- ರವಿಶಂಕರ್ ಶಾಸ್ತ್ರಿ
ಮತ್ತೆ
ನವೆಂಬರ್ ಬಂದಿದೆ. ಕನ್ನಡ ನಮ್ಮ ಭಾಷೆ ಅಂತ ನೆನಪಿಸಿಕೊಳ್ಳುವ ಸಮಯ. ಎಷ್ಟೋ ಜನರಿಗೆ
ತಮ್ಮ-ತಮ್ಮ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ಸಮಯ. ವರ್ಷ
ಪೂರ್ತಿ ಮರೆತು ಹೋಗಿದ್ದ ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ಸಮಯ ಬಂದಿದೆ. ಎಲ್ಲ ಕಡೆ
ಆಂಗ್ಲ ಭಾಷೆಯ ಉಪಯೋಗ ಹೆಚ್ಚಾಗಿದೆ ಅಂತ ನಾವೆಲ್ಲ ಒಂದಲ್ಲ ಒಂದು ಸಲ
ಹೇಳಿರುತ್ತೇವೆ/ಕೇಳಿರುತ್ತೇವೆ. ಎಲ್ಲ ಸರಿ, ನಾವು ನಮ್ಮ ಕಡೆಯಿಂದ ಆಗುವ ಪ್ರಯತ್ನ
ಮಾಡಿದ್ದೇವಾ? ಬಹುತೇಕರ ಉತ್ತರ 'ಇಲ್ಲ'. ಮಾಧ್ಯಮಗಳಲ್ಲಿ ಬರುವ ಸುದ್ದಿಗಳಲ್ಲಿ ಬಹುಪಾಲು ನಿರಾಸೆಯ, ಋಣಾತ್ಮಕ ವಿಷಯಗಳನ್ನೇ ಹೊತ್ತು ತರುತ್ತವೆ. ಹೀಗಿರುವಾಗ ನಾವು ಅದನ್ನೇ
ಮತ್ತೆ-ಮತ್ತೆ ಹೇಳುತ್ತಾ ಕೊರಗುವ ಬದಲು, ನಮ್ಮ ಸುತ್ತಲೂ ನಡೆಯುತ್ತಿರುವ, ನಾವು
ಭಾಗವಹಿಸಬಹುದಾದ ಸಣ್ಣ ಸಣ್ಣ ವಿಷಯಗಳನ್ನು ಗಮನಿಸೋಣ.
ತಕ್ಕಮಟ್ಟಿಗೆ
ಎಲ್ಲರೂ ಈಗ ಸ್ಥಿತಿವಂತರೆ. ಒಂದು ಕನ್ನಡ ದಿನಪತ್ರಿಕೆ ಕೊಂಡು ಓದುವಷ್ಟು ಸಾಮರ್ಥ್ಯ
ಖಂಡಿತ ಇದೆ. ಎಷ್ಟು ಜನ ಇದನ್ನು ಮಾಡುತ್ತೇವೆ? ಪ್ರತಿ ವರ್ಷ ಕನ್ನಡದ ಬೇಕಾದಷ್ಟು
ಪುಸ್ತಕಗಳು ಪ್ರಕಟವಾಗುತ್ತವೆ, ಅವುಗಳಲ್ಲಿ ಕೆಲವನ್ನಾದರೂ ಕೊಂಡು ಓದಬಹುದು. ಇದು
ಬರೆಯುವವರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ದಿನನಿತ್ಯ ನಾವು ಅಂಗಡಿಗೆ,
ಆಸ್ಪತ್ರೆಗೆ, ವಿವಿಧ ಕಚೇರಿಗಳಿಗೆ ಹೋಗುತ್ತೇವೆ. ಸಾಧ್ಯವಾದಲ್ಲೆಲ್ಲ ಕನ್ನಡವನ್ನೇ
ಮಾತನಾಡಬಹುದು. ನಮಗೆ ಆಂಗ್ಲ ಭಾಷೆ ಬರುತ್ತದೆ ಎಂದ ಕೂಡಲೇ ನಾವು ಅದನ್ನೇ ಎಲ್ಲ ಕಡೆ
ಬಳಸಬೇಕು ಅಂತೇನೂ ಇಲ್ಲವಲ್ಲ. ಇತ್ತೀಚೆಗೆ ಮಾಲ್ ಗಳಿಗೆ ಹೋಗುವ ಜನರ ಸಂಖ್ಯೆ
ಹೆಚ್ಚಾಗಿದೆ. ಅಲ್ಲಿ ಹೆಚ್ಚಾಗಿ ಕನ್ನಡೇತರರೇ ಇರುತ್ತಾರೆ (ವಿವಿಧ ಅಂಗಡಿಗಳಲ್ಲಿ). ನಾವು
ಪೂರ್ವಾಗ್ರಹ ಪೀಡಿತರಾಗಿ, ಅವರಿಗೆ ಯಾರಿಗೂ ಕನ್ನಡ ಬರುವುದಿಲ್ಲ ಅಂತಲೋ, ಅಥವಾ ಅಲ್ಲಿ
ಕನ್ನಡದಲ್ಲಿ ಮಾತನಾಡಿದರೆ ನಮ್ಮ ಮರ್ಯಾದೆಗೆ ಕೊರತೆ ಎಂದೋ ನೇರವಾಗಿ ಆಂಗ್ಲ
ಭಾಷೆಯಲ್ಲಿಯೇ ಮಾತನಾಡುತ್ತೇವೆ. ಹೀಗಿರುವಾಗ ಕನ್ನಡ ಕಾಣೆಯಾಗುತ್ತಿದೆ ಅಂತ ಬೊಬ್ಬೆ
ಹಾಕಿದರೆ ಏನು ಪ್ರಯೋಜನ. ಕನಿಷ್ಟ ಪಕ್ಷ ಕನ್ನಡ ಮಾತನಾಡುವ ಪ್ರಯತ್ನವನ್ನಾದರೂ
ಮಾಡಬಹುದಲ್ಲ. ನಮ್ಮ ಭಾಷೆಯ ಬಗ್ಗೆ ನಮಗೆ ಪ್ರೀತಿ ಇಲ್ಲದಿದ್ದರೆ ಬೇರೆಯವರನ್ನು
ದೂಷಿಸುತ್ತಾ ಕೂರುವುದರಲ್ಲಿ ಯಾವ ಅರ್ಥವೂ ಇಲ್ಲ. ನಮಗೆ ಹಲವು ದೂರವಾಣಿ ಕರೆಗಳು
ಬರುತ್ತವೆ (ವಿವಿಧ ವಾಣಿಜ್ಯ ಉದ್ದೇಶಗಳಿಗಾಗಿ). ಅವೆಲ್ಲ ಆಂಗ್ಲ ಭಾಷೆಯಲ್ಲಿಯೇ
ಆರಂಭವಾಗುತ್ತವೆ. ನಾವು ಕೂಡ ಅದರಲ್ಲೇ ಉತ್ತರಿಸುತ್ತೇವೆ. ಹೀಗಿರುವಾಗ ಕನ್ನಡ ಹೇಗೆ
ಉಳಿದೀತು? ಇತ್ತೀಚೆಗೆ ಹಣ ತೆಗೆಯಲು ಬ್ಯಾಂಕ್ ಗಳಿಗೆ ಹೋಗುವುದು ಕಡಿಮೆ, ಹೆಚ್ಚಿನ
ಎಲ್ಲರೂ ಎಟಿಮ್ ಮೊರೆ ಹೋಗುತ್ತೇವೆ. ಅಲ್ಲಿ ಸಾಮಾನ್ಯವಾಗಿ ಭಾಷೆಯ ಆಯ್ಕೆ ಮಾಡಲು ಅವಕಾಶ
ಇರುತ್ತದೆ. ಎಷ್ಟು ಜನ ನಾವು ಕನ್ನಡ ಆಯ್ದುಕೊಳ್ಳುತ್ತೇವೆ?
ಹೀಗೆಂದು
ತೀರಾ ನಿರಾಶರಾಗುವ ಅಗತ್ಯವೂ ಇಲ್ಲ. ನಗರಗಳಲ್ಲಿಯೇ ಜನರು ಕೇಂದ್ರೀಕೃತರಾದರೂ, ವಿವಿಧ
ತಂತ್ರಜ್ಞಾನದ ಹಾವಳಿಗೆ ಸಿಲುಕಿದರೂ, ಇನ್ನೂ ಕನ್ನಡಕ್ಕೆ ಬೇಡಿಕೆ ಇದೆ! ಅಂತರ್ಜಾಲದಲ್ಲಿ
ಹುಡುಕಿದರೆ ಕನ್ನಡಮಯವಾದ ಅಸಂಖ್ಯ ವೈಯಕ್ತಿಕ ಬ್ಲಾಗ್ ಗಳು, ವಿವಿಧ ವೆಬ್ಸೈಟ್ ಗಳು ಸಿಗುತ್ತವೆ.
ವಿವಿಧ ವಿಷಯಗಳ ಲೇಖನಗಳು ದಿನವೂ ಹೊಸದಾಗಿ ಬರುತ್ತಿರುತ್ತವೆ. ಅಷ್ಟೊಂದು ಜನ
ಬರೆಯುತ್ತಾರೆ, ಪ್ರಕಟಿಸುತ್ತಾರೆಂದರೆ ಖಂಡಿತವಾಗಿಯೂ ಓದುವವರು ಇದ್ದೇ ಇರುತ್ತಾರೆ!
ಇವುಗಳಲ್ಲಿ ಕೆಲವನ್ನಾದರೂ ನಾವು ಓದಬಹುದು, ಕೆಲವೊಂದು ಸಲವಾದರೂ ಬರೆಯಬಹುದು! ಬೇರೆ
ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಕೂಡ ಬರೆಯುತ್ತಿದ್ದಾರೆ. ಎಷ್ಟೋ ಸಲ ಕೆಲಸ
ಮಾಡುವ ಕ್ಷೇತ್ರಕ್ಕೂ ಸಾಹಿತ್ಯಕ್ಕೂ ಸಂಬಂಧವೇ ಇಲ್ಲ, ಆದರೂ ನಮ್ಮ ಕನ್ನಡಿಗರು
ಓದುವ/ಬರೆಯುವ ಕೆಲಸ ಬಿಟ್ಟಿಲ್ಲ. ಇತ್ತೀಚೆಗಂತೂ ಮೊಬೈಲಿನಲ್ಲೂ ಕನ್ನಡದಲ್ಲಿ
ಬರೆಯಬಹುದಾದ್ದರಿಂದ ನಾವು ಕಲಿಸುವ ಎಲ್ಲ ಚುಟುಕು ಸಂದೇಶಗಳನ್ನು ಕೂಡ ಕನ್ನಡದಲ್ಲಿ
ಬರೆಯಬಹುದು.
ಒಟ್ಟಾರೆಯಾಗಿ
ಎಷ್ಟೋ ಕಡೆಗಳಲ್ಲಿ ನಮ್ಮ ಭಾಷೆಯು ಅವನತಿಯತ್ತ ಸಾಗುತ್ತಿದ್ದರೂ ಕೂಡ, ಇನ್ನೂ ಕೆಲವೆಡೆ
ಹೊಸ ತಲೆಮಾರಿನ ಅಗತ್ಯಕ್ಕೆ ತಕ್ಕಂತೆ ತನ್ನನ್ನು ತಾನು ಮಾರ್ಪಾಡಿಸಿಕೊಂಡು
ಮುನ್ನಡೆಯುತ್ತಿರುವುದು ಕೂಡ ಸುಳ್ಳಲ್ಲ. ಜನಸಾಮಾನ್ಯರಾಗಿ ನಾವು ಭಾಷೆಯನ್ನು ಉಳಿಸಲು
ಏನು ಮಾಡಬಹುದು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಕನ್ನಡ
ಇನ್ನು ಮುಂದೆಯೂ ಹೀಗೆಯೇ ಉಳಿಯುತ್ತದೆ ಎಂಬ ನಂಬಿಕೆ ಧೃಡವಾಗುತ್ತದೆ. ಇಷ್ಟು ಸುಂದರವಾದ
ನಮ್ಮ ಕನ್ನಡ ಇನ್ನಷ್ಟು ಬೆಳೆಯಲಿ, ಬಾಳಲಿ ಎಂಬುದು ಮನದಾಳದ ಹಾರೈಕೆ.
No comments:
Post a Comment