ಚಿತ್ರವಿಹಾರ: 12 Angry Men (TAM)

- ಮೋಹನ್ ಮೂರ್ತಿ ಮಾ ಕೆಂ

TAM ೧೯೫೭ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ (ಕಪ್ಪು ಬಿಳುಪು). ಚಿತ್ರದ ಬಗ್ಗೆ ಮಾತನಾಡುವ ಮೊದಲು ಕೆಲವು ದೇಶಗಳ ನ್ಯಾಯಾಲಯದಲ್ಲಿ ಇರುವ ಜ್ಯೂರಿ ಪದ್ಧತಿಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಭಾರತ ದೇಶದಲ್ಲಿ ನ್ಯಾಯಮೂರ್ತಿಗಳು (judge), ನ್ಯಾಯವಾದಿಗಳ ವಾದವನ್ನು ಆಲಿಸಿ ಆ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನುಗಳನ್ನು ಪರಿಗಣಿಸಿ ತೀರ್ಪು ನೀಡುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಜ್ಯೂರಿ ಪದ್ಧತಿ ಇದೆ.
ಸಮಾಜದ ಜನಸಾಮಾನ್ಯರೂ ನ್ಯಾಯ ಪ್ರಧಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವ್ಯವಸ್ಥೆ ಇದು. ಯಾವುದೇ ಪ್ರಕರಣವು ನ್ಯಾಯಾಲಯದ ಮುಂದೆ ಬಂದಾಗ ಹತ್ತು ಹನ್ನೆರಡು (ಆ ದೇಶದಲ್ಲಿ ಜಾರಿಯಲ್ಲಿರುವ ನಿಯಮದ ಪ್ರಕಾರ) ಸಾಮಾನ್ಯ ನಾಗರೀಕರನ್ನು ಒಳಗೊಂಡ ಜ್ಯೂರಿ (ತೀರ್ಪುಗಾರರು) ತಂಡವನ್ನು ರಚಿಸಲಾಗುತ್ತದೆ. ನಾಗರೀಕರನ್ನು ಆಯ್ಕೆ ಮಾಡಲೂ ಸಹ ಹಲವು ಕಠಿಣ ನಿಯಮಗಳಿರುತ್ತವೆ. ಪ್ರಕರಣದ ಬಗ್ಗೆ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಜ್ಯೂರಿ ತಂಡದ ಮುಂದೆ ವಾದ ಮಂಡಿಸಬೇಕು. ಅಲ್ಲಿ ನ್ಯಾಯಮೂರ್ತಿಗಳೂ ಸಹ ಹಾಜರಿರುತ್ತಾರೆ. ಜ್ಯೂರಿ ತಂಡಕ್ಕೆ ಕಾನೂನಿನ ಬಗ್ಗೆ ಬರುವ ಅನುಮಾನಗಳನ್ನು ಪರಿಹರಿಸುವುದು, ನ್ಯಾಯವಾದಿಗಳ ಯಾವ ವಾದವನ್ನು ಪರಿಗಣಿಸಬೇಕು ಯಾವ ವಾದವನ್ನು ಪರಿಗಣಿಸಬಾರದು ಎನ್ನುವುದನ್ನು ತೀರ್ಮಾನಿಸುವುದು, ಇತ್ಯಾದಿಗಳು ನ್ಯಾಯಮೂರ್ತಿಗಳ ಕೆಲಸ. ಎರಡೂ ಕಡೆಯ ವಾದ ಮುಗಿದ ಮೇಲೆ ಜ್ಯೂರಿ ತಂಡವು ಕೊಠಡಿಯೊಂದರಲ್ಲಿ ಸೇರಿ ಅಂತಿಮ ತೀರ್ಮಾನಕ್ಕೆ ಬರುತ್ತದೆ. ಇದನ್ನೇ ನ್ಯಾಯಮೂರ್ತಿಗಳು ನ್ಯಾಯಾಲಯದಲ್ಲಿ ಎಲ್ಲರೆದುರು ಓದಿ ಹೇಳುತ್ತಾರೆ. ಇದು ನ್ಯಾಯಾಲಯದಲ್ಲಿ ಜ್ಯೂರಿ ವ್ಯವಸ್ಥೆಯ ಸ್ಥೂಲ ರೂಪ.
ಭಾರತದಲ್ಲೂ ಜ್ಯೂರಿ ವ್ಯವಸ್ಥೆ ೧೯೫೯ ರವರೆಗೆ ಜಾರಿಯಲ್ಲಿತ್ತು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಬಹುಮುಖ್ಯ ಪ್ರಕರಣಗಳಲ್ಲೊಂದಾದ ಕೆ.ಎಂ. ನಾನಾವತಿ vs ಮಹಾರಾಷ್ಟ್ರ ಸರ್ಕಾರ ಪ್ರಕರಣವೇ ಕೊನೆ. ನಂತರ ಜ್ಯೂರಿ ತಂಡದಲ್ಲಿರುವ ಸಾಮಾನ್ಯ ನಾಗರೀಕರು ಕಾನೂನಿನ ಅಂಶಗಳನ್ನು ಪರಿಗಣಿಸದೆ ಪೂರ್ವಾಗ್ರಹಪೀಡಿತರಾಗಿ ತೀರ್ಪು ನೀಡುತ್ತಾರೆ ಎಂಬ ಕಾರಣ ನೀಡಿ ಭಾರತ ಸರ್ಕಾರ ಜ್ಯೂರಿ ವ್ಯವಸ್ಥೆಯನ್ನು ರದ್ದು ಮಾಡಿತು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಾದ ವಿವಾದಗಳನ್ನು ಗಮನಿಸಿದಾಗ (ಅದು ಡಿ ಕೆ ರವಿ ಪ್ರಕರಣ ಇರಬಹುದು ಅಥವಾ ಇತ್ತೀಚಿಗಿನ ಜೆ ಎನ್ ಯು ಪ್ರಕರಣ ಇರಬಹುದು) ಜ್ಯೂರಿ ವ್ಯವಸ್ಥೆಯನ್ನು ರದ್ದು ಪಡಿಸಿದ್ದು ಬಹಳ ಒಳ್ಳೆಯ ತೀರ್ಮಾನ ಎನ್ನಿಸುತ್ತದೆ.


ಇರಲಿ ಈಗ TAM ಚಲನಚಿತ್ರದ ಕಥೆಗೆ ಬರೋಣ. ಕಥೆ ನೇರ ಮತ್ತು ಬಹಳ ಸರಳ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಕೀಲರ ವಾದಗಳೆಲ್ಲಾ ಮುಗಿದಿರುತ್ತದೆ. ೧೨ ಮಂದಿಯ ಜ್ಯೂರಿ ತಂಡವು ತನ್ನ ಅಂತಿಮ ತೀರ್ಪನ್ನು ಸಿದ್ಧಪಡಿಸುವುದಕ್ಕಾಗಿ ಕೊಠಡಿಯೊಂದರಲ್ಲಿ ಸಭೆ ಸೇರಿರುತ್ತದೆ. ೧೧ ಮಂದಿಗೆ ಆರೋಪಿಯೇ ಕೊಲೆ ಮಾಡಿರುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ. ಆದರೆ ಒಬ್ಬನೇ ಒಬ್ಬ ಜ್ಯೂರಿ ತಂಡದ ಸದಸ್ಯನಿಗೆ ಆರೋಪಿ ಕೊಲೆ ಮಾಡಿಲ್ಲ ಎಂದೆನಿಸುತ್ತದೆ. ಈ ಅನುಮಾನ ಪೀಡಿತ ಸದಸ್ಯ ಉಳಿದವರಿಗೆಲ್ಲಾ ತನ್ನ ತರ್ಕದಿಂದ ಆರೋಪಿ ಕೊಲೆ ಮಾಡಿಲ್ಲ ಆತ ನಿರಪರಾಧಿ ಎಂದು ಮನವರಿಕೆ ಮಾಡಿಕೊಡುತ್ತಾನೆ. ಇಷ್ಟೇ ಕಥೆ. ಇಷ್ಟು ಸರಳ ಕಥೆಯನ್ನು ಸಶಕ್ತವಾದ ಚಿತ್ರಕಥೆ ಮತ್ತು ಸಂಭಾಷಣೆಗಳೊಂದಿಗೆ ರೋಚಕ ಚಿತ್ರವಾಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ೯೬ ನಿಮಿಷದ ಸಂಪೂರ್ಣ ಚಿತ್ರದ ಕಥೆ ಒಂದು ಕೊಠಡಿಯಲ್ಲಿ ನಡೆದರೂ ತನ್ನ ತರ್ಕಬದ್ಧ ಚಿತ್ರಕಥೆ ಮತ್ತು ಸಂಭಾಷಣೆಯ ಕಾರಣದಿಂದ ಎಲ್ಲೂ ಬೇಸರ ಮೂಡಿಸದೇ ನೋಡಿಸಿಕೊಂಡು ಹೋಗುತ್ತದೆ. 

ಕನ್ನಡದಲ್ಲೂ ಘಟಾನುಘಟಿ ನಟರುಗಳನ್ನಿಟ್ಟುಕೊಂಡು (ಅನಂತನಾಗ್, ದೇವರಾಜ್, ಅವಿನಾಶ್, ಸರಿತಾ, ರವಿಚಂದ್ರನ್ ಇತ್ಯಾದಿ) ಇದರ ರೀಮೇಕ್ ಮಾಡಲಾಯಿತಾದರೂ (ದಶಮುಖ ), ಮೂಲ ಚಿತ್ರದಷ್ಟು ಪರಿಣಾಮಕಾರಿಯಾಗಿ ರೀಮೇಕ್ ಅವತರಣಿಕೆ ಮೂಡಿ ಬಂದಿಲ್ಲ. ಮೂಲ ಚಿತ್ರ ಕಪ್ಪುಬಿಳುಪು ಚಿತ್ರವಾದರೂ ತನ್ನ ಅತ್ಯುತ್ತಮ ಚಿತ್ರಕಥೆ ಮತ್ತು ಸಂಭಾಷಣೆಯ ಕಾರಣಕ್ಕೆ ಇಂದಿಗೂ ಪ್ರಸ್ತುತ.

No comments:

Post a Comment