ಹೇ ಮಹದಾಯಿ..!!

- ನಾಮದೇವ್ ರೇಣಕೆ

ಇಳಿದು ಬಾ, ತಾಯೇ ಇಳಿದು ಬಾ...
ಒಲಿದು,ಇಳಿದು, ನಮ್ಮ ಜೀವವ ನೆನೆದು
ಇಳಿದು ಬಾ, ತಾಯೇ ಇಳಿದು ಬಾ...


ಧಗಧಗಿಸುತ್ತಿದೆ ಧಾರವಾಡ
ಹೊತ್ತುರಿಯುತ್ತಿದೆ ಹೂಬಳ್ಳಿ
ನಲುಗಿ ನೆತ್ತರವ ಸೂಸುತ್ತಿದೆ ಗದಗ-ನವಲಗುಂದ
ಬಸವಳಿದು ಹೋಗಿದೆ ನಮ್ಮ ಬೆಳಗಾವಿ-ಬೈಲಹೊಂಗಲ
ಇನ್ನಾದರೂ ಒಲಿದು ಬಾ...
ಇಳಿದು ಬಾ, ತಾಯೇ ಇಳಿದು ಬಾ...

ಬೆಂಕಿಯ ಕೆಂಡವಾಗಿದೆ ಬೆಂಗಳೂರು
ಮೈ ಸುಟ್ಟಿಕೊಂಡಿಹಳು ಮೈಸೂರು
ರಾವಣ ರಾಜ್ಯವಾಗಿದೆ ರಾಮನಗರ
ಕೋಲಾಹಲವಾಗಿದೆ ಚಿನ್ನದ ಕೋಲಾರ
ಇನ್ನಾದರೂ ಒಲಿದು ಬಾ...
ಇಳಿದು ಬಾ, ತಾಯೇ ಇಳಿದು ಬಾ...

ನಮ್ಮ ನಾಡಲ್ಲೇ ಹುಟ್ಟಿ
ನಮ್ಮ ನಾಡಲ್ಲೇ ಹರಿವ ನಿನಗೆ
ಸಾಗರವ ಸೇರುವ ತವಕ ಏಕೆ?
ಸಾಗರಗವ ಸೇರುವ ಮುನ್ನ ಕಾಣದೇ,
ಕೇಳಿಸದೇ ನಿನಗೆ ಮಲಪ್ರಭೆಯ ಈ ಯಾತನೆ
ಇನ್ನಾದರೂ ಒಲಿದು ಬಾ...
ಇಳಿದು ಬಾ, ತಾಯೇ ಇಳಿದು ಬಾ...

ತಿಳಿದಿಹುದು ತಿರುಳು ನಮಗೆ,
ನೀನೊಲಿದರೂ, ನೀ ನಮ್ಮ ಕೂಗಿ ಕರೆದರೂ
ಬಿಡಲಾರರು ನಿನ್ನ ನಮ್ಮ ಮನೆಗೆ
ನೀನಿಲ್ಲದ ಬದುಕು ಯಾಕೆ ನಮಗೆ
ಆದರೂ, ಆದರೂ.....ಆದರೂ......ತಾಯೇ..
ಪ್ರಾಣದ ಹಂಗು ತೊರೆದು ಹೋರಾಡುವೆವು
ಜೀವ ಕೊಟ್ಟೇವು ಮಾತ್ರ ನಿನ್ನ ಬಿಡೆವು..
ಇನ್ನಾದರೂ ಒಲಿದು ಬಾ...
ಇಳಿದು ಬಾ, ತಾಯೇ ಇಳಿದು ಬಾ...

ನೀನೇ ತಾಯಿ, ನೀನೇ ಜೀವ
ನೀನೇ ಜೀವನ,ನೀನೇ ಈ ತನುಮನ
ನೀನೇ ಈ ಕನ್ನಡ ನಾಡಿನ ನಿತ್ಯೋಪಾಸನ
ಇಳಿದು ಬಾ, ತಾಯೇ ಇಳಿದು ಬಾ...

1 comment:

  1. ಸಕಾಲಿಕ ಕವನ ನಾಮದೇವ್... ಚೆನ್ನಾಗಿದೆ.

    ReplyDelete