- ರವಿಶಂಕರ್ ಶಾಸ್ತ್ರಿ
ವಸುಧೇಂದ್ರರವರ ೨೪ ಪ್ರಬಂಧಗಳ
ಸಂಕಲನ ಇದಾಗಿದೆ. ದಿನನಿತ್ಯದ ಸರಳ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ
ವಿಶ್ಲೇಷಿಸಿದ್ದಾರೆ ಲೇಖಕರು. ಎಂದಿನಂತೆ ವಸುಧೇಂದ್ರರ ಪುಸ್ತಕಗಳು ಒಮ್ಮೆ ರುಚಿ ಸಿಕ್ಕಿದರೆ
ಮತ್ತೆ ಕೊನೆಯ ಪುಟದವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಮಧ್ಯೆ ನಿಲ್ಲಿಸುವುದು ಬಲು ಕಷ್ಟ!
ಅನೇಕ ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರೂ ಅವರು
ಬರೆಯುವ ವಿಷಯಗಳು ವೈವಿಧ್ಯಮಯವಾಗಿರುತ್ತದೆ.
ಯಾವುದೇ
ವಿಷಯದ ಬಗ್ಗೆ ಸರಳವಾಗಿ ಬರೆಯುವುದು ಅವರ ವಿಶೇಷ. ಚುಕ್ಕಿ ಬಾಳೆಹಣ್ಣು, ಎಂಬ ಮೊದಲ
ಪ್ರಬಂಧ ಚುಕ್ಕಿಯಿರುವ ಬಾಳೆಹಣ್ಣುಗಳ ಬಗ್ಗೆ ವಿವರ ನೀಡುತ್ತದೆ. 'ಐದು ಪೈಸೆ
ವರದಕ್ಷಿಣೆ' ಎಂಬುದು ಆ ಕಾಲದಲ್ಲಿ ೫ ಪೈಸೆಗೆ ಇದ್ದ ಬೆಲೆಯನ್ನು ಸೂಚಿಸುತ್ತದೆ. ಜೊತೆಗೆ
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. 'ಸಾಲದ ಸಾನುಭೂತಿ' ಪ್ರಬಂಧವಂತೂ ಸಾಲ
ಮಾಡಲೇಬಾರದು ಎಂದು ಹಿರಿಯರು ಎಷ್ಟರ ಮಟ್ಟಿಗೆ ಬಲವಾಗಿ ನಂಬಿದ್ದರು ಎಂಬುದನ್ನು
ವಿವರಿಸುತ್ತದೆ.
'ನಿದ್ದೆಗೊಮ್ಮೆ
ನಿತ್ಯ ಮರಣ' ವು ನಿದ್ರಾಹೀನತೆಯ ವಿವಿಧ ಮುಖಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ.
ಹಲವಾರು ಜನ ನಿದ್ದೆಯಿಲ್ಲದೆ ತೊಳಲಾಡುತ್ತಿದರೂ ಹೊರಗಡೆ ಹೇಳಿಕೊಳ್ಳಲಾಗದೆ
ಒದ್ದಾಡುತ್ತಿರುತ್ತಾರೆ, ಸಮಸ್ಯೆ ನಮ್ಮದು ಮಾತ್ರವಲ್ಲ ಎಂದು ತಿಳಿಯುತ್ತಿದ್ದಂತೆ
ನಿಧಾನಕ್ಕೆ ತಮ್ಮ ಸಮಸ್ಯೆಗಳನ್ನು ಬಾಯಿಬಿಡುತ್ತಾರೆ ಎಂಬುದು ಲೇಖಕರ ಸ್ವಂತ ಅನುಭವ.
ಹಲವು ವಿಷಯಗಳನ್ನು ತಮ್ಮ ಸರಳ ಧಾಟಿಯಲ್ಲಿ ಬರೆದು ನಮ್ಮ ಮನ ಮುಟ್ಟುವಲ್ಲಿ ಲೇಖಕರು
ಸಫಲರಾಗಿದ್ದಾರೆ. ನಮ್ಮ ಸುತ್ತ ನಡೆಯುವ ಸರಳ ವಿಷಯಗಳನ್ನೇ ತಮ್ಮದೇ ರೀತಿಯಲ್ಲಿ ನೋಡಿ,
ಅದರಿಂದ ನಾವು ಕಲಿಯಬಹುದಾದ ನೀತಿ ಪಾಠಗಳನ್ನು ನಮಗೆ ತಲುಪಿಸುವಲ್ಲಿ ಲೇಖಕರು
ಯಶಸ್ವಿಯಾಗಿದ್ದಾರೆ. ಮನಕ್ಕೆ ಮುದ ನೀಡಬಲ್ಲ ಪುಸ್ತಕ ಇದಾಗಿದ್ದು, ಓದಲು ಆರಂಭಿಸಿದರೆ
ಮುಗಿಸುವ ಮೊದಲು ಪುಸ್ತಕ ಕೆಳಗಿಡುವುದು ಕಷ್ಟ!
No comments:
Post a Comment