-"ಶ್ರೀ"ಖಾರ
ಒಂದು ದ್ವೀಪ . ಅಲ್ಲಿ ಸಾವಿರಾರು ಜನರ ವಾಸ. ಶ್ರೀಮಂತರು-ಕಡುಬಡವರು ಇರುವ ಆ ದ್ವೀಪದಲ್ಲಿ ೧೦೦ ಎಕರೆ ಭೂಮಿಯ ಒಡೆಯನಿಗೆ ಒಬ್ಬ ೧ ಎಕರೆ ಭೂಮಿ ಹೊಂದಿರುವ ಗೆಳೆಯ . ನೆಮ್ಮದಿಯ ಜೀವನ ಸಾಗುತ್ತಿರಲು, ಒಂದು ದಿನ ದ್ವೀಪದಲ್ಲಿ ಸುನಾಮಿಯ ಅಟ್ಟಹಾಸ. ಎಲ್ಲಾ ದ್ವೀಪವಾಸಿಗಳ ಭೂಮಿ /ಬೆಳೆ ಕೊಚ್ಚಿಹೋಯಿತು. ೧೦೦ ಎಕರೆ ಭೂಮಿ ಹೊಂದಿರುವವ ೧೦೦ ಎಕರೆಯಲ್ಲಿದ್ದ ಬೆಳೆ ಕಳೆದುಕೊಂಡ . ಆತನ ಗೆಳೆಯ ೧ ಎಕರೆ ಬೆಳೆಯನ್ನು ಕಳೆದುಕೊಂಡು ಕಂಗಾಲಾದ.
ಈಗ ಇಬ್ಬರಲ್ಲಿ ಯಾರು ಹೆಚ್ಚು "ಕಳೆದು" ಕೊಂಡವರು? ೧೦೦ ಎಕರೆ ಹೊಂದಿದ್ದ ಶ್ರೀಮಂತನೇ ಅಥವಾ ೧ ಎಕರೆ ಯಿಂದ ತನ್ನ ಜೀವನ ರೂಪಿಸಿಕೊಂಡಿದ್ದ ಬಡವನೇ. ಉತ್ತರ ನಿಮಗೆ ಬಿಟ್ಟಿದ್ದು .
ಇವರಿಬ್ಬರಲ್ಲಿ ಧೃತಿ ಗೆಟ್ಟು ಆತ್ಮಹತ್ಯೆ ಅನ್ನುವ ಸ್ವಯಂಕೃತ ಅಪರಾಧಕ್ಕೆ ಯಾರೇ ಪ್ರಯತ್ನಿಸಿದರೂ ಅದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ನಾನು ಇಲ್ಲಿ ಹೇಳ ಬೇಕೆಂದಿರುವುದು ಇಷ್ಟೆ. ಲಾಭ -ನಷ್ಟ , ಸೋಲು-ಗೆಲುವು, ಅವಮಾನ-ಹತಾಷೆ ಎಲ್ಲರ ಜೀವನದಲ್ಲಿ ಇಣುಕಿ ನೋಡಿರುತ್ತದೆ. ಒಬ್ಬೊಬ್ಬರ ಜೀವನದಲ್ಲೂ ಬೇರೆ ಬೇರೆ ರೂಪದಲ್ಲಿ ಇವು ಪ್ರಕಟವಾಗುತ್ತಲೇ ಇರುತ್ತವೆ.
ದೇಶದಲ್ಲಿ ಇಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ ಅಂತಲೋ/ ಕಡಿಮೆ ಅಂಕ ಬಂತು ಅಂತಲೋ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ . ಇತ್ತೀಚಿಗೆ ಮೊಬೈಲ್ ಕೊಡಿಸಲಿಲ್ಲ/ ವಾಟ್ಸಪ್ ಉಪಯೋಗಿಸಲು ಬಿಡಲಿಲ್ಲವೆನ್ನುವಂತಹ ಕ್ಷುಲ್ಲಕ ಕಾರಣಗಳಿಗೆಲ್ಲ ಆತ್ಮಹತ್ಯೆಯೆನ್ನುವ ಹೇಯ ಕೃತ್ಯಕ್ಕೆ ಮಕ್ಕಳು ಮುಂದಾಗುತ್ತಿದ್ದಾರೆ
ನಾನು ಈ ಲೇಖನದಲ್ಲಿ ಹೇಳಹೊರಟಿರುವುದು ರೈತರ ಆತ್ಮಹತ್ಯೆ ಬಗ್ಗೆ. ರೈತ ಬಂಧುಗಳೇ ನೀವೇಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ನಿಮ್ಮದೇನು ಸ್ವಯಂಕೃತ ಅಪರಾಧವಲ್ಲ. ಹವಾಮಾನ ವ್ಯೆಪರೀತ್ಯದಿಂದ ಮಳೆ ಸರಿಯಾಗಿ ಆಗಲಿಲ್ಲ ಅಂತಲೋ ಅಥವಾ ಅತೀವೃಷ್ಟಿ-ಆನಾವೃಷ್ಟಿಯಿಂದಲೋ ನಿಮ್ಮ ಬೆಳೆ ಕೈಬಿಟ್ಟು ಹೋದರೆ, ಅಥವಾ ಬೆಳೆದ ಬೆಳೆಗೆ ಬೆಲೆ ಸರಿಯಾಗಿ ಸಿಗದೇ ಸಾಲ ತೀರಿಸಲು ಆಗಲಿಲ್ಲವೆಂದಾದರೆ ಅದಕ್ಕಾಗಿ ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು?
ನಾವು ಈ ಭೂಮಿಯಲ್ಲೇ ಬದುಕಲು ಅನರ್ಹರು ಎಂಬ ಆಲೋಚನೆಯನ್ನು ಬಿಡಿ. ಈ ದೇಶದಲ್ಲಿ, ಕಲಾಪ ನಡಿಯುತ್ತಿರುವಾಗಲೇ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ನೀಲಿ ಚಿತ್ರ ನೋಡುತ್ತಾ ಸಿಕ್ಕಿ ಹಾಕಿಕೊಂಡು ದೇಶದ ಜನರ ಮುಂದೆ ಮಾನ-ಮರ್ಯಾದೆ ಹರಾಜಾದರೂ ಬದುಕಿದ್ದಾರೆ . ಜ಼ನರನ್ನು ಆಧ್ಯಾತ್ಮ ಚಿಂತನೆಗೆ ಹಚ್ಚಬೇಕಾದ ಸ್ವಾಮೀಜಿಗಳು ಹೆಣ್ಣಿನ ಜೊತೆ ಚಕ್ಕಂದ ಆಡಿ ಸಿಕ್ಕಿ ಹಾಕಿಕೊಂಡು ಜನರ ಮುಂದೆ ಬೆತ್ತಲಾಗಿದ್ದಾರೆ. ಮಲ್ಯರಂತಹ ಕೋಟ್ಯಾದಿಪತಿಗಳಿಗೂ ಬ್ಯಾಂಕಿನಿಂದ ನೋಟಿಸುಗಳು ಬರುತ್ತಿವೆ. ದೊಡ್ಡ ವಂಚನೆಯ ಆರೋಪದ ಮೇಲೆ ಮಾಹಿತಿ ತಂತ್ರಜ್ಞಾನದ ದೈತ್ಯ ಸತ್ಯಂ ಕಂಪ್ಯೂಟರ್ಸ್ ನ ರಾಮಲಿಂಗರಾಜು ಜೈಲು ಸೇರಿದ್ದಾನೆ. ಆತ್ಮಹತ್ಯೆ ಯಾವ ಸಮಸ್ಯೆಗೂ ಮತ್ತು ಯಾರ ಸಮಸ್ಯೆಗೂ ಪರಿಹಾರ ಅಲ್ಲ.
ರೈತಬಂಧು ಇವರೆಲ್ಲರಿಗೆ ಹೋಲಿಸಿದರೆ ನೀನು ಯಾರಿಗೂ ಏನು ಅನ್ಯಾಯ ಮಾಡಿಲ್ಲ. ಬೆಳೆದ ಬೆಳೆ ಕೈಗೆ ಬರಲಿಲ್ಲ. ಅದೂ ಹವಾಮಾನ ವೈಪರೀತ್ಯದಿಂದ, ಅಥವಾ ಸರಿಯಾದ ಬೆಲೆ ಸಿಗದೆ. ಧೃತಿಗೆಡಬೇಡ. ನೀನು ಅನ್ನದಾತ.
ಸಾಲ-ಸೋಲ ಮಾಡಿ ಬೆಳೆ ಬೆಳೆದು ನಷ್ಟ ಅನುಭವಿಸಿ, ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ / ಪ್ರಯತ್ನಿಸುವ ರೈತ ಬಂಧುಗಳೇ....
೧. ನೀವು ಬಿಟ್ಟುಹೋದ ಮೇಲೆ ಕುಟುಂಬದವರ/ ಮಕ್ಕಳ ಭವಿಷ್ಯ ಏನು ??
೨. ಎಷ್ಟೆಲ್ಲಾ ಕೊಲೆ-ದರೋಡೆ ಮೋಸ-ಅನ್ಯಾಯ ಮಾಡಿದಂತ ಹಂತಕರೆಲ್ಲಾ "ಮರಣ ದಂಡನೆ "ಯಿಂದ ಬಚಾವಾಗಲು ರಾಷ್ಟ್ರಪತಿಗಳಿಗೆ ಅರ್ಜಿ ಹಾಕುತ್ತಿರುವಾಗ ನೀವು ಅವರಿಗಿಂತ ಏನು ಕಡಿಮೆ???? ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ??
೩. ವಿಷಯ ಪರಿಣಿತರ ಜೊತೆ ಚರ್ಚಿಸಿ ಕುರಿ ಸಾಕಾಣಿಕೆ , ಕೋಳಿ /ಜೇನು ಸಾಕಾಣಿಕೆ, ಮೀನು ಸಾಕುವುದು ಮುಂತಾದ ಉಪ ಉದ್ಯೋಗಗಳನ್ನು ಪ್ರಾರಂಭಿಸಿ.
೪. ಅಭದ್ರತೆ ಎಲ್ಲರನ್ನೂ ಕಾಡುತ್ತದೆ .ಚಲನಚಿತ್ರ ನಟರು, ಸಾಫ್ಟ್ ವೇರ್ ಇಂಜಿನಿಯರ್ಸ್, ಬಿಸಿನೆಸ್ಸ್ ಮ್ಯಾನ್ ಹೀಗೆ ಎಲ್ಲರಿಗೂ ಅವರದೇ ಆದ ಅಭದ್ರತೆರುತ್ತದೆ.
ಜೀವನ ಸೋಲು, ನಷ್ಟ, ಹತಾಶೆ ಗೊಳಗಾಗಿ ಕೊನೆಗೊಳ್ಳಿಸಿಕೊಳ್ಳುವಷ್ಟು ನಿಕೃಷ್ಟವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಎಂದೆಂದಿಗೂ ಪರಿಹಾರವಾಗಲಾರದು.
Saandarbhika lekhana,uttama aarambha sridhar
ReplyDeleteThis comment has been removed by the author.
ReplyDelete