ರಕ್ತದಾನ: ಸಮಾಜದ ಋಣ ತೀರಿಸುವ ಹಾದಿ

- ರವಿಕುಮಾರ್ ಎಂ.ಎಸ್.

ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ. 


ಹಾಗೆ ನೋಡಿದರೆ ನಾನು ರಕ್ತದಾನ ಮಾಡಲು ಶುರು ಮಾಡಿದ್ದು ಐದು ವರ್ಷಗಳ ಕೆಳಗೆ. ಅದಕ್ಕೂ ಮೊದಲು ಹಲವು ವರ್ಷಗಳಿಂದ ನನ್ನಲ್ಲಿ ಸದಾ ಒಂದು ಕೊರಗು ಕಾಡುತಿತ್ತು. ನಾನು ಬದುಕುತ್ತಿರುವ ಈ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇನೆ? ಯಾವ ರೀತಿಯಲ್ಲೂ ನನ್ನ ಸುತ್ತಲಿನ ಸಮಾಜಕ್ಕೆ ಸಹಾಯ ಮಾಡುತ್ತಿಲ್ಲವಲ್ಲ ಎಂಬಿತ್ಯಾದಿ ಯೋಚನೆಗಳು ಮನದಲ್ಲಿ ಮೂಡಿ ಖಿನ್ನತೆ ಆವರಿಸುತ್ತಿತ್ತು. ನನಗೆ ಮೊದಲಿನಿಂದಲೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂಬ ಆಶಯವಿದೆ ಹಾಗೂ ಈ ಬಗೆಯ ಮಾಡುವ ಕೆಲಸಗಳು ನನ್ನ ಮನಸ್ಸಿಗೆ ಒಂದು ರೀತಿಯ ಖುಷಿ ಹಾಗೂ ಆತ್ಮತೃಪ್ತಿ ನೀಡುತ್ತವೆಂದು ನನಗೆ ಸ್ಪಷ್ಟವಾಗಿ ತಿಳಿದಿದೆ. ಇದೇ ಕಾರಣದಿಂದ ನಾನು ಕೆಲಸ ಮಾಡುವ ಕಂಪನಿಯ ‘ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ’ ಕಾರ್ಯಕ್ರಮದಡಿಯಲ್ಲಿ ಸರಕಾರಿ ಶಾಲೆಗಳಲ್ಲಿ ವಾರಾಂತ್ಯಗಳಲ್ಲಿ ಮಕ್ಕಳಿಗೆ ಪಾಠ ಹೇಳುವುದಕ್ಕೆ ಕೆಲವು ಬಾರಿ ಹೋಗಿದ್ದೆ. ಆಮೇಲೆ ನನ್ನ ವೈಯಕ್ತಿಕ ಕಾರಣಗಳಿಂದ ಮುಂದುವರೆಸಲು ಸಾಧ್ಯವಾಗಲಿಲ್ಲ.
           
ನನ್ನ ಜೀವನದಲ್ಲಿ ನಡೆದ ಹಲವು ಘಟನೆಗಳಿಂದ ನನಗೆ ರಕ್ತದಾನದ ಮಹತ್ವದ ಬಗ್ಗೆ ಸ್ವಲ್ಪ ಅರಿವಿತ್ತು, ನಾನೂ ಕೂಡ ರಕ್ತದಾನ ಮಾಡಬೇಕೆಂಬ ಹಂಬಲವಿತ್ತು. ಐದು ವರ್ಷಗಳ ಹಿಂದೆ ರಕ್ತದಾನ ಮಾಡುವ ಅವಕಾಶ ನನಗೆ ಒದಗಿ ಬಂತು. ಅಂದು ನನ್ನ ಅಕ್ಕನ ಮನೆಗೆ ಹೋಗಿ ಮರಳುತ್ತಿದ್ದಾಗ ಒಂದು ರಕ್ತದಾನ ಶಿಬಿರ ನಡೆಯುತ್ತಿದದ್ದನ್ನು ನೋಡಿದೆ. ಒಂದು ಕ್ಷಣವೂ ಯೋಚಿಸದೆ ಆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು, ರಕ್ತದಾನ ಮಾಡಿದೆ. 

ಇದಾದ ನಂತರ, ನನ್ನ ಮನೆಯ ಹತ್ತಿರವೇ ಇರುವ ರಕ್ತನಿಧಿ ಕೇಂದ್ರದಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡಲು ಶುರು ಮಾಡಿದೆ. ಈ ಅಭ್ಯಾಸ, ಈಗ ನನ್ನ ಜೀವನದ ಭಾಗವೇ ಆಗಿದೆ. ಸಮಾಜಮುಖಿಯಾಗಿ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೆನಲ್ಲ ಎನ್ನುವ ತೃಪ್ತಿ ಇದೆ. ಒಮ್ಮೊಮ್ಮೆ ನಾನು ರಕ್ತದಾನ ಶುರು ಮಾಡಲು ತಡ ಮಾಡಿದೆ ಎಂಬ ಆಲೋಚನೆ ಮೂಡಿ ಬೇಸರವಾಗುತ್ತದೆ.
 
ನಮ್ಮಲ್ಲಿ ಹಲವು ಜನರಿಗೆ ರಕ್ತನಿಧಿ ಕೇಂದ್ರದವರು ರಕ್ತವನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಇದರ ಜೊತೆಗೆ ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದೆಂಬ ತಪ್ಪು ತಿಳುವಳಿಕೆ ಇದೆ. ಈ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ನನಗೆ ರಕ್ತನಿಧಿ ಕೇಂದ್ರದವರಿಂದ ದೊರೆತ ಹಲವು ಮಾಹಿತಿಗಳ ಜೊತೆಗೆ, ನಾನು ಓದಿ ಕಂಡುಕೊಂಡ ಹಲವಾರು ವಿಷಯಗಳನ್ನು ಕೆಳಗೆ ದಾಖಲಿಸಿದ್ದೇನೆ. ಇದರಿಂದ ತಪ್ಪು ಗ್ರಹಿಕೆ ದೂರವಾಗಿ ಒಂದಷ್ಟು ಓದುಗರಿಗೆ ರಕ್ತದಾನ ಮಾಡಲು ಪ್ರೇರೇಪಣೆಯಾದರೆ ನನ್ನ ಶ್ರಮ ಸಾರ್ಥಕವೆಂದು ಭಾವಿಸಿದ್ದೇನೆ.
 
1. ರಕ್ತದಾನಿಯೊಬ್ಬರು ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಿದಾಗ ಮೊದಲು ಅವರು ರಕ್ತದಾನ ಮಾಡಲು ಯೋಗ್ಯರೆ ಎಂದು ಕಂಡು ಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಮಾಹಿತಿಗಳನ್ನು ಅವರು ನೀಡಿದ ಅರ್ಜಿಯಲ್ಲಿ ಕೊಡಬೇಕಾಗುತ್ತದೆ. ನಂತರ ರಕ್ತದೊತ್ತಡ ಪರಿಶೀಲಿಸಿ, ಕೇವಲ ಐದತ್ತು ನಿಮಿಷದಲ್ಲಿ 350 ಮಿಲೀ ಯಿಂದ 500 ಮಿಲೀ ಯಷ್ಟು ರಕ್ತ ಸಂಗ್ರಹ ಮಾಡುತ್ತಾರೆ.

2. ರಕ್ತದಾನಿಯಿಂದ ಒಂದು ಯೂನಿಟ್ (ಪೌಚ್) ರಕ್ತವನ್ನು ಸಂಗ್ರಹಿಸಲು ರಕ್ತನಿಧಿಗೆ ಕೇಂದ್ರಕ್ಕೆ ಆಗುವ ಪ್ರಮುಖ ಖರ್ಚುಗಳು ಕೆಳಗಿನಂತಿವೆ:
  • ಉಪಕರಣಗಳು ಮತ್ತು ರಕ್ತ ಸಂಗ್ರಹಣಾ ಸಾಮಗ್ರಿಗಳು: ರಕ್ತ ಸಂಗ್ರಹ ಪೌಚ್ (Blood Bag) – ₹250–₹400, ಸೂಜಿಗಳು, ಟ್ಯೂಬುಗಳು, ಆಲ್ಕೋಹಾಲ್ ಸ್ವಾಬ್, ಕಾಟನ್, ಬ್ಯಾಂಡೇಜ್ – ₹50–₹100
  • ಕಡ್ಡಾಯ ರಕ್ತ ತಪಾಸಣೆ: ಸಂಗ್ರಹಿಸಿದ ರಕ್ತ ಅಗತ್ಯವಿರುವವರಿಗೆ ನೀಡಲು ಯೋಗ್ಯವೇ ಎಂದು ತಿಳಿದುಕೊಳ್ಳಲು HIV, ಹೆಪಟೈಟಿಸ್ B ಮತ್ತು C, ಸಿಫಿಲಿಸ್, ಮಲೇರಿಯಾ ರೋಗಗಳ ಸೋಂಕಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಗಳಿಗೆ ಬಳಸುವ ಕಿಟ್‌ಗಳು ಮತ್ತು ತಂತ್ರಜ್ಞಾನಕ್ಕೆ (ELISA ಅಥವಾ  NAT Testing - Nucleic Acid Test) ₹600–₹800 ವೆಚ್ಚವಾಗುತ್ತದೆ.
  • ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ವೆಚ್ಚ: ವೈದ್ಯರು, ನರ್ಸ್‌ಗಳು, ಲ್ಯಾಬ್ ತಂತ್ರಜ್ಞರು ಮತ್ತು ಇತರೇ ಸಿಬ್ಬಂದಿಗಳ ವೇತನ. ದಾಖಲೆಗಳ ನಿರ್ವಹಣೆ, ತಂತ್ರಾಂಶ, ರಕ್ತ ನಿಧಿ ಕೇಂದ್ರದ ಬಾಡಿಗೆ ಹಾಗೂ ನಿರ್ವಹಣೆ. ಪ್ರತೀ ದಾನಕ್ಕೆ ಸರಾಸರಿ: ₹100–₹150 ವೆಚ್ಚವಾಗುತ್ತದೆ.
  • ರಕ್ತದ ಘಟಕಗಳ ವಿಂಗಡಣೆ (Component Separation) ವೆಚ್ಚ: ದಾನಿಯಿಂದ ಸಂಗ್ರಹಿಸಿದ ರಕ್ತದ ಘಟಕಗಳನ್ನು (ಕೆಂಪು ರಕ್ತ ಕಣಗಳು, ಪ್ಲೇಟ್ಲೆಟ್ ಗಳು ಹಾಗೂ ಪ್ಲಾಸ್ಮಾ) ಪ್ರತ್ಯೇಕಿಸಿ ಶೇಖರಿಸಿಡಲಾಗುತ್ತದೆ. ಈ ಪ್ರತ್ಯೇಕಿಸುವಿಕೆಗೆ ತಗಲುವ ವೆಚ್ಚ ಸುಮಾರು ₹100–₹200.
  • ಶೇಖರಣೆ ಮತ್ತು ಶೈತ್ಯೀಕರಣ ವೆಚ್ಚ: ರಕ್ತವು ಹಾಳಾಗದಂತೆ ತಡೆಯಲು ಅದನ್ನು ನಿರಂತರವಾಗಿ ನಿರ್ದಿಷ್ಟ ತಾಪಮಾನದಲ್ಲಿ ಶೇಖರಿಸಿಡಬೇಕು. ಇದಕ್ಕಾಗಿ ಬಳಸುವ ವಿಶೇಷ ವೈದ್ಯಕೀಯ ಶಿತಲೀಕರಣ ಯಂತ್ರಗಳು ಮತ್ತು ನಿರಂತರ ವಿದ್ಯುತ್ ಸರಬರಾಜಿನ (UPS/Generator) ಖರ್ಚು ಇರುತ್ತದೆ.  ಸುಮಾರು ₹100–₹200.
  • ದಾನಿಗಳಿಗೆ ನೀಡುವ ಆಹಾರ/ಪಾನೀಯ: ರಕ್ತದಾನಿಗಳಿಗೆ ಲಘು ಆಹಾರ (ಪೇಯ, ಬಿಸ್ಕೆಟ್ ಇತ್ಯಾದಿ) ನೀಡಲಾಗುತ್ತದೆ. ಇದಕ್ಕೆ ₹30–₹50 ಖರ್ಚಾಗುತ್ತದೆ.
ಮೇಲಿನ ಎಲ್ಲಾ ಖರ್ಚುಗಳನ್ನು ಪರಿಗಣಿಸಿದಾಗ ಪ್ರತೀ ಪೌಚ್ ಗೆ ಅಂದಾಜು ಸಂಸ್ಕರಣಾ ವೆಚ್ಚ  ₹1,300 ರಿಂದ ₹2,100 (ಸರ್ಕಾರಿ ರಕ್ತನಿಧಿ ಕೇಂದ್ರದಲ್ಲಿ ಸ್ವಲ್ಪ ಕಡಿಮೆ, ಖಾಸಗಿ ಕೇಂದ್ರದಲ್ಲಿ ಹೆಚ್ಚು)

3. ರಕ್ತನಿಧಿ ಕೇಂದ್ರಗಳು ರಕ್ತವನ್ನು ಮಾರಾಟ ಮಾಡುವುದಿಲ್ಲ, ಬದಲಿಗೆ ರಕ್ತವನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪರೀಕ್ಷಿಸಿ ಮತ್ತು ಶೇಖರಿಸಲು ತಗಲುವ "ಸಂಸ್ಕರಣಾ ವೆಚ್ಚ"ವನ್ನು ಮಾತ್ರ ಪಡೆಯುತ್ತಾರೆ. 

4. ಕರ್ನಾಟಕದಲ್ಲಿ ಮತ್ತು ಭಾರತದಾದ್ಯಂತ ರಕ್ತದ ಸಂಸ್ಕರಣಾ ವೆಚ್ಚವನ್ನು ಸರ್ಕಾರ ನಿಯಂತ್ರಿಸುತ್ತದೆ.

5. ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ (BPL) ಕಾರ್ಡ್ ಹೊಂದಿರುವವರಿಗೆ ಮತ್ತು ಥಲಸ್ಸೆಮಿಯಾ ರೋಗಿಗಳಿಗೆ ರಕ್ತ ಉಚಿತ. 

6. ವರ್ಷದಲ್ಲಿ ರಕ್ತನಿಧಿ ಕೇಂದ್ರಗಳು ಸಂಗ್ರಹಿಸುವ ರಕ್ತದ ಶೇ ೨೫ ಭಾಗವನ್ನು ಸರಕಾರಿ ಸಂಸ್ಥೆಗಳಿಗೆ (ಕಿದ್ವಾಯಿ ತರದ) ನೀಡಬೇಕು.

7. ಖಾಸಗಿ ರಕ್ತನಿಧಿಗಳಲ್ಲಿ ಸರ್ಕಾರಿ ನಿಯಮದಂತೆ ಒಂದು ಯುನಿಟ್ ರಕ್ತಕ್ಕೆ ಅಂದಾಜು ₹1,050 ರಿಂದ ₹1,550 ವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಬಹುದು (ಇದು ಪರೀಕ್ಷೆಗಳ ವಿಧಕ್ಕೆ ಅನುಗುಣವಾಗಿ ಬದಲಾಗಬಹುದು). 

ರಕ್ತದಾನವು ಕೇವಲ ಒಬ್ಬರ ಜೀವ ಉಳಿಸುವ ಪುಣ್ಯದ ಕೆಲಸ ಮಾತ್ರವಲ್ಲ. ಇದು ರಕ್ತ ನೀಡುವ ದಾನಿಗಳ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ರಕ್ತದಾನದ ಪ್ರಮುಖ ಲಾಭಗಳು ಇಲ್ಲಿವೆ:
  • ಹೃದಯದ ಆರೋಗ್ಯಕ್ಕೆ ಉತ್ತಮ - ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಕಬ್ಬಿಣದ ಅಂಶ ಸಮತೋಲನದಲ್ಲಿರುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾದರೆ ಅದು ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡಿ ಹೃದಯಾಘಾತ ಅಥವಾ ಪಾರ್ಶ್ವವಾಯು (Stroke) ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತದಾನದಿಂದ ಈ ಅಪಾಯ ಕಡಿಮೆಯಾಗುತ್ತದೆ.
  • ಹೊಸ ರಕ್ತ ಕಣಗಳ ಉತ್ಪಾದನೆ - ರಕ್ತದಾನ ಮಾಡಿದ ನಂತರ, ನಮ್ಮ ದೇಹವು ಕಳೆದುಕೊಂಡ ರಕ್ತವನ್ನು ತುಂಬಿಕೊಳ್ಳಲು ತಕ್ಷಣವೇ ಕೆಲಸ ಆರಂಭಿಸುತ್ತದೆ. ಇದರಿಂದ ಮೂಳೆ ಮಜ್ಜೆಯಲ್ಲಿ ಹೊಸ ಮತ್ತು ಆರೋಗ್ಯಕರ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇದು ಇಡೀ ದೇಹಕ್ಕೆ ಚೈತನ್ಯ ನೀಡುತ್ತದೆ. ರಕ್ತದಾನ ಮಾಡಿದ 48 ಗಂಟೆಗಳ ಒಳಗೆ ದೇಹವು ದಾನ ಮಾಡಿದ ರಕ್ತವನ್ನು ಮರುಪೂರಣ ಮಾಡುತ್ತದೆ.
  • ಕ್ಯಾನ್ಸರ್ ಅಪಾಯದ ಇಳಿಕೆ - ದೇಹದಲ್ಲಿ ಕಬ್ಬಿಣದ ಅಂಶ ಅಧಿಕವಾಗಿದ್ದರೆ ಕೆಲವು ವಿಧದ ಕ್ಯಾನ್ಸರ್ (ಉದಾಹರಣೆಗೆ ಯಕೃತ್ತು, ಶ್ವಾಸಕೋಶ ಮತ್ತು ಕರುಳಿನ ಕ್ಯಾನ್ಸರ್) ಬರುವ ಸಾಧ್ಯತೆ ಇರುತ್ತದೆ. ರಕ್ತದಾನ ಮಾಡುವುದರಿಂದ ಕಬ್ಬಿಣದ ಮಟ್ಟ ನಿಯಂತ್ರಣಕ್ಕೆ ಬಂದು ಕ್ಯಾನ್ಸರ್ ಸಂಭವನೀಯತೆ ಕಡಿಮೆಯಾಗಲು ಸಹಾಯ ಮಾಡುತ್ತದೆ.
  • ಉಚಿತ ಆರೋಗ್ಯ ತಪಾಸಣೆ - ನೀವು ರಕ್ತದಾನ ಮಾಡಲು ಹೋದಾಗ ಪ್ರತಿ ಬಾರಿಯೂ ವೈದ್ಯರು ನಿಮ್ಮ ರಕ್ತದೊತ್ತಡ (BP), ಹಿಮೋಗ್ಲೋಬಿನ್ ಮಟ್ಟ, ನಾಡಿಮಿಡಿತ ಮತ್ತು ದೇಹದ ಉಷ್ಣತೆಯನ್ನು ಪರೀಕ್ಷಿಸುತ್ತಾರೆ. ಅಲ್ಲದೆ, ನಿಮ್ಮ ರಕ್ತವನ್ನು ಹೆಪಟೈಟಿಸ್, HIV ನಂತಹ ಸೋಂಕುಗಳಿಗಾಗಿ ಉಚಿತವಾಗಿ ಪರೀಕ್ಷಿಸಲಾಗುತ್ತದೆ. ಇದು ನಿಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ.
  • ತೂಕ ಇಳಿಕೆಗೆ ಸಹಕಾರಿ - ಒಂದು ಬಾರಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಸುಮಾರು 650 ಕ್ಯಾಲೊರಿಗಳು ವ್ಯಯವಾಗುತ್ತವೆ. ಇದು ಆರೋಗ್ಯಕರ ರೀತಿಯಲ್ಲಿ ತೂಕವನ್ನು ನಿರ್ವಹಿಸಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.
  • ಮಾನಸಿಕ ಸಂತೋಷ - ಬೇರೊಬ್ಬರ ಪ್ರಾಣ ಉಳಿಸುವಲ್ಲಿ ನಾನು ಪಾತ್ರವಹಿಸಿದ್ದೇನೆ ಎಂಬ ಹೆಮ್ಮೆ ಮತ್ತು ತೃಪ್ತಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನನಗೆ ತಿಳಿದ ಇತರ ಉಪಯೋಗಗಳ ಸಂಕಿಪ್ತವಾದ ಸಾರಾಂಶ : 

  • ತುರ್ತು ಚಿಕಿತ್ಸೆ: ಅಪಘಾತಗಳಲ್ಲಿ ಅತಿಯಾದ ರಕ್ತಸ್ರಾವವಾದಾಗ ಜೀವ ಉಳಿಸಲು ಅವಶ್ಯಕ.
  • ಶಸ್ತ್ರಚಿಕಿತ್ಸೆ: ಪ್ರಮುಖ ಶಸ್ತ್ರಚಿಕಿತ್ಸೆಗಳ ಸಮಯದಲ್ಲಿ ರೋಗಿಯ ಚೇತರಿಕೆಗೆ ರಕ್ತ ಬೇಕಾಗುತ್ತದೆ. 
  • ಕ್ಯಾನ್ಸರ್ ಚಿಕಿತ್ಸೆ: ಕೀಮೋಥೆರಪಿ ಪಡೆಯುವ ರೋಗಿಗಳಿಗೆ ಕೆಂಪು ರಕ್ತಕಣಗಳ ಅವಶ್ಯಕತೆ ಇರುತ್ತದೆ. 
  • ಪ್ರಸವದ ಸಮಯ: ಹೆರಿಗೆಯ ಸಮಯದಲ್ಲಿ ತಾಯಂದಿರ ಜೀವ ರಕ್ಷಿಸಲು ರಕ್ತದಾನ ಸಹಕಾರಿ. 
  • ರಕ್ತದ ಕಾಯಿಲೆಗಳು: ಥಲಸ್ಸೆಮಿಯಾದಂತಹ ಕಾಯಿಲೆ ಇರುವವರಿಗೆ ನಿಯಮಿತವಾಗಿ ರಕ್ತದ ಅವಶ್ಯಕತೆ ಇರುತ್ತದೆ.  

ಇವಿಷ್ಟೇ ಅಲ್ಲದೆ ನಾನು ರಕ್ತದಾನ ಮಾಡಲು ಶುರು ಮಾಡಿದ ಮೇಲೆ, ನನ್ನ ಜೀವನೋತ್ಸಾಹ ಇಮ್ಮಡಿಸಿದೆ. ನಾನು ದಿನದ ಹೆಚ್ಚಿನ ಸಮಯ ಶಾಂತವಾಗಿ ಮತ್ತು ಸಂಯಮದಿಂದ ಇರುತ್ತೇನೆ. ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿವೆ. ರಕ್ತದಾನದ ಬಗ್ಗೆ ನನಗೆ ತಿಳಿದಿರುವ ಮಾಹಿತಿಯನ್ನು ಸಾಕಷ್ಟು ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ. ರಕ್ತದಾನವೆಂಬ ಉದಾತ್ತ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. 

No comments:

Post a Comment