ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ

- ವೆಂಕಟೇಶ್ ಶೇಷಗಿರಿ

ಪಿರಿಯಾಪಟ್ಟಣದ ಬೆಟ್ಟದಪುರದ ಸಮೀಪವಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಬೇಕೆಂದು ನಿಶ್ಚಯಿಸಿ ಮೂರು ವಾರಗಳಿಂದ ಮುಂದೂಡುತ್ತಾ ಕೊನೆಗೂ ನವೆಂಬರ್ ೨೩ನೇ ತಾರೀಖು ಹತ್ತೋಣವೆಂದು ಅಂತಿಮ ನಿರ್ಧಾರ ಮಾಡಿ ನಾನು ಮತ್ತು ನನ್ನ ಗೆಳೆಯರೆಲ್ಲರೂ ಮೈಸೂರಿನಿಂದ ಹೊರಟೆವು. ೨೦೨೬ ಮೇ ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ಈಗಾಗಲೇ ಎಲ್ಲರೂ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ರೀತಿಯ ಹಲವಾರು ಚಾರಣಗಳನ್ನು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಮಾಡಬೇಕಿದೆ. 


ಬೆಳಗ್ಗೆ ಸುಮಾರು :೩೦ ಗಂಟೆಗೆ ಮೈಸೂರಿನಿಂದ ಹೊರಟು ಹುಣಸೂರಿನಿಂದ ೧೦ ಕಿಮೀ ಮುಂಚೆ ಹೋಟೆಲೊಂದರಲ್ಲಿ ತಿಂಡಿ ತಿಂದೆವು. ಮಕ್ಕಳನ್ನು ಕರೆದುಕೊಂಡು ಇದೇ ಮೊದಲ ಬಾರಿಗೆ ಚಾರಣಕ್ಕೆ ಹೊರಟ ನಾನು ಇವರು ನಿಜವಾಗಲೂ ಬೆಟ್ಟ ಹತ್ತುವರೇ ಎಂಬ ಸಂಶಯದಲ್ಲಿದ್ದೆ. ೩೦೦೦ ಮೆಟ್ಟಿಲುಗಳು ವರ್ಷದ ಮಕ್ಕಳಿಗೆ ತುಂಬ ತ್ರಾಸವಾಗಬಹುದು ಎನ್ನುವ ಆತಂಕ. ಎರಡು ವಾರದ ಹಿಂದೆ ಚಾಮುಂಡಿ ಬೆಟ್ಟ ಹತ್ತಿಳಿದುವಾಪಾಸ್ ಮನೆಗೆ ಬಂದುಅಕ್ಕ ಪಕ್ಕದ ಮನೆ ಹುಡುಗರ ಜೊತೆ ಕುಣಿದಾಡಿದ ನೆನಪು ಬಂದು ಸ್ವಲ್ಪ ಸಮಾಧಾನವಾಯಿತು. ಜೊತೆಗೆ ಅವರನ್ನು ಹುರಿದುಂಬಿಸಲು ಕಪ್ ಕೇಕ್, ಎನರ್ಜಿ ಡ್ರಿಂಕ್ ಇತ್ಯಾದಿಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡಿದ್ದೆ. ಎಲ್ಲಕ್ಕಿಂತ ಮಿಗಿಲಾಗಿ ಒಂದಿಬ್ಬರು ಸ್ನೇಹಿತರು ಅವರ ಮಕ್ಕಳನ್ನು ಕರೆದುಕೊಂಡು ಬರಲಾಗಲಿಲ್ಲಹಾಗಾಗಿ ಅವರ ಸೇವೆಯನ್ನು ಬೇಕಾದರೆ ಎರವಲು ಪಡೆಯಬಹುದೆಂಬ ದೂರಾಲೋಚನೆಯಲ್ಲಿದ್ದೆ!.


ಬೆಟ್ಟ ಹತ್ತಲು ಶುರು ಮಾಡಿ ಸುಮಾರು ೧೦೦-೧೨೫ ಮೆಟ್ಟಿಲು ಹತ್ತಿರಬಹುದು, ಮಕ್ಕಳೆಲ್ಲರೂ ಹುರುಪಿನಲ್ಲಿ ಮೆಟ್ಟಿಲು ಹತ್ತುತ್ತಿದ್ದರೆ, ನಾನು ಏದುಸಿರು ಬಿಡುತ್ತಾ ಹತ್ತುತ್ತಿದ್ದೆ . ಬೆಟ್ಟ ಹತ್ತುವಾಗ ಗೆಳೆಯ ಹೇಮಂತ್ "ಕಡಿದಾದ” ಪದದ ಬಳಕೆಯ ಬಗ್ಗೆ ಉಲ್ಲೇಖಿಸುತ್ತಾ, ಮಂಡ್ಯದ ಗ್ರಾಮೀಣ ಭಾಗದಲ್ಲಿ ಪದ ಪ್ರಯೋಗದ ಬಗ್ಗೆ ಹೇಳಿ " ಬೋರೆ ಕಡ್-ದಾಗದೆ" ಹೀಗೆ ಹಲವಾರು ಉದಾಹರಣೆಗಳನ್ನು ಕೊಟ್ಟರು. ಬೆಟ್ಟದ ಮೆಟ್ಟಿಲುಗಳು ಅಂತರ್ಜಾಲದ ಫೋಟೋದಲ್ಲಿ ಕಂಡದಕ್ಕಿಂತ ಬಹಳಷ್ಟು ಏರುಮುಖವಾಗಿದ್ದರಿಂದ ಇಷ್ಟೆಲ್ಲಾ ಚರ್ಚೆಗೆ ಕಾರಣವಾಯಿತು.


ಸುಮಾರು ೮೦೦ - ೯೦೦ ಮೆಟ್ಟಿಲುಗಳನ್ನು ಹತ್ತಿದ ನಂತರ, ಒಂದು ಮಂಟಪ ಕಾಣಿಸಿತು. ಬೆಟ್ಟ ಇಳಿಯುವಾಗ ಅದನ್ನ ನೋಡುವ ಎಂದು, ಉಪಹಾರ ಸೇವೆನೆಗೆಂದು ೧೫ ನಿಮಿಷ ವಿರಾಮ ಪಡೆದು ಮತ್ತೆ ಹತ್ತಲು ಶುರು ಮಾಡಿದೆವು. ಸಾಕಷ್ಟು ಕೆಲಸಕ್ಕೆ ಬಾರದ ವಿಷಯಗಳನ್ನು ಚರ್ಚಿಸುತ್ತ ಮುಂದುವರೆಯುತ್ತಿದ್ದಾಗ ಗೆಳೆಯ ಹೇಮಂತ್ ಮತ್ತೆ " ಸಣ್ಣ ಬೆಟ್ಟ ಹತ್ತಲು ಕಷ್ಟಪಡ್ತಾ ಇದೀವಿ, ವಯಸ್ಸಿನಲ್ಲಿ ಮಕ್ಳು ಬೇರೆ ಮಾಡ್ಕೊಂಡಿದೀವಲಪ್ಪ" ಎಂದು ನಗೆ ಚಟಾಕಿ ಸಿಡಿಸಿದರು. ಅಷ್ಟರಲ್ಲಿ ಮಕ್ಕಳ ಕೇಕೆ ಮೇಲಿನಿಂದ ಕೇಳಲಾರಂಭಿಸಿತು. ಬೆಟ್ಟದ ತುದಿ ಸಿಕ್ಕಿತೆಂದು ಅವರನ್ನು ಸೇರಿಕೊಳ್ಳಬೇಕೆಂದು ನಾವು ಬಿರುಸಾಗಿ ಹತ್ತಿಬೆಟ್ಟದ ತುದಿ ತಲುಪಲು ಒಂದೈವತ್ತು ಮೆಟ್ಟಿಲು ಇರುವ ಹಾಗೆ ಅಲ್ಲಿಯೇ ಇದ್ದ ಒಂದು ಮಂಟಪದ ಕೆಳಗೆ ಎಲ್ಲರೂ ಕುಳಿತುಮಕ್ಕಳನ್ನು ಕೂರಿಸಿ ತಂದ ಫಲಾಹಾರಗಳನ್ನೆಲ್ಲಾ ತಿಂದು ಮುಗಿಸಿದೆವು.


ಮೇಲೆ  ೧೧-೧೨ನೇ ಶತಮಾನದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮಾರಾಂಭ ದೇವಿಯ ದೇವಸ್ಥಾನಗಳಿದ್ದು, ದಿನವೂ ಪೂಜಾ ವಿಧಿ ವಿಧಾನಗಳು ನಡೆಯುತ್ತಿಲ್ಲವಾದರೂಗುಡಿಗಳು ಪಾಳುಬಿದ್ದಂತಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಜಾತ್ರೆ ನಡೆದು ಸಾಕಷ್ಟು ಭಕ್ತಾದಿಗಳು  ನೆರೆದಿದ್ದರೆಂದು ಕೇಳಿದೆವು


ಬೆಟ್ಟದ ಮೇಲಿನಿಂದ ಸುತ್ತಲಿನ ನೋಟ ಮುದ ನೀಡುವಂತಿತ್ತು, ಗಾಳಿಯು ಬಹಳ ವೇಗವಾಗಿ ಬೀಸುತ್ತಿತ್ತು. ಅರ್ಧ ಗಂಟೆ ಕುಳಿತು ಹರಟೆ ಹೊಡೆದು ಅಲ್ಲಿಯೇ ಪಕ್ಕದಲಿದ್ದ ಬಂಡೆಯೊಂದನ್ನು ಬೇರೆಯವರು ಹತ್ತುತ್ತಿರುವುದನ್ನು ನೋಡಿ ನಾವು ಕೂಡ ಹತ್ತಲು ಹೋದೆವು. ಇದು ಅಪಾಯಕಾರಿ ಕೆಲಸವೆಂದು ಮನಗೊಂಡು ಬಂಡೆ ಹತ್ತುವ ನಮ್ಮ ಯೋಜನೆಯನ್ನು ಕೈಬಿಟ್ಟೆವು.   


ಮಕ್ಕಳ ಎಲ್ಲೆ ಮೀರಿದ ಉತ್ಸಾಹವನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿತ್ತು ನನಗೆ. ಗಡಿಬಿಡಿಯಲ್ಲಿ ನನ್ನ ಮತ್ತು ಮಕ್ಕಳ ಟೋಪಿಗಳು ಇಲ್ಲದಿರುವುದು ನನಗೆ ತಡವಾಗಿ ಗಮನಕ್ಕೆ ಬಂತು. ಗೆಳೆಯ ಕೌಶಿಕ್ ಸ್ವಲ್ಪ ಹುಡುಕಾಡಿ ಟೋಪಿಗಳು ಎಲ್ಲೂ ಸಿಗಲಿಲ್ಲವೆಂದ. ಟೋಪಿಗಳನ್ನು ಕಾಣದ  ಹುಂಡಿಗೆ ಹಾಕಿದ್ದೀವಿ ಎಂದು ಸಮಾಧಾನಿಸಿಕೊಂಡು ಮೆಟ್ಟಿಲು ಇಳಿಯುವ ಕಡೆಗೆ ಗಮನ ಹರಿಸಿದೆವು.


ವಾಪಾಸ್ ಇಳಿಯುವಾಗ ಕಂಡ ಬಂಡೆಯೊಂದರ ಮೇಲೆ ನಿಂತು ಫೋಟೋ ಕ್ಲಿಕಿಸಿ ಮರಳಿದೆವು. ಇಳಿಯುವ ಸಮಯದಲ್ಲಿ ನನ್ನ ಮಗ ಕಾಲು ನೋವು ಎಂದು ತಗಾದೆ ತೆಗೆದ, ಅವನನ್ನು ಎತ್ತಿಕೊಂಡು ಇಳಿಯಲು ಶುರು ಮಾಡಿದೆ.

 

ಬೆಟ್ಟ ಇಳಿಯುತ್ತಾ ನಾವು ಹತ್ತುವಾಗ ನೋಡಿದ ಮಂಟಪದ ಸ್ಥಳಕ್ಕೆ ಬಂದಿದ್ದೆವು. ಕೆಲವರು ಅಷ್ಟರಲ್ಲಾಗಲೇ ಮುಂದೆ ಹೋಗಿದ್ದರುಅವರನ್ನು ಕೂಗಿ ವಾಪಾಸ್ ಕರೆಸಿ ಮಂಟಪದ ಕಡೆಗೆ ಹೋದೆವು. ಮಂಟಪದ ಹತ್ತಿರ ಎಲ್ಲಾ ಪಾಳು ಬಿದ್ದು ಒಂದೆರಡು ಜೋಡಿಗಳು ಏಕಾಂತ ಬಯಸಿ ಕೂತಿದ್ದೇ ಆಕರ್ಷಣೀಯ ಸನ್ನಿವೇಶದಂತೆ ಕಂಡು ಬಂತು. ಚಾಮುಂಡಿ ಬೆಟ್ಟದ ದಾರಿಯಲ್ಲಿ ಒಂದು ವೀಕ್ಷಣಾ ಸ್ಥಳ ಇದ್ದು ಅಲ್ಲೂ ಕೂಡ ಒಂದು ಮಂಟಪ ಇದೆಅಲ್ಲಿ ಮದುವೆಗೆ ಮುಂಚೆ ನಾನು-ಮತ್ತು ನನ್ನ ಪತ್ನಿ ಹೋಗಿ ಅವಳ ಹುಟ್ಟುಹಬ್ಬ ಆಚರಿಸಿದ್ದು ನೆನಪಾಯಿತು. ಈಗ ಅಲ್ಲಿ ಪ್ರವೇಶ ನಿಷಿದ್ದ.


ಮೆಟ್ಟಿಲುಗಳನ್ನೆಲ್ಲಾ ಇಳಿದ ನಂತರ ಕಪ್-ಕೇಕ್, ಜ್ಯೂಸ್ ಬಾಟಲ್ ಗಳನ್ನೆಲ್ಲಾ ಮಕ್ಕಳಿಗೆ ಹಂಚಿದೆವು. ಹತ್ತಿರದಲ್ಲೇ ರಾಮನಾಥಪುರ ಪ್ರವಾಸಿತಾಣವಿದ್ದು  ನೋಡಿಕೊಂಡು ಹೋಗುವ ಎಂದು ಚರ್ಚೆ ನಡೆಯುತ್ತಿರುವಾಗಲೇ, ಹೇಮಂತನಿಗೆ ಮನೆಯಿಂದ ಕರೆ ಬಂದು ಆದಷ್ಟು ಬೇಗ ಮೈಸೂರು ತಲುಪಬೇಕೆಂದು ಸೂಚಿಸಲಾಯಿತು. ರಾಮನಾಥಪುರವನ್ನು ಮತ್ಯಾವಾಗಲಾದರೂ ( ಮತ್ಯಾವಾಗಲಾದರೂ ಬರುವುದೇ ಇಲ್ಲ!!!) ನೋಡೋಣವೆಂದು ಮೈಸೂರಿನ ದಾರಿ ಹಿಡಿದೆವು


ಇತ್ತ ಮಕ್ಕಳ ಪ್ರಪಂಚದಲ್ಲಿ ಜ್ಯೂಸ್ ಬಾಟಲನ್ನು ಮಕ್ಕಳು ಹಂಚಿಕೊಳ್ಳಲು ಮನಸ್ತಾಪವಾಗಿ ದೊಡ್ಡ ಕಲಹವೇ ಪ್ರಾರಂಭವಾಗಿತ್ತು. ಅವರ ನ್ಯಾಯ- ಪಂಚಾಯತಿ ಮಾಡುವುದು ಬೆಟ್ಟ ಹತ್ತಿಳಿದದಕ್ಕಿಂತಲೂ ಹೆಚ್ಚು ತ್ರಾಸದಾಯಕವಾಯಿತು. ಕಡೆಗೆ ಇನ್ನು ಮುಂದೆ  - ಗಂಟೆಗಿಂತ ಹೆಚ್ಚು ಹೊತ್ತು ಎಲ್ಲಾದರೂ ಹೋದರೆ ಮಕ್ಕಳನ್ನೆಲ್ಲಾ ಮನೆಯಲ್ಲೇ ಬಿಟ್ಟು ಬರುವುದು ಸರಿ ಎಂದು ದೊಡ್ಡವರೆಲ್ಲಾ ಸರ್ವಾನುಮತದಿಂದ ತೀರ್ಮಾನಿಸಿದೆವು. 


ವಾಪಾಸ್ ಶಕ್ತಿದೇವತೆಗಳ ನಾಡಾದ ಪಿರಿಯಾಪಟ್ಟಣಕ್ಕೆ (ಪಿರಿಯಾಪಟ್ಟಣಕ್ಕೂ ಶಕ್ತಿದೇವತೆಗಳಿಗೂ ನಂಟಿದೆ ಎಂದು ಊರಿನ ಆರಂಭದ ವೃತ್ತದಲ್ಲಿ ಹಾಕಿದ ಕಟೌಟ್ನಿಂದ ತಿಳಿಯಿತು) ಬಂದು, ಶಕ್ತಿದೇವತೆಗಳ ಹಿನ್ನೆಲೆ ಮತ್ತು ಬೇರೆ ಬೇರೆ ಹೆಸರಿನಲ್ಲಿ ಅವುಗಳನ್ನು ಪೂಜಿಸುವ ಬಗ್ಗೆ ಹರಟೆ ಹೊಡೆಯುತ್ತಾ. ನಾವು ಬೆಳಿಗ್ಗೆ ತಿಂಡಿ ತಿಂದ ಹೋಟೆಲಿನಲ್ಲಿ ಊಟ ಮುಗಿಸಿ ನಮ್ಮ ನಮ್ಮ ಊರುಗಳ ದಾರಿ ಹಿಡಿದೆವು.


ಸ್ಥಳ - ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ, ಬೆಟ್ಟದಪುರ, ಪಿರಿಯಾಪಟ್ಟಣ, ಮೈಸೂರು.
ದಿನಾಂಕ : ೨೩-೧೧-೨೦೨೫
ಎತ್ತರ : ೩೪೦೦ ಅಡಿ ಸಮುದ್ರ ಮಟ್ಟದಿಂದ.
ಹತ್ತಲು ತೆಗೆದುಕೊಂಡ ಸಮಯ :  ಬೆಳಿಗ್ಗೆ ೯:೩೦ ಇಂದ ೧೨:೦೦ ಗಂಟೆ (ಸುಮಾರು ೨:೩೦ ಗಂಟೆ).
ಇಳಿಯಲು ತೆಗೆದುಕೊಂಡ ಸಮಯ : ಮದ್ಯಾಹ್ನ ೧ ಗಂಟೆ ಇಂದ ೨:೩೦ ಗಂಟೆ ( ಸಮಯ ೧:೩೦ ಗಂಟೆ) 


No comments:

Post a Comment