ಕಾರ್ಮಿಕ ನೀತಿ

-ಧನುಷ್ ಗೌಡ (ಆದರ್ಶ ಮಹದೇವ)

ನನ್ನ ವಿದೇಶ ಪ್ರವಾಸದ ನಂತರ ವಿದೇಶಿಗನ ಒಂದು ಪ್ರಶ್ನೆ ನನ್ನ ಮನಸ್ಸನ್ನು ತುಂಬ ಕಾಡತೊಡಗಿತು. ಆ ಪ್ರಶ್ನೆ ಈ ರೀತಿಯಿತ್ತು, ‘ನಿಮ್ಮ ದೇಶದಲ್ಲಿ ನಿಮಗಾಗಿ ಕಾರ್ಮಿಕ ನೀತಿಯಿಲ್ಲವೆ’ ತಕ್ಷಣ ನನ್ನಲ್ಲಿ ಉತ್ತರವಿರಲಿಲ್ಲ. ಹೌದು ನನಗೆಗೊತ್ತು ನಿಮ್ಮಲ್ಲಿ ಉತ್ತರವಿಲ್ಲವೆಂದು. ಅದರ ಬಗ್ಗೆ ಮುಂದುವರಿಯುವುದರ ಮೊದಲು ಸ್ವಲ್ಪ ಇದರ ಹಿನ್ನೆಲೆಯನ್ನರಿಯೋಣ.

ವಿದೇಶದ ಒಂದು ಕಂಪನಿಯು ನಮಗೆ ತುಂಬ ವರುಷದಿಂದ ಸೇವೆ ಕೊಡುತ್ತಿತ್ತು, ಬಹುಶಃ ಕಂಪನಿಯು ಶುರುವಾದಾಗಿನಿಂದ ನಮ್ಮೊಂದಿಗಿದ್ದು ಪ್ರತಿ ಹಂತದಲ್ಲೂ ನಮ್ಮ ಏಳಿಗೆಗಾಗಿ ದುಡಿದಿದ್ದರು. ಇಂದು ಕಂಪನಿಯು ಆದಾಯದ ಮಾರ್ಗಸೂಚಿಯ ಮೇಲೆ ಅವರ ಸೇವೆಯನ್ನು ನಿಲ್ಲಿಸುವ ನಿರ್ಧಾರಮಾಡಿತು. ಆದರೆ ಅವರಲ್ಲಿ ಯಾವ ಬಗ್ಗೆಯ ಆತಂಕ ಮನೆಮಾಡಿರಲಿಲ್ಲ. ಕೇವಲ ತಾವು ಶ್ರದ್ದೆಯಿಂದ ಮಾಡಿದ ಕೆಲಸದಿಂದ ದೂರವಾಗುತ್ತೇವೆಂಬ ಬೇಸರವಿತ್ತು. ಹೀಗೊಂದು ದಿನ ಮಾತಿಗಿಳಿದಾಗ, ನನಗೆ ಆ ದೇಶದ ಕಾರ್ಮಿಕ ನೀತಿಯ ಅರಿವಾಯಿತು. ಅಲ್ಲಿ ಸರ್ಕಾರಿ ಉದ್ಯೋಗದಲ್ಲಿರಲಿ ಅಥವ ಖಾಸಗಿ ಉದ್ಯೋಗದಲ್ಲಿರಲಿ ಎಲ್ಲರಿಗೂ ಒಂದೇ ಕಾರ್ಮಿಕ ನೀತಿ ಅನ್ವಯವಾಗುತ್ತದೆ. ನಮ್ಮ ಸಂವಾದ ಈ ಕೆಳಗಿನಂತಿತ್ತು:
ಅ: ನಮ್ಮ ಬದಲು ಬೇರೆಯವರನ್ನು ಸೇರಿಸಿಕೊಂಡಿದ್ದಾರೆಯೆ.
ನಾ: ಇಲ್ಲ, ಇರುವವರೆ ಹೇಗೊ ಮಾಡಬಹುದು ಅಂದುಕೊಂಡಿದ್ದಾರೆ.
ಅ: ಅದು ಹೇಗೆ ಸಾಧ್ಯ? ನಿಮಗೂ ಕೆಲಸವಿದೆಯಲ್ಲ. ಹೇಗೆ ಮಾಡಬಹುದು ನೀವು.
ನಾ: ಬಹುಶ: ಹೆಚ್ಚು ಸಮಯ ನಮ್ಮಿಂದ ಕೆಲಸ ತೆಗೆದುಕೊಳ್ಳುತ್ತಾರೆ.
ಅ: ಓಹ್, ಹಾಗಾದ್ರೆ ನಿಮ್ಗೆ ಹೆಚ್ಚು ಹಣ ಸಿಗ್ಬಹುದು ಭತ್ಯೆಯ ರೀತಿಯಲ್ಲಿ.
ನಾ: ಹಾಗೇನಿಲ್ಲ, ಒಂದೊಂದು ಕಂಪನಿಯಲ್ಲಿ ಕೊಡ್ತಾರೆ. ಬೇರೆ ಕಡೆಯೇನು ಕೊಡೊಲ್ಲ.
ಅ: ಅಂದ್ರೆ, ಉಚಿತವಾಗಿ ಕೆಲಸ ಮಾಡ್ತೀರ ನೀವು.
ನಾ: ಬೇರೆ ವಿಧಿಯಿಲ್ಲ, ಹೆಚ್ಚು ಜನರಿರುವಾಗ ಮಾಡಲೇಬೇಕು. ಇಲ್ಲದ್ದಿದ್ರೆ ಅವ್ರು ಕೆಲಸದಿಂದ ತೆಗಿಯಬಹುದು.
ಅ: ಆದ್ರೆ ನಿಮ್ಮ ಸರ್ಕಾರ ಇದನ್ನೇನು ತಡೆಯುವುದಿಲ್ವ. ಕಾರ್ಮಿಕ ನೀತಿಯಲ್ಲಿ ಇದಕ್ಕೆ ಅವಕಾಶವಿರುವುದಿಲ್ಲವಲ್ಲ. ನಿಮ್ಮಲ್ಲಿ ಕಾರ್ಮಿಕ ನೀತಿಯಿಲ್ಲವೆ?
ನಾ: ನಮ್ಮಲ್ಲೂ ಇದೆ, ಆದರೆ ಅದೂ ಕೇವಲ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮಾತ್ರ. ನಮ್ಮಲ್ಲಿ ಖಾಸಗಿ ಉದ್ಯೋಗಿಗಳಿಗೆ ಅದರಿಂದ ಅಷ್ಟೇನು ಪ್ರಯೋಜನವಿಲ್ಲ
ಅ: ಅದು ಹೇಗೆ ಸಾಧ್ಯ, ನೀವು ಆ ದೇಶದವರೆ ಅಲ್ಲವೆ? ನಿಮಗೇಗೆ ಬೇರೆ ಕಾರ್ಮಿಕ ನೀತಿಯಿರುತ್ತದೆ? ಹಾಗಾದರೆ ನಿಮ್ಮನ್ನು ಕೆಲಸದಿಂದ ತೆಗೆದರೆ ಅವರೂ ಏನನ್ನು ಕೊಡುವುದಿಲ್ಲವೆ ಹಾಗು ಸರ್ಕಾರ ನಿಮ್ಮ ಸಹಾಯಕ್ಕೆ ಬರುವುದಿಲ್ಲವೆ.
ನಾ: ಹಾಗೇನಿಲ್ಲ, ನಮ್ಮಲ್ಲಿ ನೋಟೀಸ್ ಪೀರೀಯಡ್ ಸರ್ವ್ ಮಾಡಬೇಕು. ಅದರ ಆಧಾರದ ಮೇಲೆ ನಮಗೆ ಎರಡು ತಿಂಗಳು ಅಥವ ಮೂರು ತಿಂಗಳ ಸಂಬಳ ಸಿಗುತ್ತದೆ. ಇಲ್ಲಿ ಸರ್ಕಾರದ ಮಧ್ಯ ಪ್ರವೇಶವಿಲ್ಲ. ನಿಮ್ಮಲ್ಲಿ ಹೇಗೆ.
ಅ: ನಮ್ಮಲ್ಲೂ ನಿಮ್ಮ ಹಾಗೆಯೆ! ಆದರೆ ಅದೂ ಸರಾಸರಿ ಒಂಬತ್ತರಿಂದ ಹತ್ತು ತಿಂಗಳ ಸಂಬಳ ಸಿಗುತ್ತದೆ. ಹಾಗೆಯೆ ನಾವು ಹೆಚ್ಚು ಸಮಯ ಕೆಲಸ ಮಾಡಿದರೆ, ಖಂಡಿತವಾಗಿ ನಿರ್ಧಿಷ್ಟವಾದ ಭತ್ಯೆಯನ್ನು ಕೊಡಬೇಕು ಮತ್ತು ಅವರು ನಮ್ಮನ್ನು ಹೆಚ್ಚು ಸಮಯ ಕೆಲಸ ಮಾಡಲು ಒತ್ತಡ ಹೇರಲು ಅವಕಾಶವಿಲ್ಲ. ಹಾಗೇನಾದರೂ ಆದರೆ ಸರ್ಕಾರ ನಮ್ಮ ಸಹಾಯಕ್ಕೆ ಬರುತ್ತದೆ.
ಮತ್ತೆ ಆ ವಿಷಯದ ಬಗ್ಗೆ ಮಾತು ಮುಂದುವರಿಸದೆ ಅಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾತು ಬದಲಾಯಿಸಿದೆ.
ಮೇಲಿನ ವಿಚಾರ ವಿನಿಮಯ ನನ್ನ ತಲೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿತು
1. ಸರ್ಕಾರಿ ಉದ್ಯೋಗಿಗಳಿಗಿರುವ ಕಡಿಮೆ ಸಂಬಳ
2. ಖಾಸಗಿ ಉದ್ಯೋಗಿಗಳಿಗಿರುವ ಕೆಲಸದ ಅಸುರಕ್ಷತೆ
3. ಖಾಸಗಿಯವರಿಗಿರುವ ಶನಿವಾರ - ಭಾನುವಾರದ ರಜೆ
4. ಸರ್ಕಾರಿ ಉದ್ಯೋಗಿಗಳಿಗಿರುವ ಎಲ್ಲ ಹಬ್ಬ-ಹರಿದಿನಗಳ ರಜೆ
5. ಸಮಯ ಹಾಗು ಹಬ್ಬ-ಹರಿದಿನದ ಪರಿವಿಯಿಲ್ಲದೆ ಖಾಸಗಿ ಉದ್ಯೋಗಿಗಳು ಮಾಡುವ ಕೆಲಸ
6. ವಿಧಿಯಿಲ್ಲದೆ ಅನಪೇಕ್ಷಿತ ಸ್ಥಳಗಳಿಗೆ ವರ್ಗಾವಣೆಯಾಗುವ ಸರ್ಕಾರಿ ಉದ್ಯೋಗಿಗಳ ಬವಣೆ
ಇದು ಗತಿಸಿ ಸುಮಾರು ಹತ್ತು ತಿಂಗಳಾದರೂ ಪದೇ ಪದೇ ಮನಸ್ಸನ್ನು ಕೊರೆಯುತ್ತಿರುವ ಪ್ರಶ್ನೆಗಳೆಂದರೆ:
‘ನೀವು ಆ ದೇಶದವರೇ ಅಲ್ಲವೆ?’
‘ನಿಮಗಾಗಿ ಆ ದೇಶದಲ್ಲಿ ಕಾರ್ಮಿಕ ನೀತಿಯಿಲ್ಲವೆ?’

1 comment:

  1. ಗಮನಾರ್ಹ, ಗಂಭೀರ ವಿಚಾರ. ಆಳುವವರು ಇದರ ಬಗ್ಗೆ ಯೋಚಿಸಬೇಕು...

    ReplyDelete