- ರವಿಶಂಕರ್ ಶಾಸ್ತ್ರಿ
ಲೇಖಕರು: ಎ. ಆರ್. ಮಣಿಕಾಂತ್
ಸಾದಾ ಸೀದಾ ಜನರ
ಬದುಕನ್ನು, ಅವರ ಕಷ್ಟಗಳನ್ನು, ಅವುಗಳನ್ನು ಎದುರಿಸಿದ ಗೆದ್ದ ಬಗೆಯನ್ನು ಮಣಿಕಾಂತ್
ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರ ಒಳಗಿರುವ ಅಗಾಧ
ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಜಗತ್ತೇ ಮುಗಿದು ಹೋಯಿತು ಇವರ ಬದುಕಿನಲ್ಲಿ
ಎಂದುಕೊಂಡವರು ಮತ್ತೆ ಎದ್ದು ಬಂದು ಅಚ್ಚರಿಗಳನ್ನು ಸಾಧಿಸಿದ್ದನ್ನು
ವಿವರಿಸಿದ್ದಾರೆ.
"ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತದೆಯೇ"
ಎಂಬುದು ಹಳೆಯ ಮಾತು. ಹೌದು, ಕಷ್ಟಗಳು ಎಲ್ಲರಿಗೂ ಬರುತ್ತವೆ. ಆದರೆ ಬೇರೆ ಬೇರೆ
ರೂಪಗಳಲ್ಲಿ ಇರಬಹುದು, ಜೀವನದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬರಬಹುದು. ಕಷ್ಟಗಳು ಬಂದರೆ
ಎಲ್ಲರಿಗೂ ಕಷ್ಟವೇ! ಬಂದ ಕಷ್ಟಗಳನ್ನು ಹೇಗೆ ಎದುರಿಸುತ್ತೇವೆ ಅನ್ನುವುದಷ್ಟೇ
ಮುಖ್ಯವಾಗುತ್ತದೆ. ಬಂದ ಕಷ್ಟಗಳನ್ನು ಎದುರಿಸಿ ನಿಲ್ಲುವವನು ಮತ್ತು ಬೆನ್ನು ಹಾಕಿ
ಓಡುವವನು ಎಂಬ ಎರಡು ಪಂಗಡಗಳಷ್ಟೇ ಇರುವುದು. ಎಲ್ಲ ಕಷ್ಟಗಳನ್ನು ಎದುರಿಸಿದವನು ಗೆದ್ದೇ
ಗೆಲ್ಲುತ್ತಾನೆ.
ಜೀವನವನ್ನೇ ಸೋತರು ಎಂಬಂತೆ ಕಂಡವರು ಧೂಳಿನಿಂದ ಎದ್ದು ಮೇಲೆದ್ದು ಬರುವುದಿದೆಯಲ್ಲ, ಅದು ನಿಜಕ್ಕೂ ಅದ್ಭುತವೇ ಸರಿ. ಅದನ್ನು ಓದುಗರ ಮನ
ಮುಟ್ಟುವಂತೆ ಬರೆಯುವುದು ಇನ್ನೂ ಕಷ್ಟದ ಕೆಲಸ. ಆ ಕೆಲಸವನ್ನು ಅಷ್ಟೇ ಅಚ್ಚುಕಟ್ಟಾಗಿ ಮಾಡಿದ್ದಾರೆ ಮಣಿಕಾಂತ್. ಕೆಲವೊಂದು ಲೇಖನಗಳನ್ನು ಓದಿ ಮುಗಿಸಿದಾಗ ಕಣ್ಣೀರು ಬರದಿದ್ದರೆ
ನೀವು ಭಾವಜೀವಿಯೇ ಅಲ್ಲ ಅಷ್ಟೇ.
ಪ್ರತಿಯೊಬ್ಬರೂ ಕಷ್ಟಗಳು ಬಂದಾಗ ಕುಗ್ಗಿ
ಹೋಗುವುದು ಸಾಮಾನ್ಯ. ಆಗ ಕಷ್ಟಗಳಲ್ಲಿ ಮುಳುಗಿ ಹೋದವರು ಅಚ್ಚರಿ ಎಂಬಂತೆ
ಮೇಲೆದ್ದು ಬಂದ ಉದಾಹರಣೆಗಳು ಕಣ್ಣ ಮುಂದೆ ಬಂದರೆ ಕಷ್ಟಗಳನ್ನೆದುರಿಸಲು ಮಾನಸಿಕ ಶಕ್ತಿ ದೊರಕುತ್ತದೆ. ಆ
ನಿಟ್ಟಿನಲ್ಲಿ ಮಣಿಕಾಂತ್ ಅವರ ಈ ಪುಸ್ತಕ ಖಂಡಿತ ನೆರವಾಗಬಹುದು. ಯಾವಾಗಲೂ
'ಗ್ರಹಚಾರ', 'ಅದೃಷ್ಟ' ಎಂದು ಕಣ್ಣಿಗೆ ಕಾಣದ ನೆಪಗಳನ್ನು ಹುಡುಕುವವರಿಗೆ ನಾನು ಈ
ಪುಸ್ತಕ ಓದಿರೆಂದು ಹೇಳಬಯಸುತ್ತೇನೆ. ಒಂದು ಹಂತದವರೆಗೆ ಕಷ್ಟ ಎಂಬುದು ಕೂಡ ನಮ್ಮ
ಮನಸ್ಥಿತಿಯೇ. ಹಾಗಾಗಿ, ಆ ಮನಸ್ಥಿತಿಯಿಂದ ಹೊರಬರುವುದು ತುಂಬಾ ಮುಖ್ಯವಾಗಿದೆ. ಆ
ನಿಟ್ಟಿನಲ್ಲಿ ಕಣ್ಣು ತೆರೆಸುವ ಒಂದೊಳ್ಳೆಯ ಸಂಗಾತಿಯಾಗಬಲ್ಲದು ಈ ಪುಸ್ತಕ.
No comments:
Post a Comment