-ಅಕ್ಷಯರಾಮ ಕಾವಿನಮೂಲೆ
ಲೇ: ಜಿ.ಎನ್. ಅಶೋಕವರ್ಧನ
ಬೆಲೆ: 75 ರೂಪಾಯಿಗಳು
ಅಂಡಮಾನ್ ದ್ವೀಪಗಳು ನಿಜಕ್ಕೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯದ ಖನಿಗಳು. ವರ್ಷಕ್ಕೆ ಅದೆಷ್ಟೋ ಲಕ್ಷ ಮಂದಿ ಪ್ರವಾಸಿಗರು ಅಂಡಮಾನಿನ ಪರಿಸರದ ಸವಿಯುಂಡು ಬರುತ್ತಾರೆ ಆದರೆ ಆ ರಮ್ಯಾದ್ಭುತ ಅನುಭವವನ್ನು ಅಕ್ಷರಕ್ಕಿಳಿಸುವ ಸತ್ಕಾರ್ಯ ಮಾಡಿದವರು ಬಹಳ ವಿರಳ ! ತೇಜಸ್ವಿಯವರ 'ಅಲೆಮಾರಿಯ ಅಂಡಮಾನ್' ಓದಿ, ಈ ದ್ವೀಪರಾಶಿಯ ಬಗ್ಗೆ ಆಸಕ್ತರಾಗದವರಿಲ್ಲ.
ಅಶೋಕವರ್ಧನ ಅವರು ಬಹಳ ಹಿಂದಿನಿಂದಲೂ ಚಾರಣ, ಸಾಹಸಗಳಿಗೆ ಪ್ರಖ್ಯಾತರಾದವರು. ತಮ್ಮ ಕುಟುಂಬ, ಮಿತ್ರರ ಜೊತೆಗೆ ಅಂಡಮಾನಿಗೆ ಹೊರಟೇ ಬಿಟ್ಟರು ! ಸ್ನಾರ್ಕೆಲ್, ಡೈವಿಂಗ್ ಇತ್ಯಾದಿಗಳನ್ನು ಮಾಡಿ ಆನಂದಿಸಿ, ಅಂಡಮಾನಿನ ಇನ್ನಿತರ ಪ್ರಮುಖ ಸ್ಥಳಗಳನ್ನೂ ನೋಡಿ ಬಂದು ತಮ್ಮ ಅನುಭವವನ್ನು ಬ್ಲಾಗಿನಲ್ಲಿ ಅಕ್ಷರವಾಗಿಸಿದರು. ತಮ್ಮ ಪ್ರವಾಸದ ರಸಾನುಭವದ ಬುತ್ತಿಯನ್ನು ಮೊದಲು ಬ್ಲಾಗ್ ಮೂಲಕ ಆಸಕ್ತರಿಗೆ ಉಣಬಡಿಸಿದ ಅಶೋಕವರ್ಧನ ನಂತರ ಅದನ್ನೇ ಪುಸ್ತಕದ ರೂಪಕ್ಕಿಳಿಸಿದರು. ಇಡೀ ಕಥನದ ನಿರೂಪಣಾ ಶೈಲಿಯಂತೂ ವಿನೂತನವಾದದ್ದು.
ಪುಸ್ತಕದ ಎರಡನೇ ಭಾಗ ಲಕ್ಷದ್ವೀಪದ ಪ್ರವಾಸ ಕತೆ. ಲಕ್ಷದ್ವೀಪ ಭಾರತದ್ದೇ ಭಾಗವಾದರೂ ಅಲ್ಲಿಗೆ ಹೋಗಿ ಬರುವುದೆಂದರೆ ಒಂದು ಯುದ್ಧ ಗೆದ್ದಷ್ಟೇ ಕಷ್ಟ ! ಪ್ರಾಯೋಜಿತ ಪ್ರವಾಸದ ಮೂಲಕ ಅಲ್ಲಿಗೆ ಹೋದ ಅಶೋಕವರ್ಧನರ ಗಾಥೆಯೂ ಅಷ್ಟೇ ರಮ್ಯ ಹಾಗೂ ಲಕ್ಷದ್ವೀಪದೆಡೆ ಲಕ್ಷ್ಯವಿರಿಸಿದ ಆಸಕ್ತರಿಗೆ ನಿಜಕ್ಕೂ ಉಪಯುಕ್ತ. ಎಲ್ಲಿಯೂ "ಹೆಚ್ಚಾಯಿತು" ಎನಿಸದ ಸಾಹಿತ್ಯ ಸೃಷ್ಟಿ ಅಶೋಕವರ್ಧನರದ್ದು. ಅವರ ಇನ್ನಷ್ಟು ಬರಹಗಳನ್ನು ಅವರ ಬ್ಲಾಗಿನಲ್ಲಿ (www.athreebook.com) ಸವಿಯಬಹುದು.
ಉತ್ತಮ ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ReplyDelete