ಮೋಹನ ಸ್ವಾಮಿ


-ಅಕ್ಷಯರಾಮ ಕಾವಿನಮೂಲೆ
ಲೇ: ವಸುಧೇಂದ್ರ
ಬೆಲೆ: ರೂ.180

ವಸುಧೇಂದ್ರ ಅವರ ಕೃತಿಗಳು ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಇದ್ದಂತೆ ! ಒಮ್ಮೆ ತೆರೆದು ಕೈಯಲ್ಲಿ ಹಿಡಿದು ಒಂದು ಮೂಲೆಯಲ್ಲಿ ಕುಳಿತರೆ, ಮುಗಿಯುವ ವರೆಗೆ ಇನ್ಯಾವುದೇ ಐಹಿಕ ವಿಷಯಗಳ ಕಡೆ ಮನಸ್ಸು ಹರಿಯುವುದೇ ಇಲ್ಲ. ಅವರ ಅಕ್ಷರಗಳಿಗೆ ಇರುವ ಅಯಸ್ಕಾಂತೀಯ ಗುಣದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

'ಮೋಹನ ಸ್ವಾಮಿ' ಕಥಾ ಸಂಕಲನದ ಮೊದಲ ಆರು ಕತೆಗಳ ತಿರುಳು ಸಲಿಂಗರತಿ ! ಸಮಾಜದ ಅಪಹಾಸ್ಯ, ನಿರ್ಲಕ್ಷ್ಯ, ಆಕ್ಷೇಪಣೆಗೆ ಪಾತ್ರವಾದ ಸಲಿಂಗಕಾಮವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಸುಂದರ ಕಥಾ ಸೃಷ್ಟಿ ಮಾಡಿದ್ದಾರೆ ವಸುಧೇಂದ್ರ.
ಮೋಹನ ಸ್ವಾಮಿ ಎಂಬ ಸಲಿಂಗಾಸಕ್ತ ಈ ಕತೆಗಳ ನಾಯಕ. ಸಾಮಾನ್ಯವಾಗಿ ಸಲಿಂಗಕಾಮಿಗಳನ್ನು ಕಂಡಾಗ ತಿರಸ್ಕಾರದಿಂದ ನೋಡುವವರೇ ಹೆಚ್ಚು. ಅವಹೇಳನ, ವ್ಯಂಗ್ಯ, ಚುಚ್ಚುಮಾತು, ಕ್ರೂರ ನೋಟ ತಿರಸ್ಕಾರಗಳನ್ನೇ ಕಾಣುವ ಸಲಿಂಗಿಗಳು ಒಳಗೊಳಗೇ ಬೆಂದು ಬದುಕುತ್ತಿರುತ್ತಾರೆ. ವಿರುದ್ಧ ಲಿಂಗಿಗಳೆಡೆಗೆ ಆಕರ್ಷಿತರಾಗದೇ ಇರುವ ಮನಸ್ಥಿತಿ ಈ ಸಮಾಜದಲ್ಲಿ ಅವರಿಗೆ ಶಾಪವೇ ಸರಿ. ಅವರೊಳಗಿನ ತುಮುಲ, ದ್ವಂದ್ವಗಳನ್ನು ಸುಂದರವಾಗಿ, ಎಲ್ಲೂ ಅಶ್ಲೀಲವೆನಿಸದಂತೆ ಬಿಚ್ಚಿಟ್ಟಿದ್ದಾರೆ ವಸುಧೇಂದ್ರ.  
ಸಂಕಲನದ ಇನ್ನೊಂದು ಸುಂದರ ಕತೆ 'ದುರ್ಭಿಕ್ಷ ಕಾಲ'. ಆರ್ಥಿಕ ಕುಸಿತದ ಪರಿಣಾಮ ಬೆಂಗಳೂರಿಗೆ ತಟ್ಟಿದ ಕರುಣಾಜನಕ ಕಥಾನಕವಿದು. ರಾತ್ರೋರಾತ್ರಿ ಬದಲಾಗುವ ಬದುಕುಗಳನ್ನು ಕಂಡು ಎದೆ ಝಲ್ಲೆನ್ನುತ್ತದೆ. ದಿನ ಬೆಳಗಾದರೆ ಕೆಲಸ ಕಳೆದುಕೊಂಡು ಅಕ್ಷರಷಃ ಬೀದಿಯಲ್ಲಿ ಬೀಳಬೇಕಾದ ಸನ್ನಿವೇಶಗಳನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಡಲು ವಸುಧೇಂದ್ರರಿಗೆ ಮಾತ್ರ ಸಾಧ್ಯ.
ಇನ್ನೊಂದು ಕತೆ 'ಪೂರ್ಣಾಹುತಿ'ಯ ತಿರುಳು ಸಾಮಾಜಿಕ ಮಾಧ್ಯಮ. ಫೇಸ್ ಬುಕ್ ನ ಬಳಕೆ ವಿಪರೀತವಾದರೆ ಏನಾಗಬಹುದು? ಹಗಲಿರುಳೂ ಮೊಬೈಲ್, ಫೇಸ್ ಬುಕ್ಕನ್ನು ಬಿಟ್ಟಿರಲಾರದ ಮಗಳು ಒಂದೆಡೆಯಾದರೆ, ದಿನಬಳಕೆಯ ವಸ್ತುವಾದ ಮೊಬೈಲನ್ನೂ "ಆಧುನಿಕತೆಯ ಮಾರಿ" ಎಂದು ತಿರಸ್ಕರಿಸಿ ಬದುಕ ಹೊರಟ ತಾಯಿ ಇನ್ನೊಂದು ತುದಿ. ಕೊನೆಗಿಬ್ಬರೂ ದುರಂತ ಅಂತ್ಯ ಕಂಡದ್ದು ಓದಿ ಎದೆ ಭಾರವಾಗದೇ ಇರದು.
ವಸುಧೇಂದ್ರ ಬರೆಯುವ ರೀತಿ ಮನಮೋಹಕ. ತುಸು ಹಾಸ್ಯ, ನಸು ಗಂಭೀರ ಶೈಲಿಯಲ್ಲಿ ಆಧುನಿಕ ಬದುಕಿನ ಒಳಿತು ಕೆಡುಕುಗಳನ್ನು ಹಿಂದಿನ ತಲೆಮಾರಿನ ಜೀವನಕ್ರಮಕ್ಕೆ ತುಲನೆ ಮಾಡುವ, ಚಿಂತನೆಗೆ ಹಚ್ಚುವ ಪರಿ ಅದ್ವಿತೀಯ. ಬದುಕಿನ ಹತ್ತು ಹಲವು ಚಿಂತೆಗಳಿಂದ ತಲೆಕೆಟ್ಟು ಕುಳಿತಾಗ ವಸುಧೇಂದ್ರರ ಪುಸ್ತಕಗಳನ್ನು ಕೈಗೆತ್ತಿಕೊಂಡರೆ  ಸಾಕು, ಹೊಸತೊಂದು ಜೀವನೋತ್ಸಾಹದ ಒರತೆ ಉಕ್ಕುತ್ತದೆ. ಇನ್ನೂ ಸಾವಿರ ಮೈಲುಗಳ ಹೊಸ ಪಯಣಕ್ಕೆ ಅಡಿಯಿಡುವ ಮನಸ್ಸಾಗುತ್ತದೆ.

3 comments:

  1. ಅಭಿಮಾನದಿಂದ ಪುಸ್ತಕದ ಬಗ್ಗೆ ಬರೆದಿರುವಿರಿ. ನಿಮಗೆ ಧನ್ಯವಾದಗಳು.

    ReplyDelete