ಸ್ವದೇಶಿ ಮಂತ್ರ


- ರವಿಶಂಕರ ಶಾಸ್ತ್ರಿ 

ಪತಂಜಲಿ ಉತ್ಪನ್ನಗಳು ವಿದೇಶಿ ಕಂಪೆನಿಗಳ ನಿದ್ದೆ ಕೆಡಿಸಿರುವುದನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಎಲ್ಲರೂ ಓದಿರುತ್ತೇವೆ. ಬೇರೆ ಬೇರೆ ಖಾಸಗಿ ವಾಹಿನಿಗಳಲ್ಲೂ ನಾವು ಗಮನಿಸಿದರೆ, ಈಗ ಯಾವ ವಿದೇಶಿ ಕಂಪೆನಿಗೂ ಕಮ್ಮಿ ಇಲ್ಲದಂತೆ ಜಾಹೀರಾತುಗಳು ಪ್ರಸಾರವಾಗುತ್ತವೆ. ಅಂದ ಮೇಲೆ ಭರ್ಜರಿಯಾಗಿಯೇ ಪತಂಜಲಿ ವಸ್ತುಗಳು ಸದ್ದು ಮಾಡುತ್ತಿವೆ ಎಂದಾಯಿತು. ಅದಕ್ಕೆ ಸರಿಯಾಗಿ ಪತಂಜಲಿ ಉತ್ಪನ್ನಗಳ ಅಂಗಡಿಗಳು ಈಗ ಅಲ್ಲಲ್ಲಿ ಆರಂಭವಾಗಿದೆ. ಜನರಿಗೆ ಹೆಚ್ಚು ದೂರ ಹೋಗಬೇಕಾದ ಅಗತ್ಯವಿಲ್ಲ. ಬೆಲೆಯೂ ಕಡಿಮೆ. ಹಾಗೆಂದು ಗುಣಮಟ್ಟದಲ್ಲಿ ಯಾವುದೇ ಮೋಸವಿಲ್ಲ. ವಸ್ತುಗಳನ್ನು ಕೊಂಡುಕೊಂಡ ಗ್ರಾಹಕನಿಗೆ ನಮ್ಮದೇ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸಿದ ಖುಷಿ, ಜೊತೆಗೆ ಜೇಬಿಗೂ ಹಗುರ. 

ಮನೆಯ ಪಕ್ಕದಲ್ಲೇ ಪತಂಜಲಿ ಉತ್ಪನ್ನಗಳ ಅಂಗಡಿಯೊಂದು ಆರಂಭವಾದ ನಂತರ ನಾವು ಬಹಳ ವಸ್ತುಗಳನ್ನು ಅಲ್ಲಿಂದಲೇ ಖರೀದಿಸುತ್ತಿದ್ದೇವೆ. ನಮಗೆ ೪ ವರ್ಷದ ಮಗನಿರುವುದರಿಂದ, ಅವನ ಆಟಿಕೆಗಳಿಗಾಗಿ ಆಗಾಗ ಅಂಗಡಿಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಸ್ವದೇಶಿ ಆಟಿಕೆಗಳನ್ನೇ ಹುಡುಕುತ್ತಾ ಹೋಗುತ್ತೇವೆ. ಸದ್ಯದ ಸಮಸ್ಯೆಯೆಂದರೆ ಸ್ವದೇಶಿ ಆಟಿಕೆಗಳು ತುಂಬಾ ಕಡಿಮೆ ಇವೆ, ಇಲ್ಲವೇ ದುಬಾರಿಯಿದೆ. ಆದರೂ ನಮಗೆ ಬೇಕಾದ ಸ್ವದೇಶಿ ತಯಾರಿತ ವಸ್ತು ಸಿಗಲಿಲ್ಲವೆಂದು ನಾವು ಇತ್ತೀಚೆಗೆ ಅಂಗಡಿಯಿಂದ ಹಾಗೆಯೇ ಬಂದಿದ್ದು ಮಾತ್ರ ಸುಳ್ಳಲ್ಲ. 

ಈಗಾಗಲೇ ಹಲವಾರು ಬಗೆಯ ಸ್ವದೇಶಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಇನ್ನಷ್ಟು ವಸ್ತುಗಳು ಮಾರುಕಟ್ಟೆಗೆ ಬರಲಿವೆಯಂತೆ. ಹಾಗಾದಲ್ಲಿ ಇನ್ನಷ್ಟು ಜನರಿಗೆ ಇದು ಇಷ್ಟವಾಗಬಹುದು. ಮೊದಮೊದಲು ಜನರಿಗೆ ವಿದೇಶಿ ವಸ್ತುಗಳೇ ಗುಣಮಟ್ಟ ಇರುವಂಥವು, ನಮ್ಮಲ್ಲಿ ತಯಾರಾದ ವಸ್ತುಗಳು ಕಳಪೆ ಎಂಬ ಸಾಮಾನ್ಯ ಅಭಿಪ್ರಾಯವಿತ್ತು. ಆದರೀಗ ಕಾಲ ಬದಲಾಗಿದೆ. ನಿಧಾನವಾಗಿ ಸ್ವದೇಶಿ ವಸ್ತುಗಳೆಡೆಗೆ ಜನ ವಾಲತೊಡಗಿದ್ದಾರೆ. ಇದು ಒಳ್ಳೆಯ ಸೂಚನೆ. 

ಪಟಾಕಿಯಿಂದ ಹಿಡಿದು, ಆಟಿಕೆಗಳನ್ನು ಸೇರಿಸಿ ಇನ್ನಷ್ಟು ವಸ್ತುಗಳು ನಮ್ಮಲ್ಲೇ ತಯಾರಾಗಲಿ, ಮೇಡ್ ಇನ್ ಇಂಡಿಯಾ ಎಂದು ಎಲ್ಲ ವಸ್ತುಗಳಲ್ಲೂ ಕಾಣುವಂತಗಲಿ. 

No comments:

Post a Comment