- ಮೋಹನ್ ಮೂರ್ತಿ ಮಾ ಕೆಂ
(ತಂದೆ ತಾಯಿ ಟಿವಿಯಲ್ಲಿ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ನೋಡುತ್ತಾ ಕುಳಿತಿರುವರು. ರೂಂನಲ್ಲಿ ಮಲಗಿದ್ದ ಮಗನ ಆಗಮನ.)
ಮಗ - ಏನ್ರಪಾ ಈ ಕಾರ್ಯಕ್ರಮ ನೋಡ್ತಾ ಇದಿರಲ್ಲಾ.
ತಂದೆ - ಏನೋ ಟೈಂ ಪಾಸ್ ಆಗ್ಬೇಕಲ್ಲ.
ಮಗ - ಟೈಂ ಪಾಸ್ ಆಗೋಕೆ ಟಿವಿನೇ ನೋಡ್ಬೇಕಾ, ಯಾವುದಾದರೂ ಬುಕ್ ಓದ್ಬೋದಲ್ವಾ?
ತಂದೆ - ಏನೋ ಈಗೀಗ ಬುಕ್ ಓದೋಕೆ ಆಸಕ್ತೀನೇ ಬರ್ತಾ ಇಲ್ಲ.
ಮಗ - ಹೋಗ್ಲಿ, ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಯಾರು ಗೆಲ್ಲಬಹುದು.
ತಾಯಿ - ನನಗೇನೋ ಆ ಪ್ರವರನೇ ಗೆಲ್ಲಬಹುದು ಅನ್ಸತ್ತೆ.
ಮಗ - ಭಾರೀ ಕಿರಿಕ್ ಅಂತಾರಲ್ಲ ಅವನ ಬಗ್ಗೆ. ಅಲ್ಲಿರೋ ಬೇರೆ ಸ್ಫರ್ಧಿಗಳಿಗೆ ಅವನ್ನ ಕಂಡ್ರೆ ಆಗೋದಿಲ್ವಂತೆ.
ತಂದೆ - ಇಲ್ಲ ತುಂಬಾ ತಿಳಕೊಂಡಿದಾನೆ ಅವನು.
ತಂದೆ ತಾಯಿ (ಇಬ್ಬರೂ ಒಟ್ಟಿಗೆ) - ಆದರೆ ವಿಪರೀತ ಮಾತು
ಮಗ (ಅನುಮಾನದಿಂದ ತಲೆ ಆಡಿಸುತ್ತಾ) - ಸಾಮಾನ್ಯವಾಗಿ ತಿಳ್ಕೊಂಡಿರುವವರು ತುಂಬಾ ಮಾತಾಡಲ್ವಲ್ಲ.
ತಂದೆ - ಇಲ್ಲ ಕಣೋ, ಪ್ರವರನಿಗೆ ತುಂಬಾ ಜ್ಞಾನ ಇದೆ. ವಿಷಯ ತಿಳ್ಕೊಂಡಿದಾನೆ. ಈ ಕಾರ್ಯಕ್ರಮ ನಡೆಸ್ತಾನಲ್ಲ ಆ ಹೀರೋ, ಅವನ ಪ್ರತಿಯೊಂದು ಚಲನಚಿತ್ರ ಯಾವ ಇಸವಿಯಲ್ಲಿ ಬಿಡುಗಡೆಯಾಯ್ತು ಅಂತ ವಿವರವಾಗಿ ಹೇಳ್ತಾನೆ ಪ್ರವರ.
ಮಗ (ಆಶ್ಚರ್ಯದಿಂದ ಸಣ್ಣ ಧ್ವನಿಯಲ್ಲಿ) - ಅದು ಜ್ಞಾನಾನಾ?
ತಂದೆ ತಾಯಿ (ಇಬ್ಬರೂ ಒಟ್ಟಿಗೆ) - ಏ, ತತ್ವ ಎಲ್ಲಾ ಹೇಳ್ತಾನೆ ಅವನು.
(ಟಿವಿಯಲ್ಲಿ ಜಾಹೀರಾತು ಪ್ರಾರಂಭವಾಗುವುದು)
ಮಗ - ಅದಿರ್ಲಿ, ಇದೇಕೋ ಎಡಗಣ್ಣು ಸ್ವಲ್ಪ ಉರೀತಾ ಇದೆ ನೋಡು.
(ತಾಯಿ ಹತ್ತಿರದಿಂದ ಕಣ್ಣನ್ನು ಪರೀಕ್ಷಿಸುವಳು)
ತಾಯಿ - ಇದೇನೋ ಇಷ್ಟೊಂದು ಕೆಂಪಾಗಿದೆ.
ತಂದೆ - ಏನೋ ಬಿದ್ದಿರಬೇಕು ಸರಿಯಾಗಿ ನೋಡು.
ಮಗ - ಏನೂ ಬಿದ್ದಿಲ್ಲ ಅನ್ಸತ್ತೆ. ಇಲ್ಲ ಅಂದಿದ್ರೆ, ಒತ್ತಿದ ಹಾಗಾಗುತ್ತಿತ್ತು.
ತಾಯಿ - ತಡಿ, ಅಪ್ಪಂದು ಕಣ್ಣಿಗೆ ಹಾಕೋ ಔಷಧಿ ಇದೆ. ತಂದು ಕೊಡ್ತೀನಿ. ಹಾಕು. ಕಡಿಮೆ ಆಗುತ್ತೆ.
(ತಾಯಿ ರೂಮಿಗೆ ಹೋಗಿ eye drops ತಂದು ಕೊಡುವಳು. ಮಗ ಔಷಧಿ ಮೇಲೆ ಅಚ್ಚಾಗಿದ್ದ ದಿನಾಂಕವನ್ನು ಓದುವನು.)
ಮಗ - ಇದು ಯಾವಾಗ open ಮಾಡಿದ್ದು?
ತಾಯಿ - ಒಂದೆರಡು ಮೂರು ತಿಂಗಳಾಗಿರಬೇಕು.
ಮಗ - ಇದನ್ನು open ಮಾಡಿದ ಮೇಲೆ ಒಂದು ತಿಂಗಳ ಆದ ಮೇಲೆ ಉಪಯೋಗಿಸಬಾರದು ಅಂತ ಬರೆದಿದಾರಲ್ಲ.
ತಾಯಿ - ಮತ್ತೆ ಅಪ್ಪ ಎರಡು ಮೂರು ತಿಂಗಳಿಂದ ಉಪಯೋಗಿಸ್ತಾನೇ ಇದಾರೆ?
(ಔಷಧಿಯ ಡಬ್ಬದ ಮೇಲೆ ಅಚ್ಚಾಗಿದ್ದ ದಿನಾಂಕವನ್ನು ತಾಯಿಗೆ ತೋರಿಸುತ್ತಾ)
ಮಗ - ಒಂದು ತಿಂಗಳ ಆದ ಮೇಲೆ ಉಪಯೋಗಿಸಬಾರದು ಅಂತ ಬರೆದಿದಾರೆ ನೋಡಿಲ್ಲಿ.
ತಂದೆ - ಎರಡು ತಿಂಗಳಿಂದ ಕಣ್ಣು ಕೆಂಪಾದಗಲೆಲ್ಲಾ ನಾನು ಉಪಯೋಗಿಸ್ತಾ ಇದೀನಿ, ಏನೂ ಆಗಿಲ್ಲ. (ವ್ಯಂಗ್ಯದ ಧ್ವನಿಯಲ್ಲಿ) ನೀವು ತುಂಬಾ ಓದಿಕೊಂಡಿರುವವರು,... ನೋಡಿ.
ಮಗ - ( ಜಿಗುಪ್ಸೆಯಿಂದ ) ಮತ್ತೆ ಸುಮ್ಮನೆ ಯಾಕೆ ಔಷಧಿ ಕಂಪೆನಿಯವರು ಅಚ್ಚು ಹಾಕ್ತಾರೆ. ಇದನ್ನ ಎಸೆಯಿರಿ. ನಾಳೆ ಹೊಸ ಔಷಧಿ ತೆಗೆದುಕೊಂಡು ಬರುತ್ತೇನೆ.
(ಟಿವಿಯಲ್ಲಿ ಜಾಹೀರಾತು ಮುಗಿದು ಪುನ: ರಿಯಾಲಿಟಿ ಕಾರ್ಯಕ್ರಮ ಆರಂಭವಾಗುವುದು. ತಂದೆ ತಾಯಿ ಕಾರ್ಯಕ್ರಮದಲ್ಲಿ ಮಗ್ನರಾಗುವರು. ಮಗ ತನ್ನ ಕೊಠಡಿಗೆ ನಿರ್ಗಮಿಸುವನು.)
No comments:
Post a Comment