎಲ್ಲವೂ ಇಲ್ಲಿ ಲಭ್ಯ. ವಿವಿಧ ತಿಂಡಿ,
ಆಹಾರೋತ್ಪನ್ನಗಳನ್ನು ತಯಾರಿಸುವ ಮಳಿಗೆಗಳು ಅಲ್ಲಲ್ಲಿ ಘಮಘಮಿಸುತ್ತಿದ್ದವು. ಚಳಿ ಗಾಳಿಯ
ಜೊತೆಗೆ ಮಳೆ ಹನಿಹಾಕತೊಡಗಿತು. ಜನ ಬೇಗ ಬೇಗನೆ ಹೆಜ್ಜೆ ಹಾಕತೊಡಗಿದರು. ನಾವೂ
ಗಡಿಬಿಡಿಯಿಂದ ಸಾಗಿ ಮಳೆಯಿಂದ ತಪ್ಪಿಸಿಕೊಳ್ಳಲು ತಿಂಡಿಭಂಡಾರವೊಂದರ ಒಳಗೆ
ಸೇರಿಕೊಂಡೆವು. ಬಿಸಿಬಿಸಿ ಪಾವ್ ಭಾಜಿ, ಚಾಟ್ ಮಸಾಲಾಗಳಿಗೆ ಮೋಕ್ಷ ಕರುಣಿಸಿದ್ದೂ
ಆಯಿತು. ರಾಶಿ ರಾಶಿ ಜಿಲೇಬಿಯನ್ನು ದೊಡ್ಡ ಲೋಟದೊಳಗೆ ತುಂಬಿಸಿ, ಭರ್ತಿ ಬಿಸಿ
ಹಾಲೆರೆದುಕೊಂಡು ಸವಿಯುತ್ತಾ ಕುಳಿತಿದ್ದ ಹಿಮಾಚಲಿಗರನ್ನು ನೋಡಿಯೇ ಹೊಟ್ಟೆ
ತುಂಬಿದಂತಾಯಿತು. ಮಳೆಹನಿಗಳು ಕಡಿಮೆಯಾದಂತೆ ಅಲ್ಲಿಂದ ಮೆಲ್ಲಗೆ ಹೊರಟು ರಾಜೇಶ್ ಗೆ
ಕರೆಮಾಡಿ ಬರಹೇಳಿದೆವು. ಸಮಯದ ಅಭಾವ ಮತ್ತು ಮಳೆಯಿಂದಾಗಿ ಪೂರ್ತಿ ಮಾಲ್ ಸುತ್ತುವ ಭಾಗ್ಯ
ಸಿಗಲಿಲ್ಲ.
ಮಾಲ್ ರಸ್ತೆಯಿಂದಿಳಿದು ಮುಖ್ಯ ರಸ್ತೆಗೆ ಬಂದರೂ ಕಾರಿನ ಪತ್ತೆಯಿಲ್ಲ !
"ಪಾಂಚ್ ಮಿನಿಟ್ ಮೆ ಪಹುಂಚ್ ರಹಾ ಹೂ" ಅಂದವನು ಮುಕ್ಕಾಲು ಗಂಟೆ ನಂತರ ಬಂದ. ಕಿರಿದಾದ
ಶಿಮ್ಲಾದ ರಸ್ತೆಗಳು ಸಂಜೆಯ ವಾಹನದಟ್ಟಣೆಯಿಂದ ಉಸಿರುಗಟ್ಟಿದ್ದವು. ಮಳೆಯೂ ಅದಕ್ಕೆ ಸಾಥ್
ಕೊಟ್ಟಿತ್ತು. ಅಂತೂ ಹೋಟೆಲಿಗೆ ಬಂದು ಸ್ವಲ್ಪ ಸುಧಾರಿಸಿಕೊಂಡೆವು. ಬೆಳಗ್ಗೆಯೇ ಹೋಟಲಿನ
ಲೆಕ್ಕ ಚುಕ್ತಾ ಮಾಡಿದ್ದರೂ ಸ್ವಲ್ಪಹೊತ್ತಿನ ಮಟ್ಟಿಗೆ ಬೇರೊಂದು ರೂಮು ಕೊಡುವ ಅವರ
ಸೌಜನ್ಯ, ಹೃದಯ ಗೆದ್ದಿತ್ತು. ರಾತ್ರಿ ಊಟ ಮುಗಿಸಿ ಹೊರಟ ನಮ್ಮನ್ನು ರಾಜೇಶ್ ಬಸ್
ನಿಲ್ದಾಣಕ್ಕೆ ತಲುಪಿಸಿ ಬೀಳ್ಕೊಟ್ಟ. ಪ್ರವಾಸೋದ್ಯಮಕ್ಕೆ ಬೆಲೆಕೊಡುವ ಹಿಮಾಚಲದಲ್ಲಿ
ಅಲ್ಲಿನ ಜನರು ಪ್ರವಾಸಿಗರ ಜೊತೆ ವರ್ತಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ದೆಹಲಿಗೆ
ಹೊರಡುವ ವೋಲ್ವೋ ಹತ್ತಿ ಕಾಲು ಚಾಚಿದೆವು. ಮರುದಿನ ಬೆಳಗಿನ ಜಾವ ದೆಹಲಿಯಲ್ಲಿದ್ದೆವು.
ಮತ್ತೊಮ್ಮೆ ದೆಹಲಿಯಲ್ಲಿ
ಗುರ್ಗಾಂವಿನ ಮಿತ್ರ ಶ್ರೀನಿವಾಸ ಮೂರ್ತಿಯವರ ಮನೆ ತಲುಪಿ ಸ್ನಾನಾದಿಗಳನ್ನು ಮುಗಿಸಿ ಅಕ್ಷರಧಾಮ ನೋಡಹೊರಟೆವು. ನಮ್ಮೆಲ್ಲಾ ವಸ್ತುಗಳನ್ನು ಅಲ್ಲಿರುವ ಕ್ಲಾಕ್ ರೂಮಿನಲ್ಲಿಟ್ಟು, ತೀವ್ರವಾದ ಭದ್ರತೆಯ ತಪಾಸಣೆಗೊಳಪಟ್ಟು, ದೇಗುಲ ಸಂಕೀರ್ಣದೊಳಗೆ ತಲುಪಿದೆವು.
ಗುರ್ಗಾಂವಿನ ಮಿತ್ರ ಶ್ರೀನಿವಾಸ ಮೂರ್ತಿಯವರ ಮನೆ ತಲುಪಿ ಸ್ನಾನಾದಿಗಳನ್ನು ಮುಗಿಸಿ ಅಕ್ಷರಧಾಮ ನೋಡಹೊರಟೆವು. ನಮ್ಮೆಲ್ಲಾ ವಸ್ತುಗಳನ್ನು ಅಲ್ಲಿರುವ ಕ್ಲಾಕ್ ರೂಮಿನಲ್ಲಿಟ್ಟು, ತೀವ್ರವಾದ ಭದ್ರತೆಯ ತಪಾಸಣೆಗೊಳಪಟ್ಟು, ದೇಗುಲ ಸಂಕೀರ್ಣದೊಳಗೆ ತಲುಪಿದೆವು.
ಸ್ವಾಮಿನಾರಾಯಣ ಪಂಥದವರು ನಿರ್ಮಿಸಿದ ಈ ದೇಗುಲ ಭಾರತದ ಎಲ್ಲಾ ರೀತಿಯ
ಪುರಾತನ ವಾಸ್ತುಶಿಲ್ಪಗಳನ್ನು ಆಧರಿಸಿದೆ. ಅಮೃತಶಿಲೆಯನ್ನು ಬಳಸಿ ಕೆತ್ತಿದ ಶಿಲ್ಪಗಳು
ಗೋಡೆ, ಛಾವಣಿ ಪೂರ್ತಿ ಆವರಿಸಿಕೊಂಡಿದ್ದವು. ಒಂದು ಚದುರಡಿಯನ್ನೂ ಖಾಲಿ ಬಿಡದ
ನಿರ್ಮಾಣವದು. ಎತ್ತ ನೋಡಿದರತ್ತ ಕೆತ್ತನೆಗಳು. ಸುತ್ತಲೂ ನೀರ ಕೊಳ. ಆಧ್ಯಾತ್ಮಕ್ಕೆ ಸಂಬಂಧಿಸಿದ ಚಲನಚಿತ್ರ ಪ್ರದರ್ಶನಾಲಯ, ಮಾರಾಟ ಮಳಿಗೆ, ಅತ್ಯುತ್ತಮ ಆಹಾರ ಮಳಿಗೆಗಳು, ಸುಂದರ
ಉದ್ಯಾನ. ಮೊಬೈಲ್, ಕ್ಯಾಮರಾ ಯಾವುದನ್ನೂ ಒಳಗೊಯ್ಯುವ ಹಾಗಿರದ ಕಾರಣ ಛಾಯಾಚಿತ್ರ
ತೆಗೆಯಲು ಸಾಧ್ಯವಿರಲಿಲ್ಲ. ಹಣ ತೆತ್ತರೆ ದೇಗುಲದ ಮುನ್ನಲೆಯಲ್ಲಿ ನಿಲ್ಲಿಸಿ ನಮ್ಮ
ಛಾಯಾಚಿತ್ರ ತೆಗೆದು ಒಂದರ್ಧ ಗಂಟೆಯೊಳಗೆ ಮುದ್ರಿಸಿ ಕೊಡುವ ವ್ಯವಸ್ಥೆ ಇಲ್ಲಿದೆ. ಫೋಟೋ
ತೆಗೆಸಿಕೊಂಡು, ಆಹಾರ ಮಳಿಗೆಗೆ ಲಗ್ಗೆಯಿಟ್ಟೆವು. ಒಂದಷ್ಟು ಐಸ್ ಕ್ರೀಮ್ ಸವಿದು, ಮಾರಾಟ
ಮಳಿಗೆಗೆ ಹೋಗಿ ಅಷ್ಟರಲ್ಲಾಗಲೇ ಮುದ್ರಿಸಿ ಸಿದ್ಧವಾಗಿದ್ದ ನಮ್ಮ ಛಾಯಾಚಿತ್ರ
ಪಡೆದುಕೊಂಡೆವು. ದೇಗುಲದ ಬಗ್ಗೆ ತಿಳಿಸುವ ಮಾಹಿತಿ ಪುಸ್ತಕ, ಧೂಪಗಳನ್ನು ಕೊಂಡೆವು.
ಮರಳಿ ಮೆಟ್ರೋ ನಿಲ್ದಾಣಕ್ಕೆ ತಲುಪಿ ಗುರ್ಗಾಂವ್ ಕಡೆಗೆ ಹೊರಟೆವು. ಮಿತ್ರರಾದ
ಮೂರ್ತಿಯವರ ಮನೆ ತಲುಪಿ ದಂಪತಿಗಳೊಂದಿಗೆ ಒಂದಷ್ಟು ಹರಟಿ, ಊಟ ಮಾಡಿ ಸುಖನಿದ್ರೆಗೆ
ಜಾರಿದೆವು.
ಮರುದಿನದ ಪಯಣ ಆಗ್ರಾದತ್ತ. ಸರಾಯ್ ಕಾಲೇಖಾನ್ ಬಸ್ ನಿಲ್ದಾಣಕ್ಕೆ
ಟ್ಯಾಕ್ಸಿಯಲ್ಲಿ ತಲುಪಿ ಉತ್ತರಪ್ರದೇಶ ಸಾರಿಗೆಯ ವೋಲ್ವೋ ಏರಿದೆವು. ನೋಯ್ಡಾದತ್ತ ಹೊರಟು
ಯಮುನಾ ಎಕ್ಸ್ಪ್ರೆಸ್ ಹೆದ್ದಾರಿಯ ಮೂಲಕ ಆಗ್ರಾದ ಕಡೆ ಸಾಗಿತು ನಮ್ಮ ಪಯಣ.
ವೇಗನಿಯಂತ್ರಕ ಅಳವಡಿಸಿದ ಕಾರಣವೋ ಏನೋ ವೋಲ್ವೋ ಏದುಸಿರು ಬಿಡುತ್ತಾ ನಿಧಾನವಾಗಿ
ಚಲಿಸುತ್ತಿತ್ತು. ಎಕ್ಸ್ಪ್ರೆಸ್ ವೇಯಲ್ಲಿ ವಾಯುವೇಗದಲ್ಲಿ ಸಾಗುವ ವಾಹನಗಳ ಬಗ್ಗೆ
ಯೂಟ್ಯೂಬಿನಲ್ಲಿ ನೋಡಿದ್ದ ನನಗೆ ನಮ್ಮ ವೋಲ್ವೋ ಕೂಡಾ ಅದ್ಭುತ ಸವಾರಿ ಮಾಡಬಹುದು ಎಂಬ
ಆಸೆಯಿತ್ತು, ಆದರೆ ಈ ವಾಹನದ ವೇಗ ಕಂಡು ನಿರಾಸೆಯಾಯಿತು.
ಮಾರ್ಗ ಮಧ್ಯೆ ಚಹಾಕ್ಕೆಂದು ಒಂದು ಢಾಬಾ ಬಳಿ ನಿಲ್ಲಿಸಿದರು. ವಿಶಾಲವಾದ
ವಾಹನ ನಿಲುಗಡೆ, ಮಂಜು ಮುಸುಕಿದ ವಾತಾವರಣ, ಚುಮುಚುಮು ಚಳಿ. ಮೂರ್ನಾಕು ಮಂದಿ ತಮ್ಮ
ಸೂಪರ್ ಬೈಕುಗಳಲ್ಲಿ ಬುರ್ರೋ ಎಂದು ಶಬ್ದ ಮಾಡುತ್ತಾ ಅವರವರ ಚಾಲನಾ ಸಾಮರ್ಥ್ಯ,
ವೇಗವನ್ನು ಪ್ರದರ್ಶಿಸುತ್ತಿದ್ದರು. ಜನ ಅವರನ್ನು ಕ್ಯಾಮರಾದುಂಬಿಸಿಕೊಳ್ಳುತ್ತಿದ್ದರು !
ಢಾಬಾದ ಬಾಗಿಲಲ್ಲೇ ರಾಜಸ್ಥಾನಿ ಪೋಷಾಕು ಧರಿಸಿದ ಒಬ್ಬ ವ್ಯಕ್ತಿ ಪಿಟೀಲಿನಂತಹ ವಾದ್ಯ
ನುಡಿಸುತ್ತಾ ಹಾಡುತ್ತಿದ್ದ. ಅವನೊಂದಿಗೆ ಪುಟ್ಟ ಹುಡುಗಿಯೊಬ್ಬಳು ಕುಣಿಯುತ್ತಿದ್ದಳು.
ನೋಡಲು ಭಿಕ್ಷುಕರಂತೇನೂ ಕಾಣಲಿಲ್ಲ ! ಬಹುಷಃ ಗ್ರಾಹಕರನ್ನು ಆಕರ್ಷಿಸಲು ಢಾಬಾದವರೇ
ನಿಲ್ಲಿಸಿರಬೇಕು ಎಂದುಕೊಂಡೆ. ಪಕ್ಕದಲ್ಲೇ ಇದ್ದ ಅಂಗಡಿಯವನ ಬಳಿ ವಿಚಾರಿಸಿದಾಗ ಅವರು
ಹೊಟ್ಟೆ ಪಾಡಿಗಾಗಿ ಹಾಡಿ ನಲಿದು ಜೀವಿಸುವವರು. ನನ್ನ ಮಗಳಾಗಲೇ ಆ ಪುಟ್ಟ ಹುಡುಗಿಯ ಜೊತೆ
ಖುಷಿಯಿಂದ ಕುಣಿಯತೊಡಗಿದ್ದಳು. ಆ ಸಂತಸದ ಕ್ಷಣಗಳನ್ನು ಕ್ಯಾಮರಾದಲ್ಲಿ
ದಾಖಲಿಸಿಕೊಂಡೆವು. ಬಸ್ ಹೊರಡುವ ಸಮಯ ಬಂತು, ಆ ಪುಟ್ಟ ನರ್ತಕಿಯ ಕೈಗೊಂದಿಷ್ಟು ಕಾಸು
ಕೊಟ್ಟು ಬೀಳ್ಕೊಂಡೆವು. ವೋಲ್ವೋ ಮತ್ತೆ ನಿಧಾನವಾಗಿ ಆಗ್ರಾದ ಕಡೆ ಮುಂದುವರಿಯಿತು.
ಆಗ್ರಾದಲ್ಲಿ
ಮಧ್ಯಾಹ್ನದ ಹೊತ್ತಿಗೆ ಆಗ್ರಾದ ಹೊರವಲಯ ತಲುಪಿ, ವಾಹನ ಸಂದಣಿಯಲ್ಲಿ ಬಂಧಿಯಾಯಿತು ಬಸ್ಸು
! ವಾರಾಂತ್ಯ ಬೇರೆ, ಆಗ್ರಾದಲ್ಲಿ ವಾಹನಗಳ ಸಂಖ್ಯೆ ಹೆಚ್ಚು. ತಾಜ್ ವೀಕ್ಷಣೆಗೆ ಸಹಸ್ರಾರು
ಕಾರು, ಬಸ್ಸುಗಳು ಬಂದು ಆಗ್ರಾದ ರಸ್ತೆಗಳು ತುಂಬಿ ಹೋಗುತ್ತವೆ. ನಾವು ಉಳಿದುಕೊಳ್ಳುವ
ಹೋಟೇಲಿನ ಸಿಬ್ಬಂದಿಗೆ ಮೊದಲೇ ಮಾತನಾಡಿದ್ದರಿಂದ ಬಸ್ಸಿನಿಂದ ಇಳಿಯುವ ಸ್ಥಳ
ತಿಳಿದುಕೊಂಡಿದ್ದೆವು. ಅಲ್ಲಿಂದ ಆಟೋವೊಂದರಲ್ಲಿ ಹೋಟಲಿನತ್ತ ಹೊರಟೆವು. ತಾಜ್ ಮಹಲಿನ
ಪಶ್ಚಿಮ ಗೇಟಿನ ಬಳಿಯೇ ಇತ್ತು ಹೋಟೆಲ್. ತಾಜ್ ನ ಸಮೀಪದಲ್ಲಿ ವಾಹನ ಸಂಚಾರ ನಿಷೇಧವಿರುವ
ಕಾರಣ ಹೋಟೆಲಿನಿಂದ ತುಸು ದೂರವೇ ಇಳಿಸದ ಆಟೋವಾಲಾ. ಹೋಟೆಲ್ ಸೇರಿ ಹೊಟ್ಟೆ ಗಟ್ಟಿ
ಮಾಡಿಕೊಂಡೆವು. ತುಸು ಸುಧಾರಿಸಿ ಸಂಜೆ ತಾಜ್ ಮಹಲ್ ನೋಡ ಹೊರಟೆವು. ಸೂರ್ಯಾಸ್ತದ ಬಳಿಕ
ಒಳ ಪ್ರವೇಶವಿಲ್ಲ ಎಂಬುದನ್ನು ತಿಳಿದಿದ್ದ ನಾವು ಗಡಿಬಿಡಿಯಲ್ಲಿ ಟಿಕೆಟ್ ಕೊಂಡು, ಉದ್ದದ
ಸಾಲಿನಲ್ಲಿ ನಿಂತು ಭದ್ರತಾ ತಪಾಸಣೆ ಮುಗಿಸಿ ಒಳಬಂದು ನೋಡಿದರೆ ಜನಸಾಗರವೇ
ತುಂಬಿಕೊಂಡಿದೆ. ವಾರಾಂತ್ಯದ ಪ್ರಭಾವದಿಂದ ಜನಪ್ರವಾಹ ! ತಾಜ್ ಮುಂದಿನ ಅಮೃತಶಿಲೆಯ
ಬೆಂಚುಗಳಂತೂ ಜನ ಕೂತೆದ್ದು ಬಿಸಿಯಾಗಿ ಹೋಗಿದ್ದವು. ತಾಜ್ ನ ಒಳ ಹೋಗಲಂತೂ ಎರಡು
ಕಿಲೋಮೀಟರ್ ನಷ್ಟು ಉದ್ದದ ಸಾಲು ಸರದಿಯಲ್ಲಿ ಕಾಯುತ್ತಿತ್ತು. ಹೋಗಲಿ ಹೊರಗಿನಿಂದಲೇ
ಫೋಟೋ ತೆಗೆದುಕೊಳ್ಳೋಣ ಎಂದರೆ ಯಾವ ಕೋನದಲ್ಲಿ ನಿಂತರೂ ಇನ್ನೊಬ್ಬರ ಮುಖ, ಬೆನ್ನು, ಕೈ,
ಕಾಲು ಅಡ್ಡಬರುತ್ತಿತ್ತು ! ಬೇಸರಗೊಂಡು ಉದ್ಯಾನವನದಲ್ಲಿ ಒಂದಷ್ಟು ಅಡ್ಡಾಡಿ ಹೊರಟೆವು.
ಹೇಗಿದ್ದರೂ ಹೋಟೆಲ್ ಸಮೀಪವೇ ಇರುವ ಕಾರಣ ಮರುದಿನ ಬೆಳಗ್ಗೆ ಬೇಗನೇ ಬರುವ ಯೋಚನೆಯೊಂದಿಗೆ
ಹೊರಗೆ ಕಾಲಿಟ್ಟೆವು. ಸುಂದರ ಸೂರ್ಯಾಸ್ತ ತಾಜ್ ಮಹಲಿನ ಅಮೃತಶಿಲೆಯ ಮೇಲೆ ಬಂಗಾರದ ಬಣ್ಣ
ಚೆಲ್ಲಿತ್ತು.
ಗೇಟಿನಿಂದ ಹೊರಬಂದಾಗ ಅಮೃತಶಿಲೆಯಲ್ಲಿ ಮಾಡಿದ ತಾಜ್ ಪ್ರತಿಕೃತಿಗಳನ್ನು
ಮಾರುವ ಸಾಲು ಸಾಲು ಅಂಗಡಿಗಳು. ಕೈ ಹಿಡಿದೆಳೆದು ಅವುಗಳನ್ನು ಕೊಳ್ಳಲು ಒತ್ತಾಯಿಸುವ
ವ್ಯಾಪಾರಿಗಳ ದಂಡು. ಕೊನೆಗೂ ಒಂದು ಅಂಗಡಿ ಹೊಕ್ಕು, ಬಂಧು ಮಿತ್ರರಿಗೆ ನೆನಪಿಗೆ ಕೊಡಲು, ಅಮೃತಶಿಲೆಯ ದೀಪದ ಗೂಡು, ಪೆನ್
ಸ್ಟ್ಯಾಂಡ್, ಕುಂಕುಮ ಭರಣಿ ಇತ್ಯಾದಿಗಳನ್ನು ಕೊಂಡೆವು.
ಮರುದಿನ ಬೆಳಗ್ಗೆ ಬೇಗನೇ ಎದ್ದು ತಾಜ್ ನತ್ತ ಹೊರಟೆವು. ಬಾಗಿಲ
ಬಳಿಯಲ್ಲಿಯೇ ಗೈಡ್ ಗಳು ಮುಗಿಬಿದ್ದರು. ಹಲವು ಮಂದಿಯನ್ನು ನಿರಾಕರಿಸಿ ಕೊನೆಗೊಬ್ಬ
ಸಂಭಾವಿತನಂತೆ ಕಾಣುತ್ತಿದ್ದ ಯುವಕನನ್ನು ಗೈಡ್ ಆಗಿ ಆರಿಸಿಕೊಂಡೆವು. ಸಂಭಾವನೆಯ ಬಗ್ಗೆ
ಚೌಕಾಸಿ ಶುರುವಾಯಿತು. ತಾಜ್ ಸುತ್ತಿಸಿ ಬರಲು ಐನೂರು ರೂಪಾಯಿ ಕೇಳಿದ ಪುಣ್ಯಾತ್ಮ !
ಕೊನೆಗೆ ಮುನ್ನೂರಕ್ಕೆ ಮಾತುಕತೆಯಾಯಿತು. ಟಿಕೆಟ್ ಕೊಳ್ಳುವಾಗಲೇ ಚಪ್ಪಲಿ ಮುಚ್ಚುವ
ಬಟ್ಟೆಯ ಕವರ್ ಕೊಳ್ಳಲು ಹೇಳಿದ ನಮ್ಮ ಗೈಡ್ ಆಸಿಮ್. ತಾಜ್ ಒಳಗೆ ಚಪ್ಪಲಿಗಳಿಗೆ
ಅವಕಾಶವಿಲ್ಲ. ಆದರೆ ಕವರುಗಳನ್ನು ಹಾಕಿ ಪ್ರವೇಶಿಸಬಹುದು.
ಬೆಳಗ್ಗಿನ ಜನಸಂದಣಿ ಇನ್ನೂ ಶುರುವಾಗದ ಕಾರಣ ಭದ್ರತಾ ತಪಾಸಣೆಗಯ ಸಾಲು
ಖಾಲಿಯಿತ್ತು. ತಾಜ್ ಮುಂದೆ ಸುಂದರ ಫೋಟೋ ತೆಗೆಯುವ ಆಸೆಯಿಂದ ಕ್ಯಾಮರಾದ ಟ್ರೈಪಾಡ್
ಹಿಡಿದುಕೊಂಡಿದ್ದ ನನ್ನ ಮೈತಡವಿದ ಪೋಲೀಸಪ್ಪ ಟ್ರೈಪಾಡುಗಳಿಗೆ ಪ್ರವೇಶವಿಲ್ಲವೆಂದು
ದಬಾಯಿಸಿದಾಗ ನನ್ನದು ನಾಯಿಪಾಡು ! ಮತ್ತೆ ಹೋಟೆಲಿಗೆ ಹೋಗಿ ಟ್ರೈಪಾಡ್ ಇಟ್ಟುಬರುವಾಗ
ಜನಸಂದಣಿ ತುಂಬಿಕೊಳ್ಳುತ್ತದೆ. ಒಳ್ಳೆಯ ಫೋಟೋ ತೆಗೆದುಕೊಳ್ಳುವ ಆಸೆ ಭಗ್ನವಾಯಿತು
ಎಂದುಕೊಳ್ಳುವಷ್ಟರಲ್ಲಿ ಆಸಿಮ್ ನಮ್ಮ ಸಹಾಯಕ್ಕೆ ಬಂದ. ಅಲ್ಲೇ ಹೊರಗೊಂದು ಅಂಗಡಿಗೆ
ಹೊಕ್ಕು ಪರಿಚಿತನೊಬ್ಬನ ಸುಪರ್ದಿಗೆ ಟ್ತೈಪಾಡನ್ನು ಕೊಟ್ಟು ಐದೇ ನಿಮಷಗಳಲ್ಲಿ ಮರಳಿ
ಗೇಟಿನೊಳಗೆ ಕರೆದೊಯ್ದ. ಬಚಾವಾದೆ. "ಆಪ್ ಫಿಕರ್ ಮತ್ ಕೀಜಿಯೇ, ಮೈ ಫೋಟೋ ಖೀಂಚ್ ಲೂಂಗಾ"
ಎಂಬ ಭರವಸೆಯ ಮಾತು ಬೇರೆ. "ಅಪರಿಚಿತನೊಬ್ಬನ ಕೈಗೆ ಬೆಲೆಬಾಳುವ ಕ್ಯಾಮರಾ ಕೊಡುವುದು
ಹೇಗೆಪ್ಪಾ ?" ಎಂದುಕೊಂಡು ಅರೆಮನಸ್ಸಿನಿಂದ ಒಪ್ಪಿದೆ. ಆದರೆ ಆಸಿಮ್ ತೆಗೆದ ಮೊದಲ
ಫೋಟೋದಲ್ಲೇ ಆತನ ಕೈಚಳಕ ಮೂಡಿತ್ತು. ವರ್ಷಗಳಿಂದ ಪ್ರವಾಸಿಗಳ ಕ್ಯಾಮರಾ ಬಳಸಿ ಆತ
ಪಳಗಿದ್ದ ! ಯಾವ ಕಡೆ ಮುಖಮಾಡಬೇಕು, ಎಲ್ಲಿ ನಿಲ್ಲಬೇಕು ಎಂಬುದರ ಸ್ಪಷ್ಟ ಜ್ಞಾನ
ಅವನಿಗಿತ್ತು. ಆಗಷ್ಟೇ ಸೇರಿದ್ದ ಜನಸಂದಣಿಯನ್ನು ನಯವಾಗಿಯೇ ನಿಭಾಯಿಸಿ ಇತರರ ಅಂಗಾಂಗಗಳು
ಬಾರದಂತೆ ಸುಂದರ ಚಿತ್ರಗಳನ್ನು ತೆಗೆದ ಆಸಿಮುದ್ದೀನ್ ! ತಾಜಿನ ಎದುರಿರುವ ಅಮೃತಶಿಲೆಯ
ಬೆಂಚುಗಳಲ್ಲಿ ಕುಳಿತುಕೊಳ್ಳುವ ಆಸೆಯೂ ಈಡೇರಿತು. ಅಲ್ಲಲ್ಲಿ ನಿಂತು ತಾಜ್ ಮಹಲಿನ ಬಗ್ಗೆ
ವಿವರ ಕೇಳುತ್ತಾ ಮುಂದೆ ಸಾಗಿದೆವು.
ಬೂಟುಗಳಿಗೆ ಅಂಗಿತೊಡಿಸಿ ತಾಜಿನ ಒಳ ಪ್ರವೇಶಿಸಿದೆವು. ತಾಜ್ ನ
ಅಂತರಂಗದಲ್ಲಿ ಬಣ್ಣ ಬಣ್ಣದ ಕಲ್ಲಿನ ಚಿತ್ತಾರ. ಅಲ್ಲಿನ ವೈಶಿಷ್ಟ್ಯ ತಿಳಿಸಿದ ಆಸಿಮ್.
ಬೆಳಕು ಬಿದ್ದಾಗ ಹೊಳೆಯುತ್ತವೆ ಆ ಬಣ್ಣದ ಕಲ್ಲುಗಳು. ಇಲ್ಲಿ ಕ್ಯಾಮರಾ ಬಳಕೆ ನಿಷಿದ್ಧ.
ಅಲ್ಲೇ ಇದ್ದ ಮತ್ತೊಬ್ಬ ಗೈಡ್ ತನ್ನ ಬಳಿಯಿದ್ದ ಪುಟ್ಟ ಟಾರ್ಚ್ ಬಳಸಿ ಹೊಳೆಯುವುದನ್ನು
ತೋರಿಸಿಕೊಟ್ಟ. ಇಪ್ಪತ್ತು ರೂಪಾಯಿ ದಕ್ಷಿಣೆಯನ್ನೂ ಪೀಕಿಸಿದ ! ಹೊರಭಾಗದ ಅಮೃತಶಿಲೆಯ
ಜಾಲಂಧ್ರಗಳ ಮುಂದೆ ನಿಲ್ಲಿಸಿ ಮೊಬೈಲ್ ಕ್ಯಾಮರಾದ ಮೂಲಕ ಅದ್ಭುತವಾದ ಫೋಟೋ ಕ್ಲಿಕ್ಕಿಸಿದ
ಆಸಿಮ್. ಹಿಂಬದಿಯಲ್ಲಿ ಹರಿಯುತ್ತಿರುವ ಯಮುನಾ ದುರ್ಗಂಧಯುತವಾಗಿತ್ತು. ಪವಿತ್ರ
ನದಿಯನ್ನು ಕೊಳಚೆಯ ಆಗರವನ್ನಾಗಿಸಿದ ಮಾನವನ ದುರಾಸೆ, ದುರ್ಬುದ್ಧಿ ಕಂಡು ಮನಸ್ಸು
ಹೇಸಿಕೊಂಡಿತು.
(ಮುಂದುವರಿಯುವುದು)
No comments:
Post a Comment