- ಅಕ್ಷಯರಾಮ ಕಾವಿನಮೂಲೆ
ಮಣ್ಣುಕೊರೆಯುವ ಯಂತ್ರವೊಂದರ ಪ್ರಾತ್ಯಕ್ಷಿಕೆ ನೋಡಲೆಂದು ಅಪ್ಪನ ಜೊತೆ
ಕೋಟೇಶ್ವರಕ್ಕೆ ಹೊರಟಿದ್ದೆ. ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಹುಟ್ಟೂರಾದ
ಕೋಟವನ್ನು ದಾಟಿ ಮುಂದುವರಿಯುವಾಗ ಕಾರಂತ ಥೀಂ ಪಾರ್ಕ್ ಎನ್ನುವ ಸಣ್ಣದೊಂದು ಬೋರ್ಡು
ಕಾಣಿಸಿತು.
ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ನಾವು ಅದನ್ನು ಸರಿಯಾಗಿ
ಓದುವಷ್ಟರಲ್ಲಿ ಬಹಳ ಮುಂದೆ ಸಾಗಿಬಿಟ್ಟಿದ್ದೆವು. ಕೋಟೇಶ್ವರ ತಲುಪಿ, ಯಂತ್ರದ
ಬಳಕೆಯನ್ನು ಕಣ್ಣಾರೆ ಕಂಡ ಮೇಲೆ ಅಲ್ಲೇ ಹತ್ತಿರದ ಕೋಟಿಲಿಂಗೇಶ್ವರ ದೇವಾಲಯವನ್ನು
ಸಂದರ್ಶಿಸಿ, ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಾಲಯಕ್ಕೂ ಹೋಗಿ, ಮರಳಿ ಊರಿನ ಕಡೆಗೆ
ದೌಡಾಯಿಸಹೊರಟೆವು. ಕೋಟ ತಲುಪುವಾಗ ಮತ್ತೆ ಆ ಬೋರ್ಡಿನ ನೆನಪಾಯಿತು. ಅಪ್ಪನ ಬಳಿ
"ಹೋಗೋಣವೇ ?" ಎಂದು ಕೇಳಿ ಹಸಿರು ನಿಶಾನೆ ಪಡೆದೂ ಆಯಿತು. ಊಟದ ಸಮಯವೂ ಆಗಿದ್ದರಿಂದ ಥೀಂ
ಪಾರ್ಕ್ ನೋಡಿ, ಊಟಮಾಡಿ ಮುಂದುವರಿಯೋಣವೆಂದು ನಿರ್ಧರಿಸಿ ಸಣ್ಣ ಓಣಿಯಂತಿದ್ದ
ರಸ್ತೆಯೊಳಗೆ ಹೊಕ್ಕೆವು.
ಹಳೆಯ ಹಂಚಿನ ಮನೆಗಳು ನಮ್ಮನ್ನು ಸ್ವಾಗತಿಸಿದವು. ಅಲ್ಲೊಂದು
ಪುಟ್ಟಗುಡಿ. ಅದಕ್ಕೊಂದು ಆವರಣ ನಿರ್ಮಿಸಿ ಒಪ್ಪಗೊಳಿಸಿದ್ದರು. "ಇಲ್ಲಿ ಇನ್ನು ಸ್ವಲ್ಪ
ಸಮಯದಲ್ಲಿ ಪೂಜೆ, ಪುನಸ್ಕಾರಗಳು ಜೋರಾಗಿ ನಡೆದು, 'ಕಾರ್ಣೀಕ' ಹೆಚ್ಚಾಗಿ ದುಡ್ಡು ಮಾಡುವ
ದಂಧೆ ನಿಧಾನವಾಗಿ ಶುರುವಾಗುತ್ತದೆ. ಕಾರಂತರು ಜೀವನವಿಡೀ ಯಾವ ಡಂಭಾಚಾರವನ್ನು
ವಿರೋಧಿಸಿಕೊಂಡು ಬಂದಿದ್ದರೋ, ಅದು ಅವರ ನೆನಪಿನಲ್ಲಿ ಕಟ್ಟಿದ ಥೀಂ ಪಾರ್ಕ್
ಪಕ್ಕದಲ್ಲಿಯೇ ನಡೆಯುವ ಎಲ್ಲಾ ಸಾಧ್ಯತೆಗಳೂ ಇವೆ" ಅಪ್ಪನ ಉದ್ಗಾರ.
ಥೀಂ ಪಾರ್ಕ್ ಬೋರ್ಡು ಹೊತ್ತ ದೊಡ್ಡದೊಂದು ಕಟ್ಟಡ ಕಾಣಿಸಿತು.
ಗೇಟು
ದಾಟಿ ಒಳಗಡಿಯಿಡುವಾಗಲೇ ಮರದಡಿಯಲ್ಲೊಬ್ಬಳು ಅಜ್ಜಿ ಮೊಮ್ಮಕ್ಕಳನ್ನು ಕೂರಿಸಿಕೊಂಡು ಕಥೆ
ಹೇಳುತ್ತಿದ್ದಾಳೆ ! ಕಾರಂತರ ಮೂಕಜ್ಜಿ ಇಲ್ಲಿದ್ದಾಳೆ ಎಂದುಕೊಂಡು ಎಡಕ್ಕೆ ತಿರುಗಿದರೆ
ಅಲ್ಲೊಬ್ಬ ಎತ್ತಿನಗಾಡಿಯೇರಿ ಚಾಟಿ ಬೀಸುತ್ತಿದ್ದಾನೆ !
ಆಳೆತ್ತರದ ಬಿಳಿಬಣ್ಣದ ಎರಡು
ಸುಪುಷ್ಟ ಎತ್ತುಗಳು ಉಲ್ಲಾಸದಿಂದ ಮುನ್ನುಗ್ಗಹೊರಟಿವೆ. "ಇದೇನಿದು ? ಇದ್ದಕ್ಕಿದ್ದಂತೆ
ಇಪ್ಪತ್ತನೆಯ ಶತಮಾನದ ಆದಿಗೆ ಬಂದು ನಿಂತಂತೆ ಕಾಣುತ್ತಿದೆ !" ಎಂಬ ಆಶ್ಚರ್ಯದಿಂದ
ಸಮೀಪಿಸಿದರೆ ಇವೆಲ್ಲಾ ಸಹಜಗಾತ್ರದ ಪ್ರತಿಕೃತಿಗಳು ! ಕಾರಂತರ ಕಾಲವನ್ನು
ಹಿಡಿದಿಟ್ಟುಕೊಳ್ಳುವ ಪ್ರಯತ್ನ.
ಮತ್ತೂ ಮುಂದೆ ಸಾಗಿದರೆ ಅಲ್ಲೊಂದು ಸುಂದರ ಉದ್ಯಾನ, ಆಕರ್ಷಕ ಕೊಳ. ಕೊಳದ
ಮಧ್ಯೆ ಕಂಬವೊಂದರ ಮೇಲೆ ಸೊಂಟಕ್ಕೆ ಕೈಯಿಟ್ಟು, ಊರುಗೋಲನ್ನೂರಿ ನಿಂತ ಕಾರಂತರ
ಆಳೆತ್ತೆರದ ಕಂಚಿನ ಭವ್ಯ ಮೂರ್ತಿ.
"ಓಯ್, ಇದು ಕಾರಂತಜ್ಜನೇ ನಿತ್ತುಕೊಂಡ ಹಾಂಗೆ
ಕಾಣ್ತೆ" ತಮ್ಮ ಯೌವನದಲ್ಲಿ ಕಾರಂತರನ್ನು ಹತ್ತಿರದಲ್ಲಿಯೇ ಕಂಡ ಅಪ್ಪನ ಸರ್ಟಿಫಿಕೇಟ್ ಆ
ವಿಗ್ರಹಕ್ಕೆ ! ಪಕ್ಕದಲ್ಲಿ ಸಣ್ಣ ಮಾಡಿನಡಿಯಲ್ಲಿ ಕುಳಿತ ಭಂಗಿಯಲ್ಲಿ ಇನ್ನೊಂದು
ಮೂರ್ತಿ.
ಭವ್ಯ ಕಟ್ಟಡದೊಳಗೆ ಅಡಿಯಿಟ್ಟೆವು. ಅದರೊಳಗೆ ಒಂದು ಆಡಿಟೋರಿಯಂ,
ಅತ್ತಿತ್ತ ತಲೆಯೊಡಿಸುತ್ತಿರುವಾಗ ಓರ್ವ ಯುವಕ ಬಂದು ನಮ್ಮನ್ನು ಸ್ವಾಗತಿಸಿ ಕಾರಂತರ
ಕುರಿತಾದ ಛಾಯಾಚಿತ್ರಗಳ ಸಂಗ್ರಹಾಲಯವನ್ನು ತೋರಿಸಿದ. ವರ್ಷಕ್ಕೊಮ್ಮೆ ಕಾರಂತರ
ಸ್ಮರಣೆಯಲ್ಲಿ ನೀಡುವ ಪ್ರಶಸ್ತಿಯ ಬಗ್ಗೆಯೂ ತಿಳಿಸಿದ. ಪ್ರಶಸ್ತಿಪ್ರಧಾನ ಸಮಾರಂಭದ
ಛಾಯಾಚಿತ್ರಗಳೇ ಆ ಕೋಣೆಯ ಅರ್ಧದಷ್ಟು ತುಂಬಿಕೊಂಡಿದ್ದವು !
ಕಾರಂತಜ್ಜನ ವಿವಿಧ ಭಂಗಿಗಳ ಕಪ್ಪು-ಬಿಳುಪು ಛಾಯಾಚಿತ್ರಗಳಿದ್ದವು.
"ಇನ್ನಷ್ಟು ಚಿತ್ರಗಳು ಸಧ್ಯದಲ್ಲಿಯೇ ಬಂದು ಸೇರಲಿವೆ" ಎಂದ ಅಲ್ಲಿನ ಮೇಲ್ವಿಚಾರಣೆ
ನೋಡುತ್ತಿದ್ದ ಆ ಯುವಕ. ಆ ಛಾಯಾಚಿತ್ರಗಳಲ್ಲಿ ಇಳಿವಯಸ್ಸಿನ ಕಾರಂತರ ತೇಜಸ್ಸು
ಪ್ರಜ್ವಲಿಸುತ್ತಿತ್ತು. ಯೌವನದ ಛಾಯಾಚಿತ್ರಗಳೂ ಒಂದೆರಡಿದ್ದವು. ಇಂದಿನ ಯುಗದ ಡಿಜಿಟಲ್
ಕ್ಯಾಮರಾಗಳು ಅಂದಿರುತ್ತಿದ್ದರೆ ಶಿವರಾಮ ಕಾರಂತರ ಅನಂತ, ಅಪಾರ ಛಾಯಾಚಿತ್ರಗಳನ್ನು ಇನ್ನಷ್ಟು ಸೆರೆಹಿಡಿದು ಮುಂದಿನ ಪೀಳಿಗೆಗೆ ಕಾಪಿಡಬಹುದಿತ್ತು.
ಕಾರಂತ ಥೀಂ ಪಾರ್ಕ್ ನ ನಿರ್ಮಾಣ ಸರಕಾರದ ವತಿಯಿಂದ ಹಾಗೂ ಸಾರ್ವಜನಿಕರ
ಸಹಯೋಗದೊಂದಿಗೆ ನಡೆದಿದೆ. ಆಹಾರೋದ್ಯಮಿ ಡಾ. ಸದಾನಂದ ಮಯ್ಯರ ಗೌರವಾಧ್ಯಕ್ಷತೆಯಲ್ಲಿ,
ಇತರೇ ಸಾರ್ವಜನಿಕರಿರುವ ಸಮಿತಿಯೊಂದು ಥೀಂ ಪಾರ್ಕಿನ ದೈನಂದಿನ ಚಟುವಟಿಕೆಗಳ ಉಸ್ತುವಾರಿ
ವಹಿಸಿಕೊಂಡಿದೆ. ಉಡುಪಿ ಜಿಲ್ಲಾಡಳಿತ ಕೈಜೋಡಿಸಿದೆ.
ಕಾರಂತರು ಜನಿಸಿದ ಮನೆ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ
ಒಡೆದುಹೋಗಿದೆ. ಸ್ಥಳೀಯರು ಎಷ್ಟೇ ಪ್ರಯತ್ನಪಟ್ಟರೂ, ರಾಜಕೀಯವಾಗಿ ಒತ್ತಡ ತಂದರೂ
ಮನೆಯನ್ನು ಪೂರ್ತಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ ! ಮನೆಯ ಅರ್ಧ ಭಾಗದಲ್ಲಿ
ವಿಶಾಲವಾದ ಟಾರು ರಸ್ತೆಯ ಅಂಚು ವ್ಯಾಪಿಸಿದೆ. ಒಡೆಯದೇ ಉಳಿದ ಉಳಿದೊಂದು ಭಾಗದಲ್ಲಿ
ಕಾರಂತರ ದೂರದ ಸಂಬಂಧಿಗಳು ವಾಸವಿದ್ದಾರಂತೆ ! "ಕಾರಂತರು ಹುಟ್ಟಿದ ಮನೆ ನೋಡೋಣ" ಎಂಬ
ಕುತೂಹಲ ಜರ್ರನೆ ಇಳಿಯಿತು.
ಛಾಯಾಚಿತ್ರಗಳನ್ನು ವೀಕ್ಷಿಸಿ ಹೊರಬಂದೆವು. ಅದೇ ಕಟ್ಟಡದ ಇನ್ನೊಂದು
ಕೊಠಡಿಯಲ್ಲಿ ಅಂಗನವಾಡಿಯೂ ನಡೆಯುತ್ತಿತ್ತು. ಆ ಮಕ್ಕಳ ಕಲರವ ಕೇಳಿಸಿಕೊಳ್ಳಲು ಕಾರಂತಜ್ಜ
ಅಲ್ಲೇ ಎಲ್ಲೋ ಕುಳಿತಿದ್ದಾರೆ ಎಂದೆನಿಸಿತು.
ಮೇಲ್ಮಹಡಿಯಲ್ಲಿ ಗ್ರಂಥಾಲಯ. ಮೆಟ್ಟಿಲ ಬದಿಯಲ್ಲಿ ಕಾರಂತರ ಸಮಗ್ರ
ಸಾಹಿತ್ಯದ ವಿವರಗಳಿವೆ. ಅವೆಷ್ಟೋ ಗ್ರಂಥಗಳ ಮುದ್ರಿತ ಪ್ರತಿಗಳು ಖಾಲಿಯಾಗಿ ಇಂದಿಗೆ
ಸಾಹಿತ್ಯಾಸಕ್ತರಿಗೆ ಅಲಭ್ಯವಾಗಿವೆ. ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ಕುಳಿತು ಓದಲು
ಅನುಕೂಲವಾದ ಪೀಠೋಪಕರಣಗಳೇನೋ ಇವೆ. ಆದರೆ ಹೆಚ್ಚಿನವರು ಮನೆಗೆ ಪುಸ್ತಕಗಳನ್ನು ಒಯ್ದು
ಓದುವವರೇ, ಎಂದ ಮೇಲ್ವಿಚಾರಕ. ಮಹಡಿಯ ಮೇಲಿನಿಂದ ಕೆಳಗಿನ ಉದ್ಯಾನ, ಕೊಳದ ಮಧ್ಯೆಯಿರುವ
ಕಾರಂತರ ಕಂಚಿನ ವಿಗ್ರಹ ನಯನ ಮನೋಹರವಾಗಿ ಕಂಡಿತು. ಕೆಲವು ಕ್ಷಣ ಆನಂದಿಸಿ ಹೊರಟೆವು.
ಸಂದರ್ಶಕರ ಅಭಿಪ್ರಾಯಗಳನ್ನು ಬರೆದಿಡುವ ಪುಸ್ತಕ ನಮ್ಮ ಮುಂದಿಟ್ಟು
ಸಲಹೆ, ಸೂಚನೆ, ಅಭಿಪ್ರಾಯ ಬರೆಯುವಂತೆ ಕೇಳಿದಾಗ "ಕಾರಂತರ ಕುರಿತಾದ ವೀಡಿಯೋ ಹಾಗೂ ಅವರ
ಧ್ವನಿಸುರುಳಿಗಳ ಸಂಗ್ರಹವನ್ನೂ ಸಾರ್ವಜನಿಕರಿಗೆ ಒದಗಿಸುವಂತಹ ಕಾರ್ಯದ ಅವಶ್ಯಕತೆಯಿದೆ"
ಎಂದು ಬರೆದೆವು. ಒಂದಷ್ಟು ಫೋಟೋ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಹೊರಬಂದೆವು.
ಎತ್ತಿನಗಾಡಿ ಮತ್ತೊಮ್ಮೆ ನಮ್ಮನ್ನು ಸೆಳೆಯಿತು. ಅಪ್ಪನಂತೂ ತಮ್ಮ
ಬಾಲ್ಯದಲ್ಲಿ ಆನಂದಿಸಿದ ಎತ್ತಿನಗಾಡಿಯ ಸವಾರಿಯನ್ನು ಮತ್ತೆ ಮತ್ತೆ ಮೆಲುಕುಹಾಕಿ
ಸಂತಸಪಟ್ಟರು. ಗಾಡಿಯ ವೇಗನಿಯಂತ್ರಿಸುವ 'ಬೀರಿ' (ಬ್ರೇಕ್) ಇದೆಯೋ ಎಂದು ಬಗ್ಗಿ ನೋಡಿ,
"ಬೀರಿಯೂ ಇದ್ದಿದ್ರೆ ಒಳ್ಳೆದಿತ್ತು. ಇನ್ನಾಣ ಮಕ್ಳಿಗೆ ಎತ್ತಿನಗಾಡಿ ಹೇಳಿರೆ ಎಂತ ಹೇಳಿ
ತೋರ್ಸುಕೆ ಇಲ್ಲಿಗೇ ಬರ್ವೇಕಷ್ಟೇ" ಎಂಬ ವಿಷಾದವೂ ಜೊತೆಗೆ ಇಣುಕಿತು.
ಕಾರಂತಸಿರಿ ಎಂಬ ಕರಕುಶಲ ವಸ್ತುಗಳ ಮಾರಾಟ ಮಳಿಗೆಯೂ ಅಲ್ಲಿಯೇ
ಪಕ್ಕದಲ್ಲಿತ್ತು. "ನನ್ನ ಬಳಿಯಿಲ್ಲದ ಕಾರಂತರ ಪುಸ್ತಕಗಳು ಯಾವುದಾದರೂ ಇದ್ದರೆ
ಕೊಳ್ಳೋಣ" ಎಂದು ಅಂಗಡಿಯೊಳಗೆ ಇಣುಕಿದೆ. ಹಲವು ಲೇಖಕರ ಒಂದಷ್ಟು ಪುಸ್ತಕಗಳ ಮಧ್ಯೆ
ಕಾರಂತರ ಒಂದೆರಡು ಕೃತಿಗಳನ್ನು ಮಾತ್ರ ಕಂಡು ನನ್ನ ಉತ್ಸಾಹ ಪುಸ್ಸೆಂದಿತು. ಎರಡು
ಪುಸ್ತಕಗಳನ್ನು ಕೊಂಡು ಸಮಾಧಾನಪಟ್ಟುಕೊಂಡೆ.
ಕಾರಂತಜ್ಜನ ನೆನಪುಗಳೊಂದಿಗೆ ಮರಳಿ ಮನೆ ಕಡೆಗೆ ಕಾರು ತಿರುಗಿಸಿ
ಆಕ್ಸಿಲೇಟರ್ ತುಳಿದೆ. ಕಾರಂತರು ಹುಟ್ಟಿದ ಮನೆಯನ್ನು ಒಡೆದು, ಭಾಗ ಮಾಡಿ ನಿರ್ಮಿಸಿದ
ಅದೇ ಹೆದ್ದಾರಿಯಲ್ಲಿ, ಶರವೇಗದಲ್ಲಿ ನನ್ನ ಕಾರು ಓಡಿದ್ದು ಮಾತ್ರ ಯಾಕೋ ನನ್ನನ್ನೇ ವಿಧಿ
ವ್ಯಂಗ್ಯವಾಗಿ ಅಣಕಿಸಿದಂತಾಯಿತು.
(ವಿ.ಸೂ. - ಛಾಯಾಚಿತ್ರಗಳನ್ನು ಹಿರಿದಾಗಿಸಲು ಅವುಗಳ ಮೇಲೆ ಕ್ಲಿಕ್ ಮಾಡಿ.)
(ವಿ.ಸೂ. - ಛಾಯಾಚಿತ್ರಗಳನ್ನು ಹಿರಿದಾಗಿಸಲು ಅವುಗಳ ಮೇಲೆ ಕ್ಲಿಕ್ ಮಾಡಿ.)
No comments:
Post a Comment