ಹಾಗೇ ಸುಮ್ಮನೇ....!!

- ನಾಮದೇವ್ ರೇಣಕೆ

ನಮಸ್ಕಾರ ಓದುಗರೇ...! ಓದುಗರು ಎಂದಾಕ್ಷಣ ಥಟ್ ಅಂತ ನೆನಪಾಗೋದು ಬರಹಗಾರರೂ, ಕವಿಗಳೂ ಕೂಡ. ಓದುಗಾರರಿಗೆ ಮುದ ನೀಡುವ, ತಮ್ಮ ಅನಿಸಿಕೆಗಳಿಗೆ ಅಕ್ಷರಗಳಿಂದ ಜೀವ ತುಂಬುವ ಆ ಬರಹಗಾರರಿಗೆ ನನ್ನದೊಂದು ಸಲಾಮ್..!! ಹೌದು ನನ್ನ ಈ ಬರಹ, ನನ್ನೀ ಪ್ರಯತ್ನ, ನನ್ನೀ ಅನಿಸಿಕೆ ಬರಹಗಾರರ ಕುರಿತು, ಬರಹಗಾರರಾಗಬಯಸುವವರಿಗಾಗಿ..

ಪ್ರಿಯ ಓದುಗರೇ, ನಿಮಗೂ ಕೂಡ ಎಂದಾದರೊಮ್ಮೆ ಅನಿಸಿರಬಹುದಲ್ಲವೇ ಈ ಲೇಖಕರು ಅದ್ಹೇಗೆ ಬರೆಯುತ್ತಾರೆಂದು? ನಿಜ, ನನಗೂ ಸಹ ಅನಿಸಿತ್ತು ಅದೊಂದು ದಿನ...!

'Pen is Mightier than sword', 'ಖಡ್ಗಕ್ಕಿಂತ ಲೇಖನಿ ಹರಿತ' ಎನ್ನುವ ಮಾತು ಜನಜನಿತ. ಬಾಲ ಗಂಗಾಧರ ತಿಲಕರು ಪತ್ರಿಕೆಗಳನ್ನು ಪ್ರಕಟಿಸಿ, ಅದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿ ಸ್ವಾತಂತ್ರ್ಯದ ಮಹಾಕಹಳೆಯನ್ನೂದಿದ ಧೀಮಂತ ವ್ಯಕ್ತಿ. ಹಾಗೇನೇ ಇತ್ತೀಚಿಗಷ್ಟೇ ನಿಧನರಾದ, ಸರಳ,ಸಜ್ಜನ, ಕ್ಷಿಪಣಿ ಮಾಂತ್ರಿಕ ಡಾ.ಅಬ್ದುಲ್ ಕಲಾಮ್ ಅವರು ಬರೆದ Wings Of the Fire ಎಂಬ ಪುಸ್ತಕ ಇಂದಿನ ಎಷ್ಟೋ ಯುವಪೀಳಿಗೆಗೆ ದಾರಿದೀಪ. ಹೀಗೆ ಬರಹಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಪ್ರಾಮುಖ್ಯತೆ ಇದೆ.

ಬರವಣಿಗೆಗೆ ಮುಖ್ಯವಾಗಿ ಬೇಕಾಗಿರುವ ಅಂಶವೆಂದರೆ ಕ್ರಿಯಾಶೀಲತೆ, ಭಾಷಾಜ್ಞಾನ ಮತ್ತು ನಿರೂಪಣಾ ಶಕ್ತಿ.ಯಾವುದೇ ವಿಷಯದ ಬಗ್ಗೆ ಬರೆಯಬೇಕೆಂದಾಗ ಆ ವಿಷಯದ ಬಗ್ಗೆ ಅಪಾರ ಜ್ಞಾನ ಬೇಕು. ಅದರ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡಿರಬೇಕು.ಇದಕ್ಕಾಗಿ ಓದಿನ ಹವ್ಯಾಸ, ಸಾಹಿತ್ಯಾಸಕ್ತಿ ಹೊಂದಿರಬೇಕು. ಒಬ್ಬ ಒಳ್ಳೆಯ ಓದುಗಾರ ಬರಹಗಾರನಲ್ಲದಿದ್ದರೂ, ಒಬ್ಬ ಬರಹಗಾರ ಖಂಡಿತ ಒಳ್ಳೆಯ ಓದುಗಾರನಾಗಿರಬೇಕು.
ಬರವಣಿಗೆ ಎಂಬುದು ಬರಹಗಾರನ ಮನಸ್ಸಿನ ಭಾವನೆಗಳನ್ನು ಅನಿಸಿಕೆಗಳನ್ನು ಅಭಿವ್ಯಕ್ತಿಸಲು ಒಂದು ಮಾಧ್ಯಮ. ಬರವಣಿಗೆ ಎಂಬುದು ಭಾಷೆ, ವ್ಯಕ್ತಿ, ಧರ್ಮ ಇವೆಲ್ಲವನ್ನೂ ಮೀರಿದ ಕಲೆ. ಯುವ ಜನಾಂಗ ಮೊಟ್ಟ ಮೊದಲು ತಮ್ಮ ಮಾತೃಭಾಷೆ ಅಥವಾ ಆಡುಭಾಷೆಯಲ್ಲಿ ಬರೆಯಲು ಪ್ರಯತ್ನಿಸಬೇಕು.ಇದರಿಂದ ಅವರ ವಿಚಾರಶಕ್ತಿಯಲ್ಲಿ ಬೆಳವಣಿಗೆ ಕಾಣಬಹುದು. ಭಾಷೆಗೆ ಶಬ್ದಗಳ ಮಿತಿ ಇರುವುದಿಲ್ಲ. ಬರಹಗಾರ ಬರೆದಂತೆಲ್ಲ ಭಾಷೆ ವಿಸ್ತಾರ, ಅನಂತ, ನಿರಂತರ...

ಹೀಗೆಯೇ ನೀವೂ ಸಹ ಏನಾದರೊಂದು ಬರೆಯುವ ಪ್ರಯತ್ನ ಮಾಡಬಾರದೇಕೆ....... ಹಾಗೇ ಸುಮ್ಮನೇ.......

1 comment:

  1. ನಿಜ, ಲೇಖನಿ ಖಡ್ಗಕ್ಕಿಂತ ಹರಿತವಾದದ್ದು. ಹಾಗಾಗಿ ಅದನ್ನು ಬಳಸುವಾಗ ನಾವು ಜಾಗರೂಕರಾಗಿರಬೇಕು. ಉತ್ತಮ ಲೇಖನ.

    ReplyDelete