- ವಂದನಾ ಎನ್
ಒಂದು ಅಭಿಪ್ರಾಯ ಕೇಳುವುದು ಅಂದರೆ ಅದರ ಹಿಂದೆ ಇರುವ ಅನೇಕ ಅನುಭವಗಳನ್ನು ಕೇಳಿದಂತೆಯೇ. ಅದು ಭಾವನೆ ಮತ್ತು ದೃಷ್ಟಿಕೋನಗಳ ಮಿಶ್ರಣ. ಕೆಲವೊಮ್ಮೆ ಅವು ಸಲಹೆಯಂತೆ ಕಾಣುತ್ತವೆ, ಕೆಲವೊಮ್ಮೆ ಟೀಕೆಯಂತೆ ಅನಿಸಬಹುದು. ಕೆಲ ಅಭಿಪ್ರಾಯಗಳು ಅನುಭವಗಳಿಂದ ಮೂಡಿರುತ್ತವೆ. ಕೆಲವು ಅಭಿಪ್ರಾಯಗಳು, ಆಲೋಚನೆ, ಚಿಂತನೆ ಹಾಗೂ ವಿವೇಚನೆಯ ಮೂಲಕ ಮೂಡಿರುತ್ತವೆ. ಇನ್ನೂ ಕೆಲವು ಕ್ಷಣಿಕ ಪ್ರತಿಕ್ರಿಯೆಗಳಷ್ಟೇ. ಒಬ್ಬ ವ್ಯಕ್ತಿ ಶಾಂತವಾಗಿರುವಾಗ ಒಂದು ವಿಷಯದ ಬಗ್ಗೆ ಸೂಕ್ಷ್ಮವಾಗಿ ಯೋಚಿಸಿ ಅಭಿಪ್ರಾಯ ನೀಡಬಹುದು. ಅದೇ ವ್ಯಕ್ತಿ ಕೋಪದಲ್ಲಿದ್ದರೆ, ಅದೇ ವಿಚಾರದ ಬಗ್ಗೆ ಉದಾಸೀನವಾಗಿ, ಚಿಂತನ ಮಂಥನ ನಡೆಸದೆ ಪ್ರತಿಕ್ರಿಯಿಸಬಹುದು. ಪ್ರತಿ ಅಭಿಪ್ರಾಯಕ್ಕೂ ನಮ್ಮ ಯೋಚನೆಗಳಲ್ಲಿ ಜಾಗ ಕೊಡಬೇಕೆಂದಿಲ್ಲ.
ವಿಭಿನ್ನ ಜನರಿರುವ ಈ ಸಮಾಜದಲ್ಲಿ, ವಿಭಿನ್ನ ಅಭಿಪ್ರಾಯಗಳನ್ನು ನಾವು ಕೇಳುತ್ತೇವೆ. ವಿಷಯ ಒಂದೇ ಆಗಿದ್ದರೂ ಅದರ ಬಗ್ಗೆ ಇರುವ ಅಭಿಪ್ರಾಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಬಾಲ್ಯದ ಅನುಭವಗಳು, ಸಾಂಸ್ಕೃತಿಕ ಹಿನ್ನೆಲೆ, ಸಂದರ್ಭಗಳು ಮತ್ತು ಸುತ್ತಲಿನ ವಾತಾವರಣ ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ರೂಪಿಸುತ್ತವೆ. ಉದಾಹರಣೆಗೆ, ಹಣದ ಕೊರತೆಯಿಲ್ಲದ ವಾತಾವರಣದಲ್ಲಿ ಬೆಳೆದವರಿಗೆ ಹಣ ಕೇವಲ ಒಂದು ಸಾಧನದಂತೆ ತೋರಬಹುದು. ಅದೇ ಬಡ ಕುಟುಂಬದಲ್ಲಿ ಬೆಳೆದವರಿಗೆ ಹಣ ಭದ್ರತೆ, ಸ್ಥಿರತೆ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿರುತ್ತದೆ. ಒಂದೇ ಹಣ, ಅಭಿಪ್ರಾಯಗಳು ಬೇರೆ ಬೇರೆ. ಹಾಗೆಯೇ, ಒಂದು ವಿಷಯದ ಮೇಲೆ ಪರಿಸ್ಥಿತಿ ಬದಲಾಗುತ್ತಾ ಬಂದಂತೆ ಒಬ್ಬ ವ್ಯಕ್ತಿಯ ಅದರ ಮೇಲಿನ ಅಭಿಪ್ರಾಯವೂ ಬದಲಾಗುತ್ತದೆ. ಉದಾಹರಣೆಯಾಗಿ, ಸಣ್ಣ ವಯಸ್ಸಿನಲ್ಲಿ ಅಪ್ಪ-ಅಮ್ಮ ಮಾಡಿದ ನಿಯಂತ್ರಣ ಅನಗತ್ಯವೆಂದೆನಿಸದರೂ, ಕಾಲ ಕಳೆದಂತೆ ಅದೇ ಕಾಳಜಿಯ ರೂಪವಾಗಿ ಕಾಣುತ್ತದೆ.
ಸಾಮಾನ್ಯವಾಗಿ, ಅಭಿಪ್ರಾಯ, ಕೇಳುವವನ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ. ಅವು ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೆನ್ನುವುದನ್ನು ಅಭಿಪ್ರಾಯ ನೀಡುವವರು ಅಷ್ಟು ಯೋಚಿಸುವುದಿಲ್ಲ. ಆ ಅಭಿಪ್ರಾಯ ಯಾವ ರೀತಿಯದು, ಅದು ತಮ್ಮ ಜೀವನಕ್ಕೆ ಅನುಗುಣವಾಗಿದೆಯೇ, ಯಾವ ಉದ್ದೇಶದಿಂದ ನೀಡಿರಬಹುದು, ನೀಡುವವನ ಮನಸ್ಥಿತಿ ಹೇಗಿರಬಹುದು ಎನ್ನುವುದನ್ನು ಅಭಿಪ್ರಾಯವನ್ನು ಕೇಳುವವರು ಆಳವಾಗಿ ಚಿಂತಿಸುವುದು ಕಡಿಮೆ.
ಎಲ್ಲರ ಮೇಲೂ ಅಭಿಪ್ರಾಯಗಳ ಪರಿಣಾಮ ಒಂದೇ ರೀತಿಯಲ್ಲಿ ಇರದು. ನಮ್ಮ ಜೀವನದಲ್ಲಿ ನಾವು ಮಹತ್ವ ನೀಡುವ ವ್ಯಕ್ತಿಯಿಂದ ಬಂದ ಮಾತುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಪರಿಸ್ಥಿತಿಗೆ ತಕ್ಕ ಸಮಯದಲ್ಲಿ ಅಭಿಪ್ರಾಯಗಳನ್ನು ನೀಡಿದರೆ, ಆ ಅಭಿಪ್ರಾಯಗಳು ಪರಿಣಾಮಕಾರಿಯಾಗುತ್ತವೆ. ಯಾವ ಅಭಿಪ್ರಾಯಗಳು ಪರಿಣಾಮ ಬೀರುತ್ತವೆ ಮತ್ತು ಯಾವುವು ಬೀರುವುದಿಲ್ಲ ಎನ್ನುವುದರ ವ್ಯತ್ಯಾಸ, ಕೇವಲ ಅಭಿಪ್ರಾಯದಲ್ಲಷ್ಟೇ ಅಲ್ಲದೆ ಕೇಳುವವರ ಮನಸ್ಥಿತಿಯಲ್ಲಿದೆ.
ಅಭಿಪ್ರಾಯಗಳ ಬಗ್ಗೆ ನನ್ನ ತಿಳುವಳಿಕೆ ಮತ್ತು ಆಲೋಚನೆಗಳ ಆಧಾರದ ಮೇಲೆ, ಅವನ್ನು ನೀಡುವ ಮೊದಲು ಮತ್ತು ಸ್ವೀಕರಿಸುವಾಗ ನೆನಪಿಟ್ಟುಕೊಳ್ಳಬಹುದಾದ ಕೆಲವು ವಿಚಾರಗಳನ್ನು ಹೇಳಬಹುದು.
- ಊಹೆಗಳ ಮೇಲೆ ಅಭಿಪ್ರಾಯ ನೀಡುವುದಕ್ಕಿಂತ, ನಮ್ಮ ವೈಯಕ್ತಿಕ ಅನುಭವದ ಆಧಾರದ ಮೇಲೆ ಅಭಿಪ್ರಾಯ ಹೇಳುವುದು ಉತ್ತಮ.
- ಸ್ಪಷ್ಟವಾದ ತಿಳುವಳಿಕೆ ಇಲ್ಲದ ಅಭಿಪ್ರಾಯಗಳು ಕೇಳುವವರ ನಿರ್ಣಯದ ಮೇಲೆ ಅನಾನುಕೂಲಕರ ಪರಿಣಾಮ ಬೀರುವ ಸಾಧ್ಯತೆ ಇದೆ.
- ಉದ್ದೇಶ ಒಳ್ಳೆಯದಾದರೂ, ಸರಿಯಾದ ಮಾದರಿ ಹಾಗೂ ರೀತಿಯಲ್ಲಿ ಹೇಳದಿದ್ದರೆ ಅದರ ಪರಿಣಾಮ ನಮ್ಮ ಉದ್ದೇಶಕ್ಕಿಂತ ಬೇರೆ ಆಗಬಹುದೆನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಅಭಿಪ್ರಾಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಕ್ಷಣಿಕ ಭಾವನೆಗಳಿಂದ ಉಂಟಾಗುವ ಪ್ರತಿಕ್ರಿಯೆಗಳನ್ನು ತಪ್ಪಿಸಬಹುದು.
- ಅಭಿಪ್ರಾಯಗಳ ಹಿಂದೆ ಇರುವ ಉದ್ದೇಶವನ್ನು ಗಮನಿಸಿ ಹಾಗೂ ನೀಡುವವನ ಮನಸ್ಥಿತಿಯನ್ನು ಅರಿತುಕೊಳ್ಳಬೇಕು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗುತ್ತದೆ.
- ಅಭಿಪ್ರಾಯಗಳು ನಮ್ಮ ಮೌಲ್ಯಗಳಿಗೆ ಹೊಂದಿಕೆಯಾಗುತ್ತವೆಯೇ ಅಥವಾ ಕೇವಲ ಮತ್ತೊಬ್ಬರ ದೃಷ್ಟಿಕೋನವೇ ಅನ್ನುವುದನ್ನು ಅವಲೋಕಿಸಬೇಕು.
- ಎಲ್ಲಾ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕೆಂದಿಲ್ಲ. ಅಭಿಪ್ರಾಯದ ಬಗ್ಗೆ ನಮಗಿರುವ ಭಿನ್ನಾಭಿಪ್ರಾಯವನ್ನು ಶಾಂತವಾಗಿ ತಿಳಿಸಿದರೆ ಅದು ಉತ್ತಮ.
ಅಂತಿಮವಾಗಿ, ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ದೃಷ್ಟಿಕೋನವಿರುತ್ತದೆ. ನಾವು ಕೇಳಿಸಿಕೊಳ್ಳುವ ಪ್ರತಿಯೊಂದು ಅಭಿಪ್ರಾಯವೂ ನಮ್ಮ ಜೀವನದ ದಿಕ್ಕನ್ನು ನಿರ್ಧರಿಸಬೇಕಿಲ್ಲ. ಇತರರ ಮಾತುಗಳು ಕೇವಲ ಒಂದು 'ಸಲಹೆ' ಅಥವಾ 'ಮಾಹಿತಿ'ಯಾಗಿರಬೇಕೆ ಹೊರತು, ಅವು ನಮ್ಮ ವ್ಯಕ್ತಿತ್ವದ ಮೇಲಿನ 'ತೀರ್ಪು'ಗಳಾಗಬಾರದು.
ಅಭಿಪ್ರಾಯಗಳ ಈ ಗದ್ದಲದ ನಡುವೆ, ಯಾವುದು ನಮಗೆ ಪೂರಕವಾಗಿದೆ ಮತ್ತು ಯಾವುದು ಕೇವಲ ನಿರರ್ಥಕ ಶಬ್ದವಾಗಿದೆ ಎಂಬುದನ್ನು ವಿವೇಚನೆಯಿಂದ ಆರಿಸಿಕೊಳ್ಳುವ ಕಲೆ ನಮಗೆ ಸಿದ್ಧಿಸಬೇಕು. ನಮ್ಮ ಅಂತರಂಗದ ಧ್ವನಿಯು ಸ್ಪಷ್ಟವಾಗಿದ್ದಾಗ, ಹೊರಗಿನ ಸಾವಿರಾರು ಅಭಿಪ್ರಾಯಗಳು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಭಿಪ್ರಾಯಗಳನ್ನು ಗೌರವಿಸೋಣ, ಆದರೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೋ ಬೇಡವೋ ಎಂಬ ವಿವೇಚನೆಯನ್ನು ಮಾತ್ರ ನಮ್ಮ ಕೈಯಲ್ಲೇ ಉಳಿಸಿಕೊಳ್ಳೋಣ.
No comments:
Post a Comment