ಕೋಶ ಓದು: ಪಾಕ ಕ್ರಾಂತಿ ಮತ್ತು ಇತರ ಕಥೆಗಳು

- ರವಿಶಂಕರ್ ಶಾಸ್ತ್ರಿ
ಲೇಖಕರು: ಪೂರ್ಣಚಂದ್ರ ತೇಜಸ್ವಿ

ಮಹಿಳೆಯರು ಮಾತ್ರ ಯಾಕೆ ಅಡಿಗೆ ಕೆಲಸ ಮಾಡಬೇಕು, ಅದರಲ್ಲೇನಿದೆ ಅಂತಹ ವಿಶೇಷ. ಯಾರು ಬೇಕಾದರೂ ಸುಲಭವಾಗಿ ಅಡಿಗೆ ಮಾಡಿ ಬಿಡಬಹುದು ಎಂದು ಲೇಖಕರು ಅಂದುಕೊಂಡಿದ್ದರು. ಆದರೆ ಅದು ಅಷ್ಟು ಸುಲಭವಲ್ಲ ಎಂದು ತಿಳಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ!

ತಮ್ಮದೇ ಆದ ಆಲೋಚನೆಯೊಂದಿಗೆ ಬೇರೆ ಬೇರೆ ಪ್ರಯೋಗ ಮಾಡಲು ಬಯಸಿದ್ದ ತೇಜಸ್ವಿಯವರು ತಾವು ಅನುಭವಿಸಿದ ನೂರು ಕಷ್ಟಗಳನ್ನು ಮೊದಲ ಕಥೆಯಲ್ಲಿ ರಸವತ್ತಾಗಿ ವಿವರಿಸಿದ್ದಾರೆ. ಓದುಗರಿಗೂ ತಾವು ಯಾಕೆ ಹೀಗೆ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡಬಾರದು ಅಂತ ಅನಿಸಿದರೆ ತಪ್ಪೇನಿಲ್ಲ!

ಇನ್ನೊಂದು ಕಥೆ- ಮಳೆಗಾಲದ ಚಿತ್ರಗಳು. ಮಳೆಗಾಗಿ ಕಾಯುವ ಕಾಫಿ ಬೆಳೆಗಾರರೊಬ್ಬರ ಮನಕಲಕುವ ಚಿತ್ರವಿದೆ. ಊರೆಲ್ಲ ಮಳೆ ಬಂದರು ಅವರ ಕಾಫಿ ತೋಟದ ಒಳಗೆ ಮಳೆ ಕಾಲಿಡುತ್ತಲೇ ಇರಲಿಲ್ಲ! ಮಳೆಗಾಗಿ ಕಾದು ಕಾದು ಕೊನೆಗೊಮ್ಮೆ ಅವರು ಕಾಫಿ ತೋಟವನ್ನೇ ಮಾರಬೇಕಾಗಿ ಬಂತಂತೆ. ಪ್ರಕೃತಿದತ್ತವಾಗಿ ಬರುವ ಮಳೆಯನ್ನು ಬಯಸುವ, ಕಾಯುವ ಸಾವಿರಾರು ಮಂದಿ ಇದ್ದರೂ ಮಳೆ ಬಂದರೆ ತಮಗೆ ತೊಂದರೆಯಾಗುತ್ತದೆ ಎಂದು ಶಾಪ ಹಾಕುವವರಿಗೇನು ಬರವಿಲ್ಲ. 

ಸಂತೆ ಎನ್ನುವ ಕಥೆಯಲ್ಲಿ ಲೇಖಕರು ಕಂಡಂತೆ ಸಂತೆಯ ಸ್ವಾರಸ್ಯಗಳನ್ನು ವಿವರಿಸಿದ್ದಾರೆ. ನೂರಾರು ಬಗೆಯ ಜನರನ್ನು ಒಂದೆಡೆ ಸೇರಿಸಿ, ನೂರಾರು ಬಗೆಯ ವಸ್ತುಗಳನ್ನು ವಿನಿಮಯ ಮಾಡುವ ವ್ಯವಸ್ಥೆಯನ್ನು ತೇಜಸ್ವಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಬರಿಯ ಕೆಟ್ಟ ಸಾಮಾನುಗಳು ಸಿಗುತ್ತವೆ ಎಂದು ಮೊದಲು ಭಾವಿಸಿದ್ದರೂ, ನಂತರ ವಿವಿಧ ವಿಶೇಷಗಳು ದೊರೆಯುತ್ತವೆ ಎಂದು ಅವರಿಗೆ ಅರಿವಾಗುತ್ತದೆ. ಮಾತಿನಿಂದಲೇ ಮನೆ ಕಟ್ಟುವ ವ್ಯಾಪಾರ ಮಾಡುವವರೂ ಇರುತ್ತಾರೆ ಎಂದು ಅವರಿಗೆ ಅರಿವಾಗುತ್ತದೆ. ಒಟ್ಟಿನಲ್ಲಿ ವಿವರಣೆ ಕುತೂಹಲಕಾರಿಯಾಗಿದೆ. 

ತೇಜಸ್ವಿ ಅವರ ಬರಹಗಳನ್ನು ಸವಿಯುವ ಮಜವೇ ಬೇರೆ. ಅವರ ಯಾವುದೇ ಪುಸ್ತಕವಾದರೂ ಸರಿ, ಓದಲು ಆರಂಭಿಸಿದರೆ ಮುಗಿಯುವ ತನಕ ಕೆಳಗಿಡುವ ಪ್ರಶ್ನೆಯೇ ಇಲ್ಲ. ಅಷ್ಟರ ಮಟ್ಟಿಗೆ ತೇಜಸ್ವಿ ನಮ್ಮನ್ನು ಆವರಿಸುತ್ತಾರೆ. 

No comments:

Post a Comment