ನನ್ನ ಪ್ರೀತಿಯ ಹುಡುಗನಿಗೆ

- ರವಿಶಂಕರ್ ಶಾಸ್ತ್ರಿ
ಪುಸ್ತಕ: ನನ್ನ ಪ್ರೀತಿಯ ಹುಡುಗನಿಗೆ
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕಥಾ ಸಂಕಲನವು ೮೦ರ ದಶಕದ ಕಥೆಗಳ ಸಂಗ್ರಹವಾಗಿದೆ. ಅವುಗಳಲ್ಲಿನ ಕಥೆಗಳು ತುಷಾರ, ಮಯೂರ, ಸುಧಾ, ತರಂಗ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಕಥೆಗಳು ಸಿನಿಮಾಗಳಾಗಿವೆ.


ನಾಗತಿಹಳ್ಳಿಯವರ ಕಥೆಗಳು ಅವರ ಸ್ವಂತ ಅನುಭವದ ಮಾತುಗಳೋ ಎಂಬಂತೆ ಅನಿಸುತ್ತವೆ. ತಮ್ಮ ಕಥೆಗಳಲ್ಲಿನ ಪಾತ್ರಗಳಲ್ಲಿ ಅವರು ತಮ್ಮನ್ನು ತಾವೇ ಕಂಡಂತೆ ಹಲವು ಬಾರಿ ಅನಿಸುತ್ತದೆ. ಮತ್ತೆ ಕೆಲವು ಬಾರಿ, ಅವರ ಕಥೆಗಳ ಪಾತ್ರಗಳು ಅವರೇ ಏನೋ ಎಂಬಂತೆ ಕಾಣುತ್ತವೆ.

ಒಟ್ಟಿನಲ್ಲಿ, ಅವರ ಕಥೆಗಳಲ್ಲಿ ಬದುಕಿನ ಹಲವು ಕಠೋರ ಸತ್ಯಗಳು ನಮಗೆ ಕಾಣುತ್ತವೆ. ನಮ್ಮೆಲ್ಲರ ಜೀವನದಲ್ಲಿ ಬರಬಹುದಾದ, ಒಪ್ಪಿಕೊಳ್ಳಲು ಕಠಿಣವಾದ ಸತ್ಯಗಳನ್ನು ಅವರು ತಮ್ಮ ಕಥೆಗಳ ಮೂಲಕ ಜಗತ್ತಿಗೆ ತೆರೆದಿಟ್ಟಿದ್ದಾರೆ. ಜನರು ಸಾಮಾನ್ಯವಾಗಿ ಯೋಚಿಸದ, ಸಾಮಾನ್ಯರಲ್ಲಿ ಸಾಮಾನ್ಯರಾದ ಜನರ ಅಂತರಂಗದ ಮಾತುಗಳಿಗೆ ಅವರು ದನಿಯಾಗಿದ್ದಾರೆ. ಹೇಳದೇ ಉಳಿದ ಹಲವು ಮಾತುಗಳಿಗೆ ಅವರು ವೇದಿಕೆ ಮಾಡಿಕೊಟ್ಟಿದ್ದಾರೆ. ಸಮಾಜದ ಹುಳುಕುಗಳನ್ನು, ಮನುಷ್ಯರ ದ್ವಂದದ ಮನಸುಗಳನ್ನು ಹಲವು ಸನ್ನಿವೇಶಗಳಲ್ಲಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ಅಪ್ರಿಯ ಸತ್ಯಗಳನ್ನು ನೇರವಾಗಿ ಹೇಳಿದ್ದಾರೆ.

೮೦ರ ದಶಕದ ಸಾಮಾನ್ಯ ಜನರ ಜೀವನ, ಆಧುನಿಕತೆಗೆ ತೆರೆದುಕೊಳ್ಳುವ ರೀತಿ ಮತ್ತು ಅದರಲ್ಲಿನ ಒಂದು ರೀತಿಯ ಭಯವನ್ನು ನಾಗತಿಹಳ್ಳಿಯವರು ಚೆನ್ನಾಗಿ ಚಿತ್ರಿಸಿದ್ದಾರೆ. ಆಧುನಿಕ ಕಾಲದ ವೈಭೋಗಗಳನ್ನೇ ಕಥೆಗಳಲ್ಲಿ ಓದಲು ಸಿಗುವ ಈ ಕಾಲದಲ್ಲಿ, ಈ ಕಥಾ ಸಂಕಲನವು ವಿಭಿನ್ನ ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಮಾಮೂಲಿನ ಕಥೆಗಳನ್ನು ಓದಿ ಏಕತಾನತೆ ಎಂದೆನಿಸಿದರೆ ಈ ಪುಸ್ತಕವು ಓದಬಹುದಾದ ಒಂದು ಕಥಾ ಸಂಕಲನವೇ ಸರಿ.

No comments:

Post a Comment