ಶ್ರೀಮಂತ ಡಾ|| ಎಂ.ವೈ.ಘೋರ್ಪಡೆ - ಒಂದು ವ್ಯಕ್ತಿ ಚಿತ್ರ

- ಚಿದಂಬರ

 ಸ್ಕಂದಪುರ ವೆಂಬ ಅನ್ವರ್ಥಕ ನಾಮದಿಂದ, “ಸಂಡೂರು” ಎಂಬ ರೂಢಿನಾಮದಿಂದ ಕರೆಯಲ್ಪಡುತ್ತಿರುವ ನನ್ನ ಜನ್ಮಭೂಮಿ, ಕರ್ಮಭೂಮಿಯಾಗಿರುವ ಪಟ್ಟಣವನ್ನು ‘ಬಳ್ಳಾರಿಯ ಓಯಸಿಸ್’, ‘ಬಳ್ಳಾರಿಯ ಕಾಶ್ಮೀರ’ ಎಂತಲೇ ಕರೆಯುತ್ತಾರೆ. ಇದರ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, ಈ ಸಂಸ್ಥಾನವನ್ನು ಬ್ರಿಟೀಷರ ಅಧೀನದಲ್ಲಿ ಮರಾಠ ವಂಶಸ್ಥರಾದ “ಘೋರ್ಪಡೆ” ರಾಜ ಮನೆತನಕ್ಕೆ ಸೇರಿದ ಶ್ರೀಮಂತ ಸಿದ್ಧೋಜಿ ಘೋರ್ಪಡೆ ಕ್ರಿ.ಶ.1713 ರಲ್ಲಿ ಆಳ್ವಿಕೆ ಪ್ರಾರಂಭಿಸಿದರು ಎಂಬುದು ಕಂಡು ಬರುತ್ತದೆ.

ಈ ಮರಾಠ ವಂಶಸ್ಥರಿಗೆ “ಘೋರ್ಪಡೆ” ಎಂಬ ಹೆಸರು ಬಂದಿದ್ದು ತುಂಬಾ ರೋಚಕ. ಮರಾಠಿ ಭಾಷೆಯಲ್ಲಿ “ಘೋರ್ ಪಡ” ಎಂದರೆ “ಉಡ” ಎಂದರ್ಥ. ಹಿಂದಿನ ರಾಜರ ಆಳ್ವಿಕೆಯ ಕಾಲದಲ್ಲಿ ಮರಾಠ ವಂಶದ ಹಿರಿಯ ಸೇನಾಧಿಕಾರಿಯೊಬ್ಬ ಶತ್ರು ಪಾಳೆಯದ  ಕೋಟೆಯನ್ನೇರಲು “ಉಡದ” ಸೊಂಟಕ್ಕೆ ಹಗ್ಗ ಬಿಗಿದು, ಉಡವನ್ನು ಕೋಟೆಯ ಮೇಲೆ ಹತ್ತಿಸಿ ವಶಪಡಿಸಿಕೊಂಡದಕ್ಕೆ ಆ ಮನೆತನಕ್ಕೆ ಈ ಹೆಸರು ಬಂದಿತು ಎಂಬುದು ಇತಿಹಾಸ.
ಸ್ವಾತಂತ್ರ್ಯ ನಂತರದ ಕಾಲದಲ್ಲಿ 1949 ರಿಂದ ಸರ್ದಾರ್ ವಲ್ಲಬಾಯಿ ಪಟೇಲರ ನೇತೃತ್ವದಲ್ಲಿ, ಭಾರತದ ಎಲ್ಲ ರಾಜ ಮನೆತನಗಳಾದ ಮೈಸೂರು, ಮುಧೋಳ, ಜಮಖಂಡಿ, ಕೊಲ್ಲಾಪುರ, ಮದ್ರಾಸ್ ಪ್ರಾಂತ್ಯ, ಹೈದ್ರಾಬಾದ್ ನಿಜಾಮರು, ಸಂಡೂರು ಇತ್ಯಾದಿ ಸಂಸ್ಥಾನಗಳ ರಾಜ ಮನೆತನದ ಆಳ್ವಿಕೆಯಲ್ಲಿನ ಅರಸರೊಂದಿಗೆ ಲಿಖಿತ ಒಪ್ಪಂದಗಳೇರ್ಪಟ್ಟು ಸಂಸ್ಥಾನಗಳು ಭಾರತ ದೇಶದಲ್ಲಿ ವಿಲೀನಗೊಂಡವು. ಅಂತೆಯೇ 1949 ರಲ್ಲಿ ಈ ನಮ್ಮ ಸಂಡೂರಿನ ಅರಸೊತ್ತಿಗೆಯೂ ಅಳಿಯಿತು. ಆಗ ಯಶವಂತರಾವ್ ಹಿಂದೂರಾವ್ ಘೋರ್ಪಡೆ ರಾಜ್ಯಬಾರ ಮಾಡುತ್ತಿದ್ದರು. ಉದಾರ ಮನಸ್ಸಿನ ಅರಸರಾದ ಇವರು ನಗು ನಗುತ್ತಲೇ ಅರಸೊತ್ತಿಗೆಯನ್ನು ಪ್ರಜಾಪ್ರಭುತ್ವದ ಸರ್ಕಾರಕ್ಕೆ 1977 ರಲ್ಲಿ ಮರಳಿಸಿದರು. ಇವರ ಹಿರಿಮಗನೇ ಮುರಾರಿರಾವ್ ಯಶವಂತರಾವ್ ಘೋರ್ಪಡೆ (ಎಂ.ವೈ. ಘೋರ್ಪಡೆ). ಸರಳ ಜೀವಿ, ಜನಾನುರಾಗಿ, ಸದಾ ಜನರ ಒಳಿತನ್ನೇ ಬಯಸುತ್ತಿದ್ದ ಇವರು ಜನಿಸಿದ್ದು 1931 ರಲ್ಲಿ. ಇವರ ಮೆಟ್ರಿಕ್‍ವರೆಗಿನ ಶಿಕ್ಷಣವು ಆಗಿನ ಸಂಡೂರು ಸಂಸ್ಥಾನದಲ್ಲಿಯೇ ಪೂರೈಸಲ್ಪಟ್ಟು, ಮೇಧಾವಿಗಳಾಗಿದ್ದ ಇವರು ಸ್ನಾತಕೋತ್ತರ ಪದವಿಯನ್ನು ಎಂ.ಎ. ಅರ್ಥಶಾಸ್ತ್ರ ದಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಶ್ರೀಮತಿ ವಸುಂಧರಾದೇವಿ ಘೋರ್ಪಡೆಯವರನ್ನು ವಿವಾಹವಾಗಿ 23ನೇ ಹರೆಯದಲ್ಲೇ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯನಾಗಿ, ಟೇಕೂರು ಸುಬ್ರಮಣ್ಯ ಮತ್ತು ಇಂದಿರಾಗಾಂಧಿಯವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಮಹತ್ವಾಕಾಂಕ್ಷಿಯಾಗಿದ್ದ ಅವರ ರಾಜಕೀಯ ಪ್ರವೇಶದ ಉದ್ದೇಶ, ಲಿಂಗ ಸಮಾನತೆ, ಸಮಾಜೋದ್ಧಾರ ಮತ್ತು ಸರ್ವರಿಗೂ ಶಿಕ್ಷಣಗಳದಂತಹ ಜನಾನುರಾಗಿ ಯೋಜನೆಗಳನ್ನು ಜಾರಿಗೊಳಿಸುವುದಾಗಿತ್ತು.
ರಾಜಮನೆತನದ ಹಿನ್ನೆಲೆಯಿಂದ ಬಂದವರಾಗಿದ್ದರೂ ಕೊಂಚವೂ ಹಮ್ಮು-ಬಿಮ್ಮು ಅವರಲ್ಲಿರಲಿಲ್ಲ. 1972 ರಲ್ಲಿ ನಮ್ಮ ತಂದೆ ಸಂಡೂರಿನ ಅರಮನೆಯಲ್ಲಿನ ಕಛೇರಿ ಕೆಲಸ ನಿರ್ವಹಿಸಲು ಬಂದಾಗ ನಾನಿನ್ನು ಹುಟ್ಟಿರಲಿಲ್ಲ, ನಂತರದ ದಿನಗಳಲ್ಲಿ ನನ್ನ ಬಾಲ್ಯದ ಕೆಲ ಕಾಲ ಅರಮನೆಯಲ್ಲೇ ಕಳೆದವು ಎಂದು ನನ್ನಮ್ಮ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ದಸರಾ ದರ್ಬಾರಿನಲ್ಲಿ ನನ್ನ ತಂದೆ ಅವರೇ ನೋಡ್ರಿ ಮಹಾರಾಜ, ಅವರ ಪಕ್ಕದಲ್ಲಿರುವವರೇ ಯುವರಾಜರು ಅಂತ ತೋರಿಸುತ್ತಿದ್ದುದು ನನಗೀಗಲೂ ಮಸುಕು ಮಸುಕಾಗಿ ನೆನಪಿದೆ.
ಶಿಕ್ಷಣದೆಡೆಗೆ ಸದಾ ತುಡಿಯುತ್ತಿದ್ದ ಅವರ ಜೀವ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಲು ಪ್ರೇರೇಪಿಸಿತ್ತು. ಇವೆಲ್ಲಾ ಸಂಸ್ಥೆಗಳಿಗೆ ಆರ್ಥಿಕ ಬೆನ್ನಲುಬಾಗಿ ಸಂಡೂರು ಮ್ಯಾಂಗನೀಸ್ & ಐರನ್ ಓರ್ಸ್ (SMIORE)  ಸಂಸ್ಥೆ ಇತ್ತು (ಈಗಲೂ ಇದೆ) ಕಬ್ಬಿಣದ ಅದಿರಿಗಿಂತಲೂ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸಂಡೂರಿನಲ್ಲಿ ಹೆಚ್ಚಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಹಿಂದೆ ಬ್ರಿಟೀಷರು ತಮ್ಮ ಆಳ್ವಿಕೆಯಲ್ಲಿ ತಂಬಾಕು ಬೆಳೆಯನ್ನು ಸಂರಕ್ಷಿಸಿಡುತ್ತಿದ್ದ ಸ್ಥಳದಲ್ಲಿ (ಕ್ರಿ.ಶ.1800ರ ಆಸುಪಾಸು) SMIORE ನ ಕೇಂದ್ರ ಕಛೇರಿ ಯಶವಂತನಗರದಲ್ಲಿತ್ತು. ಈಗ ಆ ಕಟ್ಟಡದಲ್ಲಿ Sandur Polytechnic ವಿದ್ಯಾಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ, ನಾನು ಪಾಲಿಟೆಕ್ನಿಕ್ ಶಿಕ್ಷಣ ಪಡೆದದ್ದು ಇಲ್ಲಿಯೇ. ಸಂಡೂರು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಾಥಮಿಕ, ಪ್ರೌಢ, ಪಿ.ಯು ಹಾಗೂ ಪದವಿ ಕಾಲೇಜ್, ಸಂಡೂರು ವಸತಿ ಶಾಲೆ, ಸಂಡೂರು ಪಾಲಿಟೆಕ್ನಿಕ್, ನಂದಿಹಳ್ಳಿಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಹೊಸಪೇಟೆಯ ಹತ್ತಿರದ ವ್ಯಾಸನಕೆರೆಯಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಕಾಲೇಜ್ ಹೀಗೆ ಅವರಿಂದ ಸ್ಥಾಪಿಸಲ್ಪಟ್ಟ ಹತ್ತು ಹಲವು ವಿದ್ಯಾ ಸಂಸ್ಥೆಗಳು ಇಂದಿಗೂ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವದರ ಹಿಂದೆ ಶಿಕ್ಷಣದ ಬಗ್ಗೆ ಘೋರ್ಪಡೆಯವರಿಗಿದ್ದ ಅತೀವ ಕಾಳಜಿ ಮತ್ತು ಕಳಕಳಿಯನ್ನು ಕಾಣಬಹುದು. ಶಿಕ್ಷಣವು ಮೌಲ್ಯಯುತವಾಗಿರಬೇಕು ಎಂಬುದು ಅವರ ಆಶಯವಾಗಿತ್ತು. ಶಿಕ್ಷಣವನ್ನೆಂದೂ ಅವರು ವ್ಯಾಪಾರೀಕರಣಗೊಳಿಸಲು ಇಚ್ಚಿಸಲಿಲ್ಲ.
ಗ್ರಾಮೀಣ ಜನರ ಸ್ವಾವಲಂಬನೆ, ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಸ್ಥಳೀಯ ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಸಂಡೂರು ಕುಶಲಕಲಾ ಕೇಂದ್ರ’  ಸ್ಥಾಪಿಸಿ ಖಾದಿ ನೇಯ್ಗೆ, ಶಿಲ್ಪಕಲೆ, ಕಾಷ್ಠಕಲೆ, ಬೆತ್ತದ ಪೀಠೋಪಕರಣಗಳು, ಲಂಬಾಣಿ ಕಸೂತಿ ಹೀಗೆ ಹತ್ತು ಹಲವು ಕಲೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ದುಡಿಯುವ ನೂರಾರು ಕೈಗಳಿಗೆ ಕೆಲಸ ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಯಶಸ್ವೀ ಉದ್ಯಮಿಯಾಗಿದ್ದ ಇವರು ಸ್ಥಾಪಿಸಿದ ಸಂಡೂರು ಮ್ಯಾಂಗನೀಸ್ & ಐರನ್ ಓರ್ಸ್ (SMIORE) ಸಂಸ್ಥೆಯಲ್ಲಿ ಸಾವಿರಾರು ಜನರಿಗೆ ಕೆಲಸ ಕೊಟ್ಟು, ಅತ್ಯುತ್ತಮ ಕಾರ್ಮಿಕ ನೀತಿಯನ್ನು ಪಾಲಿಸುತ್ತಿದ್ದರು. ಅದಿರಿನ ಗಣಿಯಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರ ಜೀವನ ನಿರ್ವಹಣೆಗೆ ಅತ್ಯಂತ ಕಡಿಮೆ ದರದಲ್ಲಿ ಗೃಹೋಪಯೋಗಿ ದಿನಸಿ ಸಾಮಾನುಗಳು ವರ್ಷಕ್ಕೆ ಎರಡು ಬಾರಿ ಬಟ್ಟೆ, ಗುಣಮಟ್ಟದ ಆಸ್ಪತ್ರೆ, ವಸತಿ ಸೌಲಭ್ಯ ಕೊಟ್ಟು ಪ್ರಜಾಪ್ರಭುತ್ವದ ಅವಧಿಯಲ್ಲಿಯೂ ಜನರ ಮನಸ್ಸಿನಲ್ಲಿ ‘ಮಹಾರಾಜ’ರಾಗಿಯೇ ಉಳಿದುಕೊಂಡಿದ್ದರು.
ಘೋರ್ಪಡೆಯವರ ಹಲವು ಹವ್ಯಾಸಗಳಲ್ಲಿ ವನ್ಯಜೀವಿ ಛಾಯಾ ಗ್ರಹಣವೂ ಒಂದು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವರು ಇದರಲ್ಲಿ ಹೆಸರು ಮಾಡಿದ್ದರ ಹಿಂದೆ ವನ್ಯಜೀವಿಗಳ ಮೇಲೆ ಅವರಿಗಿದ್ದ ಅತೀವವಾದ ಆಸಕ್ತಿ, ಪರಿಸರದ ಮೇಲಿನ ಕಳಕಳಿ ಜೊತೆಗೆ ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಅವರಿಗಿದ್ದ ಪ್ರೌಢಿಮೆಯೇ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಬ್ರಿಟನ್ನಿನ ರಾಯಲ್ ಫೋಟೋ ಗ್ರಾಫಿಕ್ ಸೊಸೈಟಿಯ ಗೌರವ ಸದಸ್ಯತ್ವವನ್ನು ಹೊಂದಿದ್ದ ಇವರು 1976 ರಲ್ಲಿ ಹಾಗೂ 1983 ರಲ್ಲಿ ವನ್ಯಜೀವಿ ಛಾಯಾಗ್ರಹಣದಲ್ಲಿ International Master Photographer ಪ್ರಶಸ್ತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದರು.
ಘೋರ್ಪಡೆಯವರು ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯದ ಹಣಕಾಸು ಮಂತ್ರಿಯಾಗಿ, ಶ್ರೀ ಎಸ್.ಎಂ ಕೃಷ್ಣ ಅವರ ಅಧಿಕಾರಾವಧಿಯಲ್ಲಿ “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್’ ಮಂತ್ರಿಯಾಗಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಬದಲಾವಣೆ ತಂದು ಪ್ರತಿಯೊಬ್ಬ ಗ್ರಾಮಸ್ಥರಿಗೂ ಅಧಿಕಾರ ಹಂಚುವ ಮೂಲಕ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಸದೃಡ ಅಡಿಪಾಯ ಹಾಕಿದ್ದರು. 7 ಭಾರಿ ಸತತವಾಗಿ ಸಂಡೂರು ಕ್ಷೇತ್ರದ ಶಾಸಕರಾಗಿ ಹಾಗೂ ಒಂದು ಬಾರಿ ಬಳ್ಳಾರಿ ಕ್ಷೇತ್ರದ ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ಅಸಾಧಾರಣ ಮತ್ತು ಮೌಲ್ಯಯುಕ್ತ ಸೇವೆಸಲ್ಲಿಸಿ  ಈಗಿನ ರಾಜಕೀಯಕ್ಕೆ ಅಪವಾದವೆಂಬಂತೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಹಾಗೂ ಪಕ್ಷಗಳು ಮತ್ತು ನಾಯಕರೆನಿಸಿಕೊಂಡವರು ತತ್ವರಹಿತ, ಮೌಲ್ಯ ರಹಿತರಾಗುತ್ತಿದ್ದಂತೆಯೇ, ರಾಜಿ ಮಾಡಿಕೊಳ್ಳದೇ ರಾಜಕೀಯವನ್ನೇ ತೊರೆದರು. ಅವರು ಮೌಲ್ಯಗಳಿಗಾಗಿ ಮಾತ್ರ ಬದುಕಿದ್ದರು ಎಂಬುದು ಇದರಿಂದ ನಮಗೆ ತಿಳಿಯುತ್ತದೆ.
1934 ರಲ್ಲಿ ಮಹಾತ್ಮಾ ಗಾಂಧೀಜಿ ಸಂಡೂರಿಗೆ ಭೇಟಿ ಕೊಟ್ಟು, ಕರ್ನಾಟಕದಲ್ಲಿ ದಲಿತರಿಗೆ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಪ್ರವೇಶಾವಕಾಶ ಕಲ್ಪಿಸಿದ ಯಶವಂತರಾವ್ ಹಿಂದೂರಾವ್ ಘೋರ್ಪಡೆಯವರನ್ನು ಅಭಿನಂದಿಸಿ, ಸಂಡೂರಿನ ರಮಣೀಯ ಹಚ್ಚ ಹಸುರಿನ ತಾಣಗಳನ್ನೆಲ್ಲ ವೀಕ್ಷಿಸಿ ‘See Sandur in September' ಎಂದು ಉಲ್ಲೇಖಿಸಿದ್ದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವನ್ಯಜೀವಿ ಛಾಯಾಗ್ರಹಣಕ್ಕೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ವಿಶ್ವದಲ್ಲೇ ಮೊಟ್ಟ ಮೊದಲು ಬಾರಿಗೆ ಪ್ರತಿಷ್ಠಿತ ಮಾಸ್ಟರ್ ಫೋಟೋಗ್ರಾಫರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಘೋರ್ಪಡೆ ಪಡೆದಿದ್ದರು. ಎಲ್ಲದಕ್ಕಿಂತಲೂ ಮಿಗಿಲಾಗಿ ಅವರು ಅಪಾರ ಜನಮನ್ನಣೆ, ಜನಾನುರಾಗವನ್ನು ಗಳಿಸಿದ್ದರೆಂದರೆ ಅತಿಶಯೋಕ್ತಿಯಾಗಲಾರದು. ಅವರು Down the memory lane, Sunlight and Shadows, Diary of a wildlife photographer ಎಂಬ ಪುಸ್ತಕಗಳನ್ನಲ್ಲದೆ ಕಂಚಿ ಪರಮಾಚಾರ್ಯರಾದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳನ್ನು ಕುರಿತು ಕೃತಿಗಳನ್ನು ರಚಿಸಿದ್ದರು.
ತಮ್ಮ ಜೀವನದ ಕೊನೆಯ ಕಾಲದಲ್ಲಿ ತತ್ವ ಹಾಗೂ ಮೌಲ್ಯರಹಿತ ರಾಜಕಾರಣದ ಬಗ್ಗೆ ಅವರು ಅತೀವ ಚಿಂತಿತರಾಗಿದ್ದರು, ರಾಜಕೀಯ ಸನ್ಯಾಸವನ್ನು ಪಡೆದು ಸಂಡೂರು ವಸತಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಪಾಠ ಮಾಡಿದ್ದೂ ಉಂಟು.
ಮೂಲತಃ ಶಿಕ್ಷಣ ಪ್ರೇಮಿಯಾಗಿದ್ದರಿಂದಲೂ, ನನ್ನ ತಂದೆಯ ಮೇಲಿನ ಅಭಿಮಾನದಿಂದಲೂ ಅವರು ತಮ್ಮ ರಾಜಮನೆತನದ ಸುಪರ್ದಿಯಲ್ಲಿದ್ದ ಸುಸಜ್ಜಿತವಾದ ಬ್ರಿಟೀಷ್ ಕಾಲದ (ನೂರು ವರ್ಷವಾದರೂ, ಇನ್ನೂ ನೂರುವರ್ಷ ಗಟ್ಟಿಮುಟ್ಟಾಗಿರಬಲ್ಲ) ಕಟ್ಟಡವೊಂದನ್ನು ನಮ್ಮ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಶಿಕ್ಷಣ ಸಂಸ್ಥೆಗೆ ಅತ್ಯಂತ ಕಡಿಮೆ ದರಕ್ಕೆ ಬಾಡಿಗೆ ನಿಗದಿಪಡಿಸಿ ನೀಡಿದ್ದರು ಈಗಲೂ ನಮ್ಮ ವಿದ್ಯಾಕೇಂದ್ರದ ಕನ್ನಡ ಮಾಧ್ಯಮ ಶಾಲೆಗಳು ಅಲ್ಲಿಯೇ ನಡೆಯುತ್ತಿರುವುದು.
ಪ್ರತಿ ವರ್ಷ ಡಿಸೆಂಬರ್ 7 ರ ಅವರ ಜನ್ಮ ದಿನದಂದು ನಮ್ಮ ಶಾಲೆಯ ಸಿಬ್ಬಂದಿಯವರೆಲ್ಲ ಹೋಗಿ ಅವರನ್ನು ಅಭಿನಂದಿಸಿ ಬರುವ ಸಂಪ್ರದಾಯವನ್ನು ನನ್ನ ತಂದೆ ಬೆಳೆಸಿಕೊಂಡು ಬಂದಿದ್ದರು. 2007 ರಲ್ಲಿ ಅವರ ಅಕಾಲಿಕ ಮರಣದ ನಂತರ ನಾನು ನನ್ನ ತಮ್ಮ ಕುಮಾರನೊಂದಿಗೆ ಅದೇ ಸಂಪ್ರದಾಯವನ್ನು ಅಪಾರ ಗೌರವ, ಭಯ-ಭಕ್ತಿಗಳಿಂದ ಮುಂದುವರೆಸಿಕೊಂಡು ಬಂದಿದ್ದೆವು, ಎಷ್ಟೋ ಬಾರಿ ನನ್ನನ್ನು ಅವರು ವೈಯಕ್ತಿಕವಾಗಿ ಗುರುತಿಸಿ, ಬೆನ್ನು ಚಪ್ಪರಿಸುತ್ತಾ ನಮ್ಮ ವಿದ್ಯಾ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದುದರ ಹಿಂದೆ ಅವರ ಉದಾತ್ತ ಮನಸ್ಸು ಮತ್ತು ಶಿಕ್ಷಣ ಪ್ರೇಮವೆಂದರೆ ಅಚ್ಚರಿಯೇನಲ್ಲ. ಅವರೊಂದಿಗಿನ ಸಂಭಾಷಣೆಯ ವೀಡಿಯೋ/ಛಾಯಾ ಚಿತ್ರಗಳು ಈಗಲೂ ನನ್ನಲ್ಲಿದ್ದು, ಸಾಕಷ್ಟು ಜತನದಿಂದ ಕಾಪಾಡಿಕೊಂಡಿದ್ದೇನೆ.
ನನ್ನ ಹೈಸ್ಕೂಲ್ ನಂತರದ ಶಿಕ್ಷಣ (ಇಂಜಿನೀಯರಿಂಗ್ ಹೊರೆತು ಪಡಿಸಿ) ಅವರಿಗೆ ಸೇರಿದ ಸಂಸ್ಥೆಯಲ್ಲಿಯೇ ಪೂರೈಸಿ, ಅವರದ್ದೇ ಆದ ಕಟ್ಟಡದಲ್ಲಿ ಶಾಲೆ ನಡೆಸುತ್ತಾ (ಕನ್ನಡ ಮಾಧ್ಯಮ ಶಾಲೆ ಮಾತ್ರ) ಆಂಗ್ಲ ಮಾಧ್ಯಮ ಮತ್ತು ಪಿ.ಯು ಸ್ವಂತ ಕಟ್ಟಡದಲ್ಲಿಯೇ ನಡೆಯುತ್ತಿವೆ) ಇಂದಿಗೂ ರಾಜಮನೆತನದೊಂದಿಗೆ ಒಡನಾಟವಿಟ್ಟುಕೊಂಡಿರುವುದು ನನಗೆ ಅತೀವ ಸಂತಸವನ್ನೀಯುತ್ತಿದೆ.
ಎಂ.ವೈ. ಘೋರ್ಪಡೆಯವರಿಗೆ ಮೂರು ಜನ ಗಂಡು ಮಕ್ಕಳು ಅಜಯ್, ಸುಜಯ್, ಕಾರ್ತಿಕ್ ಹಾಗೂ ಒಬ್ಬ ಹೆಣ್ಣು ಮಗಳು ಶ್ರೀಮತಿ ಅನುರಾಧ. ಹಿರಿಯ ಮಗ ಅಜಯ್ ಘೋರ್ಪಡೆ ಸಂಡೂರಿನ ಶಿವಪುರದ ಅರಮನೆಯಲ್ಲಿ ವಾಸಿಸುತ್ತಿದ್ದು ಘೋರ್ಪಡೆಯವರ ತಮ್ಮನಾದ ಶ್ರೀಯುತ ವೆಂಕಟರಾವ್ ಯಶವಂತರಾವ್ ಘೋರ್ಪಡೆಯವರು ಸಂಡೂರಿನ ಕೃಷ್ಣ ನಗರದಲ್ಲಿ ವಾಸಿಸುತ್ತಿದ್ದಾರೆ. ಪ್ರಸಕ್ತ ಅವರು Karnataka Pradesh Congress Committee (KPCC)ಯ ಕಾರ್ಯದರ್ಶಿಯಾಗಿ ಹಾಗೂ ಡಾ|| ನಂಜುಡಪ್ಪ ವರದಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಇಷ್ಟು ಚಿಕ್ಕ ಲೇಖನದ ಸಾಲುಗಳಲ್ಲಿ ಬಂಧಿಸುವುದು, ಆನೆಯ ಬಿಂಬವೊಂದನ್ನು ಚಿಕ್ಕ ಕನ್ನಡಿಯೊಂದರಲ್ಲಿ ತೋರುವಂತೆ ವ್ಯರ್ಥ ಪ್ರಯತ್ನ ಎಂದೆನಿಸಿದರೂ, ಜನಾನುರಾಗಿ, ಸರಳ ಜೀವಿ, ಶಿಕ್ಷಣ ಪ್ರೇಮಿ, ಅಂತರ್ರಾಷ್ಟ್ರೀಯ ಛಾಯಾಗ್ರಾಹಕ, ಮೌಲಿಕ ರಾಜಕಾರಣಿ, ಮುತ್ಸದ್ದಿ ಹಾಗೂ ಯಶಸ್ವಿ ಉದ್ಯಮಿಯಾಗಿದ್ದ ಡಾ|| ಎಂ.ವೈ.ಘೋರ್ಪಡೆಯವರ ವ್ಯಕ್ತಿ ಚಿತ್ರದೆಡೆಗೆ ತಕ್ಕ ಮಟ್ಟಿಗೆ ಬೆಳಕು ಚೆಲ್ಲಿದ್ದೇನೆಂದು ನನ್ನ ಭಾವನೆ.

1 comment:

  1. ಸರಳ,ಸಜ್ಜನ ಮತ್ತು ಶ್ರೇಷ್ಠ ವ್ಯಕ್ತಿತ್ವದ ಶ್ರೀ M.Y.ಘೋರ್ಪಡೆಯವರು ನಮ್ಮ ಕರುನಾಡಿನ ಧೀಮಂತರು.ಇವರ ನಡೆ ನುಡಿ ಇತರರಿಗೆ ಮಾದರಿಯಾಗಲಿ.

    ReplyDelete