- ರವಿಕುಮಾರ್ ಎಂ.ಎಸ್.
ದಾಟು ಕಾದಂಬರಿ ಪ್ರಕಟವಾಗಿದ್ದು 1973 ರಲ್ಲಿ. ಅಂದಿನ ಕಾಲಘಟ್ಟದಲ್ಲಿ ಅಸಮಾನತೆಯ ಗ್ರಾಮೀಣ ಮತ್ತು ನಗರ ಜೀವನ ಹೇಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿತ್ತು ಎಂಬ ಚಿತ್ರಣವನ್ನು ಈ ಕೃತಿ ದಾಖಲಿಸುತ್ತಾ ಹೋಗುತ್ತದೆ. ಈ ಕಾದಂಬರಿಯು ತಿಮಲಾಪುರ ಎಂಬ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವರ್ಗಗಳ ನಡುವೆ ನಡೆಯುವ ಜೀವನದ ಅನಾವರಣವಾಗಿ ತೆರೆದುಕೊಳ್ಳುತ್ತದೆ.
ನಮ್ಮ ಸಾಮಾಜಿಕ ವ್ಯವಸ್ಥೆ ಎಷ್ಟು ಸಂಕೀರ್ಣವಾದ ವರ್ಗ, ಜಾತಿಗಳಿಂದ, ಮೂಢನಂಬಿಕೆಗಳಿಂದ ಹಾಗು ಅಂದ ಶ್ರದ್ದೆಯಿಂದ ಕೂಡಿದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಸಹಜವಾಗಿ ಹೇಳಿದ್ದಾರೆ. ಇಂತಹ ಜಟಿಲ, ಸಂಕೀರ್ಣವಾದ ವ್ಯವಸ್ಥೆ ಇದ್ದರೂ ಕೂಡ "ಬದಲಾವಣೆ ಜಗದ ನಿಯಮ" ಎಂಬ ಉಕ್ತಿಯಂತೆ, ಹೊಸ ಗಾಳಿ ನಗರ ಜೀವನದ ವಿದ್ಯಾವಂತ ಯುವ ಪೀಳಿಗೆಯಲ್ಲಿ ಮಡಿವಂತರ ನಡುವೆ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಸಮರ್ಥವಾಗಿ ದಾಖಲಿಸಿದ್ದಾರೆ.
ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿದ ಹಾಗು ಜಾತಿ/ವರ್ಗಗಳ ನಂಬಿಕೆ ಇಲ್ಲದ ಮೇಲ್ಜಾತಿಯ ಪ್ರತಿಭಾವಂತೆ ಸತ್ಯಭಾಮ. ಬೆಂಗಳೂರಿನ ಕಾಲೇಜಿನಲ್ಲಿ ಉಪಾದ್ಯಾಯಿನಿ ಆಗಿರುವ ಸತ್ಯಭಾಮ ಮತ್ತು ಕಾನೂನು ಪದವಿ ಮಾಡುತ್ತಿರುವ ಹಿಂದುಳಿದ ವರ್ಗದ, ಅದೇ ಊರಿನ MLA ಮಗ ಶ್ರೀನಿವಾಸನ ಬಾಲ್ಯದ ಗೆಳೆತನ ಮುಂದುವರೆದು, ನಂತರ ಪ್ರೇಮಕ್ಕೆ ತಿರುಗಿ, ಈ ಮದುವೆ ಆಗಿ ತೀರುತ್ತದೆ ಅನ್ನಿಸುವಾಗ, ಅವರ ಪ್ರೀತಿಗೆ ಶ್ರೀನಿವಾಸನ ಕುಟುಂಬ ವಿರೋಧದಿಂದ ಮದುವೆ ಮುರಿದುಬೀಳುತ್ತದೆ.
ಊರಿನಲ್ಲಿರುವ ಸತ್ಯಳ ಅಣ್ಣ ವೆಂಕಟೇಶ್ ಒಬ್ಬ ನಾಜೂಕಿನ ವ್ಯಾವಹಾರಿಕ ವ್ಯಕಿತ್ವ, ಇವನ ಸಣ್ಣತನ ಹಾಗು ದುರಾಸೆಯಿಂದ ಜನರನ್ನು ಹೇಗೆ ಮರಳು ಮಾಡುತ್ತಾನೆ ಹಾಗೂ ಇಂತಹ ವ್ಯಕ್ತಿಗಳು ಸಮಾಜದ ಅವಿಭಾಜ್ಯ ಅಂಗ ಎಂದು ಲೇಖಕರು ತೋರಿಸಿದ್ದಾರೆ.
ಶ್ರೀನಿವಾಸನಿಗೆ ಅವನ ತಂದೆ-ತಾಯಿ ಮಾಡಿಸಿದ ಮದುವೆ ದುರಂತದಲ್ಲಿ ಅಂತ್ಯವಾಗುತ್ತದೆ. ಅವನ ಹೆಂಡತಿ ಒಂದು ವರ್ಷದಲ್ಲೇ ಸತ್ತು, ಅವನ ಗಮನ ಪುನಃ ಸತ್ಯಳ ಕಡೆ ತಿರುಗುತ್ತದೆ. ಸತ್ಯ ಇದಕ್ಕೆ ಒಪ್ಪದೇ ಇದ್ದಾಗ, ಆ ಪ್ರೀತಿ ಅದೇ ಊರಿನ ತೀರಾ ಕೆಳವರ್ಗದ, ಪಕ್ಕದ ಕ್ಷೇತ್ರದ MLA ಬೆಟ್ಟಯ್ಯನ ಮಗಳು ಮೀರಾ ಜೊತೆ ಆಗಿ, ಅದಕ್ಕೆ ಶ್ರೀನಿವಾಸನ ಕುಟುಂಬವರು ಒಪ್ಪದೇ, ಶ್ರೀನಿವಾಸನಿಗೆ ಕೊನೆಗೆ ಹುಚ್ಚು ಹಿಡಿಯುವದರ ಮೂಲಕ ಅಂತ್ಯವಾಗುತ್ತದೆ. ಲೇಖಕರು ಈ ಕಾದಂಬರಿಯ ಮೂಲಕ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂಬುದು ನನಗೆ ಅಸ್ಪಷ್ಟವೆನಿಸಿತು. ಜೊತೆಗೆ MLA ಬೆಟ್ಟಯ್ಯನ ಮಗ ಮೋಹನದಾಸನ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮತ್ತು ದೇವಸ್ಥಾನ ಪ್ರವೇಶ ಪ್ರಯತ್ನ ಎಲ್ಲವೂ ನಿರರ್ಥಕ ಎಂದು ಲೇಖಕರು ಹೇಳ ಹೊರಟಿದ್ದಾರೋ ಎಂಬ ಭಾವನೆ ಮೂಡುತ್ತದೆ. ಸತ್ಯಭಾಮಳ ಪಾತ್ರ ಹಾಗೂ ಅವಳ ದ್ವಂದ್ವ ನಡುವಳಿಕೆಗಳು ಆ ಪಾತ್ರವನ್ನು ದುರ್ಬಲ ವ್ಯಕ್ತಿತ್ವದಂತೆ ಚಿತ್ರಿಸಲಾಗಿದೆಯೆನ್ನುವ ಭಾವನೆ ಮೂಡಿಸುತ್ತವೆ.
ನನ್ನ ದೃಷ್ಟಿಯಲ್ಲಿ ಈ ಕೃತಿಯಲ್ಲಿ ಯಾವುದೂ ತಾರ್ಕಿಕ ಅಂತ್ಯ ಕಂಡಿಲ್ಲ. ಇದರಲ್ಲಿ ಬರುವ ಯಾವ ಸಮಸ್ಯೆಗಳಿಗೂ ಉತ್ತರ ಸಿಕ್ಕಿಲ್ಲ. ನಡು ನೀರಿನಲ್ಲಿ ತಂದು ಕೈ ಬಿಟ್ಟಂತೆ ಭಾಸವಾಗುತ್ತದೆ. ಅಂತರ್ಜಾತಿಯ ವಿವಾಹಗಳು ನಡೆಯಲು ಸಾಧ್ಯವಿಲ್ಲ, ಅಂತಹ ಪ್ರೀತಿಗಳಿಗೆ ಸುಖಾಂತ್ಯವಿಲ್ಲ ಹಾಗೂ ಇವುಗಳು ನಡೆಯುವುದಕ್ಕೆ ಜಾತಿಯ ಪ್ರತಿಷ್ಟೆ ಅಡ್ಡ ಬರುತ್ತದೆನ್ನುವುದನ್ನು ಕಾದಂಬರಿಯುದ್ದಕ್ಕೂ ಪ್ರತಿಪಾದಿಸಿದಂತೆ ಕಾಣುತ್ತದೆ.
ಸತ್ಯಳಲ್ಲಿ ಇರುವ ವೈಚಾರಿಕ ಚಿಂತನೆ ಮತ್ತು ಅವಳು ನಡೆಸುವ ಹೋಮ ಹವನಗಳು, ಒಂದಕ್ಕೊಂದು ತಾಳಮೇಳ ಇಲ್ಲ. ಇದು ಅವಳ ದ್ವಂದ್ವ ಮನಸ್ಥಿತಿಯನ್ನು ತೋರಿಸುತ್ತದೆ. ಸತ್ಯ ತನ್ನ ಓದು ಮತ್ತು ಬುದ್ದಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ವೈಯಕ್ತಿಕ ಬೆಳವಣಿಗೆಗೆ ಮತ್ತು ಸಮಾಜ ತಿದ್ದಲು ಬಳಸಿಕೊಳ್ಳಬಹುದಿತ್ತು. ಆದರೆ ಇದಾಗಲಿಲ್ಲವೆಂಬ ನಿರಾಸೆ ಮೂಡಿತು ನನಗೆ. ಸತ್ಯ ಹಾಗೂ ಶ್ರೀನಿವಾಸನ ಅಂತರ್ಜಾತಿಯ ವಿವಾಹ ಮುರಿದುಬಿದ್ದಾಗ, ಸತ್ಯ ಅನುಭವಿಸುವ ಕಷ್ಟ ಓದುಗರ ಮನ ಕಲುಕುತ್ತದೆ.
ಮೇಲ್ಜಾತಿಯೆಂದು ಮೆರೆಯುವ, ದೇವಸ್ಥಾನದ ಪೂಜಾರಿಯಾದ ಸತ್ಯಳ ತಂದೆ ಕೆಳವರ್ಗದ ಹೆಂಗಸರೊಂದಿಗೆ ದೈಹಿಕ ಸಂಬಂಧ ಬೆಳೆಸುವಾಗ ಮಡಿ ಮೈಲಿಗೆಗಳು ಅನ್ವಯಿಸುವುದಿಲ್ಲವೇ? ಎನ್ನುವ ಪ್ರಶ್ನೆ ಕಾಡುತ್ತದೆ.
ಈ ಮೇಲು ಕೀಳು ಜಾತಿಯೆಂಬ ಸಂಘರ್ಷದಲ್ಲಿ, ಮೀರಾ ಎಂಬ ಮುಗ್ಧೆ ಮತ್ತು ಅಮಾಯಕ ಹೆಣ್ಣು ಮಗಳು ಬಲಿಯಾಗಿದ್ದು ಮನ ಕಲಕುತ್ತದೆ. ಅವಳು ಬದುಕಿ, ಈ ಅಮಾನವೀಯ ಸಮಾಜವನ್ನು ಎದುರಿಸಿ ಒಂದು ಉತ್ತಮ ಜೀವನ ಕಟ್ಟಿಕೊಳ್ಳಬಹುದಿತ್ತು ಎಂಬುದು ನನ್ನ ಆಶಯ.
No comments:
Post a Comment