- ರವಿಶಂಕರ್ ಶಾಸ್ತ್ರಿ
ಲೇಖಕಿ: ನೇಮಿಚಂದ್ರ
ನೇಮಿಚಂದ್ರ ವೃತ್ತಿಯಿಂದ
ಇಂಜಿನಿಯರ್ ಆದ ಲೇಖಕಿ, ಎಚ್.ಎ.ಎಲ್ ನಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 26 ಕತೆಗಳಿವೆ. ತಮ್ಮ ಕೆಲಸದ ನಿಮಿತ್ತ ದೇಶ, ವಿದೇಶಗಳ ವಿವಿಧ
ಭಾಗಗಳಿಗೆ ಪ್ರಯಾಣಿಸುವ ಅವರು, ಅಲ್ಲಿಯ ಜನ ಜೀವನ, ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಕತೆಗಳ ಮೂಲಕ
ಪರಿಚಯಿಸುತ್ತಾರೆ.
ನಿತ್ಯ ಜೀವನದಲ್ಲಿ ಕಾಣಸಿಗುವ ಜನರೇ
ಅವರ ಕತೆಗಳಲ್ಲಿ ಪಾತ್ರಗಳಾಗಿದ್ದಾರೆ. ತಾವು ಮಹಿಳೆಯಾಗಿದ್ದುಕೊಂಡು ಅನುಭವಿಸಿದ ಹಲವಾರು
ಕಷ್ಟಗಳು, ನೋವುಗಳು, ತಾರತಮ್ಯಗಳು ಕೂಡ ಅವರ ಕತೆಗಳಲ್ಲಿ ಇಣುಕುತ್ತವೆ. ನೇಮಿಚಂದ್ರರ
ಕತೆಗಳನ್ನು ಓದುವಾಗ, ಹಲವು ಬಾರಿ ಕತೆಯಲ್ಲಿನ ಪಾತ್ರಗಳು ನಮಗೆ ಸಂಬಂಧಿಸಿದಂತೆ
ಅನಿಸುತ್ತವೆ. ನಮ್ಮ ಅನಿಸಿಕೆಗಳನ್ನು ಪಾತ್ರಗಳ ಮೂಲಕ ಹೇಳಿಸಿದಂತೆ ಕಾಣುತ್ತವೆ. ನಮ್ಮ
ನಿಜಜೀವನದ ಕತೆಯೋ ಏನೋ ಎಂಬಂತೆ ಕತೆಯನ್ನು ನಿರೂಪಿಸುವುದು ಅವರ ಹೆಚ್ಚುಗಾರಿಕೆ.
ಬರವಣಿಗೆಯ ಶೈಲಿ ಆಪ್ತವಾಗಿದೆ. ಭಾಷೆ ಸರಳವಾಗಿದೆ. ಜನಸಾಮಾನ್ಯರ ಜೀವನದಲ್ಲಿ ಬರಬಹುದಾದ
ಹಲವು ಸಮಸ್ಯೆಗಳು ಅವರ ಕತೆಗಳಲ್ಲಿ ಬರುತ್ತವೆ. ಅವುಗಳಿಗೆಲ್ಲ ತಮ್ಮದೇ ರೀತಿಯಲ್ಲಿ
ಸಮಾಧಾನವನ್ನು ನೀಡಿದ್ದಾರೆ. ಹೇಳಬೇಕಾದ್ದನ್ನು ನೇರವಾಗಿ, ಮನಮುಟ್ಟುವಂತೆ
ಹೇಳಿದ್ದಾರೆ.
ಒಟ್ಟಾರೆಯಾಗಿ ನೋಡಿದರೆ, ಸ್ತ್ರೀ
ಶೋಷಣೆಯನ್ನು ಅವರು ತೀವ್ರವಾಗಿ ವಿರೋಧಿಸಿದರೂ ಅದೇ ಸಮಯಕ್ಕೆ ಪುರುಷ ದ್ವೇಷಿಯೂ ಅಲ್ಲ!
ತಮ್ಮ ಸ್ತ್ರೀ ಪರ ಕಾಳಜಿಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ. ತಮ್ಮ ಕತೆಗಳ ಮೂಲಕ ಅವರ
ಆಸೆ, ಹಕ್ಕು, ಎಲ್ಲರೊಳಗೆ ಒಂದಾಗಿ ಹೋಗಬೇಕೆನ್ನುವ ಮನಸ್ಥಿತಿಗಳನ್ನು ಪರಿಣಾಮಕಾರಿಯಾಗಿ
ಬಿಂಬಿಸಿದ್ದಾರೆ. ಸಂಗ್ರಹಯೋಗ್ಯ ಹಾಗೂ ಓದಲೇಬೇಕಾದ ಪುಸ್ತಕ.
No comments:
Post a Comment