ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ

- ವಂದನಾ ಎನ್

ವರ ನಟ ರಾಜ್ ಕುಮಾರ್ ರವರ ಹಾಲು ಜೇನು ಚಿತ್ರವೆಂದರೆ ನಮಗೆಲ್ಲಾ ಸಾಮಾನ್ಯವಾಗಿ ನೆನಪಾಗುವುದು ಮಧುರ ಗೀತೆಗಳು, ಮೃದು ಪ್ರೇಮ ಮತ್ತು ಮನಮುಟ್ಟುವ ದೃಶ್ಯಗಳ ಮೂಲಕ ಹೇಳಲಾದ ಒಂದು ಪ್ರೇಮಕಥೆ. ಆದರೆ ಪತಿ ಪತ್ನಿಯರ ನವಿರಾದ ಪ್ರೇಮಕತೆಯೊಳಗೆ ನನಗೆ ಕಾಡಿದ್ದು ನೈತಿಕ ಗೊಂದಲ. ಅದು ಚಿತ್ರ ಮುಗಿದ ಮೇಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು. 

ಚಿತ್ರದಲ್ಲಿ ಪ್ರೀತಿ ಕೇವಲ ಭಾವನೆಯಾಗಿ ಮಾತ್ರವಲ್ಲದೆ, ನಿರೀಕ್ಷೆ, ತ್ಯಾಗ ಮತ್ತು ಹಂಬಲಗಳಾಗಿ ಅಭಿವ್ಯಕ್ತಿಗೊಂಡಿದೆ. ನಾಯಕ ಮತ್ತು ನಾಯಕಿಯ ನಡುವಿನ ಅನ್ಯೋನ್ಯ ಸಂಬಂಧ ಕಥೆಯ ಕೇಂದ್ರ ಬಿಂದು. ಈ ಚಲನಚಿತ್ರ ನೋಡುತ್ತಾ, ನನಗೆ ಈ ಅನ್ಯೋನ್ಯತೆಯ ಆಚೆ ನಾಯಕನ ವರ್ತನೆ ಚಿಂತನೆಗೆ ಹಚ್ಚಿತು. 

ಕ್ಯಾನ್ಸರ್‌ನಿಂದ ಬಳಲುತ್ತಿರುವ ಪತ್ನಿ ಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ನಾಯಕನು ಜನರ ಮುಂದೆ ತನ್ನ ನಿಜವಾದ ಗುರುತನ್ನು ಮರೆಮಾಚಿ, ಬೇರೆ ರೂಪದಲ್ಲಿ ಕಾಣಿಸಿಕೊಂಡು ಸಹಾಯವನ್ನು ಕೇಳುತ್ತಾನೆ. ಅವನ ಉದ್ದೇಶ ಶುದ್ಧವಾಗಿಯೇ ಕಾಣಿಸಿದರೂ, ಅವನು ಆಯ್ದ ಮಾರ್ಗವು ನೈತಿಕವಾಗಿ ಎಷ್ಟರ ಮಟ್ಟಿಗೆ ಸರಿ ಎನ್ನುವ ಗೊಂದಲವನ್ನುಂಟು ಮಾಡುತ್ತದೆ. 

ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿರುವ ಒಬ್ಬ ವ್ಯಕ್ತಿಯ ತುರ್ತು, ಭಯ, ಹತಾಶೆ, ಹಾಗೂ ತನ್ನ ಪ್ರೀತಿಯ ಮಡದಿಯನ್ನು ಕಳೆದುಕೊಳ್ಳುವ ಆತಂಕ ನಾಯಕನನ್ನು ಈ ದಾರಿಯನ್ನು ಆಯ್ದುಕೊಳ್ಳುವಂತೆ ಪ್ರೇರೇಪಿಸಿದೆಯೆನ್ನುವ ಭಾವನೆ ನನ್ನಲ್ಲಿ ಮೂಡಿತು. ಅಂತಹ ಸಂದರ್ಭಗಳಲ್ಲಿ ನಾವು ಸಾಮಾನ್ಯವಾಗಿ “ಸರಿಯಾದ ದಾರಿ” ಎಂದರೆ ಏನು ಎಂಬುದನ್ನೇ ಮರೆತುಬಿಡುತ್ತೇವೇನೋ ಎಂಬ ಪ್ರಶ್ನೆ ನನ್ನನ್ನು ಬಹಳ ಕಾಡಿತು.

ಈ ಚಲನಚಿತ್ರವನ್ನು  ವಿವಿಧ ಪಾತ್ರಧಾರಿಗಳ ಪರಿಪೂರ್ಣ ನಟನೆ, ಭಾವನಾತ್ಮಕ ದೃಶ್ಯಗಳು, ಮಧುರ ಗೀತೆಗಳು ಮತ್ತು ಅಷ್ಟೇ ಪರಿಣಾಮಕಾರಿಯಾದ ಹಿನ್ನೆಲೆ ಸಂಗೀತದ ಮೂಲಕ ಕಟ್ಟಿಕೊಟ್ಟಿರುವುದರಿಂದ ನಾಯಕನು ಆಯ್ದ ಮಾರ್ಗದ ಬಗೆಗಿನ ನೈತಿಕತೆ ಬಗ್ಗೆ ನಾವು ಕುರಡಾಗಿರುತ್ತೇವೆ. ಅದರಲ್ಲೂ ರಾಜ್ ಕುಮಾರ್ ನಾಯಕನಾಗಿದ್ದರೆ ಇಂತಹ ಪ್ರಶ್ನೆಗಳು ಎಲ್ಲಿ ಮೂಡಲು ಸಾಧ್ಯ? 

ಚಲನಚಿತ್ರ ನೋಡಿದ ಮೇಲೆ,  ಉದ್ದೇಶ ಶುದ್ಧವಾಗಿದ್ದರೆ ಸಾಕೇ? ಅಥವಾ ಉದ್ದೇಶ ಶುದ್ಧವಾಗಿದ್ದರಷ್ಟೇ ಸಾಲದು, ಮಾರ್ಗವೂ ಶುದ್ಧವಾಗಿರಬೇಕೆ? ಎನ್ನುವ ಗೊಂದಲದ ಪ್ರಶ್ನೆ ನನ್ನೊಳಗೆ ಮತ್ತೆ ಮತ್ತೆ ಪ್ರತಿಧ್ವನಿಸುತ್ತದೆ.

ಈ  ಅಸ್ಪಷ್ಟತೆಯೇ ನಾಯಕನ ಪಾತ್ರವನ್ನು ಹೆಚ್ಚು ಮಾನವೀಯವಾಗಿಸುತ್ತದೆ ಎಂದು ನನಗನಿಸುತ್ತದೆ. ಅವನು ಸಂಪೂರ್ಣವಾಗಿ ಸರಿಯಾದವನೂ ಅಲ್ಲ, ಸಂಪೂರ್ಣವಾಗಿ ತಪ್ಪಾದವನೂ ಅಲ್ಲ. ಅವನು ಗೊಂದಲಗಳ ಮಧ್ಯೆ ನಿಂತಿರುವ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಕಾಣಿಸುತ್ತಾನೆ. ಪರಿಸ್ಥಿತಿಗಳು ಅವನನ್ನು ನೈತಿಕ ಚೌಕಟ್ಟಿನಿಂದಾಚೆಗೆ ತಳ್ಳಿದಂತಿದೆ. ಇದು ನನಗೆ ಜೀವನದ ಹಲವು ಸಂದರ್ಭಗಳನ್ನು ನೆನಪಿಸುತ್ತದೆ, ಅಲ್ಲಿ ನಾವು “ಸರಿಯೋ ತಪ್ಪೋ” ಎಂಬ ಸರಳ ವರ್ಗೀಕರಣಗಳನ್ನು ಮೀರಿ, ಕೇವಲ ಬದುಕುಳಿಯಲು ಪ್ರಯತ್ನಿಸುತ್ತಿರುತ್ತೇವೆ.

ಈ ದೃಷ್ಟಿಯಿಂದ ನೋಡಿದಾಗ, ನಾಯಕನ ಪಾತ್ರ ನನಗೆ ಕೇವಲ ಒಂದು ಪ್ರೇಮಕಥೆಯ ಹೀರೋ ಆಗಿ ಮಾತ್ರವಲ್ಲ, ಮಾನವೀಯ ದುರ್ಬಲತೆಗಳ ಪ್ರತಿಬಿಂಬವಾಗಿ ಕಾಣಿಸುತ್ತದೆ. ಅದಕ್ಕಾಗಿಯೇ ಅವನು ಪತ್ನಿಯನ್ನು ಉಳಿಸಲು ಅನುಸರಿಸಿದ ಮಾರ್ಗದ ಬಗ್ಗೆ ಕಡ್ಡಿ ತುಡ್ಡಾದಂತೆ ತೀರ್ಮಾನ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಬದಲಾಗಿ ಅವು ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತವೆ ಮತ್ತು ಆ ಪ್ರಶ್ನೆಗಳೇ ಈ ಚಿತ್ರವನ್ನು ನನಗೆ ಹೆಚ್ಚು ಆಪ್ತವಾಗುವಂತೆ ಮಾಡುತ್ತವೆ.

ಈ ಎಲ್ಲಾ ವಿಚಾರಗಳನ್ನು ಓದುವಾಗ ನಿಮಗೆ ಕುತೂಹಲ ಮೂಡಿದರೆ, ನೀವು ಕೂಡ ಹಾಲು ಜೇನು ಚಿತ್ರವನ್ನು ನೋಡಿ. ಈ ಚಿತ್ರ ಯೂಟ್ಯೂಬ್‌ನಲ್ಲೂ ಲಭ್ಯವಿದೆ. ಪ್ರೇಮಕಥೆಯಾಗಿ ಮಾತ್ರವಲ್ಲ, ಅದರೊಳಗಿನ ಸೂಕ್ಷ್ಮ ಮಾನವೀಯ ಗೊಂದಲಗಳನ್ನು ಗಮನಿಸುತ್ತಾ ನೋಡಿದರೆ, ಪ್ರತಿಯೊಬ್ಬರಿಗೂ ವಿಭಿನ್ನ ಪ್ರಶ್ನೆಗಳು ಮತ್ತು ಭಾವನೆಗಳು ಮೂಡುವ ಸಾಧ್ಯತೆ ಇದೆ. ಬಹುಶಃ ನಿಮ್ಮ ದೃಷ್ಟಿಕೋನವೂ ನನ್ನದಕ್ಕಿಂತ ಸಂಪೂರ್ಣ ಭಿನ್ನವಾಗಿರಬಹುದು. 

No comments:

Post a Comment