ಕೋಶ ಓದು : ಮಕ್ಕಳ ಮನಸ್ಸು

- ರವಿಶಂಕರ್ ಶಾಸ್ತ್ರಿ
ಲೇಖಕರು: ಡಾ.ಅ.ಶ್ರೀಧರ್  

ಮಕ್ಕಳ ಮನಸ್ಸು ಹೂವಿನ ಹಾಗೆ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಬಹು ಬೇಗ ಆತಂಕಕ್ಕೆ ಒಳಗಾಗುವುದು ಸಹಜ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ನಾವು ಮಕ್ಕಳನ್ನು ಬೆಳೆಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.

ವೃತ್ತಿಯಿಂದ ಮನೋವೈದ್ಯರಾಗಿರುವ ಲೇಖಕರು ಮಕ್ಕಳ ಮನಸಿನ ಕುರಿತು ಬಹಳಷ್ಟು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಬೇರೆ ಬೇರೆ ರೀತಿಯ ಮಕ್ಕಳ ಸಮಸ್ಯೆಗಳನ್ನು ಕಾರಣಗಳ ಸಹಿತ ವಿವರಿಸಿದ್ದಾರೆ. ಎಲ್ಲ ಮಕ್ಕಳ ಎಲ್ಲ ಸಮಸ್ಯೆಗಳಿಗೂ ಒಂದೇ ರೀತಿಯದ್ದಲ್ಲ. ಪ್ರತಿಯೊಂದಕ್ಕೂ ಕಾರಣಗಳು ಬೇರೆ ಬೇರೆ ಇರಬಹುದು. ಹಾಗಾಗಿ ಮಕ್ಕಳ ಮನಸ್ಸನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಅಪಾರ ತಾಳ್ಮೆ ಬೇಕು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಗುಣ ಬೇಕು. ಮಕ್ಕಳು ಹೇಳುವ ಸಮಸ್ಯೆಗಳನ್ನು ಕೇಳುವ ತಾಳ್ಮೆ, ಮನಸ್ಸು ಬೇಕು. ಮಕ್ಕಳು ಹೇಳುವ ವಿಷಯ ಎಷ್ಟು ಸಣ್ಣದಾದರೂ ಕೇಳಿಸಿಕೊಳ್ಳುವ ಗುಣ ಬೇಕು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾದ್ದರಿಂದ, ಅವರ ನಿಜವಾದ ಸಮಸ್ಯೆಯ ಕಾರಣ ತಿಳಿಯುವುದು ಸ್ವಲ್ಪ ಸವಾಲಿನ ಕೆಲಸವೇ ಸರಿ. ಅವರ ಬಾಯಿ ಬಿಡಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಬೇಕಾಗಬಹುದು.  

ಮಕ್ಕಳ ವಿವಿಧ ಸಮಸ್ಯೆಗಳನ್ನು ಹೊತ್ತು ತಮ್ಮ ಬಳಿಗೆ ಬಂದ ಅನೇಕ ತಂದೆ-ತಾಯಂದಿರ ಉದಾಹರಣೆಗಳನ್ನು ಲೇಖಕರು ವಿವರಿಸಿದ್ದಾರೆ. ಸಮಸ್ಯೆ, ಅದಕ್ಕೆ ಕಾರಣವಾಗಿರಬಹುದಾದ ವಿಷಯಗಳು, ಹೇಗೆ ಸಮಸ್ಯೆಯ ಮೂಲವನ್ನು ಅರಿಯಬೇಕು, ಏನು ಪರಿಹಾರ ಸೂಚಿಸಲಾಯಿತು ಎಂಬುದನ್ನು ಸರಳವಾಗಿ ವಿವರಿಸಲಾಗಿದೆ. ನಮ್ಮಲ್ಲಿ ಸಣ್ಣ ಮಕ್ಕಳಿದ್ದರೆ, ನಮಗೂ ಆಗಾಗ ಮಕ್ಕಳ ಬಗ್ಗೆ ಕೆಲ ಸಂದೇಹಗಳು ಬರಬಹುದು. ಬಹುಶಃ ಲೇಖಕರು ವಿವರಿಸಿದ ಕೆಲವು ಸಂಗತಿಗಳು ನಮ್ಮ ಉಪಯೋಗಕ್ಕೆ ಬರಬಹುದು. 

ಒಟ್ಟಿನಲ್ಲಿ ಮಕ್ಕಳ ಮನಸ್ಸನ್ನು ಅರಿಯುವ ಮನಸ್ಸಿದ್ದರೆ ಈ ಪುಸ್ತಕ ಧಾರಾಳವಾಗಿ ಓದಬಹುದು. ಎಲ್ಲರ ಮನೆಯ ಮಕ್ಕಳಲ್ಲೂ ಕಾಣಬಹುದಾದ ಕೆಲ ಸಮಸ್ಯೆಗಳಿಗೆ ಕಾರಣ ಮತ್ತು ಹೇಗೆ ಅವುಗಳನ್ನು ನಿಭಾಯಿಸಬೇಕು ಎಂಬುದು ಸ್ವಲ್ಪ ಮಟ್ಟಿಗಾದರೂ ತಿಳಿಯುವುದರಲ್ಲಿ ಯಾವ ಸಂದೇಹವೂ ಇಲ್ಲ.

No comments:

Post a Comment