- ರವಿಶಂಕರ್ ಶಾಸ್ತ್ರಿ
ಲೇಖಕರು: ರೋಹಿತ್ ಚಕ್ರತೀರ್ಥ
ವಿಜ್ಞಾನಕ್ಕೆ ಸಂಬಂಧಿಸಿದ ಕಠಿಣ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಬಲ್ಲವರು ರೋಹಿತ್ ಚಕ್ರತೀರ್ಥ. ನಾಡಿನ ಹಲವಾರು
ದಿನಪತ್ರಿಕೆ-ವಾರಪತ್ರಿಕೆ ಇತ್ಯಾದಿಗಳಲ್ಲಿ ಹಲವಾರು ಲೇಖನಗಳನ್ನು ಬರೆದು
ಪ್ರಸಿದ್ಧರಾಗಿದ್ದಾರೆ.
ಪ್ರಸ್ತುತ
ಪುಸ್ತಕದಲ್ಲಿ ೧೨ ಲೇಖನಗಳಿವೆ. ಪ್ರಪಂಚದ ಬೇರೆ ಬೇರೆ ದೇಶಗಳ, ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಜನರ/ಜೀವನದ ಪರಿಚಯ ಮಾಡಿದ್ದಾರೆ. ಇದು ಒಂದು
ಬಗೆಯಲ್ಲಿ ಸ್ಪೂರ್ತಿದಾಯಕ ಕಥೆಗಳಂತೆ. ನಮ್ಮ ನಿಮ್ಮಂತೆ ಸಾಮಾನ್ಯರಾಗಿದ್ದ ಜನ ಹೇಗೆ
ತಮ್ಮ ಅಸಾಮಾನ್ಯ ಇಚ್ಛಾ ಶಕ್ತಿಯಿಂದ ಶಿಖರದಷ್ಟು ಎತ್ತರಕ್ಕೆ ಏರಿದರು ಎಂಬುದನ್ನು
ವಿವರಿಸಲಾಗಿದೆ. ಯಾವುದೇ ಸಾಧನೆಗೆ ಸವಾಲುಗಳು ಕೂಡ ಅಷ್ಟೇ ಪ್ರಮಾಣದಲ್ಲಿ
ಎದುರಾಗುತ್ತವೆ. ಅವುಗಳಿಗೆ ಎದೆಗುಂದದೆ ಮುನ್ನಡೆಯುವವನೆ ವಿಶಿಷ್ಟವಾದದ್ದನ್ನು
ಸಾಧಿಸುತ್ತಾನೆ. ಇಲ್ಲಿ ಕೊಡಲಾದ ಜನರ ಜೀವನ ಚಿತ್ರಗಳು ಕೆಲವಾದರೂ ನಮಗೆ ಧನಾತ್ಮಕ ಯೋಚನೆ ಮಾಡಲು ಸಹಾಯ ಮಾಡಬಲ್ಲವು.
ಏಕಾಂಗಿಯಾಗಿ
೧೬,೦೦೦ ಕಿಲೋಮೀಟರ್ ನಡೆದು, ಅದೂ ಕೂಡ ಅಸಾಧ್ಯವಾದ ದುರ್ಗಮ ಪ್ರದೇಶಗಳಲ್ಲಿ - ಒಂದಿಡೀ
ದೇಶದ ಭೂಗೋಳವನ್ನೇ ಜಗತ್ತಿಗೆ ತೆರೆದು ತೋರಿಸುವ ಸಾಧನೆ ಮಾಡಿದ ನಯನ್ ಸಿಂಗ್, ೧೬ ವರ್ಷಗಳ
ಕಾಲ ಛಲ ಬಿಡದೆ ಸಮುದ್ರದಾಳದಲ್ಲಿ ಹುಡುಕಿ ಸುಮಾರು ೫೦೦ ಮಿಲಿಯನ್ ಡಾಲರ್ ಗಳಷ್ಟು ಸಂಪತ್ತು ಪತ್ತೆ ಹಚ್ಚಿದ ಫಿಷರ್, ಜೀವನದ ಅಮೂಲ್ಯ ೨೬ ವರ್ಷಗಳನ್ನು ಶತ್ರು
ರಾಷ್ಟ್ರದಲ್ಲಿ ಗೂಢಚಾರನಾಗಿ ಕಳೆದು, ಕೊನೆಗೆ ಅಲ್ಲಿಯೇ ಮರಣ ಹೊಂದಿದ ರವೀಂದ್ರ, ೭
ವರ್ಷಗಳಷ್ಟೇ ಬದುಕಿದ್ದ ಆದರೆ ಸುಮಾರು ೨೫,೦೦೦ ಚಿತ್ರಗಳನ್ನು ಬರೆದ ಕೇರಳದ ಹುಡುಗ
ಎಡ್ಮಂಡ್ ಥಾಮಸ್ ಕ್ಲಿಂಟ್, ಕ್ಷಿಪಣಿ ಪಿತಾಮಹ ಎನಿಸಿಕೊಂಡ ನಮ್ಮ ಕಲಾಂ ಮೇಷ್ಟ್ರು,
ವಿಚಿತ್ರ ಖಾಯಿಲೆಗೆ ಸಿಲುಕಿದರು ಛಲ ಬಿಡದೆ ಕಪ್ಪು ಕುಳಿಗಳ ಬಗ್ಗೆ ವಿಶೇಷ ಬೆಳಕು
ಚೆಲ್ಲಿದ ಸ್ಟೀಫೆನ್ ಹಾಕಿಂಗ್.... ಹೀಗೆ ಹಲವಾರು ಸಾಧಕರು ಮತ್ತವರ ಜೀವನದ ಬಗ್ಗೆ
ಸರಳವಾದ ಭಾಷೆಯಲ್ಲಿ ಲೇಖಕರು ಬರೆದಿದ್ದಾರೆ. ಬರವಣಿಗೆಯ ಶೈಲಿ ಆಪ್ತವಾಗಿದೆ, ಮನ
ಮುಟ್ಟುವಂತಿದೆ.
No comments:
Post a Comment