- ಚಿದಂಬರ
ತಿಳಿದೂ ತಿಳಿಯದಂತೆ ಓಡುತಿದೆ ಮನವು ಹಣದ ಹಿಂದೆ,ಹಣದ ಗಳಿಕೆಯೊಂದೇ ಜೀವನದ ಪರಮೋಚ್ಛ ಗುರಿ !
ಅದ್ಸರಿ, ಹಣದಿಂದ ಕೊಳ್ಳುವುದಾದರೂ ಏನನ್ನು?
ಹಾಸಿಗೆಯನ್ನಷ್ಟೇ ನಿದ್ರೆಯನ್ನಲ್ಲವಲ್ಲ !
ಅಲ್ಪ ಸಂತಸವನ್ನಷ್ಟೇ ಸಂತೃಪ್ತಿಯನ್ನಲ್ಲವಲ್ಲ !
ಆಂಡ್ರಾಯ್ಡ್ ಮೊಬೈಲು, ಫೇಸ್ಬುಕ್, ವಾಟ್ಸಪ್ ಅಷ್ಟೆ,
ಆತ್ಮೀಯತೆ, ನೈಜ ಸ್ನೇಹ, ಪ್ರೀತಿ ವಿಶ್ವಾಸವನ್ನಲ್ಲವಲ್ಲ !
ಹೌದು ಮಹಾನಗರಗಳಲ್ಲಿ ಬೇಕೇ ಬೇಕು ಹಣ,
ತುಂಬಾ ದೂರವಾದರೂ ಸರಿಯೇ, ಬೇಕು ಪ್ರತಿಷ್ಠಿತ ಕಂಪನಿಯೊಳಗೊಂದು ಕೆಲಸ,
ಸೇರಿದ ಒಂದೇ ವರ್ಷದೊಳಗೆ ಪ್ರಮೋಷನ್ ಇಂಕ್ರಿಮೆಂಟ್ ಬಯಕೆ !
ಅದಕ್ಕಾಗಿ ಟಾರ್ಗೆಟ್ ಹಿಂದೆ ನಾಗಾಲೋಟ,
ಬೆಳಗಿನ ಅವಸರದ ದೌಡು, ಸಂಸಾರದಲ್ಲಿನ ಬೇಕು-ಬೇಡಗಳ ಬೇಗುದಿ,
ಮೊದಲೇ ಹೊರಟಿದ್ದು ಲೇಟು, ಮೇಲೆ ಟ್ರಾಫಿಕ್ಕು ಜಾಮು, ಸಿಗ್ನಲ್ಲುಗಳಲ್ಲಿ ನಿಟ್ಟುಸಿರು.
ಪದೇ ಪದೇ ವಾಚು ನೋಡಿಕೊಂಡರೆ ನಿಂತೀತೆ ಸಮಯ?!
ಅಂದಗಾತಿ ರಿಸೆಪ್ಷನಿಸ್ಟ್ ನೋಡಿದರೆ ಸ್ವಲ್ಪ ಸಮಾಧಾನ !
ಆದರೆ ಟಾರ್ಗೇಟ್ ಮುಟ್ಟುವ ಒತ್ತಡದ ಭೂತ ಬೆಂಬಿಟ್ಟೀತೆ? ಟೀಮು ಲೀಡರ್ಗಳ ಕಾಟ ತಪ್ಪೀತ?
ತಂಪು ಎ.ಸಿ.ಯಲ್ಲಿ ಬೆವರು ಬಂದರೂ ಅಚ್ಚರಿಯೇನಿಲ್ಲ !
ಮದ್ಯಾಹ್ನಕ್ಕೆ ಡಬ್ಬಿಯ ತಣ್ಣನೆ ಉಪ್ಪಿಟ್ಟು,ಚಿತ್ರಾನ್ನ.., ಕೆಲವೊಮ್ಮೆ ಕ್ಯಾಂಟಿನಿನ ಜಂಕ್ ಫುಡ್ಡು
ಪಿಜ್ಜ-ಬರ್ಗ್ರ್ ಕೂಲ್ಡ್ರಿಂಕ್ಸು /ಕಾಫಿ ಸಿಗರೇಟು,
ವಾಸನೆ ಬರದಿರಲು ಬಾಯೊಳಗೆ ಚ್ಯೂಯಿಂಗಮ್ಮು, ಆರೋಗ್ಯವೇನಾದರೇನು? ತಾತ್ಕಾಲಿಕ ಟೆನ್ಷನ್ ರಿಲೀಫು!
ಹೋದದ್ದು ಲೇಟಾದ್ದರಿಂದ ಹೊರಟು ಬರುವುದೂ ಲೇಟು..!
ಮನೆಗಾಗಿ ಸಾಮಾನು ದಿನಸಿ ಖರೀದಿ, ಕೆಲವು ಮರೆತೂ ಹೋಯ್ತು..!
ದುಡಿಮೆಯೆಂಬ ಬಂಡಿಗೆ ಎರಡು ಚಕ್ರಗಳು, ಇಬ್ಬರೂ ದುಡಿದರೇನೆ ಸಂಸಾರ ರಥ ಚಲಿಸೀತು ಸಲೀಸು.
ಕೆಲಸದೊತ್ತಡದಿಂದ ಪರಸ್ಪರರ ಮೇಲೆ ಸಿಡುಕು, ರಾತ್ರಿಯ ಅಡುಗೆಗೆ.! ಸಮಯ ವ್ಯವಧಾನಗಳಿಲ್ಲ!
ಮಾಡಿದರೂ ರುಚಿಯಂತು ಅಷ್ಟಕಷ್ಟೇ..! ಸುಮ್ಮನೇ ತಿಂದರೆ ಅಡ್ಡಿಯಿಲ್ಲ, ಇಲ್ಲಾಂದ್ರೆ ಮಹಾಯುದ್ಧ !
ತಂದದ್ದೂ ಅಷ್ಟಕ್ಕಷ್ಟೇ, ಮಾಡಿದ್ದೂ ಅಷ್ಟಕಷ್ಟೇ, ಮೌನದ್ದೇ ಕಾರುಬಾರು,
ಎಡಗೈಲಿ ಮೊಬೈಲು ಫೇಸ್ಬುಕ್ಕು, ವ್ಯಾಟ್ಸಾಪು.. ಬಲಗೈನ ಕಾರ್ಯಕ್ಕೇನೂ ಅಡ್ಡಿಯಿಲ್ಲವಲ್ಲ!
ಊಟ ಪೂರ್ತಿಯಿಲ್ಲ, ಕಾರಣ ಹಸಿವಿಲ್ಲ, ಸಂಜೆ ಸಹೋದ್ಯೋಗಿಗಳಿತ್ತ ಕಿಟ್ಟಿಪಾರ್ಟಿ, ಪಾನೀಪುರಿ, ಪಿಜ್ಜಾ ಬರ್ಗರ್ರು.
ಗಂಟೆ ಆಗಲೇ ಹನ್ನೊಂದು..‘ಇವತ್ತು ಬೇಡ ಕಣೇ..ತಲೆನೋವು..ಆಫೀಸಿನ ಟೆನ್ಯನ್ನು, ನಾಳೆ ಓಕೇ ನಾ ಚಿನ್ನಾ..’
ಹಣೆಗೆ ಮುತ್ತು ಪ್ರೀತಿ-ಪ್ರಣಯಕ್ಕೆ ಕುತ್ತು..!
ಮಹಾನಗರಗಳೆಂಬ ಬಣ್ಣ ಬಣ್ಣದ ಸುವಾಸನಾ ರಹಿತ ಜರ್ಬೇರಾ, ಡೇರೆ ಹೂಗಳ ಬೃಹತ್ ಲೋಕಕ್ಕೆ ಬಂದೀತೇ ನೆಮ್ಮದಿಯ ಚಿಟ್ಟೆ..?
ಗೆಳೆಯ ಗೆಳತಿಯರೊಂದಿಗೆ ಮಾಲ್ಗಳಿಗೆ ಭೇಟಿ, ಸಂಗೀತ, ಬೆಳಕಿಗಿಲ್ಲ ಇಂದ್ರಲೋಕವು ಇವಕ್ಕೆ ಸಾಟಿ.!!
ಏನನ್ನು ಕೊಳ್ಳದಿರೆ ಆದೀತೇ? ಸುಲಭದಲ್ಲಿ ಬಿಟ್ಟೀತೇ ಸುಂದರ ಸುವಾಸಿತ ಸೇವಕಿಯರ ಮೋಹಕನಗು, ಅತಿವಿನಯ, ಹುಸಿ ಕಾಳಜಿ.
ಕೊನೇ ಪಕ್ಷ ಕೊಳ್ಳಲೇಬೇಕು ಸ್ಟೇಟಸ್ಗಾಗಿ ಏನನ್ನಾದರೂ ದುಬಾರಿ ಬೆಲೆ ತೆತ್ತು..!.
ಅಗತ್ಯವಿಲ್ಲದಿದ್ದರೂ ಸರಿಯೇ, ನೂರೈವತ್ತು ತೆತ್ತು ಕುಡಿಯಲೇ ಬೇಕು ಕೋಲ್ಡ್ ಕಾಫಿ, ಕೃತಕ ನಗುವನ್ನು ಮುಖಕ್ಕೆ ಮೆತ್ತಿ..!
ಬರುವುದೊಂದೇ ವೀಕೆಂಡು ವಾರಕ್ಕೆ, ಹೋಗುವದೆಲ್ಲಿಗೆ ಸಣ್ಣ ಜೇಬನ್ನು ಹೊತ್ತು..!
ಹಬ್ಬ ಹರಿದಿನಕ್ಕೆ ತಂದೆ ತಾಯಿಯರ ಮನೆಗೋ.. ಹೆಂಡ್ತಿ ತವರಿಗೋ..!
ಬನ್ನೇರುಘಟ್ಟವೋ.. ಮೇಕೆದಾಟೋ..! ಜಿ ಆರ್ ಎಸ್ಸಿಗೋ, ಈನ್ನೊವೇಟಿವ್ ಫಿಲ್ಮ್ ಸಿಟಿಗೋ..?
ಹೋಗಿಬರೋಕೆ ನಾಲ್ಕೈದು ತಾಸು, ಕಳೆದೋಯ್ತು ಎಲ್ಲ ಕಾಸು..! ದುಬಾರಿ ಬೆಲೆ ತೆತ್ತರೂ ಮಜಾ ಮಾತ್ರ ಮೂರೇ ತಾಸು..
ಎಷ್ಟೇ ಬೇಗ ಹೊರಟರೂ ಮನೆ ತಲುಪೋದು ಮಾತ್ರ ಹನ್ನೊಂದು ಗಂಟೆಗೇ. ಕಾರಣ ಟ್ರಾಫಿಕ್ಕು ಪ್ರಾಬ್ಲಮ್ಮು..!
ಮತ್ತದೇ ರಾಗ.. ಅದೇ ಹಾಡು...ಸುಸ್ತು, ಮೈಕೈ ನೋವು.. ಪ್ರಣಯದಾಟದ ಗಾಡಿಗೆ ಒಮ್ಮೆಲೇ ನಾಲ್ಕನೇ ಗೇರು,
ವ್ಯವಧಾನವಿಲ್ಲ, ನಾಳೆಯ ಒತ್ತಡವೇ ಎಲ್ಲ..!. ಒತ್ತಾಯದ ಕೂಟ.., ಶೀಘ್ರ ಸ್ಖಲನ..! ನಾನೊಂದು ತೀರ, ನೀನೊಂದು ತೀರ
ಯಾಕಾರೂ ಬಂದಿತೋ ಸೋಮವಾರ..! ಜೀವನವೇ ಒಂದು ಕಾಟಾಚಾರ!
ನೆಮ್ಮದಿಯೆಂಬ ಚಿಟ್ಟೆ ಮಾತ್ರ ದೂರ ಬಲು ದೂರ...!.
No comments:
Post a Comment