ಸ್ವಗತ

-ರವಿಶಂಕರ್ ಶಾಸ್ತ್ರಿ
ನಾನು ಪುಟ್ಟ ಮಗುವು ಈಗ
ಜಗವು ಸುಂದರ.
ಅಲ್ಲಿ ನೋಡು ನಗುತಲಿರುವ 
ಮುದ್ದು ಚಂದಿರ.


ಶಾಲೆ ಕೆಲಸ ಏನು ಇಲ್ಲ
ಈಗ ನನಗೆ ಬಿಡುವು.
ಅಪ್ಪ ಅಮ್ಮ ಜೊತೆಗೆ ಇರಲು 
ಮುಖದ ತುಂಬ ನಗುವು.

ಜಗದ ಕಪಟ ಏನು ಅರಿಯೆ 
ಶುದ್ಧ ನನ್ನ ಮನವು.
ನಿಮ್ಮ ಹಾಗೆ ಸುಳ್ಳು ನುಡಿಯೆ 
ದೇವರಾಣೆ ಸತ್ಯವು.

ಬೇರೆಯವರ ಏಳ್ಗೆ ಕಂಡು
ನನಗೆ ಚಿಂತೆಯಿಲ್ಲ.
ನಿಮ್ಮ ಹಾಗೆ ಹೊಟ್ಟೆಕಿಚ್ಚು
ನನ್ನ ಬಳಿಯಲಿಲ್ಲ.

ಬೆಳಗಿನಿಂದ ಸಂಜೆ ತನಕ 
ಬೇರೆ ಬೇರೆ ಆಟವು.
ದಣಿವು ನನಗೆ ತಿಳಿವುದಿಲ್ಲ 
ಬೇಡ ನನಗೆ ಊಟವೂ.

ಪೇಟೆಯಲ್ಲಿ ಕಂಡ ಎಲ್ಲ
ಆಟಿಕೆಗಳು ಬೇಕು
ನಾನು ಕೇಳಿದಾಗಲೆಲ್ಲ
ತಂದು ಕೊಡಿರಿ ಸಾಕು.

ಐಸ್ ಕ್ರೀಮ್ ಚಾಕಲೇಟು 
ಎಲ್ಲ ಬೇಕು ನನಗೆ. 
ನಾನು ಅಳುತ ಕುಳಿತರೇನು 
ಖುಷಿಯು ಇದೆಯೇ ನಿಮಗೆ?

ನನ್ನ ಜೊತೆಗೆ ಆಡಲಿಕ್ಕೆ 
ನಿಮಗೆ ಸಮಯವಿಲ್ಲ.
ನಾನು ಬೆಳೆದ ಮೇಲೆ ನಿಮ್ಮ
ಮಾತು ಕೇಳೆನಲ್ಲ.

ಹೆಚ್ಚು ಚಿಂತೆ ಮಾಡಬೇಡಿ
ನನ್ನ ಹಾಗೆ ಇರಿ.
ಮಗುವಿನಂತ ಮನಸು ಹೊಂದಿ
ನೂರು ಕಾಲ ಬಾಳಿರಿ.

2 comments:

  1. ಹೆಚ್ಚು ಚಿಂತೆ ಮಾಡಬೇಡಿ
    ನನ್ನ ಹಾಗೆ ಇರಿ.
    ಮಗುವಿನಂತ ಮನಸು ಹೊಂದಿ
    ನೂರು ಕಾಲ ಬಾಳಿರಿ.--- ನನಗೆ ತುಂಬಾ ಇಷ್ಟವಾದ ಸಾಲುಗಳು

    ReplyDelete
  2. ಧನ್ಯವಾದ ಶ್ರೀಧರ್

    ReplyDelete