ಕೋಶ ಓದು: ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?

- "ಶ್ರೀ"ಖಾರ
ಲೇಖಕರು: ವಿಶ್ವೇಶ್ವರ ಭಟ್


ಬಸ್ಸಿನಲ್ಲಿ ಹೋಗುವ ಕೆಲವರು ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುವ ಜನರನ್ನು ನೋಡಿ ನಮ್ಮ ಹತ್ತಿರ ಅ ರೀತಿ ಕಾರ್ ಇಲ್ಲವಲ್ಲ ಎಂದು ಯೋಚನೆ ಮಾಡುತ್ತಾರೆ. ಆದರೆ ಅದೇ ರಸ್ತೆಯಲ್ಲಿ ಕಾಲಿಲ್ಲದೆ ಕಷ್ಟ ಪಟ್ಟು ಕುಂಟುತ್ತಾ ಹೋಗುತ್ತಾ ಇರುವ ವ್ಯಕ್ತಿಯನ್ನ ನೋಡಿ ದೇವರೇ ನನ್ನ ಹತ್ತಿರ ಕಾರು ಇಲ್ಲದಿದ್ದರೂ ಪರವಾಗಿಲ್ಲ, ನಡೆದಾಡೋಕೆ ಕಾಲು ಕೊಟ್ಟಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳುವವರು ತುಂಬಾ ಕಡಿಮೆ.

ಈ ರೀತಿ ನಮ್ಮ ಹತ್ತಿರ ಇರುವುದನ್ನು ಬಿಟ್ಟು ಇಲ್ಲದೇ ಇರುವುದಕ್ಕೆ ಕೊರಗುವ ಜನಗಳಿಗೆ ಉತ್ತರವೇ ವಿಶ್ವೇಶ್ವರ ಭಟ್ ರವರ "ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?"
ಇದು ಒಂದು ರೀತಿಯ ವ್ಯಕ್ತಿತ್ವ ವಿಕಸನ ಪುಸ್ತಕ. ಆದರೆ ಬೇರೆ ಎಲ್ಲಾ ಪುಸ್ತಕಗಳಿಗಿಂತ ಇದು ಬಿನ್ನ. ಹೇಗೆಂದರೆ ಇದು ನಮ್ಮ ಮಗ್ಗಿ ಪುಸ್ತಕದ ರೀತಿ ತುಂಬಾ ಚಿಕ್ಕದು ಮತ್ತು ಎಲ್ಲಾ ವಿಷಯಗಳು ನೇರ ನಿಷ್ಟುರ ಹಾಗೂ ಮನಸ್ಸಿಗೆ ನಾಟುವ ಹಾಗೆ ಇವೆ. ಹಲವು ಪುಸ್ತಕಗಳಿಂದ ಮುಖ್ಯವಾದ ವಿಷಯಗಳನ್ನು ಆಯ್ದು ಟಿಪ್ಪಣಿ ಮಾಡಿ ನಮಗೆ ಕೊಟ್ಟಿರುವ ಹಾಗೆ ಭಾಸವಾಗುತ್ತದೆ.
ನೀವು ಪರಮ ಸುಖಿ:ಗಳಾಗಿ ಇರಬೇಕಾದರೆ ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಯೋಜನೆಗಳು ಹೇಗಿರಬೇಕು ನೀವು ಕಛೇರಿಯಲ್ಲಿ ಯಾರೊಡನೆ ಸ್ನೇಹ ಮಾಡಬೇಕು. ಯಾವ ವಿಷಯಕ್ಕೆ ಹೇಗೆ ಸ್ಪಂದಿಸಬೇಕು ಅನ್ನುವಂತಹ ಸೂಕ್ಷ್ಮ ವಿಷಯಗಳನ್ನ ಭಟ್ಟರು ತುಂಬಾ ಚೆನ್ನಾಗಿ ಹೇಳಿದ್ದಾರೆ.
ಈ ಪುಸ್ತಕದಲ್ಲಿನ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮಲಿರುವ ಋಣಾತ್ಮಕ ಯೋಚನೆಗಳು ಹೋಗಿ ಧನಾತ್ಮಕ ಯೋಚನೆಗಳು ಮೂಡುತ್ತವೆ. ಆವಾಗ ನಾವು ನಮ್ಮಲ್ಲಿಲ್ಲದಕ್ಕೆ ವ್ಯಥೆ ಪಡುವುದಕ್ಕಿಂತ ನಮ್ಮಲ್ಲಿರುವುದಕ್ಕೆ ಹೆಚ್ಚು ಖುಷಿ ಪಡಲು ಆರಂಭಿಸುವುದರಲ್ಲಿ ನನಗೆ ಯಾವುದೇ ಅನುಮಾನಗಳಿಲ್ಲ.

No comments:

Post a Comment