- ಚಿದಂಬರ
ಕಲಿಯಲೇಬೇಕೆನಿಸಿದರೆ, ಯಾವುದೇ ವಿದ್ಯೆ ‘ಬ್ರಹ್ಮ ವಿದ್ಯೆ’ಲ್ಲವೆಂದು ನನಗೆ 90ರ ದಶಕದಲ್ಲಿಯೇ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಯಾವುದೇ ವಿದ್ಯೆ ಕಲಿಯಬೇಕಾದರೆ, ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ‘ಸಾಧನ’ವಲ್ಲ, ಸಾಧಿಸಬೇಕೆಂಬ ‘ತೀವ್ರವಾದ ಇಚ್ಛಾಶಕ್ತಿ’ ಹಾಗೂ ಪ್ರಖರ ಪ್ರಯತ್ನ ಎಂಬುದು ನನ್ನ ಬಲವಾದ ಅನಿಸಿಕೆ.
ದಶಕಗಳ ಹಿಂದಿನಿಂದಲೂ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ, ಮಾಜಿ ಮಂತ್ರಿ ದಿ|| ಎಂ.ವೈ. ಘೋರ್ಪಡೆ ಯವರ ಚಿತ್ರಗಳನ್ನು ತೀರ ಹತ್ತಿರದಿಂದ ನೋಡುತ್ತಾ ಬೆಳೆದು ಬಂದಿದ್ದರಿಂದಲೋ ಅಥವಾ ‘ಬಳ್ಳಾರಿಯ ಕಾಶ್ಮೀರ’ ಬಿರುದಾಂಕಿತ ‘ಸಂಡೂರಿ’ನಲ್ಲಿ ಜನಿಸಿದ್ದರಿಂದಲೋ ಕ್ಯಾಮರಾದ ಬಗ್ಗೆ ಅತೀವ ಆಸಕ್ತಿ ನನ್ನ ಮನದಾಳದಲ್ಲಿ ಮೊಳೆತು ಸುಪ್ತವಾಗಿತ್ತು. ಕಾಲಾನಂತರ ವಿದ್ಯಾರ್ಜನೆಯ ಒತ್ತಡದಲ್ಲಿ ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಒಂದು ಒಳ್ಳೆಯ ಕ್ಯಾಮರಾ ಖರೀದಿಸುವ ಸದವಕಾಶ ಸಿಕ್ಕಿತು. ಅಲ್ಲಿಂದ ನನ್ನ ಜೀವನದಲ್ಲಿ ನನಗರಿವಿಲ್ಲದಂತೆಯೇ ಕೆಲವು ಬದಲಾವಣೆಗಳು ಕಾಣತೊಡಗಿದವು! ನಾನು ಪ್ರಪಂಚವನ್ನು ನೋಡುವ ರೀತಿಯೇ ಬದಲಾಗತೊಡಗಿತು! ಕ್ರಮೇಣ ‘ಕ್ಯಾಮರಾ’ ನನ್ನ ‘ಗುರು’ವಾಗಿ ಬೋಧಿಸತೊಡಗಿತು !
ಒಂದು ಛಾಯಾಚಿತ್ರ ಸೆರೆಹಿಡಿಯುವಾಗ ಅಗತ್ಯವಾದ ತಾದಾತ್ಮ್ಯತೆ, ಚಿತ್ರವನ್ನು ಸೆರೆ ಹಿಡಿಯುವ ರೀತಿ, ಯಾವ ಕೋನದಲಿ ಸೆರೆಹಿಡಿದರೆ ಅದ್ಭುತವಾಗಿ ಮೂಡಬಲ್ಲದು ಎಂಬ ಪರಿಕಲ್ಪನೆ ನಿಧಾನವಾಗಿ ಜೀವನದಲ್ಲೂ ಅವಶ್ಯಕ ಎಂದೆನಿಸತೊಡಗಿತು! ಚಿತ್ರ ಸೆರೆಹಿಡಿಯಲು ಅವಶ್ಯಕವಾಗಿ ಬೇಕಾದ ತಾಳ್ಮೆ, ಸಹನೆ ಜೀವನದ ಅನೇಕ ಮಜಲು ತಿರುವುಗಳಲ್ಲಿಯೂ ಬೇಕೆಂದೆನಿಸತೊಡಗಿತು. ಚಿತ್ರಿಕರಿಸುವಾಗ, ಕ್ಯಾಮರಾದ ಎದುರಿನ ವ್ಯಕ್ತಿ ಒಂದು ಕ್ಷಣ ಎಲ್ಲ ಮರೆತು ನಸು ನಕ್ಕರೆ, ಮುಗುಳ್ನಕ್ಕರೆ ಚಿತ್ರ ಅತ್ಯುತ್ತಮವಾಗಿ ಮೂಡಿಬರುತ್ತದೆಂದಾದರೆ ಜೀವನವಿಡೀ ನಾವು ನಸುನಗುತ್ತಲೇ ಕಳೆದರೆ ಎಂತಹ ಅದ್ಭುತ ಎಂದೆನಿಸತೊಡಗಿತು.
ಕ್ಯಾಮರಾದಿಂದ ಛಾಯಾಗ್ರಹಣ ಮಾಡಬೇಕಾದರೆ ಮೂರು ತಾಂತ್ರಿಕ ವಿಷಯಗಳ ಕಲಿಕೆ ಅತ್ಯಗತ್ಯ. Shutter speed, Aperture Value, ISO ಈ ಮೂರು ಅಂಶಗಳು ಛಾಯಾಚಿತ್ರದ ಗುಣಮಟ್ಟವನ್ನು ನಿಯಂತ್ರಿಸುತ್ತವೆ. ಒಂದು ರೀತಿ ಒಳ್ಳೆಯ ಘಮ-ಘಮ ಕಾಫಿ ತಯಾರಾಗಬೇಕಾದರೆ ಕಾಫಿ ಪುಡಿ, ಹಾಲು ಮತ್ತು ಸಕ್ಕರೆ ಇವುಗಳ ಹದವಾದ ಸಮ್ಮಿಶ್ರಣದ ಅಗತ್ಯ ಹೇಗೋ, ಇದೂ ಸಹ ಹಾಗೆ! ಇದನ್ನು ಜೀವನದೊಂದಿಗೆ ಹೋಲಿಸಿದಾಗ ಅದ್ಭುತ ಸಮೀಕರಣವೊಂದು ಸಿಕ್ಕಿತು. ಒಂದು ಸಾಧನೆ ಮಾಡಲು ಆ ಮೂರು ತಾಂತ್ರಿಕ ಅಂಶಗಳಂತೆ ಇಚ್ಛಾಶಕ್ತಿ, ಬುದ್ಧಿ ಶಕ್ತಿ ಹಾಗೂ ಕ್ರಿಯಾಶಕ್ತಿಗಳು ಬೇಕೆ ಬೇಕು. ಬರಿಯ ಇಚ್ಛೆ, ಬುದ್ಧಿ ಹಾಗೂ ಕ್ರಿಯೆಗಳಿಂದ ಮಾತ್ರ ಸಾಧನೆ ಮಾಡಲಾಗುವುದಿಲ್ಲ, ಆದರೆ ಆ ಮೂರು ಅಂಶಗಳ ‘ಹದವಾದ ಮಿಶ್ರಣ’ದಿಂದ ಮಾತ್ರ ಸಾಧ್ಯ ಎಂಬುದು ಮನಃಪಟಲದಲ್ಲಿ ಅರಿವಾಯಿತು.
ಕ್ಯಾಮರಾಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದದ್ದು ‘ಬೆಳಕು’. ಬೆಳಕಿಲ್ಲದಿದ್ದರೆ ಎಂತಹ ಹೆಚ್ಚಿನ ಬೆಲೆಯ ಕ್ಯಾಮರಾಗಳೂ ಸರಿಯಾಗಿ ಕೆಲಸ ಮಾಡಲಾರವು. ಹಾಗೆಯೇ ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ‘ಅರಿವಿನ’ ಬೆಳಕು ಅತ್ಯಂತ ಅವಶ್ಯವೆಂದು ನಿಧಾನವಾಗಿ ಮನದಟ್ಟಾಗತೊಡಗಿತು.
(ಮುಂದುವರಿಯುವುದು)
No comments:
Post a Comment