ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್

- ಚಿದಂಬರ

ಮಾಸ್ತರ್ ಕೈಯ್ಯಾಗ್ ಚಾಕ್‍ಪೀಸ್ ಆಡ್ತಿರ್‍ಬೇಕ್
ಪೋಲೀಸ್ ಕೈಯ್ಯಾಗ್ ಲಾಠಿ ಆಡ್ತಿರ್‍ಬೇಕ್
ಜವಾನನ್ ಕೈಯ್ಯಾಗ್ ಫೈಲ್ ಆಡ್ತಿರ್‍ಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.


ಜೋಗಮ್ಮನ ಕೈಯ್ಯಾಗ್ ಚೌಡ್ಕಿ ಆಡ್ತಿರ್‍ಬೇಕ್
ಪೂಜಾರಿ ಕೈಯ್ಯಾಗಿನ ತಟ್ಟೆ ತಿರಗ್ತಿರಬೇಕು
ಡಾಕ್ಟ್ರಪ್ಪನ ಸ್ಟೆತಾಸ್ಕೋಪ್ ಡಬ್-ಡಬ್ ಅಂತಿರಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಅಗಸನ್ ಕೈಯ್ಯಾಗ್ ಅರಬಿ ಆಡ್ತಿರಬೇಕ್
ಹುಡುಗನ ಕೈಯ್ಯಾಗ್ ಬುಗುರಿ ಆಡ್ತಿರಬೇಕ್
ಗಿಡಗನ ಕಾಲಾಗ್ ಬ್ಯಾಟಿ ಬಾಯ್ಬಿಡ್ತಿರಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಬೇಡ್ಕೊಳ್ಳೋರ್ ಕೈಯ್ಯಾಗ್ ಬಡಿಗಿ ಆಡ್ತಿರಬೇಕ್
ಅಡ್ಕೊಳ್ಳೋರ್ ಬಾಯಾಗ್ ಶಬ್ದಾ ಆಡ್ತಿರಬೇಕ್
ಸನ್ಯಾಸಿಗೊಂದು ಭವ್ಯ ಭೂತ ಇರಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಶೆಟ್ಟಿ ಕೈಯ್ಯಾಗ್ ರೊಕ್ಕಾ ಆಡ್ತಿರಬೇಕ್
ಭಟ್ಟನ ಕೈಯ್ಯಾಗ್ ಸೌಟು ಆಡ್ತಿರಬೇಕ್
ಕಟಕನ್ ಕೈಯ್ಯಾಗ್ ಮಚ್ಚ್ ಹೊಳೀತಿರಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್

No comments:

Post a Comment