ಮಲೆನಾಡಿನ ಚಿತ್ರಗಳು

- ಅಕ್ಷಯರಾಮ ಕಾವಿನಮೂಲೆ
ಪುಸ್ತಕ: ಮಲೆನಾಡಿನ ಚಿತ್ರಗಳು
ಲೇಖಕರು: ಕುವೆಂಪು
ಬೆಲೆ: ರೂ. 90

ಪಟ್ಟಣದ ಜಂಜಾಟದಿಂದ ಬೇಸರವಾದಾಗ ಒಮ್ಮೊಮ್ಮೆ "ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡುವ" ಎಂದೆನಿಸುತ್ತದೆ. ಬದುಕಿನ ಏಕತಾನತೆಯನ್ನು ಕಳೆಯುವ ಸಾಮರ್ಥ್ಯ ನಮ್ಮ ಹಳ್ಳಿಗಳಿಗಿದೆ. ಸ್ವಚ್ಛ ವಾತಾವರಣ, ಗಡಿಬಿಡಿಯಿಲ್ಲದ ನೆಮ್ಮದಿಯ ಜೀವನ ಇಲ್ಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಷ್ಟು ಆಪ್ಯಾಯಮಾನವೆನಿಸುವ ಹಳ್ಳಿಯ ಬದುಕು ಇಪ್ಪತ್ತನೆಯ ಶತಮಾನದಲ್ಲಿ ಹೇಗಿದ್ದಿರಬಹುದು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 1933ರಲ್ಲಿ ಮೊದಲ ಮುದ್ರಣ ಕಂಡ, ರಾಷ್ಟ್ರಕವಿ ಕುವೆಂಪುರವರ 'ಮಲೆನಾಡಿನ ಚಿತ್ರಗಳು' ಎಂಬ ಪುಟ್ಟ ಪುಸ್ತಕ ಕೈಗೆತ್ತಿಕೊಳ್ಳಬೇಕು.
                   
ತಮ್ಮ ಬಾಲ್ಯದಲ್ಲಿ ಕಂಡ ಹಳ್ಳಿಯ ಬದುಕಿನ ಸುಂದರ ಚಿತ್ರಣವನ್ನು ನೀಡಿದ್ದಾರೆ ರಾಷ್ಟ್ರಕವಿ. ತೀರ್ಥಹಳ್ಳಿಯ ದಟ್ಟವಾದ ಅರಣ್ಯದ ಮಧ್ಯೆ ಇರುವ ಪುಟ್ಟ ಹಳ್ಳಿಯಲ್ಲಿ ಜನಿಸಿದ ಕುವೆಂಪುರವರ ಮುಂದಿನ ಸಾಹಿತ್ಯ ಸೃಷ್ಟಿಯ ಅಡಿಪಾಯವೇ ಆಯಿತು ಅವರು ಬೆಳೆದ ವಾತಾವರಣ.

ಅವರೇ ಹೇಳುವಂತೆ, ಮಲೆನಾಡಿನಲ್ಲಿ ಕೆಲವೆಡೆ ಹಳ್ಳಿಯೆಂದರೆ ಒಂದು ಮನೆಯ ಊರುಗಳು! ದೊಡ್ಡ ಗೋಡೆಯ ಕೋಟೆಯಂತೆ ಕಾಣುವ ಹೆಮ್ಮನೆಗಳು. ಸುತ್ತಲೂ ಕಾಡು, ಮಾನವ ಪರಿಶ್ರಮದಿಂದ ನಿರ್ಮಾಣವಾದ ತೋಟ, ಗದ್ದೆಗಳು. ರುದ್ರ ರಮಣೀಯವಾದ ಪರಿಸರ. ಮಳೆಗಾಲದಲ್ಲಂತೂ ಅದೊಂದು ಬೇರೆಯೇ ಲೋಕ. ಸಮಯ ಅಲ್ಲಿ ಕಾಲುಮುರಿದುಕೊಂಡು ಬಿದ್ದಿರುತ್ತದೆ.

ಬೇಟೆ ಮಲೆನಾಡಿನವರ ಅಚ್ಚುಮೆಚ್ಚಿನ ವಿಷಯ. (ಇಂದಿಗೂ ಕದ್ದು ಬೇಟೆಯಾಡಿ ಸಿಕ್ಕಿಬೀಳುವವರು ಹಲವರು) ಲೇಖನಿ ಹಿಡಿಯುವ ಕವಿಗಳು ಬಂದೂಕು ಹಿಡಿಯಲು ಹೊರಟ ಸ್ವಾರಸ್ಯಕರ ಅಧ್ಯಾಯಗಳು ಸುಂದರವಾಗಿ ಮೂಡಿಬಂದಿವೆ. ಬೇಟೆಗೆ ಹೋದ ಕವಿ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಬರಿಗೈಯಲ್ಲಿ ಬಂದದ್ದೂ ಇದೆ ! ಊರಿನ ಇತರೇ ಬೇಟೆಗಾರರ ಬಗ್ಗೆಯೂ ಅದ್ಭುತವಾಗಿ ವರ್ಣನೆ ಮಾಡಿದ್ದಾರೆ.

ಕುವೆಂಪುರವರ ಹಾಸ್ಯಪ್ರಜ್ಞೆಯನ್ನು ಪುಸ್ತಕದುದ್ದಕ್ಕೂ ಕಾಣಬಹುದು. ತಮ್ಮ ಕವನ, ಕಾದಂಬರಿಗಳಲ್ಲಿ ಗಂಭೀರ, ಗಹನವಾದ ವಿಷಯಗಳನ್ನು ಎತ್ತಿಕೊಳ್ಳುವ ರಾಷ್ಟ್ರಕವಿ, ತಮ್ಮ ಬಾಲ್ಯದ ಬದುಕಿನ ವರ್ಣನೆ ಮಾಡುವಾಗ ಮತ್ತೆ ಮಗುವಾಗುತ್ತಾರೆ. ಪುಟ್ಟ ಪುಟ್ಟ ವಾಕ್ಯಗಳಲ್ಲಿ, ಮಕ್ಕಳಾಟದ ವರ್ಣನೆ ಮಾಡಿದ್ದಾರೆ. 'ಅಜ್ಜಯ್ಯನ ಅಭ್ಯಂಜನ'ದ ಕತೆಯಂತೂ ಮಲೆನಾಡಿನ ವೈಭವಕ್ಕೆ ಹಿಡಿದ ಕನ್ನಡಿಯಾಗಿದೆ.

ಮಲೆನಾಡಿನ ಮಕ್ಕಳಿಗೆ ಪಟ್ಟಣದ ಆಟಿಕೆಗಳು ಸಿಗುವುದು ಕನಸಿನ ಮಾತು. ಇಂದಿನ ಮಕ್ಕಳ ಹಾಗೆ ಮೂರನೇ ವರ್ಷಕ್ಕೇ ಕೈಯಲ್ಲಿ ಮೊಬೈಲು ಹಿಡಿದು ವೀಡಿಯೋ ನೋಡುವ ಭಾಗ್ಯ (!) ಅವರಿಗಿರಲಿಲ್ಲ. ಹಾಗೆಂದು ರಚನಾತ್ಮಕತೆಯ ಕೊರತೆಯೇನೂ ಇರಲಿಲ್ಲ. ಯಕ್ಷಗಾನ, ನಾಟಕ, ಅಭಿನಯ ಇತ್ಯಾದಿಗಳು ಅವರ ಆಟದ ವಸ್ತುಗಳಾಗಿದ್ದವು. ಅಂತಹಾ 'ಆಟದ ಯಕ್ಷಗಾನ'ದ ವರ್ಣನೆಯೂ ಪುಸ್ತಕದಲ್ಲಿ ಮೂಡಿಬಂದಿದೆ.

ಹಳ್ಳಿಯ ವಿವಿಧ ವ್ಯಕ್ತಿಗಳ, ವ್ಯಕ್ತಿತ್ವಗಳ ಪರಿಚಯ ಮತ್ತು ಪರಿಸರದ ವಿವರಗಳನ್ನು ರಸ ಋಷಿ ಮಾಡಿದರೆ ಹೇಗಿರಬಹುದೆಂದು ಕಂಡುಕೊಳ್ಳಲು  'ಮಲೆನಾಡಿನ ಚಿತ್ರಗಳು' ಕೃತಿಯನ್ನು ಓದಲೇಬೇಕು. ಕಳೆದು ಹೋದ ಒಂದು ಅದ್ಭುತ ಪ್ರಪಂಚವನ್ನು ನಾವಂತೂ ಭೌತಿಕವಾಗಿ ಮತ್ತೆ ಕಾಣಲು ಸಾಧ್ಯವಿಲ್ಲ. ಆದರೆ ಅಕ್ಷರಗಳ ಮೂಲಕ ಆ ಸುಂದರ ಸೃಷ್ಟಿಯನ್ನು ಆಸ್ವಾದಿಸುತ್ತಾ ಆನಂದಿಸಬಹುದು. ಇಪ್ಪತ್ತನೆಯ ಶತಮಾನದ ಮಲೆನಾಡಿನ ಹಳ್ಳಿಯ ಒಂದು ಮೂಲೆಯಲ್ಲಿ ಕುಳಿತು, ಕಳೆದು ಹೋಗಬಹುದು.

No comments:

Post a Comment